ಭಾವ ಬಣ್ಣ ಬದುಕಿನ ಚಿತ್ತಾರ; ಚಿತ್ತಾಕರ್ಷಕ ಚಿತ್ರಸಂತೆ
Team Udayavani, Jan 8, 2018, 12:40 PM IST
ಬೆಂಗಳೂರು: ಅಲ್ಲಿ ಸಾವಿರಾರು ಜನ ಸೇರಿದ್ದರು. ಕಣ್ಣಾಯಿಸಿದಷ್ಟೂ ದೂರವೂ ಜನಜಂಗುಳಿ. ಆದರೆ, ಅಲ್ಲಿ ಅವ್ಯಕ್ತ ಮೌನವಿತ್ತು. ಕಾರಣ, ಅಲ್ಲಿ ಮಾತನಾಡುತ್ತಿದ್ದುದು ಚಿತ್ರಗಳು. ಕಲಾಕೃತಿಗಳ ಭಾವ-ಬಿಂಬಗಳೇ ಸಂವಾದ ನಡೆಸುತ್ತಿದ್ದವು. ಕಲೆ ವ್ಯಕ್ತಕ್ಕೆ ಆಕಾಶವೇ ಮಿತಿ. ಕಲಾವಿದ ಮತ್ತು ಕಲಾಕೃತಿಗಳಿಗೆ ಜಾತಿ-ಧರ್ಮ ಇಲ್ಲ. ವಯಸ್ಸು ಮತ್ತು ಅಂಗ ಊನತೆ ಅಡ್ಡಿ ಬರುವುದಿಲ್ಲ ಎಂಬ ಅಂಶಗಳನ್ನು ಬಿಂಬಿಸಿದ್ದು ಕರ್ನಾಟಕ ಚಿತ್ರಕಲಾ ಪರಿಷನ 15ನೇ ಚಿತ್ರಸಂತೆ.
ಈ ಚಿತ್ರಸಂತೆಯಲ್ಲಿ ಕಲಾವಿದರು ಕಲೆಯನ್ನು ಆವಾಹಿಸಿಕೊಂಡಿದ್ದರೆ, ಕಲಾಪ್ರೇಮಿಗಳು ಮತ್ತು ಕಲಾಪೋಷಕರು ಕಲೆಯನ್ನು ಮನಪೂರ್ತಿ ಆಸ್ವಾದಿಸಿದರು. ಕಲಾವಿದರಲ್ಲಿ ಸಾರ್ಥಕತೆಯ ಭಾವ ಇದ್ದರೆ, ಕಲಾಪ್ರೇಮಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಬೆಳಗ್ಗೆ 6ರಿಂದ ಆರಂಭಗೊಂಡು ರಾತ್ರಿ 8 ಗಂಟೆವರೆಗೂ ನಡೆದ ಚಿತ್ರಸಂತೆಯಲ್ಲಿ ಚಿತ್ರಕಲಾ ಪರಿಷತ್ ಆವರಣ, ಕುಮಾರ ಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂದು ದಿನದ ಮಟ್ಟಿಗೆ ಕಲಾ ಪ್ರಪಂಚವೇ ಆನಾವರಣಗೊಂಡಿತ್ತು.
ಖ್ಯಾತ ರಸಾಯನ ಶಾಸ್ತ್ರಜ್ಞ ಹಾಗೂ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್$x ಸೈಂಟಿಫಿಕ್ ರೀಸರ್ಚ್ ಸಂಸ್ಥೆಯ ಅಧ್ಯಕ್ಷ ಭಾರತ ರತ್ನ ಪ್ರೊ. ಸಿ.ಎನ್.ಆರ್.ರಾವ್ ಚಿತ್ರಸಂತೆಗೆ ಚಾಲನೆ ನೀಡಿದರು. ವಿವಿಧ ಪ್ರಾಂತ್ಯದ ಕಲಾವಿದರಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದಲ್ಲದೆ ಕಲೆಯ ಬೆಳವಣಿಗೆ ಕುರಿತಂತೆ ಚರ್ಚೆ, ಸಂವಾದ, ಕಲಾರಸಿಕರೊಡನೆ ನೇರ ಬಾಂಧವ್ಯ ಮತ್ತು ವಿಚಾರ ವಿನಮಯಗಳಿಗೆ ಈ ಚಿತ್ರಸಂತೆ ವೇದಿಕೆ ಕಲ್ಪಿಸಿಕೊಟ್ಟಿತ್ತು.
ಕರ್ನಾಟಕ ಕಲಾ ಪರಂಪರೆಯ ಜತೆಗೆ ಬೇರೆ ರಾಜ್ಯಗಳ ಕಲೆ ಮತ್ತು ಸಂಸ್ಕೃತಿಯ ಪ್ರದರ್ಶನದ ಮೂಲಕ ಭಾವೈಕ್ಯತೆ ಸಂಕೇತ ಮತ್ತು ರಾಷ್ಟ್ರೀಯ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಟ್ಟ ಚಿತ್ರಸಂತೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳ 1,200ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.
ಚಿತ್ರಸಂತೆಯಲ್ಲಿ ಕಲಾಪ್ರೇಮಿಗಳಿಗೆ 100 ರೂ.ನಿಂದ ಹಿಡಿದು 1 ಲಕ್ಷ ರೂ.ವರೆಗಿನ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವಿತ್ತು. ಮೈಸೂರು ಸಾಂಪ್ರದಾಯಕ ಶೈಲಿ, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಮಧುಬಿನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳ ಜತೆಗೆ, ಅಕ್ರಿಲಿಕ್, ಕೊಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಪ್ರದರ್ಶನಕ್ಕಿದ್ದವು. ಕುಂಚ ಅಥವಾ ಪೆನ್ಸಿಲ್‌ಗಳಿಂದ ಸ್ಥಳದಲ್ಲೇ ಭಾವಚಿತ್ರ ಬಿಡಿಸುವ ಕಲಾವಿದರು ಗಮನ ಸೆಳೆದರು.
15ನೇ ಚಿತ್ರಸಂತೆಯಲ್ಲಿ ಪರಿಸರ ಕಾಳಜಿ ಕುರಿತು ವಿಡಿಯೋ ಹಾಗೂ ಸ್ಥಿರಚಿತ್ರಗಳ ಪ್ರದರ್ಶನ, ಅಮೆರಿಕದ ಬಾಡಿ ಪರ್ಫಾರ್ಮೆನ್ಸ್ ಕಲಾವಿದ ಗ್ರೆಗರಿ ಜಾಕ್ಸನ್ ಹೆಲಿಯವರ ಸಮಕಾಲೀನ ಕಲಾಭಿವ್ಯಕ್ತಿ, ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ “ಲೈವ್ ಪರ್ಫಾರ್ಮೆನ್ಸ್ ಆರ್ಟ್’, ಚಿತ್ರಕಲಾ ಪರಿಷತ್ತಿನ ಶಾಶ್ವತ ಸಂಗ್ರಹದಿಂದ ಆಯ್ದ 100 ಕಲಾಕೃತಿಗಳ ಪ್ರದರ್ಶನ, ಚಿತ್ರಕಲಾ ಮಹಾವಿದ್ಯಾಲಯದ ಕಲಾ ಇತಿಹಾಸ ವಿಭಾಗವು ಸಾದರಪಡಿಸಿದ 20ನೇ ಶತಮಾನದ ಕರ್ನಾಟಕದ ಕಲಾಚಳುವಳಿಗಳ, ಕಲಾ ರೆಸಿಡೆನ್ಸಿಗಳ ಕುರಿತಾದ ಸ್ಥಿರ ಹಾಗೂ ವಿಡಿಯೋ ಚಿತ್ರಗಳ ಪ್ರದರ್ಶನ ಈ ಬಾರಿಯ ಚಿತ್ರಸಂತೆಯ ಆಕರ್ಷಣೆಯಾಗಿತ್ತು.
60 ಲಕ್ಷ ರೂ ಮೌಲ್ಯದ ಕಲಾಕೃತಿ: ಕಲೆಗೆ ಬೆಲೆ ಕಟ್ಟಲಾಗದು. ಆದರೆ, ಭಾನುವಾರ ನಡೆದ ಚಿತ್ರಸಂತೆಯಲ್ಲಿ ದೇಶದ ವಿಶ್ವವಿಖ್ಯಾತ ಕಲಾವಿದರ ಲಕ್ಷಾಂತರ ರೂ. ಮೌಲ್ಯದ ಅಪರೂಪದ ಮತ್ತು ವಿಶಿಷ್ಠ ಕಲಾಕೃತಿಗಳ ಪ್ರದರ್ಶನ ಗಮನ ಸೆಳೆಯಿತು. ವಿಶ್ವವಿಖ್ಯಾತ ಕಲಾವಿದ ಕನ್ನಡಿಗ ಎನ್.ಎಸ್. ಹರ್ಷ, ಕೊಲ್ಕೊತ್ತಾ ಶಾಂತಿನಿಕೇತನದ ಪ್ರೊ. ಜೋಗಿನ್ ಚೌದ್ರಿ, ಕೇರಳದ ಶಿಬಿ ನಟೇಷನ್, ರಿಯಾಜ್ ಕೋಮ್, ಕೃಷ್ಣಾಮಾಚಾರಿ ಬೋಸ್, ಮುಂಬೈನ ಟಿ.ವಿ ಸಂತೋಷ್ ಮತ್ತಿತರರ 40ರಿಂದ 60 ಲಕ್ಷ ರೂ. ಮೌಲ್ಯದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.
ಇಂತಹ ದೊಡ್ಡ ಕಲಾವಿದರು ನಮ್ಮ ಚಿತ್ರಸಂತೆಗೆ ಲಭ್ಯರಾಗುವುದಿಲ್ಲ. ಆದರೆ, ಅವರ ಕಲಾಕೃತಿಗಳನ್ನಾದರೂ ಕಲಾಸಕ್ತರಿಗೆ ಪ್ರದರ್ಶನ ಮಾಡಬೇಕು ಎಂಬ ಉದ್ದೇಶದಿಂದ ಪರಿಷತ್ತಿನ ಶಾಶ್ವತ ಸಂಗ್ರಹ ನಿಧಿಯಿಂದ ಈ ಕಲಾಕೃತಿಗಳನ್ನು ಖರೀದಿಸಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಚಿತ್ರಕಲಾ ಪರಿತ್ತಿನ ಸಹಾಯಕ ಕಾರ್ಯದರ್ಶಿ ಪ್ರೊ. ಕೆ.ಎಸ್. ಅಪ್ಪಾಜಯ್ಯ “ಉದಯವಾಣಿ’ಗೆ ಮಾಹಿತಿ ನೀಡಿದರು.
ಹನುಮ ಭಕ್ತ ಫಯಾಜ್: “ಗೋಕುಲಾಷ್ಟಮಿಗೂ ಇಮಾಮ್‌ಸಾಬಿಗೂ ಏನು ಸಂಬಂಧ’ ಎಂದು ಹೇಳಲಾಗುತ್ತದೆ. ಆದರೆ, ಕಲೆಗೆ ಜಾತಿ-ಧರ್ಮ ಇಲ್ಲ ಅನ್ನುವುದನ್ನು ಸಾಬೀತುಪಡಿಸುವ ಭಾವೈಕ್ಯ ನಿದರ್ಶನವೊಂದು ಈ ಬಾರಿಯ ಚಿತ್ರಸಂತೆಯಲ್ಲಿ ಸಾಕ್ಷಿಯಾಯಿತು. ಕಳೆದ 30 ವರ್ಷಗಳಿಂದ ಪೇಪರ್ ಕಟಿಂಗ್‌ನಲ್ಲಿ ಚಿತ್ರಬಿಡಿಸುವ ಅಪರೂಪದ ಕಲೆಯನ್ನು ಕರಗತ ಮಾಡಿಕೊಂಡಿರುವ ನಗರದ ಕಾವೇರಿನಗರದ ನಿವಾಸಿ ಫಯಾಜ್ ಹುಸೇನ್ ಒಂದು ರೀತಿ ಆಂಜನೇಯನ ಭಕ್ತ ಇದ್ದಂತೆ. ಕಾಗದ ಹಿಡಿದು ಕತ್ತರಿ ಮೂಲಕ ಕತ್ತರಿಸಿ ಅದರಲ್ಲಿ “ಸಂಜೀವಿನಿ ಪರ್ವತ ಹೊತ್ತ ಗದಾಧಾರಿ ಹನುಮಂತನ’ ಚಿತ್ರ ಬಿಡಿಸುವಲ್ಲಿ ಪ್ರಸನ್ನತೆ ಕಾಣುತ್ತಾರೆ. ಈವರ ಈ ಕಲೆ ಕಲಾಸಕ್ತರಿಂದ ಅಪಾರ ಪ್ರಶಂಸೆ ವ್ಯಕ್ತವಾಯಿತು.
ಚಿತ್ರಗಳ ಮೂಲಕ ಮಾತನಾಡುವ ಮೂಕ ದಂಪತಿ: ಕಲಾವಿದನಿಗೆ ಮಾತು ಬರದಿದ್ದರೆ ಏನಾಯಿತು. ಆತ ತನ್ನ ಕಲಾಕೃತಿಗಳ ಮೂಲಕ ಮಾತನಾಡುತ್ತಾನೆ, ಜನರೊಂದಿಗೆ ಸಂವಹನ, ಸಂವಾದ ನಡೆಸುತ್ತಾನೆ ಎಂಬ ಮನಸ್ಪರ್ಶಿ ಸಂಗತಿಗೆ ಚಿತ್ರಸಂತೆಯಲ್ಲಿ ಕಲಾಸಕ್ತರನ್ನು ಮೂಕವಿಸ್ಮಿತರನ್ನಾಗಿ ಮಾಡಿತು.
ದೊಮ್ಮಲೂರಿನ ಮೂಕ ದಂಪತಿ ಜ್ಯೋತಿ ಮತ್ತು ಕುಮಾರ್, ಶ್ರವಣ ದೋಷ, ಮೂಕ ಜನರ ಭಾವನೆ, ನೋವು-ನಲಿವುಗಳನ್ನು ತಮ್ಮ ಸ್ವರಚಿತ ಕಲಾಕೃತಿಗಳ ಮೂಲಕ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾದರು. 15 ವರ್ಷಗಳಿಂದ ನಮ್ಮ ಕಲಾಕೃತಿಗಳ ಮೂಲಕವೇ ನಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಪ್ರತಿ ವರ್ಷ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಆದರೆ, ನಿರೀಕ್ಷೆಗೆ ತಕ್ಕಂತೆ ಮಾರಾಟ ಇಲ್ಲ ಎಂದು ಆ ದಂಪತಿ ಸನ್ನೆಗಳ ಮೂಲಕವೇ “ಉದಯವಾಣಿ’ಯೊಂದಿಗೆ ಮಾತನಾಡಿದರು.
ಕಲೆಗೆ ಅಂಗ ಊನತೆ ಅಡ್ಡಿ ಆಗಲ್ಲ: ಕಲೆಗೆ ವಯಸ್ಸು ಮತ್ತು ಅಂಗ ಊನತೆ ಅಡ್ಡಿಯಾಗುವುದಿಲ್ಲ ಎಂದು “ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟೀಸ್’ (ಎಪಿಡಿ) ಸಂಸ್ಥೆಯು ಸಾಬೀತುಪಡಿಸಿತು. ವಿವಿಧ ಬಗೆಯ ಅಂಗವೈಕಲ್ಯತೆ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವ 7ನೇ ತಗರತಿಯ ಮಕ್ಕಳು ಚಿತ್ರಿಸಿದ ಕಲಾಕೃತಿಗಳ ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿತ್ತು. ನಮ್ಮದು ಸೇವಾ ಸಂಸ್ಥೆಯಾಗಿದ್ದು, ಈ ಕಲಾಕೃತಿಗಳ ಮಾರಾಟದಿಂದ ಬರುವ ಹಣ ಅದೇ ಮಕ್ಕಳ ಅರೈಕೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ನಿರ್ದೇಶಕಿ ಸುಭಾಷಿಣಿ “ಉದಯವಾಣಿ’ಗೆ ತಿಳಿಸಿದರು.
ಕನ್ನಡ ಪ್ರೇಮಿ ಜಾಕ್ಸನ್ ಹೆಲಿ: ಕಲೆಗೆ ಭಾಷೆ ಮತ್ತು ಗಡಿಯ ನಿರ್ಬಂಧಗಳಿರುವುದಿಲ್ಲ ಅನ್ನುವುದನ್ನು ಚಿತ್ರಸಂತೆ ಸಾಕ್ಷಾತ್ಕರಿಸಿತು. ಅಮೆರಿಕದ ಬಾಡಿ ಪೇಂಟಿಂಗ್ (ದೆಹದ ಮೇಲೆ ಚಿತ್ರ ಬಿಡಿಸುವ) ಕಲೆಯ ಕಲಾವಿದ ಗ್ರೇಗರಿ ಜಾಕ್ಸನ್ ಹೆಲಿ ತಮ್ಮ ದೇಹದ ಮೇಲೆ “ನಾನು ಕನ್ನಡಿಗ’ ಎಂದು ಬರೆಸಿಕೊಂಡು ಕನ್ನಡ ಪ್ರೇಮ ಮೆರೆದರು. ಬಳಿಕ ಇವರು ಚಿತ್ರಕಲಾ ಪರಿಷತ್ತಿನ ಕಲಾ ಕಾಲೇಜಿನ ವಿದ್ಯಾರ್ಥಿಗಳ ಸಹಾಯದೊಂದಿಗೆ ಕಲಾಸಕ್ತರ ದೇಹದ ಮೇಲೆ ಚಿತ್ರಬಿಡಿಸುವ ಮೂಲಕ ಗಮನ ಸೆಳೆದರು.
ಪರ್ಸ್ ಕಳೆದು ಕೊಂಡವರ ಪೇಚಾಟ: ಬೆಳಗ್ಗೆ ಸಾಧಾರಣವಾಗಿದ್ದ ಕಲಾಸಕ್ತರ ಸಂಖ್ಯೆ ಸಂಜೆಯಾಗುತ್ತಿದ್ದಂತೆ ಲಕ್ಷಗಳನ್ನು ಮೀರತೊಡಗಿತು. ಚಿತ್ರಸಂತೆ ಜನರ ಸಂತೆಯಾಗಿ ಮಾರ್ಪಟ್ಟಿತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಹಿನ್ನೆಲೆಯಲ್ಲಿ ಕೆಲವರು ತಮ್ಮ ಪರ್ಸ್ ಕಳೆದುಕೊಂಡು ಪೇಚಾಟಕ್ಕೆ ಸಿಲುಕಿದ್ದು ಕಂಡು ಬಂತು. ಪರ್ಸ್ ಕಳೆದು ಕೊಂಡವರು ಕಾರ್ಯಕ್ರಮದ ಆಯೋಜಕರ ಸಹಾಯ ಪಡೆದು ಉದ್ಘೋಷಕರ ಮೂಲಕ ಪರ್ಸ್ ಕಳೆದು ಕೊಂಡ ಬಗ್ಗೆ ದ್ವನಿವರ್ಧಕದಲ್ಲಿ ಘೋಷಣೆ ಮಾಡಿದ್ದು ಗೋಚರಿಸಿತು.
ಮನಸೆಳೆದ ಸಂಗೀತ ಸಂಜೆ: ಚಿತ್ರ ಸಂತೆಯಲ್ಲಿ ಸಂಜೆ ಸಂಗೀತಕ್ಕೆ ಮನ್ನಣೆ ನೀಡಲಾಗಿತ್ತು. ಪರಿಷತ್ ಆವರಣದ ಪಕ್ಕದಲ್ಲಿಯೇ ಹೆಸರಾಂತ ಗಾಯಕಿ ಚಂದ್ರಿಕಾ ಗುರುರಾಜ್ ತಂಡದವರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಗೀತ ರಸ ಸಂಜೆಯಲ್ಲಿ ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹ ಸ್ವಾಮಿ ಸೇರಿದಂತೆ ಹಲವು ಕವಿಗಳ ಭಾವಗೀತೆಗಳು ಸಂಗೀತ ರಸಿಕರ ಮನತಣಿಸಿದವು. ಚಿತ್ರಸಂತೆಯಲ್ಲಿ ಸಂಗೀತಕ್ಕೂ ಮನ್ನಣೆ ನೀಡಿರುವುದು ಖುಷಿಕೊಟ್ಟಿದೆ ಎಂದು ಶೇಷಾದ್ರಿಪುರ ನಿವಾಸಿ ಸರಸ್ವತಿ ಹೇಳಿದರು.
ಉತ್ತರ ಕರ್ನಾಟಕದವರಲ್ಲಿ ನಗುವಿನ ಅಲೆ: ಚಿತ್ರ ಸಂತೆಯಲ್ಲಿ ಈ ಬಾರಿ ಉತ್ತರ ಕರ್ನಾಟಕ ಭಾಗದ ಕಲಾವಿದರ ದಂಡೇ ಇತ್ತು. 1513 ಮಳಿಗೆಗಳಲ್ಲಿ ಉತ್ತರ ಭಾರತದವರನ್ನು ಬಿಟ್ಟರೆ ಬಹುತೇಕ ಮಂದಿ ಉತ್ತರ ಕರ್ನಾಟಕದವರಿದ್ದರು. ಬಂಗಾಳಿಗಳ ವ್ಯಾಪಾರಕ್ಕೆ ಹೋಲಿಸಿದ ಉತ್ತರ ಕರ್ನಾಟಕ ಮಂದಿಯ ಮೊಗದಲ್ಲಿ ನಗುವಿನ ಅಲೆ ಕಂಡು ಬಂತು. “ಈ ಬಾರಿ ನಿರೀಕ್ಷೆಗಿಂತಲೂ ಉತ್ತಮ ವ್ಯಾಪಾರ ಆಗಿದೆ. ಸುಮಾರು 70 ಸಾವಿರ ರೂ. ವಹಿವಾಟು ನಡೆದಿರುವುದು ಖುಷಿಕೊಟ್ಟಿದೆ,’ ಎಂದು ಧಾರವಾಡ ಮೂಲದ ದಿವ್ಯಾ ಹರ್ಷ ವ್ಯಕ್ತಪಡಿಸಿದರು.
ಯುವ ಕಲಾವಿದರಿಗೆ ಸಿಎನ್ನಾರ್ ಪ್ರಶಸ್ತಿ
ಬೆಂಗಳೂರು: ಯುವಪೀಳಿಗೆಯಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಉದಯೋನ್ಮುಖ ಮತ್ತು ಪ್ರತಿಭಾವಂತ ಯುವ ಕಲಾವಿದರಿಗೆ ಪ್ರತಿ ವರ್ಷ ತಮ್ಮದೇ ಹೆಸರಲ್ಲಿ ಪ್ರಶಸ್ತಿ ಕೊಡುವುದಾಗಿ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಘೋಷಿಸಿದ್ದಾರೆ.
15ನೇ ಚಿತ್ರಸಂತೆಗೆ ಚಾಲನೆ ನೀಡಿ ಮಾತನಾಡಿದ ಅವರು, “ನಾನೊಬ್ಬ ವಿಜ್ಞಾನಿ. ಸಂಶೋಧನೆ ನನ್ನ ಕ್ಷೇತ್ರ. ಆದರೆ, ಕಲೆ ಬಗ್ಗೆ ನನಗೆ ಆಸಕ್ತಿ. ಹಾಗಾಗಿ ನನ್ನ ಹೆಸರಲ್ಲಿ ಒಂದು ಪ್ರಶಸ್ತಿ ಕೊಡುತ್ತೇನೆ. ವಿವರಗಳನ್ನು ಚಿತ್ರಕಲಾ ಪರಿಷತ್ ನಿರ್ಧರಿಸಲಿ,’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಪ್ರೊ.ರಾವ್ ಅವರು ಪ್ರಶಸ್ತಿ ಕೊಡಲು ಮುಂದಾಗಿರುವುದು ಸ್ವಾಗತಾರ್ಹ.
ಆದಷ್ಟು ಬೇಗ ಅವರಿಗೆ ವಿವರಗಳನ್ನು ಸಲ್ಲಿಸಲಾಗುವುದು ಎಂದರು. ಹಿರಿಯ ಚಿತ್ರಕಲಾವಿದ ಕನಾಯ್ ಕುನಿØರಾಮನ್, ಮೇಯರ್ ಸಂಪತ್‌ರಾಜ್, ಪರಿಷತ್ತಿನ ಉಪಾಧ್ಯಕ್ಷ ಟಿ. ಪ್ರಭಾಕರ, ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಜಿ.ಕಮಲಾಕ್ಷಿ , ಸಹಾಯಕ ಕಾರ್ಯದರ್ಶಿ ಪೊ›. ಕೆ.ಎಸ್. ಅಪ್ಪಾಜಯ್ಯ ಇತರರಿದ್ದರು.
ನಾಲ್ಕು ಕೋಟಿ ವಹಿವಾಟು: ಈ ಬಾರಿಯ ಚಿತ್ರಸಂತೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಒಟ್ಟು 5 ಲಕ್ಷ ಕಲಾಸಕ್ತರು ಭೇಟಿ ಕೊಟ್ಟಿದ್ದಾರೆ. ಅಂದಾಜು 3.5 ರಿಂದ 4 ಕೋಟಿ ರೂ.ಗಳಷ್ಟು ವಹಿವಾಟು ಆಗಿದೆ. ಕಳೆದ ವರ್ಷ 3 ಕೋಟಿ ರೂ. ವಹಿವಾಟು ಆಗಿತ್ತು. ಈ ಬಾರಿ ಅತಿ ಹೆಚ್ಚು ಮೌಲ್ಯಕ್ಕೆ ಮಾರಾಟವಾದ ಕಲಾಕೃತಿಯ ಮೊತ್ತ 2 ಲಕ್ಷ ರೂ. ಆಗಿದೆ. ಉಳಿದಂತೆ 50 ಸಾವಿರದಿಂದ 1.5 ಲಕ್ಷ ರೂ. ವರೆಗಿನ ಕಲಾಕೃತಿಗಳು ಮಾರಾಟವಾಗಿವೆ ಎಂದು ಚಿತ್ರಕಲಾ ಪರಿಷತ್ತಿನ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಇದು ನನ್ನ ಮೊದಲ ಅನುಭವ. ಚಿತ್ರಸಂತೆಯ ಬಗ್ಗೆ ನನ್ನಲ್ಲಿ ಒಂದು ಕಲ್ಪನೆ ಇತ್ತು. ಇವತ್ತು ನೋಡಿದಾಗ ಕಲ್ಪನೆಗೆ ಮೀರಿದ ಅನುಭವವಾಗಿದೆ. ನನ್ನ ಕಲಿಕೆಗೆ ಈ ಚಿತ್ರಸಂತೆಯಿಂದ ತುಂಬಾ ಪ್ರೇರಣೆ ಸಿಕ್ಕಿದೆ.
-ಇಶಾ, ಚಿತ್ರಕಲಾ ವಿದ್ಯಾರ್ಥಿನಿ.
“ಇಂದು ಕಲೆ ಮರೆತು ಹೋಗುತ್ತಿದೆ. ಚಿತ್ರಸಂತೆ ಅದಕ್ಕೆ ಜೀವ ಕೊಡುತ್ತಿದೆ. ಕಲೆಗೆ ಪ್ರೋತ್ಸಾಹ ಕೊಡಬೇಕು ಎಂಬ ಭಾವನೆಯೊಂದಿಗೆ ಈ ಚಿತ್ರಸಂತೆಯಿಂದ ಹೋಗುತ್ತಿದ್ದೇನೆ. ಕಲಾಕೃತಿಗಳ ವೀಕ್ಷಣೆಯಿಂದ ಜೀವನಕ್ಕೊಂದು ಹೊಸ ಉತ್ಸಾಹ ಬರುತ್ತದೆ’.
-ಜ್ಯೋತಿ, ಗೃಹಿಣಿ, ಕಮರ್ಷಿಯಲ್ ಸ್ಟ್ರೀಟ್
“ಚಿತ್ರಸಂತೆ ನೋಡುವುದೆಂದರೆ ಎಲ್ಲಿಲ್ಲದ ಆನಂದ. ಇದೊಂದು ಅಪರೂಪದ ಸಂದರ್ಭ. ಆರೋಗ್ಯದ ತೊಂದರೆ ಇದ್ದರೂ ಇಲ್ಲಿಗೆ ಬಂದಿದ್ದೇನೆ. ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಆರೋಗ್ಯದಿಂದ ಇರಬಹುದು’.
-ಡಾ. ವಿಶ್ವನಾಥ ಹಿರೇಮಠ, ಹಿರಿಯ ನಾಗರಿಕ, ರಾಜಾಜಿನಗರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.