ಮನೆ ಮನೆಗೆ ತೆರಳಿದ ವಿಸ್ತಾರಕ ಬಿಎಸ್‌ವೈ
Team Udayavani, Jul 5, 2017, 12:17 PM IST
ಬೆಂಗಳೂರು: ರಾಜ್ಯಾದ್ಯಂತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ವಿಸ್ತಾರಕ ಯೋಜನೆಯಡಿ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸಂಪಂಗಿರಾಮನಗರದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಂಪಂಗಿರಾಮನಗರದ ದೇವಾಂಗ ಸಮುದಾಯದ ಸ್ಥಳೀಯ ಮುಖಂಡ ನಟರಾಜ್ ನಿವಾಸದಲ್ಲಿ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಮನೆ ಮನೆ ಸಂಪರ್ಕ ನಡೆಸಿ ಬಿಜೆಪಿ ಪರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರಚಾರಾಭಿಯಾನ ನಡೆಸಿದರು. ಯಡಿಯೂರಪ್ಪ ಅವರು ಮನೆಗಳಿಗೆ ಭೇಟಿ ನೀಡುವಾಗ ಸ್ಥಳೀಯ ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಇನ್ನು ಕೆಲವರು ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಂಡಿತ್ ದೀನ್‌ದಯಾಳ್ ಅವರ ಚರಿತ್ರೆಯುಳ್ಳ ಕರಪತ್ರವನ್ನು ಹಂಚಲಾಯಿತು. ಅಲ್ಲದೇ, ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದರು.
ವೃದ್ಧೆಗೆ ನೆರವಾಗುವಂತೆ ಸೂಚನೆ: ಭೇಟಿ ವೇಳೆ ಕೆಲವರು ನಗರದಲ್ಲಿನ ಮೂಲ ಸೌಕರ್ಯ ಕೊರತೆ ಕುರಿತು ಅವರ ಗಮನಕ್ಕೆ ತಂದರು. ಇದೇ ವೇಳೆ ಯಡಿಯೂರಪ್ಪ ಅವರನ್ನು ಭೇಟಿಯಾದ ವೃದ್ಧೆ ನಾಗರತ್ನಮ್ಮ ಎಂಬಾಕೆ, ಮಕ್ಕಳು ತಮ್ಮನ್ನು ಮನೆಯಿಂದ ಹೊರಹಾಕಿದ ಬಗ್ಗೆ ಅಳಲು ಹೇಳಿಕೊಂಡರು. ಕೂಡಲೇ ಸ್ಪಂದಿಸಿದ ಯಡಿಯೂರಪ್ಪ, ನಾಗರತ್ನಮ್ಮ ಅವರಿಗೆ ನ್ಯಾಯ ದೊರಕಿಸಿಕೊಡುವಂತೆ ಸ್ಥಳೀಯ ಮುಖಂಡರಿಗೆ ಸೂಚಿಸಿದರು.
ನಮ್ಮ ಮನೆಗೂ ಬರಬೇಕೆಂದ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಯ ಸಮಧಾನ ಮಾಡಿದ ಕಟ್ಟಾ ಈ ಮಧ್ಯೆ ಕ್ರಿಶ್ಚಿಯನ್ ಸಮುದಾಯದ ಮನೆಗಳಿಗೂ ಭೇಟಿ ನೀಡಬೇಕು ಎಂದು ಪಕ್ಷದ ಕಾರ್ಯಕರ್ತ ಎಂದು ಹೇಳಲಾದ ಜೀವನ್ ಎಂಬುವವರು ಒತ್ತಾಯಿಸಿದ ಘಟನೆಯೂ ನಡೆಯಿತು.
ಮನೆಯೊಂದರ ಮುಂದೆ ನಿಂತಿದ್ದ ಜೀವನ್ ಎಂಬಾತ, ನಾನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನಾಗಿದ್ದು, ನಮ್ಮ ಮನೆಗೂ ಬಂದು ಚಹಾ ಸೇವಿಸಿ ಹೋಗಬೇಕು. ಇತರೆ ಕ್ರಿಶ್ಚಿಯನ್ನರ ಮನೆಗಳಿಗೂ ಭೇಟಿ ನೀಡಿದರೆ ಸಂತೋಷವಾಗುತ್ತದೆ. ಯಡಿಯೂರಪ್ಪ ಅಲ್ಲಿ ಬರುವ ಮುನ್ನವೇ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಸ್ಥಳೀಯ ಮುಖಂಡರು ಆತನನ್ನು ಸಮಾಧಾನಪಡಿಸಿದರು.
ದಲಿತರ ಮನೆಯಲ್ಲಿ ಊಟ ರದ್ದು
ಬೆಳಗ್ಗೆ ದೇವಾಂಗ ಸಮುದಾಯದ ಮುಖಂಡರ ಮನೆಯಲ್ಲಿ ಉಪಹಾರ ಸೇವಿಸಿ ಮನೆ ಮನೆ ಭೇಟಿ ಮಾಡಿದ ಬಳಿಕ ಯಡಿಯೂರಪ್ಪ ಅವರಿಗೆ ಮಧ್ಯಾಹ್ನ ದಲಿತ ಸಮುದಾಯದ ಮುಖಂಡ ಶಾಂತಕುಮಾರ್ ಎಂಬುವರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೂ ಕೊನೇ ಕ್ಷಣದಲ್ಲಿ ಅದು ರದ್ದಾಯಿತು.
ವಿಸ್ತಾರಕ ಕಾರ್ಯಕ್ರಮ ಮುಗಿದೊಡನೆ ಸ್ಥಳೀಯರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ ಅವರು ಕಾರಿನಲ್ಲಿ ಬೇರೆಡೆಗೆ ತೆರಳಿದರು. ತುರ್ತು ಕಾರಣಗಳಿಗಾಗಿ ಶಾಂತಕುಮಾರ್ ಮನೆಯಿಂದ ಹೊರಹೋಗಬೇಕಾಗಿತ್ತು. ಹೀಗಾಗಿ ಯಡಿಯೂರಪ್ಪ ಅವರಿಗಾಗಿ ಅಡುಗೆ ಸಿದ್ಧಪಡಿಸಲು ಸಾಧ್ಯವಾಗಿರಲಿಲ್ಲ. ಈ ಮಾಹಿತಿಯನ್ನು ಸ್ಥಳೀಯರೊಬ್ಬರು ದೂರವಾಣಿ ಮೂಲಕ ತಿಳಿಸಿದ್ದರು. ಹೀಗಾಗಿ ದಲಿತರ ಮನೆ ಊಟ ಕಾರ್ಯಕ್ರಮ ರದ್ದಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.