ನಂಬಿಕೆ ಆಚೆಗಿನ ಸತ್ಯ ಎಲ್ಲರಿಗೂ ತಿಳಿಯಲಿ
Team Udayavani, Mar 10, 2018, 12:23 PM IST
ಬೆಂಗಳೂರು: ನಂಬಿಕೆ ಮತ್ತು ಅದರಾಚೆಗಿನ ಸತ್ಯವನ್ನು ಜನರಿಗೆ ತಿಳಿಸುವ ಜತೆಗೆ ಅವರಲ್ಲಿರುವ ಮೂಢ ನಂಬಿಕೆಗಳನ್ನು ದೂರ ಮಾಡುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ
ಹೇಳಿದರು.
ಧರ್ಮಸ್ಥಳ ಮಂಜುನಾಥ ದೇವಸ್ಥಾನವು ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ
“ನಂಬಿಕೆ ಮತ್ತು ಅದರಾಚೆಗೆ ಕುರಿತ ಜಾಗತಿಕ ಸಮಾವೇಶ’ದ ಸಮಾರೋಪದಲ್ಲಿ ಅವರು ಮಾತನಾಡಿ, “ಸಮಾವೇಶದ ಆರಂಭದಲ್ಲಿದ್ದ ಉತ್ಸಾಹ ಸಮಾರೋಪದವರೆಗೂ ಹಾಗೇ ಉಳಿದಿದೆ. ತುಂಬಾ ಸತ್ವಪೂರ್ಣವಾಗಿ ನಡೆದಿದೆ. ಸಮಾವೇಶ ಮುಗಿಯಿತು ಎಂದು ನಿರಾಸೆ ಪಡಬೇಕಾಗಿಲ್ಲ. ಸಂತೋಷ ಮತ್ತು ನಿರಾಸೆಗಿಂತ ಹೆಚ್ಚಾಗಿ ಧನ್ಯತಾ ಭಾವನೆ ಮೂಡಿಸಿದೆ. ಈ ಸಮಾವೇಶದ ಕಲ್ಪನೆ ಬಂದಿರುವುದೇ ವಿಶೇಷವಾಗಿತ್ತು.
ಅದೇ ರೀತಿಯ ಮಿಂಚಿನಂತಹ ಶಕ್ತಿಯಿಂದಾಗಿ ಅನೇಕ ಸಮಾಜಮುಖೀ ಕಾರ್ಯಗಳು ಧರ್ಮಸ್ಥಳದಲ್ಲಿ ನಡೆದಿವೆ ಎಂದರು. ಜಗತ್ತು ಇಂದು ಕ್ಷಿಪ್ರವಾಗಿ ಬದಲಾಗುತ್ತಿದೆ. ಹಿಂದೆ ಕುದುರೆ ಓಟವನ್ನೇ ವೇಗವೆಂದು ತಿಳಿಯಲಾಗಿತ್ತು. ನಂತರ ಸೈಕಲ್, ತದನಂತರ ದ್ವಿಚಕ್ರ ವಾಹನ, ಕಾರು, ಏರ್‌ಕ್ರಾಫ್ಟ್, ರಾಕೆಟ್‌ಗಳ ವೇಗ ಕಂಡಿದ್ದೇವೆ. ರಾಕೆಟ್‌ಗೆ ಹೋಲಿಸಿ ಕುದುರೆ, ಸೈಕಲ್‌ನ ವೇಗ ಅಸತ್ಯವೆನ್ನಲಾಗದು. ಅಂದಿನ ಸಂದರ್ಭ, ಕ್ಷಣಕ್ಕೆ ಅದು ನಂಬಿಕೆಯಾಗಿತ್ತು. ಆ ಕ್ಷಣದ ನಂಬಿಕೆಯನ್ನು ಮೀರಿದ ಬದಲಾವಣೆಯೂ ಮುಂದೆ ನಂಬಿಕೆಯಾಗಬಹುದು. ನಂಬಿಕೆಯ ಮೇಲೆಯೇ ಎಲ್ಲವೂ ನಡೆಯುತ್ತದೆ ಎಂಬುದು ವಾಸ್ತವ ಎಂದು ಹೇಳಿದರು.
ಇತ್ತೀಚೆಗೆ ಕೆಲ ಜ್ಯೋತಿಷಿಗಳು ತಾವೇ ದೇವರೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸಕರು ಚಿಕಿತ್ಸೆ ನೀಡಬಹುದೇ
ಹೊರತು ಬೇರೇನೂ ಮಾಡಲು ಸಾಧ್ಯವಿಲ್ಲ. ಹಾಗೆಯೇ ಜ್ಯೋತಿಷಿಗಳು ಸಹ ಜ್ಯೋತಿಷಿ ಜ್ಞಾನದ ಪರಿಧಿಯೊಳಗೆ
ಕಾರ್ಯ ನಿರ್ವಹಿಸಬೇಕು. ಅಲ್ಲಿಯೂ ನಂಬಿಕೆ ಇದೆ ಎಂದು ಪ್ರತಿಪಾದಿಸಿದರು.
ಧರ್ಮಸ್ಥಳ, ತಿರುಪತಿ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಕ್ಕೆ ಐದಾರು ಗಂಟೆ ಪ್ರಯಾಣಿಸಿ ಹೋಗಿ, ದರ್ಶನಕ್ಕಾಗಿ ಎರಡುಮೂರು ಗಂಟೆ ಸರತಿ ಸಾಲಿನಲ್ಲಿ ನಿಂತು, ಬಳಿಕ ಪಡೆಯುವ ಕೆಲವೇ ಸೆಕೆಂಡ್‌ಗಳ ದೇವರ ದರ್ಶನವು ನಮ್ಮ ಸ್ಮತಿ ಪಟಲದಲ್ಲಿ ಹತ್ತಾರು ವರ್ಷ ಅಚ್ಚಳಿಯದೇ ಉಳಿದಿರುತ್ತದೆ. ಏಕಾಗ್ರತೆಯ ಮಿತಿಯೂ ಸೀಮಿತ ಎಂಬುದನ್ನು ಅರಿಯಬೇಕು ಎಂದರು.
ಲಕ್ಷಾಂತರ ಭಕ್ತರು ಧರ್ಮಸ್ಥಳದ ಮೇಲಿನ ನಂಬಿಕೆ ಹಾಗೂ ಹೆಗ್ಗಡೆಯವರ ಪೀಠಕ್ಕೆ ಇರುವ ಶ್ರದ್ಧೆಯಿಂದ ಶ್ರೀ ಕ್ಷೇತ್ರಕ್ಕೆ
ಬರುತ್ತಾರೆ. ಅವರ ಎಲ್ಲಾ ದುಃಖದುಮ್ಮಾನಗಳನ್ನು ಕೆಲವೇ ಕ್ಷಣದಲ್ಲಿ ಹೇಳಿಕೊಳ್ಳುತ್ತಾರೆ. ಇದೇ ನಂಬಿಕೆಯ ಮೇಲೆ
ದೇಶವೂ ನಡೆಯುತ್ತಿದೆ. ನಂಬಿಕೆಗೆ ಹೊರತಾದ ಯಾವ ಕ್ಷೇತ್ರವೂ ಇಲ್ಲ. ಸಂವಿಧಾನ, ನ್ಯಾಯಾಲಯ ಸೇರಿ ನಮ್ಮ
ನಿತ್ಯದ ಜೀವವು ನಂಬಿಕೆಯ ಆಧಾರದಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಕೃಷ್ಣ ಅವರು ಸಂವಿಧಾನ ಮತ್ತು ನಂಬಿಕೆಗಳು ಎಂಬ ವಿಷಯದ ಮೇಲೆ ಮಾತನಾಡಿ, ವೈಜ್ಞಾನಿಕ ಸತ್ಯದಲ್ಲಿರುವ ನಂಬಿಕೆಯು ಶಾಸ್ತ್ರದಲ್ಲಿಯೂ ಇದೆ.
ಅಂಧಶ್ರದ್ಧೆಯನ್ನು ಬಿಟ್ಟು, ಶ್ರದ್ಧಾಪೂರ್ವಕವಾಗಿ ನಂಬಿಕೆಯನ್ನು ಒಪ್ಪಿಕೊಳ್ಳಬೇಕು. ಕಾನೂನು ಮತ್ತು ಸಂವಿಧಾನ ಹಾಗೂ ನ್ಯಾಯಾಧೀಶರು ಮತ್ತು ವಕೀಲರು ನಂಬಿಕೆಗೆ ಹೊರತಾಗಿಲ್ಲ. ನ್ಯಾಯಾಲಯದಲ್ಲಿ ಅನೇಕ ಸಂದರ್ಭದಲ್ಲಿ ಸತ್ಯಕ್ಕಾಗಿ ಪ್ರಶ್ನೆ ಮೇಲೆ ಪ್ರಶ್ನೆ ಹಾಕಲಾಗುತ್ತದೆ. ಅಂತಿಮ ಸತ್ಯ ಅದರಿಂದ ದೊರೆಯುತ್ತದೆ ಎಂಬ ನಂಬಿಕೆ ಇದರ ಮೂಲ ನೆಲೆ ಎಂದು ವಿಶ್ಲೇಷಿಸಿದರು.
ಲೈಫ್ ಪಾಸಿಟಿವ್ ಮ್ಯಾಗಜೀನ್ ಅಧ್ಯಕ್ಷ ಡಾ.ಡಿ.ಆರ್. ಕಾರ್ತಿಕೇಯನ್, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.
ರಾಮಾನುಜ, ಗೌರವ ಕಾರ್ಯದರ್ಶಿ ಕೆ.ಜಿ.ರಾಘವನ್, ನಿರ್ದೇಶಕ ಎಚ್.ಎನ್.ಸುರೇಶ್, ಉಪಾಧ್ಯಕ್ಷ ಎಚ್.ಅರ್.
ಅನಂತ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿಯನ್ನು ಸನ್ಮಾನಿಸಲಾಯಿತು. ಹಾಗೆಯೇ ಧರ್ಮಸ್ಥಳದ ವತಿಯಿಂದ ಭಾರತೀಯ ವಿದ್ಯಾಭವನದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ದೇವರ ಜತೆ ಮಾತನಾಡಲುಮಧ್ಯವರ್ತಿಗಳು ಬೇಕಾಗಿಲ್ಲ
ಬೆಂಗಳೂರು: ದೇವರ ಮೇಲಿನ ನಂಬಿಕೆ ವ್ಯಕ್ತಿಯ ವ್ಯಕ್ತಿಗತ ವಿಚಾರ. ದೇವರೊಂದಿಗೆ ಮಾತನಾಡಲು ಮಧ್ಯವರ್ತಿಗಳು ಬೇಕಿಲ್ಲ. ವ್ಯಕ್ತಿಯೊಬ್ಬ ನೇರವಾಗಿ ದೇವರೊಂದಿಗೆ ಮಾತನಾಡಲು ಅಡ್ಡಿಪಡಿಸುವ ಮಧ್ಯವರ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಮನಶಾಸ್ತ್ರಜ್ಞ ಡಾ. ಸಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಧರ್ಮಸ್ಥಳ ಮಂಜುನಾಥ ದೇವಸ್ಥಾನದ ವತಿಯಿಂದ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಹಮ್ಮಿಕೊಂಡಿರುವ “ನಂಬಿಕೆ ಮತ್ತು ಅದರಾಚೆಗೆ’ ಕುರಿತ ಜಾಗತಿಕ ಸಮಾವೇಶದ ಎರಡನೇ ದಿನವಾದ ಶುಕ್ರವಾರ “ಮಾನಸಿಕ ಆರೋಗ್ಯದಲ್ಲಿ ಶ್ರದ್ಧೆ ಮತ್ತು ನಂಬಿಕೆಗಳ ಪಾತ್ರ’ದ ಕುರಿತು ಅವರು ವಿಷಯ ಮಂಡಿಸಿದರು.
ದೇವಸ್ಥಾನ ಕಟ್ಟುವ ಮತ್ತು ಅದರ ಪಾವಿತ್ರ್ಯತೆಯ ಬಗ್ಗೆ ನಾವು ಮಾತನಾಡುತ್ತೇವೆ. ಹಾಗೇ ಕೆಲವರನ್ನು ದೇವಸ್ಥಾನದ ಒಳಗಡೆ ಬರಬೇಡಿ ಎನ್ನುವ ವ್ಯವಸ್ಥೆಯನ್ನೂ ಕಾಣುತ್ತೇವೆ. ವ್ಯಕ್ತಿಯೊಬ್ಬ ದೇವರ ಜತೆ ಮಾತನಾಡಲು ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ. ಈ ಮಧ್ಯವರ್ತಿಗಳು ಮಾಡುವ ಮೋಸ, ಸೃಷ್ಟಿಸುವ ಅನಾಹುತಗಳು ಅಷ್ಟಿಷ್ಟಲ್ಲ. ಆದ್ದರಿಂದ ವ್ಯಕ್ತಿಯೊಬ್ಬ ದೇವರ ಜೊತೆಗೆ ನೇರವಾಗಿ ತನಾಡುವುದಕ್ಕೆ ಅಡ್ಡಿಪಡಿಸುವ ಮಧ್ಯವರ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ ಎಂದರು.
ಮನುಷ್ಯರಲ್ಲಿನ ಶೇ.80ರಷ್ಟು ಕಾಯಿಲೆಗಳಿಗೆ ಮಾನಸಿಕ ಒತ್ತಡ ಕಾರಣ. ಯಾವುದೇ ಔಷಧ ಅಥವಾ ಚಿಕಿತ್ಸೆ ಗುಣಪಡಿಸಲಾಗದ ಕಾಯಿಲೆಯನ್ನು ನಂಬಿಕೆ ವಾಸಿ ಮಾಡುತ್ತದೆ. ಆದ್ದರಿಂದ ಜೀವನದಲ್ಲಿ ಯಾವತ್ತೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಕಷ್ಟಪಡದೇ ಹಣ ಸಿಗಬೇಕು, ಯೋಗ-ಭೋಗಗಳು ಸಿಗಬೇಕು ಎಂಬ ಮನಸ್ಥಿತಿಯಲ್ಲಿರುವ ಯುವ ಪೀಳಿಗೆಯಲ್ಲಿ “ಶ್ರಮದ ಬಗೆಗಿನ ನಂಬಿಕೆ’ಯನ್ನು ಗಟ್ಟಿಗೊಳಿಸುವ ಅವಶ್ಯಕತೆಯಿದೆ ಎಂದು ಡಾ. ಚಂದ್ರಶೇಖರ್ ಹೇಳಿದರು.
ಇದೇ ವೇಳೆ ಮಾನವರ ಮೇಲೆ ನಂಬಿಕೆ ಪರಿಣಾಮ ಕುರಿತು ಡಾ.ಜಿ.ಜಯಶ್ರೀ, ಪರಿಸರದ ಮೇಲೆ ಅಗ್ನಿಹೋತ್ರದ ಪ್ರಭಾವದ ಬಗ್ಗೆ ಕರ್ನಲ್ ಎಂ. ದೇಶಪಾಂಡೆ, ಪರಿಣಾಮಕಾರಿ ಕ್ಯಾನ್ಸರ್ ಚಿಕಿತ್ಸೆಗಾಗಿ ಚೈತನ್ಯದ ಸಿದ್ಧತೆ ಕುರಿತು ಡಾ. ಎ.ಜಿ. ರಾಜೀವ, ಭಾರತೀಯ ವಾಸ್ತು ಬಗ್ಗೆ ಸ್ಥಪತಿ ಕೆ. ದಕ್ಷಿಣಾಮೂರ್ತಿ, ಕಾಲಚಕ್ರದ ಬಗ್ಗೆ ಡಾ. ಎಸ್.ಕೆ. ಜೈನ್, ಜ್ಯೋತಿಷ್ಯ: ಕಾಲಾತೀತ ಕಾಲ ಜ್ಞಾನ ಕುರಿತು ಡಾ. ಗಾಯಿತ್ರಿದೇವಿ ವಾಸುದೇವ, ವೈದ್ಯಕೀಯ ಜ್ಯೋತಿಷ್ಯದಲ್ಲಿ ತತ್ವಶಾಸ್ತ್ರ ಮತ್ತು ಪರಿಣಾಮದ ಕುರಿತು ಡಾ. ಎಸ್. ಕೃಷ್ಣಕುಮಾರ್ ವಿಷಯ ಮಂಡಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.