Team Udayavani, Apr 5, 2019, 12:00 PM IST
ಬೆಂಗಳೂರು: ಫೇಸ್‌ಬುಕ್ ಸ್ನೇಹಿತನನ್ನು ಕರೆಸಿಕೊಂಡು ಮೊಬೈಲ್ ವಿಚಾರಕ್ಕೆ ಜಗಳವಾಡಿ ಮಾರಕಾಸ್ತ್ರಗಳಿಂದ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಗಾಜು ಪುಡಿ ಮಾಡಿ, ದಾಂಧಲೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ರಘುವನಹಳ್ಳಿ ನಿವಾಸಿ ಹರ್ಷಿತ್‌ಗೌಡ ಅಲಿಯಾಸ್ ಹಚ್ಚು (20) ಮತ್ತು ವಡೇರಹಳ್ಳಿ ನಿವಾಸಿ ಶರಣ್ (20) ಬಂಧಿತರು. ಏ.3ರಂದು ಸಂಜೆ 6.30ರ ಸುಮಾರಿಗೆ ಕನಕಪುರ ಮುಖ್ಯರಸ್ತೆಯಲ್ಲಿರುವ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಮುಂಭಾಗ ಹರ್ಷಿತ್‌ಗೌಡ ತನ್ನ ಫೇಸ್‌ಬುಕ್ ಸ್ನೇಹಿತ, ಹರಿನಗರ ನಿವಾಸಿ ಮಿಥುನ್ ಎಂಬಾತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಗಾಜುಗಳನ್ನು ಪುಡಿ ಮಾಡಿ, ಚಾಲಕರಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಶರಣ್ ಕೂಡ ಸಹಕಾರ ನೀಡಿದ್ದ ಎಂದು ಪೊಲೀಸರು
ಹೇಳಿದರು.
ಆರೋಪಿಗಳು ವೃತ್ತಿಯಲ್ಲಿ ಪೇಂಟರ್‌ಗಳಾಗಿದ್ದು, ಹರ್ಷಿತ್‌ಗೌಡ ಈ ಹಿಂದೆ ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಶರಣ್ ಕೂಡ ಜಯನಗರದಲ್ಲಿ ನಡೆದ ದರೋಡೆ, ಡಕಾಯಿತಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಇಬ್ಬರೂ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು.
ಮೊಬೈಲ್ ವಿಚಾರಕ್ಕೆ ಹಲ್ಲೆ: ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಮಿಥುನ್ ಹಾಗೂ ಆರೋಪಿ ಹರ್ಷಿತ್‌ಗೌಡ ಫೇಸ್‌ಬುಕ್ ಸ್ನೇಹಿತರು. ಈ ಮಧ್ಯೆ ಆರೋಪಿ ಬುಧವಾರ ಸಂಜೆ ಕರೆ ಮಾಡಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಮಿಥುನ್‌ನನ್ನು ಕರೆಸಿಕೊಂಡಿದ್ದಾನೆ. ಈ ವೇಳೆ ಮಿಥುನ್ ಬಳಿಯಿದ್ದ ಮೊಬೈಲ್ ಕಸಿದುಕೊಂಡು, ಇದನ್ನು ವಾಪಸ್ ಕೊಡುವುದಿಲ್ಲ. “ನಾನೇ ಇಟ್ಟುಕೊಳ್ಳುತ್ತೇನೆ’ ಎಂದು ತಕರಾರು ತೆಗೆದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ
ಜಗಳವಾಗಿದ್ದು, ವಿಕೋಪಕ್ಕೆ ಹೋದಾಗ ಮಿಥುನ್, ಆರೋಪಿ ಕೈಯಲ್ಲಿದ್ದ ತನ್ನ ಮೊಬೈಲ್ ಕಸಿದಕೊಂಡು ಓಡುವಾಗ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದ ಮುಂಭಾಗ ಆಯತಪ್ಪಿ ಬಿದ್ದಿದ್ದಾನೆ.
ಆಗ ತನ್ನ ದ್ವಿಚಕ್ರ ವಾಹನದಲ್ಲಿ ಶರಣ್ ಜತೆ ಸ್ಥಳಕ್ಕೆ ಬಂದ ಹರ್ಷಿತ್‌ಗೌಡ, ಮಾರಕಾಸ್ತ್ರದಿಂದ ಮಿಥುನ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಶ್ರೀಕಾಂತ್ ಎಂಬುವವರಿಗೂ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಗಾಯಾಳು ಮಿಥುನ್, ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ.
ಅನಂತರ ಇಬ್ಬರೂ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದು, ಕೋಣನಕುಂಟೆ ಮುಖ್ಯ ರಸ್ತೆಯ ಡಿ.ಕೆ. ಚಿಕನ್ ಶಾಪ್ ಹತ್ತಿರ ಟ್ರಕ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದರು. ಆರೋಪಿಗಳ ವಿರುದ್ಧ ಸುಬ್ರಹ್ಮಣ್ಯಪುರ ಮತ್ತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಹವಾ ಸೃಷ್ಟಿಸಲು ಕೃತ್ಯ ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು, ಸಾರ್ವಜನಿಕ ವಲಯದಲ್ಲಿ “ಹವಾ’ ಸೃಷ್ಟಿಸಲು ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಹಲ್ಲೆಗೂ ಮೊದಲು ಇಬ್ಬರೂ ಬಾರ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದರು. ಹೊರಬರುತ್ತಿದ್ದಂತೆ “ನಾವು ಜೈಲಿಗೆ ಹೋಗಿ ಬಂದವರು, ಹುಷಾರಾಗಿರಿ. ನಮ್ಮ ವಿಚಾರಕ್ಕೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ಹೇಳಿದರು.