ಮುದ್ದೆ ಊಟ ಮೇಳಕ್ಕೇ ಫೇಮಸ್ಸು!
Team Udayavani, Nov 18, 2017, 11:27 AM IST
ಬೆಂಗಳೂರು: ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ವಿವಿಧ ಬೆಳೆ, ದೇಸಿ ಹಸು, ಎತ್ತು, ಮಾಂಸದ ಕೋಳಿ, ಕುರಿಗಳು ಅಷ್ಟೇ ಏಕೆ ಅತ್ಯಾಧುನಿಕ ಯಂತ್ರಗಳು ಗಮನಸೆಳೆಯುವುದು ಮಾಮೂಲು. ಆದರೆ ಈ ಬಾರಿಯ ಮೇಳದಲ್ಲಿ ಇಂಥ ಬೆಳೆ, ಸಾಕುಪ್ರಾಣಿ ಅಥವಾ ಯಂತ್ರೋಪಕಡಣ ನೋಡುವವರಿಗಿಂತಲೂ ಸಾಂಪ್ರದಾಯಿಕ ಊಟ ಸವಿಯಲು ಸಾಲಲ್ಲಿ ನಿಲ್ಲುತ್ತಿರುವವರೇ ಹೆಚ್ಚು.
ಮೇಳಕ್ಕೆ ಬಂದ ಬಹುತೇಕರನ್ನು ಹೆಚ್ಚು ಸೆಳೆಯುತ್ತಿರುವುದು, ಮಳಿಗೆಗಳ ಪಕ್ಕದಲ್ಲೇ ಇರುವ ಫುಡ್‌ಕೋರ್ಟ್‌ನಲ್ಲಿನ ಘಮಘಮಿಸುವ ರಾಗಿ ಮುದ್ದೆ-ಕಾಳುಸಾರಿನ ಬೃಹತ್ ಮಳಿಗೆ. ಮುದ್ದೆ ಊಟಕ್ಕಾಗಿ ಕ್ಯೂ ನಿಂತವರನ್ನು ನೋಡಿದರೆ ಇವರೆಲ್ಲಾ ಕೃಷಿ ಮೇಳ ನೋಡಲು ಬಂದಿದ್ದಾರೋ ಅಥವಾ ಮುದ್ದೆ ಊಟ ಮಾಡಲು ಬಂದಿದಾರೋ ಎಂಬ ಅನುಮಾನ ಕಾಡದೆ ಇರಲು ಸಾಧ್ಯವೇ ಇಲ್ಲ.
ಎರಡನೇ ದಿನಕ್ಕೇ ರಾಗಿ ಮುದ್ದೆ ಊಟದ ರುಚಿ ಮೇಳದ ತುಂಬೆಲ್ಲಾ ಫೇಮಸ್ ಆಗಿದ್ದು, ಭೇಟಿ ನೀಡುವ ಸಾರ್ವಜನಿಕರು, ರೈತರು ಮಾತ್ರವಲ್ಲದೆ ವಿವಿಧ ಮಳೆಗೆ ಹಾಕಿಕೊಂಡಿರುವ ವ್ಯಾಪಾರಿಗಳು ಮತ್ತು ಪ್ರದರ್ಶಕರೂ ಮುದ್ದೆ ಊಟಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಿರುವುದು ವಿಶೇಷ.
ಕಳೆದೆರಡು ದಿನಗಳಲ್ಲಿ ಸುಮಾರು 20ರಿಂದ 25 ಸಾವಿರ ಮಂದಿ ಈ ಮುದ್ದೆ ಊಟದ ಸವಿಯುಂಡಿದ್ದಾರೆ. ಈ ಪೈಕಿ ಮೊದಲ ದಿನ ಸುಮಾರು 10.50 ಸಾವಿರ ಹಾಗೂ ಶುಕ್ರವಾರ 11 ಸಾವಿರ ಜನ ಊಟ ಮಾಡಿದ್ದಾರೆ. ಶನಿವಾರ ಮತ್ತು ಭಾನುವಾರ ಈ ಸಂಖ್ಯೆ ದುಪ್ಪಟ್ಟು ಆಗಲಿದೆ ಎಂದು ಕೃಷಿ ಮೇಳದಲ್ಲಿ ಊಟದ ವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡ ಡಾ.ಆರ್.ಎನ್. ಭಾಸ್ಕರ್ ತಿಳಿಸುತ್ತಾರೆ.
ನಾಲ್ಕೂ ದಿನಗಳು ಬೆಳಗ್ಗೆ ಪೊಲೀಸ್, ಸ್ವಯಂಸೇವಕರು ಸೇರಿದಂತೆ ಭದ್ರತಾ ಸಿಬ್ಬಂದಿಗೆ ತಿಂಡಿ ವ್ಯವಸ್ಥೆಯನ್ನು ಫುಡ್‌ಕೋರ್ಟ್‌ನಿಂದಲೇ ಮಾಡಲಾಗುತ್ತಿದೆ. ಮಧ್ಯಾಹ್ನ ರೈತರು ಸೇರಿದಂತೆ ಮೇಳಕ್ಕೆ ಬಂದವರೆಲ್ಲರಿಗೂ ನಿತ್ಯ ಊಟದ ವ್ಯವಸ್ಥೆ ಇಲ್ಲಿರುತ್ತದೆ. ಮುದ್ದೆ, ಕಾಳುಸಾರು, ಅನ್ನ-ಸಾಂಬಾರು, ಒಂದು ಸಿಹಿ ತಿಂಡಿ ಜತೆಗೆ ಮೊಸರನ್ನ ಇರುವ ಒಂದು ಪ್ಲೇಟ್ ಊಟದ ದರ 50 ರೂ. ನಿಗದಿ ಮಾಡಲಾಗಿದೆ.
ಅಂದಹಾಗೆ ಮುದ್ದೆ ತಯಾರಿಸುವ ಸ್ಥಳದಿಂದ ಹಿಡಿದು, ಸಾರ್ವಜನಿಕರು ಕುಳಿತು ಊಟ ಮಾಡುವ ಸ್ಥಳದವರೆಗೂ ಸ್ವತ್ಛತೆಗೆ ಆದ್ಯತೆ ನೀಡಿರುವುದು ಇಲ್ಲಿನ ಮತ್ತೂಂದು ವಿಶೇಷ. ಅತ್ಯಂತ ವ್ಯವಸ್ಥಿತವಾದ ವಿಧಾನದಲ್ಲಿ ಮತ್ತು ಸ್ವತ್ಛ ಪರಿಸರದಲ್ಲಿ ಅಡುಗೆ ತಯಾರಿಸಲಾಗುತ್ತದೆ. ಕೊನೆಗೆ ಊಟದ ಎಲೆ, ನೀರಿನ ಲೋಟಗಳನ್ನು ವ್ಯವಸ್ಥಿತವಾಗಿ ತೆಗೆದು, ವಿಲೇವಾರಿ ಮಾಡಲಾಗುತ್ತದೆ. ಎಲ್ಲ ಹಂತದಲ್ಲೂ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ನೀವೇನಾದರೂ ಕೃಷಿ ಮೇಳಕ್ಕೆ ಹೋದರೆ ಮೇಳದ ಫೇಮಸ್ ಮುದ್ದೆ ಊಟ ಸವಿಯಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.