ಬೆಚ್ಚಿಬೀಳಿಸಿದ ಯುದ್ಧ ವಿಮಾನ ಪತನ!
Team Udayavani, Feb 2, 2019, 6:15 AM IST
ಬೆಂಗಳೂರು: ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಯುದ್ಧವಿಮಾನ ಪತನ ದುರಂತ ಸ್ಥಳೀಯರು ಹಾಗೂ ವಾಹನಸವಾರರನ್ನು ಶುಕ್ರವಾರ ಬೆಳಿಗ್ಗೆ ಬೆಚ್ಚಿಬೀಳುವಂತೆ ಮಾಡಿತ್ತು. ಬೆಳಿಗ್ಗೆ 10.25ರ ಸುಮಾರಿಗೆ ರನ್‌ವೇಯಲ್ಲಿ ಟೇಕಾಫ್ ಆಗುವ ಸಂಧರ್ಭದಲ್ಲಿ ತಡೆಗೋಡೆಗೆ ಅಪ್ಪಳಿಸಿ ವಿಮಾನ ನೆಲಕ್ಕುರುಳಿದಾಗ ಉಂಟಾದ ಭಾರೀ ಸದ್ದು ಬರೋಬ್ಬರಿ ಎರಡು ಕಿ.ಮೀ ದೂರಕ್ಕೆ ತಲುಪಿದೆ.
ಬಂದ ಭಾರೀ ಸದ್ದು ಕೇಳುತ್ತಲೇ ಭೂಕಂಪದ ಅನುಭವವಾಗಿ ಸ್ಥಳೀಯರು, ಸುತ್ತಮುತ್ತಲ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು, ಯಮಲೂರು ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು, ಎಚ್‌ಎಎಲ್ ಸಿಬ್ಬಂದಿ, ಸೇನಾ ಸಿಬ್ಬಂದಿಗೆ ಅಕ್ಷರಶ: ದಂಗುಬಡಿದ ಅನುಭವ ಆಗಿದೆ.
ಭಾರೀ ಸದ್ದು ಹಾಗೂ ಬೆಂಕಿಯ ಕೆನ್ನಾಲಗೆ ಕಂಡು ಎಚ್‌ಎಎಲ್‌ನಲ್ಲಿರುವ ಅಗ್ನಿಶಾಮಕ ವಾಹನಗಳು ಹಾಗೂ ಸೇನಾ ಅಧಿಕಾರಿಗಳ ತಂಡಗಳು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಹೋಗಿದ್ದು ಫೈಲಟ್‌ಗಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಯುದ್ಧವಿಮಾನದಲ್ಲಿದ್ದ ಸಿದ್ಧಾರ್ಥ್ ನೇಗಿ ಹಾಗೂ ಸಮೀರ್ ಅಬ್ರೋಲ್ ಹುಡುಕಾಟಕ್ಕೆ ಮುಂದಾಗಿವೆ.
ವಿಮಾನ ಪತನದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದ ಸ್ಥಳೀಯರು ಹಾಗೂ ವಾಹನಸವಾರರು ಸಿಮೆಂಟ್ ತಡೆಗೋಡೆ ಒಡೆದು ಒಳಗೆ ಮುನ್ನುಗಿದ್ದಾರೆ. ಫೈಲಟ್‌ಗಳ ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ಈ ವೇಳೆ ಹಲವರು ವಿಮಾನ ಹೊತ್ತಿಉರಿಯುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಬದುಕಲಿಲ್ಲ ಸಮೀರ್!: ತುರ್ತು ನಿರ್ಗಮನದ ಮೂಲಕ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದ ಸಮೀರ್ ಅಬ್ರೋಲ್‌ರ ದೇಹವನ್ನು ಪತ್ತೆಹಚ್ಚಿದ ಕೂಡಲೇ ಆ್ಯಂಬುಲೆನ್ಸ್ ಸಿಬ್ಬಂದಿ, ಸಮೀರ್ ಎದೆಯನ್ನು ಒತ್ತಿ ಒತ್ತಿ ಉಸಿರಾಡುವಂತೆ ಮಾಡಲು ಪ್ರಯತ್ನಿಸಿದರೂ, ಮೇಲಿನಿಂದ ಬಿದ್ದ ರಭಸಕ್ಕೆ ದೇಹದ ಪ್ರಮುಖ ಅಂಗಗಳಿಗೆ ಗಂಭೀರ ಪೆಟ್ಟಾಗಿದ್ದರಿಂದ ಕಮಾಂಡೋ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಕೊನೆ ಉಸಿರು ಚೆಲ್ಲಿದ್ದಾರೆ.ಮತ್ತೂರ್ವ ಪೈಲೆಟ್ ಸಿದ್ದಾರ್ಥ್ ನೇಗಿ ನೇರವಾಗಿ ವಿಮಾನದ ಮೇಲೆಯೇ ಬಿದ್ದಿದ್ದರಿಂದ ಅವರು ಸಂಪೂರ್ಣ ಸುಟ್ಟಗಾಯಗಳಿಂದ ಅಲ್ಲಿಯೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಅರ್ಧ ಕಿ.ಲೋ ಮೀಟರ್ ಪ್ರದೇಶ ಬೆಂಕಿಗಾಹುತಿ!: ಮಿರಾಜ್ -2000 ಯುದ್ಧವಿಮಾನ ತಡೆಗೋಡೆಗೆ ಅಪ್ಪಳಿಸಿದ ಬಳಿಕ ಸುಮಾರು 400 ಮೀಟರ್ ದೂರದವರೆಗೂ ಉರುಳಿಕೊಂಡು ಬಂದಿದೆ. ವಿಮಾನದ ಅವಶೇಷಗಳು ಅರ್ಧ ಕಿಲೋಮೀಟರ್ ದೂರದವರೆಗೂ ಚೆಲ್ಲಾಪಿಲ್ಲಿಯಾಗಿವೆ. ಪತನದಿಂದ ಉಂಟಾದ ಬೆಂಕಿಯ ಕೆನ್ನಾಲಗೆಗೆ ಹುಲ್ಲು, ಗಿಡಗಂಟೆಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿದರು.
ಹೆಲಿಕಾಪ್ಟರ್ ಹಾರಾಟ, ಅವಶೇಷಗಳಿಗಾಗಿ ಹುಡುಕಾಟ!: ಫೈಲಟ್‌ಗಳ ರಕ್ಷಣಾ ಕಾರ್ಯಾಚರಣೆ ವೇಳೆ ಒಳನುಗ್ಗಿದ್ದ ಸಾರ್ವಜನಿಕರನ್ನು ಸೇನಾ ಅಧಿಕಾರಿಗಗಳು ಹೊರಕಳುಹಿಸಿ ಇಡೀ ಪ್ರದೇಶವನ್ನು ಸುತ್ತುವರಿದರು. ಸೇನಾ ಅಧಿಕಾರಿಗಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿತ್ತು.
ಸೇನಾ ಅಧಿಕಾರಿಗಳ ತಂಡಗಳು ಅವಶೇಷಗಳಿಗಾಗಿ ಶುಕ್ರವಾರ ಸಂಜೆಯವರೆಗೂ ಹುಡುಕಾಟ ನಡೆಸಿದವು. ಘಟನೆ ನಡೆದ ಪ್ರದೇಶದಲ್ಲಿ ಅಧಿಕಾರಿಗಳ ದಂಡೇ ನೆರೆದಿತ್ತು. ದುರಂತ ನಡೆದ ಸ್ಥಳದ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದರು. ಮತ್ತೂಂದೆಡೆ ಆಂತರಿಕ ತನಿಖೆ ಭಾಗವಾಗಿ ಸೇನಾ ಹೆಲಿಕಾಪ್ಟರ್ ಎರಡು ಮೂರು ಬಾರಿ ಹಾರಾಟ ನಡೆಸಿತು. ಯಮಲೂರು ರಸ್ತೆಯಲ್ಲಿ ತಡೆಗೋಡೆ ಒಡೆದ ಸ್ಥಳದಲ್ಲಿ ಸಾರ್ವಜನಿಕರು ಒಳಪ್ರವೇಶಿಸದಂತೆ ತಡೆಯಲು ಸ್ಥಳೀಯ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.
ತಪ್ಪಿತು ಭಾರೀ ದುರಂತ!: ರನ್‌ವೇಯಲ್ಲಿ ಯುದ್ಧವಿಮಾನ ಮಿರಾಜ್ -2000 ಟೇಕಾಪ್ ಆಗುತ್ತಿದ್ದಾಗಲೇ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಸಾಧ್ಯವಾದಷ್ಟೂ ವಿಮಾನ ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ. ಪರಿಣಾಮ ರನ್‌ವೇ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ವಿಮಾನ ಪತನಗೊಂಡಿದೆ. ಒಂದು ವೇಳೆ ಕಾಂಪೌಂಡ್ ಗೋಡೆಯಿಂದ ಕೇವಲ ಐನೂರರಿಂದ ಆರುನೂರು ಮೀಟರ್ ಅಂತರದಲ್ಲಿರುವ ರಸ್ತೆಯ ತಡೆಗೋಡೆಗೆ ಅಪ್ಪಳಿಸಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ.
ಪೈಲಟ್‌ಗಳಿಬ್ಬರೂ ರಸ್ತೆ, ಜನನಿಬಿಡ ಪ್ರದೇಶಗಳಲ್ಲಿ ದುರಂತ ಸಂಭವಿಸಬಾರದು ಎಂಬ ಉದ್ದೇಶದಿಂದ ವಿಮಾನವನ್ನು ಸಾಧ್ಯವಾದಷ್ಟೂ ಕಂಟ್ರೋಲ್ ಮಾಡಿದ್ದಾರೆ. ತುರ್ತು ನಿರ್ಗಮನದ ಮೂಲಕ ಪ್ರಾಣಾಪಾಯದಿಂದ ಪಾರಾಗಲೂ ಯತ್ನಿಸಿದರೂ, ಸಾಧ್ಯವಾಗದೇ ಉಸಿರು ಚೆಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಯುದ್ಧವಿಮಾನ ಪತನಗೊಂಡ ಸ್ಥಳದಿಂದ ಯಮಲೂರು ರಸ್ತೆ ಕೇವಲ ಆರುನೂರು ಮೀಟರ್ ದೂರವಿದೆ.
ವಿಮಾನ ಸ್ವಲ್ಪ ದೂರ ಹಾರಾಟ ನಡೆದು ಪತನಗೊಂಡಿದ್ದರೂ ರಸ್ತೆಯ ಮೇಲೆಯೇ ಬೀಳುತ್ತಿತ್ತು. ರಸ್ತೆಯಲ್ಲಿ ವಾಹನಗಳ ಸಂಚಾರ ನಿರಂತರವಾಗಿರುತ್ತಿತ್ತು, ಜತೆಗೆ ವಿಮಾನಕ್ಕೆ ಬಳಸುವ ವೈಟ್ ಪೆಟ್ರೋಲ್ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತಿತ್ತು. ಸಮೀಪವೇ ಬಹುರಾಷ್ಟ್ರೀಯ ಕಂಪೆನಿಗಳಿವೆ, ಪತನ ಘಟನೆ ನಡೆದಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು, ಅಧಿಕಾರಿಗಳು ಅಭಿಪ್ರಾಯವ್ಯಕ್ತಪಡಿಸಿದರು.
ಘಟನಾ ಸ್ಥಳ ನೋಡಲು ಜನರ ದಂಡು!: ಘಟನಾ ಸ್ಥಳ ವೀಕ್ಷಿಸಲು ಸಾರ್ವಜನಿಕರ ದಂಡೇ ರಸ್ತೆ ಬದಿ ನಿಂತಿತ್ತು. ನೂರಾರು ಮಂದಿ ದೂರದಿಂದಲೇ ಘಟನಾ ಸ್ಥಳವನ್ನು ವೀಕ್ಷಿಸುತ್ತಿದ್ದರು, ವಾಹನಸವಾರರು ಕೂಡ ವಾಹನಗಳನ್ನು ರಸ್ತೆಬದಿ ನಿಲ್ಲಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಕಾರ್ಗಿಲ್ ಕಾರ್ಯಾಚರಣೆ: 1985ರಲ್ಲಿ ದೇಶದಲ್ಲಿ ಮೊದಲ ವೈಮಾನಿಕ ಹಾರಾಟ ನಡೆಸಿರುವ ಮಿರಾಜ್ ಯುದ್ಧ ವಿಮಾನಗಳನ್ನು 2014ರಿಂದ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು. ಮೊದಲ ಎರಡು ವಿಮಾನಗಳನ್ನು ಸ್ವತಃ ಡೆಸಾಲ್ಟ್ ಕಂಪನಿಯೇ ಮೇಲ್ದರ್ಜೆಗೇರಿಸಿ ಹಸ್ತಾಂತರಿಸಿತ್ತು. ಉಳಿದ ವಿಮಾನಗಳ ಹೊಣೆಯನ್ನು ಎಚ್‌ಎಎಲ್ ವಹಿಸಿಕೊಂಡಿದೆ.
1999ರಲ್ಲಿ ಭಾರತ ಹಾಗೂ ಪಾಕ್ ನಡುವಣ ಕಾರ್ಗಿಲ್ ಯುದ್ಧದಲ್ಲಿ ಬಳಕೆಯಾಗಿರುವ ಹೆಗ್ಗಳಿಕೆಯನ್ನು ಈ ಎರಡು ಆಸನಗಳ ವಿಮಾನ ಹೊಂದಿದೆ. ಫ್ರಾನ್ಸ್, ಅರಬ್ ದೇಶಗಳು (ಯುಎಇ), ಚೀನಾ ವಾಯುಪಡೆ (ಥೈವಾನ್) “ಮಿರಾಜ್ 2000′ ಅನ್ನು ಬಳಸುತ್ತಿವೆ. ಮೊದಲ ಮೂರು ಪರೀಕ್ಷಾರ್ಥ ಹಾರಾಟಗಳನ್ನು ಮಿರಾಜ್ ಯಶಸ್ವಿಯಾಗಿ ಪೂರೈಸಿತ್ತು. ನಂತರ, ಭಾರತೀಯ ವಾಯುಸೇನೆ ಕೂಡ ಮೊದಲ ಪ್ರಾಯೋಗಿಕ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತ್ತು.
2012ರಲ್ಲಿ ಎರಡು ವಿಮಾನ ಪತನ!: “ಮಿರಾಜ್ 2000′ ಯುದ್ಧ ವಿಮಾನಗಳು ವೈಮಾನಿಕ ತರಬೇತಿ ಹಾರಾಟದ ವೇಳೆ ಪತನಗೊಂಡಿರುವುದು ಈ ಹಿಂದೆಯೂ ಎರಡು ಬಾರಿ ನಡೆದಿದೆ. 2012ರ ಫೆ.14ರಂದು ಮಧ್ಯಪ್ರದೇಶದಲ್ಲಿ ಮಿರಾಜ್ ಯುದ್ಧ ವಿಮಾನ ಹಾರಾಟದ ವೇಳೆ ಪತನಗೊಂಡಿದ್ದು,
ಅದೃಷ್ಟವಶಾತ್ ವಿಮಾನದಲ್ಲಿದ್ದ ವಾಯುಸೇನೆಯ ಅಧಿಕಾರಿಗಳಿಬ್ಬರು ತುರ್ತು ನಿರ್ಗಮನದ ಮೂಲಕ ಪಾರಾಗಿದ್ದರು ಎನ್ನಲಾಗಿದೆ. ಇದಾದ 11ದಿನಗಳಲ್ಲಿಯೇ ಮಾರ್ಚ್ 6ರಂದು ರಾಜಸ್ಥಾನದ ಸವಾಯ್ ಮದವೋಪುರ್ ಜಿಲ್ಲೆಯ ಹಳ್ಳಿಯೊಂದರ ಸಮೀಪ ಮಿರಾಜ್ -2000 ಯುದ್ಧ ವಿಮಾನ ಪತನಗೊಂಡಿದ್ದು, ಅಧಿಕಾರಿಗಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.
ಮನೆ ಒಳಗೆ ಕುಳಿತಿದ್ದೆ, ಭಾರೀ ಸದ್ದಾಗಿ ಭೂಮಿ ಕಂಪಿಸಿದ ಅನುಭವವಾಯ್ತು. ಹೊರಗೆ ಬಂದು ಏರ್‌ಪೋರ್ಟ್ ಕಡೆ ನೋಡಿದಾಗ ಬೆಂಕಿ, ದಟ್ಟ ಹೊಗೆ ಬರುತ್ತಿತ್ತು. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನೋಡಿದಾಗ ದುರಂತದ ಬಗ್ಗೆ ಗೊತ್ತಾಯಿತು.
-ಮಾರಪ್ಪ, ಸ್ಥಳೀಯ ನಿವಾಸಿ
ಬೇಕರಿ ಮುಂದೆ ಟೀ ಕುಡಿಯುತ್ತಿದ್ದೆ. ಭಾರೀ ಸ್ಫೋಟದ ಸದ್ದು ಕೇಳಿ ವಿಮಾನ ನಿಲ್ದಾಣದ ಕಡೆ ನೋಡಿದಾಗ ಪ್ಯಾರಾಚೂಟ್‌ಗಳೊಂದಿಗೆ ಇಬ್ಬರು ಬೆಂಕಿಯಲ್ಲಿ ಬೀಳುವುದು ಕಂಡು ಬಂತು. ಸ್ಥಳಕ್ಕೆ ಹೋದಾಗ ಒಬ್ಬರು ಮೃತಪಟ್ಟಿದ್ದರು. ಮತ್ತೂಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
-ಬಾಬು, ಪ್ರತ್ಯಕ್ಷದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.