ಇವಿಎಂ ಅತ್ಯಂತ ಸುರಕ್ಷಿತ, ಮತ ಎಣಿಕೆ ಪಕ್ಕಾ
Team Udayavani, May 22, 2019, 3:57 PM IST
2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ‘ವಿದ್ಯುನ್ಮಾನ ಮತ ಯಂತ್ರಗಳ’ (ಇವಿಎಂ) ಸಾಚಾತನ ಮತ್ತು ತಾಂತ್ರಿಕ ದೋಷಗಳ ಕುರಿತು ಗರಿಗೆದರಿದ್ದ ರಾಜಕೀಯ ಚರ್ಚೆಗಳು ‘ಮತದಾನೋತ್ತರ ಸಮೀಕ್ಷೆ’ (ಎಕ್ಸಿಟ್ ಪೋಲ್) ಬಳಿಕ ಮತ್ತಷ್ಟು ವೇಗ ಪಡೆದುಕೊಂಡಿವೆ.
ಎಕ್ಸಿಟ್ ಪೋಲ್ಗಳಲ್ಲಿ ಮೂಡಿ ಬಂದ ‘ಫಲಿತಾಂಶ’ವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಯಥಾಪ್ರಕಾರ ಇವಿಎಂಗಳತ್ತ ಬೊಟ್ಟು ಮಾಡುತ್ತಿವೆ. ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಮತ್ತು ತಿರುಚಲಾಗಿದೆ ಎನ್ನುವುದು ಪ್ರತಿಪಕ್ಷಗಳ ಗಂಭೀರ ಆರೋಪ.
ಆದರೆ, ಇವಿಎಂಗಳಲ್ಲಿ ಬಿದ್ದ ಮತಗಳನ್ನು ಖಾತರಿಪಡಿಸಿಕೊಳ್ಳಲು ರಾಜಕೀಯ ಪಕ್ಷಗಳ ಜತೆಗೆ ಚರ್ಚೆ ನಡೆಸಿಯೇ ಚುನಾವಣಾ ಆಯೋಗ ವಿವಿಪ್ಯಾಟ್ ಬಳಸುತ್ತಿದೆ. ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು, ಅದರ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಮತಗಳಿಗೆ ತಾಳೆ ಮಾಡುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಈ ಬಾರಿ ಚುನಾವಣಾ ಆಯೋಗ ಈ ಆದೇಶವನ್ನು ಪಾಲಿಸುತ್ತಿದೆ. ಆದಾಗ್ಯೂ, ರಾಜಕೀಯ ಪಕ್ಷಗಳು ಆರೋಪ, ಅನುಮಾನಗಳನ್ನು ಮುಂದುವರಿಸಿವೆ. ಪ್ರತಿಪಕ್ಷಗಳ ಈ ವಾದ ಅತ್ಯಂತ ಬಾಲಿಶ, ಹಾಸ್ಯಾಸ್ಪದ ಹಾಗೂ ತರ್ಕವಿಲ್ಲದ್ದು ಎಂದು ಚುನಾವಣಾ ಆಯೋಗ ನೇರವಾಗಿಯೇ ಹೇಳುತ್ತಿದೆ.
‘ಎಕ್ಸಿಟ್ ಪೋಲ್’, ಕಾಲ್ಪನಿಕ, ಊಹಾತ್ಮಕ ಸಂಗತಿ: ಅಸಲಿಗೆ ‘ಎಕ್ಸಿಟ್ ಪೋಲ್’ ಒಂದು ಕಾಲ್ಪನಿಕ ಮತ್ತು ಊಹಾತ್ಮಕ ಸಂಗತಿ. ಎಕ್ಸಿಟ್ ಪೋಲ್ಗಳಲ್ಲಿ ಮೂಡಿ ಬಂದ ಅಭಿಪ್ರಾಯಗಳನ್ನು ಅಂತಿಮ ಫಲಿತಾಂಶಕ್ಕೆ ತಾಳೆ ಹಾಕಿ ನೋಡುವುದು ಅವಾಸ್ತವಿಕ. ಅಷ್ಟಕ್ಕೂ ಜನ ತಮ್ಮ ಬಾಯಿಂದ ಹೇಳಿದ ಅಭಿಪ್ರಾಯ ಆಧರಿಸಿ ಪ್ರಕಟಿಸಿದ ಎಕ್ಸಿಟ್ ಪೋಲ್ನ ಅಂಕಿ-ಅಂಶಗಳಿಗೂ ಮತ್ತು ತಾಂತ್ರಿಕವಾಗಿ ಸುಧಾರಿತ, ಸುರಕ್ಷಿತ ಮತ್ತು ಮತದಾನ ಮುಗಿದ ಬಳಿಕ ‘ಕ್ಲೋಸ್ ಬಟನ್’ (ಮುಚ್ಚುವ ಗುಂಡಿ) ಒತ್ತಿದ ಬಳಿಕ ಇವಿಎಂನ ಎಲ್ಲ ಫಂಕ್ಷನ್‌ಗಳು ನಿಸ್ತೇಜಗೊಂಡು ರಿಸಲ್r ಬಟನ್ ಮಾತ್ರ ಓಪನ್ ಆಗುವ ಇವಿಎಂಗಳಿಗೂ ತಾಳೆ ಮಾಡುವುದು ಯಾವ ತರ್ಕ ಎಂಬುದು ಆಯೋಗದ ಪ್ರಶ್ನೆ.
ಹಾಗಾದರೆ, ಮತದಾನದ ನಂತರ ಇವಿಎಂಗಳನ್ನು ಯಾವ ರೀತಿ ಸುರಕ್ಷಿತವಾಗಿ ಇಡಲಾಗುತ್ತದೆ. ಮತ ಎಣಿಕೆ ವೇಳೆ ಯಾವ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಪಾಲ್ಗೊಳ್ಳುವಿಕೆ ಹೇಗಿರುತ್ತದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಮತದಾನದ ಬಳಿಕವೂ ಇವಿಎಂ ಸುರಕ್ಷಿತ:
•ಮತದಾನ ಪೂರ್ಣಗೊಂಡ ನಂತರ, ಚುನಾವಣಾಧಿ ಕಾರಿಯು ಚುನಾವಣಾ ಏಜೆಂಟರ ಸಮಕ್ಷಮದಲ್ಲಿ ಇವಿಎಂ ಮೇಲಿರುವ ‘ಕ್ಲೋಸ್’ ಗುಂಡಿಯನ್ನು ಒತ್ತುತ್ತಾರೆ. ಇದಾದ ನಂತರ, ಇವಿಎಂನಲ್ಲಿ ಯಾವುದೇ ಮತಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ. ಇದಾದ ನಂತರ, ಇಡೀ ವಿದ್ಯುನ್ಮಾನ ಮತಯಂತ್ರವನ್ನು ಮೊಹರು (ಸೀಲ್) ಮಾಡಲಾಗುತ್ತದೆ.
ಈ ಮೊಹರುಗಳ ಮೇಲೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ತಮ್ಮ ಸಹಿ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಮತ ಎಣಿಕೆ ಪ್ರಾರಂಭವಾಗುವ ಮೊದಲು ಆ ಮೊಹರು ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಪರೀಕ್ಷಿಸಬಹುದು. ಇವಿಎಂಗಳನ್ನು ಮತಗಟ್ಟೆಗಳಿಂದ ಮತ ಎಣಿಕೆ ಕೇಂದ್ರದಲ್ಲಿನ ದಾಸ್ತಾನು ಕೋಣೆಗಳಿಗೆ (ಸ್ಟ್ರಾಂಗ್ ರೂಂ) ಸಾಗಿಸುವ ವಾಹನಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಿಂಬಾಲಿಸಿಕೊಂಡು ಹೋಗಬಹುದು.
•ಎಣಿಕೆಗಾಗಿ ಇವಿಎಂಗಳನ್ನು ಸಂಗ್ರಹಿಸಿಡುವ ಭದ್ರ ಕೋಣೆಗಳಿಗೂ ಸಹ ಮೊಹರು (ಸೀಲ್)ಮಾಡಲಾಗುತ್ತದೆ ಮತ್ತು ದಿನದ 24 ಗಂಟೆಯೂ ಅವುಗಳ ಮೇಲೆ ನಿಗಾ ಇಡಲಾಗಿರುತ್ತದೆ. ಭದ್ರ ಕೋಣೆಗಳ ಬಾಗಿಲುಗಳ ಮೇಲೆ ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳಿಗೆ ಅವರ ಸ್ವಂತ ಮೊಹರು ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಅವರಿಗೂ ಸಹ ಭದ್ರ ಕೋಣೆಯ ಮೇಲೆ ದಿನದ 24 ಗಂಟೆಗಳ ಕಾಲ ಪಹರೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಭದ್ರ ಕೋಣೆಗಳ ಸುತ್ತಮುತ್ತಲೂ ಬಹು ಸುತ್ತುಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿರುತ್ತದೆ.
•ಸ್ಟ್ರಾಂಗ್ ರೂಂನಿಂದ ಮತ ಎಣಿಕೆ ಕೇಂದ್ರಗಳಿಗೆ ಮತಯಂತ್ರಗಳನ್ನು ತರುವಾಗಲೂ ಬಿಗಿ ಭದ್ರತೆ ಇರುತ್ತದೆ. ಇವುಗಳ ವಿಡಿಯೋ ಮಾಡಲಾಗುತ್ತದೆ. ಇವಿಎಂಗಳನ್ನು ಸ್ಟ್ರಾಂಗ್ ರೂಂನಿಂದ ಮತ ಎಣಿಕೆ ಕೇಂದ್ರಗಳಿಗೆ ಸಾಗಿಸುವ ವಾಹನಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಿಂಬಾಲಿಸಿಕೊಂಡು ಹೋಗಬಹುದು.
ವಿವಿಪ್ಯಾಟ್ ಚೀಟಿಗಳ ತಾಳೆ ಪ್ರಕ್ರಿಯೆ ಹೇಗೆ?:ಇವಿಎಂನ ಕಂಟ್ರೋಲ್ ಯೂನಿಟ್‌ನಲ್ಲಿ ಬಿದ್ದ ಮತಗಳನ್ನು ಖಾತರಿಪಡಿಸಿಕೊಳ್ಳಲು ವಿವಿಪ್ಯಾಟ್‌ನ ಮುದ್ರಿತ ಚೀಟಿ ಗಳನ್ನು ಎಣಿಸಿ, ತಾಳೆ ಮಾಡಲಾಗುತ್ತದೆ. ಈ ಹಿಂದೆ, ಕೇಂದ್ರ ಚುನಾವಣಾ ಆಯೋಗ ತನ್ನ ಸ್ವಯಂ ನಿರ್ಧಾರದಂತೆ ಪ್ರತಿ ವಿಧಾನಸಭಾ ಕ್ಷೇತ್ರದ ಯಾವುದಾದರೂ ಒಂದು ಮತ ಗಟ್ಟೆಯನ್ನು ಆಯ್ಕೆ ಮಾಡಿಕೊಂಡು ಅದರ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ತಾಳೆ ಮಾಡುತ್ತಿತ್ತು.
ಆದರೆ, ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ಅವುಗಳನ್ನು ಇವಿಎಂನ ಕಂಟ್ರೋಲ್ ಯೂನಿಟ್‌ನ ಮತಗಳಿಗೆ ತಾಳೆ ಹಾಕಲಾಗುತ್ತದೆ.
ಇದಕ್ಕಾಗಿ ಪ್ರತಿ ಮತ ಎಣಿಕೆಯ 14 ಟೇಬಲ್ಗಳ ಮತಗಟ್ಟೆಗಳ ಪೈಕಿ ಲಾಟರಿ ಎತ್ತುವ ಮೂಲಕ ಐದು ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯನ್ನು ಅಭ್ಯರ್ಥಿ ಅಥವಾ ಅವರ ಪ್ರತಿನಿಧಿ ಮತ್ತು ಚುನಾವಣಾ ಏಜೆಂಟ್ ಸಮ್ಮುಖದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿ ಹಾಗೂ ಕೇಂದ್ರ ಚುನಾವಣಾ ಆಯೋಗದಿಂದ ನಿಯೋಜಿಸಲ್ಪಟ್ಟ ವಿಶೇಷ ವೀಕ್ಷಕರ ಸಮಕ್ಷಮದಲ್ಲಿ ನಡೆಸಲಾಗುತ್ತದೆ.
ಒಂದು ಮತಗಟ್ಟೆಯ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಿ ತಾಳೆ ಹಾಕಲು ಕನಿಷ್ಠ 45 ನಿಮಿಷ ಬೇಕಾಗುತ್ತದೆ. ಎಲ್ಲ 5 ಮತಗಟ್ಟೆಗಳ ವಿವಿಪ್ಯಾಟ್ನ್ನು ಏಕಕಾಲಕ್ಕೆ ಎಣಿಕೆ ಮಾಡುವುದಿಲ್ಲ. ಬದಲಿಗೆ, ಒಂದಾದ ಮೇಲೆ ಒಂದನ್ನು ಎಣಿಕೆ ಮಾಡಲಾಗುತ್ತದೆ.
ಇನ್ನುಳಿದಂತೆ ತಾಂತ್ರಿಕ ದೋಷದಿಂದಾಗಿ ಕಂಟ್ರೋಲ್ ಯೂನಿಟ್ ಡಿಸ್‌ಪ್ಲೇ ಆಗದಿದ್ದರೆ, ಅಣಕು ಮತದಾನದ ಮಾಹಿತಿ ಅಳಿಸದೇ ಇದ್ದರೆ ಮತ್ತು ಮಾನವ ನಿರ್ಮಿತ ಲೋಪಗಳೇನಾದರೂ ಇದ್ದರೂ ಸಹ ವಿವಿಪ್ಯಾಟ್ ಮುದ್ರಿತ ಚೀಟಿಗಳನ್ನು ಎಣಿಸಲಾಗುತ್ತದೆ.
ಚುನಾವಣಾ ಮಾದರಿ ನೀತಿ ಸಂಹಿತೆ ನಿಯಮಗಳು -1961ರ ಉಪ ನಿಯಮ 56ಡಿ ಅನ್ವಯ ಇವಿಎಂನ ಕೊನೆಯ ಸುತ್ತಿನ ಎಣಿಕೆ ಪೂರ್ಣಗೊಂಡ ಬಳಿಕ ವಿವಿಪ್ಯಾಟ್‌ನಲ್ಲಿರುವ ಮುದ್ರಿತ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ.
ಜತೆಗೆ, ಇವಿಎಂಗಳ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯ ಮೇಲೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳಲ್ಲಿ ಪೂರ್ಣ ಪ್ರಮಾಣದ ವಿಶ್ವಾಸ ಮೂಡಿಸಲು ಪ್ರತಿಯೊಂದು ಹಂತದಲ್ಲಿ ಅವರ ಸಕ್ರೀಯ ಮತ್ತು ದಾಖಲೆಸಹಿತ ಪಾಲ್ಗೊಳ್ಳುವಿಕೆಯನ್ನು ಆಯೋಗ ಖಾತರಿಪಡಿಸುತ್ತಿದೆ.
● ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.