ಗಣ್ಯರು, ಅಭಿಮಾನಿಗಳಿಂದ ಅಂತಿಮ ದರ್ಶನ
Team Udayavani, Jun 1, 2017, 12:16 PM IST
ಬೆಂಗಳೂರು: ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಲು ಗಣ್ಯರ ಸಹಿತ, ಅಭಿಮಾನಿಗಳ ಮಹಾಪೂರವೇ ಹರಿದು ಬಂದಿತು. ಪಾರ್ವತಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ಸದಾಶಿವನಗರದ ನಿವಾಸಕ್ಕೆ ಚಿತ್ರೋದ್ಯಮ, ರಾಜಕೀಯ, ಸಾಹಿತಿ, ಕಲಾವಿದರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ಜತೆಗೆ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ಪಾರ್ವತಮ್ಮ ಅವರ ಅಂತಿಮ ದರ್ಶನ ಪಡೆದರು.
ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಂತಿಮ ದರ್ಶನ ಪಡೆದ ಎಲ್ಲಾ ಗಣ್ಯರು ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರೆಲ್ಲರಿಗೂ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಮನೆಯೊಳಗೆ ಪ್ರವೇಶ ಮಾಡಲು ಮತ್ತು ನಿರ್ಗಮನಕ್ಕೆ ಬ್ಯಾರಿಕೇಡ್ ಹಾಕಿ ಪ್ರತ್ಯೇಕ ದಾರಿ ರಚಿಸಲಾಗಿತ್ತು.
ಬೆಳಗ್ಗೆಯಿಂದಲೇ ಅಂತಿಮ ದರ್ಶನ ಆರಂಭವಾಗಿದ್ದು, ಮಾಧ್ಯಹ್ನ 4 ಗಂಟೆ ಸುಮಾರಿಗೆ ಮಲ್ಲಿಗೆ ಹಾಗೂ ಇತರೇ ಪುಷ್ಪಗಳಿಂದ ಅಲಂಕರಿಸಿದ ಸುಸಜ್ಜಿತ ಶ್ರದ್ಧಾಂಜಲಿ ವಾಹನದಲ್ಲಿ ಪಾರ್ವತಮ್ಮ ಅವರ ಪಾರ್ಥಿವ ಶರೀರವನ್ನು ಸದಾಶಿವ ನಗರದ ಮನೆಯಿಂದ ಮೇಕ್ರಿ ವೃತ್ತ, ಯಶವಂತಪುರ, ಗೊರಗುಂಟೆಪಾಳ್ಯ ಮಾರ್ಗವಾಗಿ ಕಂಠೀವರ ಸ್ಟುಡಿಯೋ ಕೊಂಡೊಯ್ಯಲಾಯಿತು.
ಮನೆಯಿಂದಲೇ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜವನ್ನು ಹೊದಿಸಲಾಗಿತ್ತು. ಶವಯಾತ್ರೆ ಹೊರಡುವ ಸಂದರ್ಭದಲ್ಲಿ ಸಾವಿರಾರು ಜನ ಸೇರಿದ್ದರಿಂದ ಸ್ವಲ್ಪ ಮಟ್ಟಿನ ನೂಕುನುಗ್ಗಲು ಉಂಟಾಗಿತ್ತಾದರೂ, ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಭಾಯಿಸಿದ್ದರು. ಕುಟುಂಬದವರೆಲ್ಲರೂ ಕಂಠೀರವ ಸ್ಟುಡಿಯೋಗೆ ಹೋಗಲು ಅನುಕೂಲವಾಗುವಂತೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಪಾರ್ವತಮ್ಮನವರ ಅಂತಿಮ ದರ್ಶನಕ್ಕೆ ಬಂದಿದ್ದ ಚಲನಚಿತ್ರ ನಟ ನಟಿಯರೊಂದಿಗೆ ಸಾರ್ವಜನಿಕರು ಸೆಲ್ಫಿà ಕೂಡ ತೆಗೆಸಿಕೊಂಡರು.
ರಾಜ್‌ಗೆ ಪ್ರೇರಕಿ, ಚಿತ್ರೋದ್ಯಮಕ್ಕೆ ಶಕ್ತಿ…
ಬೆಂಗಳೂರು: ಖ್ಯಾತ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ರಾಜ್ಯದ ರಾಜಕೀಯ ನಾಯಕರು ಹೃದಯಪೂರ್ವಕ ನುಡಿನಮನ ಸಲ್ಲಿಸಿದರು. ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಟ ರಾಘವೇಂದ್ರರಾಜ್ ಕುಮಾರ್ ಅವರ ನಿವಾಸದಲ್ಲಿ ಡಾ.ಪಾರ್ವತಮ್ಮ ಅವರ ಅಂತಿಮ ದರ್ಶನ ಪಡೆದ ರಾಜಕೀಯ ಮುಖಂಡರು, ನಾಡಿನ ಸಾಂಸ್ಕೃತಿಕ ವೈಭವ ಹೆಚ್ಚಿಸಲು ಡಾ.ರಾಜ್ ಕುಮಾರ್ ಮತ್ತು ಡಾ.ಪಾರ್ವತಮ್ಮ ರಾಜ್‌ಕುಮಾರ್ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ರಾಜ್‌ಕುಮಾರ್ ಅವರ ಪ್ರೇರಕ ಶಕ್ತಿಯಾಗಿ ಕನ್ನಡ ಚಲನಚಿತ್ರೋದ್ಯಮದ ಪಾಲಿಗೆ ಅಮ್ಮನಂತಿದ್ದ ಪಾರ್ವತಮ್ಮ ಅವರ ನಿಧನದಿಂದ ಚಿತ್ರೋದ್ಯಮ ಬಡವಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಸಚಿವರಾದ ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕಾಗೋಡು ತಿಮ್ಮಪ್ಪ, ಶಾಸಕರಾದ ಗೋಪಾಲಯ್ಯ, ಡಾ. ಸಿ.ಎನ್.ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸದಸ್ಯ ಎಚ್.ಎಂ.ರೇವಣ್ಣ, ಮೇಯರ್ ಜಿ.ಪದ್ಮಾವತಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಂತಿಮ ದರ್ಶನ ಪಡೆದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.