Fireworks: ಪಟಾಕಿ ಹೊಗೆ ಮಾಲಿನ್ಯದ ಜತೆ ಆರೋಗ್ಯಕ್ಕೂ ಹಾನಿ
Team Udayavani, Nov 7, 2023, 10:26 AM IST
ಬೆಂಗಳೂರು: ಚಳಿಗಾಲದಲ್ಲಿ ಗಾಳಿಯಲ್ಲಿ ತೇಲುವ ಕಣಗಳು ತುಂಬಾ ಕೆಳಗೆ ಇರುತ್ತವೆ. ವೈರಾಣುಜ್ವರ ತೀವ್ರವಾಗಿ ಕಾಡುತ್ತಿದೆ. ಝೀಕಾ ವೈರಸ್‌ನ ಭೀತಿಯೂ ಮನೆಮಾಡಿದೆ. ಇಂತಹದ್ದರಲ್ಲಿ ಮಿತಿಮೀರಿ ಪಟಾಕಿ ಹೊಡೆಯುವುದು ಅಪಾಯಕಾರಿ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತೂಂದು ದೆಹಲಿ ಆಗದಿರಲು ಉದ್ಯಾನ ನಗರಿ ಜನ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮುಂದಾಗಬೇಕು ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ.
ದೀಪಾವಳಿಯಲ್ಲಿ ಅತಿಯಾದ ಪಟಾಕಿ ಬಳಕೆಯಿಂದ ಮಾಲಿನ್ಯ ಪ್ರಮಾಣ ಏರಿಕೆಯಾಗುತ್ತಿದೆ. ಈ ಬಾರಿ ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಪೊಲೀಸ್ ಇಲಾಖೆಯು ಪ್ರತಿ ಜಿಲ್ಲೆಗಳಲ್ಲಿ ಕಾರ್ಯಪಡೆಗಳನ್ನು ರಚಿಸಿ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.
ಮಳಿಗೆಗಳಲ್ಲಿರುವ ಪಟಾಕಿಗಳನ್ನು ಪರಿಶೀಲಿಸಿ, ರಾಸಾಯನಿಕ ಹೆಚ್ಚಿರುವ ಪಟಾಕಿ ಕಂಡುಬಂದರೆ ಅಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿದೆ.
ಜಾಗೃತಿ ಕಾರ್ಯಕ್ರಮ: ಇನ್ನು ದೀಪಾವಳಿಗೂ ಮೊದಲೇ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಹಸಿರು ಪಟಾಕಿ ಬಳಸುವಂತೆ ಮಂಡಳಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದೆ. ಬೆಂಗಳೂರು ಸೇರಿ ಕರ್ನಾಟಕದ ಪ್ರಮುಖ ನಗರ ಪ್ರದೇಶಗಳಲ್ಲಿ ರಾಸಾಯನಿಕ ಹೊಗೆಯಿಂದ ಮಾಲಿನ್ಯ ಹೆಚ್ಚಳವಾಗಿರುವುದು ದೃಢಪಟ್ಟಿದೆ.
ಹೀಗಾಗಿ ನಿಕ್ಕಲ್, ಕಾಪರ್, ಲೆಡ್ ನಂತಹ ಹೆಚ್ಚಿನ ರಾಸಾಯನಿಕ ಮಿಶ್ರಿತ ಪಟಾಕಿ ಸಿಡಿಸಿದರೆ, ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ ಎಂದು ಕೆಎಸ್ ಪಿಸಿಬಿಯ ಪರಿಸರ ಅಧಿಕಾರಿಗಳು ಹೇಳುತ್ತಾರೆ. ಪಟಾಕಿಯಿಂದ ಪರಿಸರಕ್ಕೆ ಹೇಗೆ ಹಾನಿ? ಪಟಾಕಿಯು ಉರಿಯಲು, ಸ್ಫೋಟಗೊಳ್ಳಲು, ಹೆಚ್ಚು ಪ್ರಕಾಶಮಾನವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಬಳಸಲೇಬೇಕು. ಸಾಮಾನ್ಯವಾಗಿ ಇಂತಹ ರಾಸಾಯನಿಕಗಳು ಚೀನಾದಿಂದ ಭಾರತಕ್ಕೆ ಬರುತ್ತದೆ. ಸರ್ಕಾರವು ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿವೆ.
ಪಟಾಕಿ ಸಿಡಿಸಿದಾಗ ಅದರಿಂದ ಉತ್ಪತ್ತಿಯಾಗುವ ರಾಸಾಯನಿಕ ಹೊಗೆ ಗಾಳಿಗೆ ಸೇರಿಕೊಳ್ಳುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಸೂಕ್ತ ಮುಂದಾಲೋಚನೆ ಇಲ್ಲದೇ ನಿರ್ಮಿಸಿರುವ ಗಗನಚುಂಬಿ ಕಟ್ಟಡಗಳಿಂದ ಪಟಾಕಿ ಹೊಗೆಗಳಿಗೆ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಗಾಳಿಯೊಂದಿಗೆ ಮಿಶ್ರಣಗೊಂಡ ಪಟಾಕಿಯ ಹೊಗೆ ಬಿಸಿಲು ಇದ್ದಾಗ ಎತ್ತರಕ್ಕೆ ಹೋಗಿ, ರಾತ್ರಿ ಆಗುತ್ತಿದ್ದಂತೆ ತಣ್ಣನೆಯ ವಾತಾವರಣಕ್ಕೆ ಕೆಳಕ್ಕೆ ಬರುತ್ತದೆ. ಹೊಗೆ ಮತ್ತು ಮಂಜುಗಳ ಜತೆಗೆ ಪಟಾಕಿ ಹೊಗೆ ಮಿಶ್ರಣಗೊಳ್ಳುತ್ತದೆ. ಇದರಿಂದ ಪರಿಸರಕ್ಕೆ ಭಾರಿ ಹಾನಿ ಉಂಟಾಗುತ್ತದೆ.
ಇನ್ನು ಪಟಾಕಿ ಹೊಗೆಯು ಆಗಸದತ್ತ ಹೋಗುವುದನ್ನು ಪತ್ತೆಹಚ್ಚುವ ಫ್ರೆಶ್‌ಹೋಲ್ಡ್, ಹೊಗೆ ಏರಿಕೆಯಾಗುವುದನ್ನು ಸೂಚಿಸುವ ಅಲರ್ಟ್ ಲಿಮಿಟ್ ಹಾಗೂ ಅಲಾರ್ಮಿಂಗ್ ಲೆವೆಲ್‌ಗಳನ್ನು ಸೂಕ್ತವಾಗಿ ತಿಳಿಸುವ ವ್ಯವಸ್ಥೆಗಳು ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ಯಾವ ಪ್ರದೇಶಗಳಲ್ಲಿ ಎಷ್ಟು ಹೊಗೆ ಪರಿಸರಕ್ಕೆ ಸೇರಿಕೊಂಡಿವೆ ಎಂಬುದು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ ಎಂದು ಹಿರಿಯ ಪರಿಸರ ತಜ್ಞರೊಬ್ಬರು ತಿಳಿಸಿದರು.
ಪಟಾಕಿ ಹೊಗೆಯಿಂದ ಅನಾರೋಗ್ಯ: ಅನಾರೋಗ್ಯ ಪೀಡಿತರು, ವೃದ್ಧರು, ಮಕ್ಕಳು, ಕಟ್ಟಡ ನಿರ್ಮಾಣ, ರಸ್ತೆ ಬದಿ ಕೆಲಸಗಾರರ ದೇಹದೊಳಗೆ ಪಟಾಕಿ ಹೊಗೆ ಸೇರಿಕೊಂಡು ಆರಂಭದಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ನಂತರ ರಕ್ತಗಳಲ್ಲಿ ಸೇರಿ ವಿವಿಧ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮನೆಯಿಂದ ಹೊರಗಡೆ ಓಡಾಡುವವರು, ವಾಹನ ಸವಾರರ ಮೇಲೂ ಈ ರಾಸಾಯನಿಕ ಗಾಳಿಯು ಗಂಭೀರ ಪರಿಣಾಮ ಬೀರುತ್ತದೆ. ಉಸಿರಾಟ ಸಮಸ್ಯೆ ಇರುವವರಿಗೆ ಪಟಾಕಿ ಹೊಗೆ ಸೇವನೆಯಿಂದ ಆರೋಗ್ಯ ಇನ್ನಷ್ಟು ಹದಗೆಡಲಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಜತೆಗೆ ಅತೀಯಾದ ಪಟಾಕಿ ಶಬ್ದಗಳಿಂದ ನಾಯಿ, ಜೇನುನೊಣ, ಪಕ್ಷಿ, ಜಾನುವಾರುಗಳ ಮೇಲೂ ಪರಿಣಾಮ ಬೀರಿ ದೀಪಾವಳಿ ಸಂದರ್ಭದಲ್ಲಿ ಅವುಗಳು ಬೇರೆಡೆ ಸ್ಥಳಾಂತರಗೊಳ್ಳುತ್ತವೆ. ಮುಖ್ಯವಾಗಿ ಮರ-ಗಿಡಗಳಿಗೂ ಪಟಾಕಿ ಹೊಗೆಗಳಿಂದ ಬಹಳಷ್ಟು ಅಪಾಯವಿದೆ. ಅವುಗಳು ಆಮ್ಲಜನಕ ಹೊರ ಸೂಸುವುದನ್ನು ಕಡಿಮೆ ಮಾಡುತ್ತವೆ. ಇದರಿಂದ ಮನುಷ್ಯರಿಗೆ ಶುದ್ಧ ಗಾಳಿ ಕೊರತೆ ಉಂಟಾಗುತ್ತದೆ. ದೆಹಲಿಯಲ್ಲಿ ಪರಿಸರ ಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಲಾಗಿದೆ ಎಂದು ಪರಿಸರ ತಜ್ಞ ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.
ಪರಿಸರಕ್ಕೆ ಹಾನಿಯಾಗದಂತೆ ಕಾಳಜಿ ವಹಿಸಿಕೊಂಡು ಸಾರ್ವಜನಿಕರು ಪಟಾಕಿ ಸಿಡಿಸಬೇಕು. ಪ್ರತಿ ಬಾರಿ ದೀಪಾವಳಿ ವೇಳೆ ಪಟಾಕಿ ಹೊಗೆಯಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಭಾರೀ ಏರಿಕೆಯಾಗುತ್ತದೆ. ಈ ಬಾರಿ ರಾಜ್ಯದೆಲ್ಲೆಡೆ ಕೆಎಸ್‌ಪಿಸಿಬಿ ತಂಡವು ಪಟಾಕಿ ಮಾಲಿನ್ಯದ ಬಗ್ಗೆ ನಿಗಾ ಇಟ್ಟಿದೆ. ● ಎಂ.ಜಿ.ಯತೀಶ್, ಹಿರಿಯ ಪರಿಸರ ಅಧಿಕಾರಿ, ಕೆಎಸ್‌ಪಿಸಿಬಿ.
ಪಟಾಕಿ ಹೊಗೆಯಿಂದ ಪರಿಸರಕ್ಕೆ ಬಹಳಷ್ಟು ಹಾನಿಯಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಪರಿಹಾರ ಕಂಡುಕೊಳ್ಳದಿದ್ದರೆ ವೈವಿಧ್ಯಮಯ ಪರಿಸರ ಕಳೆದುಕೊಳ್ಳಬೇಕಾದೀತು ಜೋಕೆ. ಪರಿಸರ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ● ಡಾ.ಎ.ಎನ್.ಯಲ್ಲಪ್ಪರೆಡ್ಡಿ, ಪರಿಸರ ತಜ್ಞ.
– ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.