ಮುಷ್ಕರಕ್ಕೆ ಮಂಕಾದ ರಫ್ತು ಉದ್ಯಮ
Team Udayavani, Jul 27, 2018, 12:16 PM IST
ಬೆಂಗಳೂರು: ಸರಕು ಸಾಗಣೆದಾರರು ಮುಷ್ಕರ ಆರಂಭಿಸಿ ವಾರ ಕಳೆದರೂ ಕೇಂದ್ರ ಸರ್ಕಾರದಿಂದ ಸ್ಪಂದನೆ ಸಿಗದ ಕಾರಣ ರಾಜ್ಯದಲ್ಲಿ ಸರಕು ಸಾಗಣೆಯಲ್ಲಿನ ಅನಿಶ್ಚಿತತೆ ಮುಂದುವರಿದಿದೆ.
ಈ ನಡುವೆ ರಫ್ತು ಉದ್ಯಮಕ್ಕೆ ಮುಷ್ಕರದ ಬಿಸಿ ತಟ್ಟಿದ್ದು, ಸುಮಾರು 5000 ಕೋಟಿ ರೂ. ಮೌಲ್ಯದ ಸರಕುಗಳು ಸಾಗಣೆಯಾಗದೆ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿದೆ. ಎಪಿಎಂಸಿ ಮಾರುಕಟ್ಟೆಗೆ ಪೂರೈಕೆಯಾಗುವ ಆಹಾರ ಧಾನ್ಯ, ಬೇಳೆಕಾಳು ಇತರೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತುಸು ವ್ಯತ್ಯಯವಾಗಿದೆ.
ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆಯಲ್ಲಿ ಏರಿಳಿತವಾಗುತ್ತಿದ್ದು, ವ್ಯವಹಾರದ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಮುಷ್ಕರದಿಂದ ರಾಜ್ಯಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದಿರುವ ಸಾರಿಗೆ ಇಲಾಖೆಯು ಅಗತ್ಯ ಬಿದ್ದರೆ ಸರ್ಕಾರಿ ಬಸ್, ಇತರೆ ಸರ್ಕಾರಿ ಸರಕು ಸಾಗಣೆ ವಾಹನಗಳಲ್ಲಿ ಅಗತ್ಯ ವಸ್ತು ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಟೋಲ್ ವ್ಯವಸ್ಥೆಯಿಂದ ಮುಕ್ತಿ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು.13ರಿಂದ ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್ ಕಾಂಗ್ರೆಸ್ (ಎಐಎಂಟಿಸಿ) ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಿದೆ.
ಪೊಲೀಸ್ ಮಹಾನಿರ್ದೇಶಕರಿಗೆ ಮನವಿ: ಮುಷ್ಕರ ಮುಂದುವರಿದಿದ್ದರೂ ಕೆಲ ಲಾರಿ ಮಾಲೀಕರು, ಚಾಲಕರು ಸರಕು ಸಾಗಣೆಯಲ್ಲಿ ತೊಡಗಿದ್ದಾರೆ. ಇದರಿಂದ ಮುಷ್ಕರಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಹಾಗಾಗಿ ಸಂಘಟನೆಯ ಸದಸ್ಯರು ಸರಕು ಹೊತ್ತ ವಾಹನ ಕಂಡರೆ ತಕ್ಷಣವೇ ಅವುಗಳನ್ನು ತಡೆದು ಸುರಕ್ಷಿತ ಸ್ಥಳದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡುತ್ತಾರೆ.
ಯಾರಿಗೂ ತೊಂದರೆ ಉಂಟಾಗದಂತೆ ಎಚ್ಚರ ವಹಿಸಲಿದ್ದಾರೆ. ಹಾಗಾಗಿ ಪೊಲೀಸರು ಸಹಕಾರ ನೀಡುವಂತೆ ಎಲ್ಲ ಠಾಣೆಗಳಿಗೆ ಸೂಚಿಸಬೇಕು ಎಂದು ಕೋರಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ರಾಜು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಕಮಲ್‌ಪಂಥ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರವ್ಯಾಪಿ ಮುಷ್ಕರ ಆರಂಭವಾಗಿ ವಾರ ಕಳೆದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರು ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ಕೋರಿದ್ದಾರೆ. ಆದರೆ ಮೇ 17ರಂದೇ ಮಾಹಿತಿ ನೀಡಿದ್ದರೂ ಸ್ಪಂದಿಸದ ಕೇಂದ್ರ ಸರ್ಕಾರ ಇದೀಗ ಕಾಲಾವಕಾಶ ಕೇಳುತ್ತಿದೆ. ಹಾಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಎಐಎಂಟಿಸಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ಜಿ.ರವೀಂದ್ರ ತಿಳಿಸಿದರು.
ಶುಕ್ರವಾರ ಸಭೆ: ಮುಷ್ಕರದಿಂದ ಕೈಗಾರಿಕೆಗಳ ವಹಿವಾಟಿಗೆ ತೀವ್ರ ಹೊಡೆತ ಬಿದ್ದಿದೆ. ಕೇಂದ್ರ, ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರದೆ ಕೂಡಲೇ ಸಮಸ್ಯೆ ನಿವಾರಣೆಗೆ ಗಮನ ಹರಿಸಬೇಕು. ಸರ್ಕಾರ ಹಾಗೂ ಸರಕು ಸಾಗಣೆದಾರರ ನಡುವಿನ ಸಂಘರ್ಷದಲ್ಲಿ ಉದ್ಯಮಗಳು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದರು.
ಸರಕು ಪೂರೈಕೆ ಇಳಿಕೆ: ನಗರದ ಎಪಿಎಂಸಿ ಮಾರುಕಟ್ಟೆಗೆ ನಿತ್ಯ 400ಕ್ಕೂ ಹೆಚ್ಚು ಲಾರಿಗಳಲ್ಲಿ ಆಹಾರ ಧಾನ್ಯಗಳು ಪೂರೈಕೆಯಾಗುತ್ತವೆ. ಆದರೆ ಗುರುವಾರ ಕೇವಲ 100 ಲಾರಿಗಳಲ್ಲಷ್ಟೇ ಸರಕು ಪೂರೈಕೆಯಾಗಿದ್ದು, ಹಳೆಯ ದಾಸ್ತಾನಿನಲ್ಲೇ ಬಹಳಷ್ಟು ವರ್ತಕರು ವ್ಯವಹರಿಸುವಂತಾಗಿದೆ ಎಂದು ಬೆಂಗಳೂರು ಧಾನ್ಯ ವರ್ತಕರ ಸಂಘದ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದರು.
ನಷ್ಟ ಅನುಭವಿಸುವ ಅಪಾಯ: ಲಾರಿ ಮುಷ್ಕರದಿಂದ ರಫ್ತು ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಉದ್ಯಮ ವಲಯದಲ್ಲಿ 5000 ಕೋಟಿ ರೂ. ಮೌಲ್ಯದ ಸರಕು ಸಾಗಣೆಯಾಗದೇ ಕೈಗಾರಿಕೆಗಳಲ್ಲೇ ಉಳಿದಿವೆ. ಕೆಲ ಉದ್ಯಮಗಳಿಗೆ ಕಚ್ಚಾ ಸಾಮಗ್ರಿ ಕೊರತೆ ಉಂಟಾಗಿದೆ.
ಇದರಿಂದ ಉದ್ಯಮಗಳು ಸಕಾಲದಲ್ಲಿ ಬೇಡಿಕೆಯಂತೆ ಸರಕು ಪೂರೈಸಲಾಗದೆ ನಷ್ಟ ಅನುಭವಿಸುವ ಅಪಾಯವಿದೆ. ಹಾಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಧ್ಯೆ ಪ್ರವೇಶಿಸಿ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದು ಭಾರತೀಯ ರಫ್ತುದಾರರ ಸಂಸ್ಥೆಗಳ ಒಕ್ಕೂಟದ ಪ್ರಾದೇಶಿಕ ಅಧ್ಯಕ್ಷ ಡಾ.ಎ.ಶಕ್ತಿವೇಲು ಹೇಳಿದ್ದಾರೆ.
ರಾಜ್ಯದಲ್ಲಿ ಮುಷ್ಕರದಿಂದ ಈವರೆಗೆ ಯಾವುದೇ ಸರಕು, ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರು ಬಂದಿಲ್ಲ. ಇಲಾಖೆ ಆಯುಕ್ತರು ನಿತ್ಯ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಒಂದೊಮ್ಮೆ ಏರುಪೇರು ಉಂಟಾದರೆ ತಕ್ಷಣವೇ ಸಾರಿಗೆ ಸಂಸ್ಥೆ ಬಸ್‌ಗಳು, ಇತರೆ ಸರ್ಕಾರಿ ಇಲಾಖೆ ಲಾರಿಗಳನ್ನು ಸರಕು ಸಾಗಣೆಗೆ ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
-ಬಸವರಾಜು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಹೋರಿ ಎರಗಿ ವ್ಯಕ್ತಿಗೆ ಗಾಯ
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.