ರೌಡಿಶೀಟರ್ ಮೇಲೆ ಗುಂಡಿನ ದಾಳಿ
Team Udayavani, Feb 6, 2019, 6:41 AM IST
ಬೆಂಗಳೂರು: ಕೊಲೆ ಯತ್ನ ಪ್ರಕರಣದದಲ್ಲಿ ಬಂಧಿಸಲು ತೆರಳಿದ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರಾಜಗೋಪಾಲ ನಗರ ನಿವಾಸಿ ಭರತ್ ಅಲಿಯಾಸ್ ಸ್ಲಂ ಭರತ್(30) ಬಂಧಿತ. ಆರೋಪಿ ಹಲ್ಲೆಯಿಂದ ಗಾಯಗೊಂಡ ಸಿಸಿಬಿಯ ಹೆಡ್ ಕಾನ್ಸ್‌ಟೇಬಲ್ ಹನುಮೇಶ್‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೌಡಿಶೀಟರ್ ಭರತ್ ವಿರುದ್ಧ 4 ಕೊಲೆ ಮತ್ತು 7 ಕೊಲೆ ಯತ್ನ, 5 ಅಪಹರಣ ಸೇರಿ ನಗರದ ವಿವಿಧ ಠಾಣೆಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಎಸಿಪಿ ಬಾಲರಾಜ್ ಈತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿ ಜೈಲಿಗಟ್ಟಿದ್ದರು. ಇದೀಗ ಮತ್ತೆ ಸಿಸಿಬಿ ತಂಡ ಕಾರ್ಯಾಚರಣೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎರಡು ತಿಂಗಳ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿ ಒಂದೂವರೆ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದು ಮತ್ತೆ ಹಳೇ ಕೃತ್ಯವನ್ನು ಮುಂದುವರಿಸಿದ್ದ. ಇತ್ತೀಚೆಗೆ ತನ್ನ ಮೇಲಿರುವ ಕೊಲೆ ಪ್ರಕರಣವೊಂದರ ಸಾಕ್ಷಿಧಾರನ ಮೇಲೆ ಭರತ್ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈತನ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು.
ಎಡಗಾಲಿಗೆ ಗುಂಡು: ಮಂಗಳವಾರ ಭರತ್ ಕೆಂಗೇರಿಯ ಕೊಮ್ಮಘಟ್ಟ ಬಳಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿಯ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಮತ್ತು ಹೆಡ್‌ಕಾನ್ಸ್‌ಟೇಬಲ್ ಹನುಮೇಶ್ ಆರೋಪಿಯನ್ನು ಬಂಧಿಸಲು ಸ್ಥಳಕ್ಕೆ ತೆರಳಿದ್ದರು. ಪೊಲೀಸರನ್ನು ಕಂಡ ಆರೋಪಿ ಕೊಮ್ಮಘಟ್ಟ ಮುಖ್ಯರಸ್ತೆಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಿಕ್ಕಿ ಬಿದ್ದಿದ್ದ. ಬಂಧನಕ್ಕೆ ಮುಂದಾದ ಕಾನ್ಸ್‌ಟೇಬಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ.ತೀವ್ರವಾಗಿ ಗಾಯಗೊಂಡ ಹನುಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
ಈ ವೇಳೆ ಶರಣಾಗುವಂತೆ ಸಬ್‌ಇನ್ಸ್‌ಪೆಕ್ಟರ್ ಪ್ರವೀಣ್ ಹಲವು ಬಾರಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಪ್ರವೀಣ್ ತಮ್ಮ ಸರ್ವಿಸ್ ರಿವಾಲ್ವಾರ್‌ನಿಂದ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಯನ್ನು ಕೆಂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಕೆ ಕಂಡ ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದರು.
ಎಚ್ಚರಿಕೆ ನೀಡಿದರೂ ಕೃತ್ಯ: ಕೆಲ ತಿಂಗಳ ಹಿಂದೆ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಗರದ ಎಲ್ಲಾ ರೌಡಿಗಳ ಪರೇಡ್ ನಡೆಸಿದ್ದರು. ರೌಡಿ ಪರೇಡ್‌ನಲ್ಲಿ ಭಾಗಿಯಾಗಿದ್ದ ಸ್ಲಂ ಭರತ್‌ಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು. ಆದರೂ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಅಲ್ಲದೆ, ಎರಡು ತಿಂಗಳ ಹಿಂದೆ ದರೋಡೆಗೆ ಹೊಂಚು ಹಾಕಿದ್ದ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಸಿಸಿಬಿ ಪೊಲೀಸರು ಹೇಳಿದರು.
ಫೈರಿಂಗ್ ಮಾಡಿದ ಉದ್ಯಮಿ
ಬೆಂಗಳೂರು: ಬನಶಂಕರಿ ಉದ್ಯಮಿ ಪ್ರಹ್ಲಾದ್ ಎಂಬಾತ ಸಿದ್ದ ಎಂಬುವರ ಮೇಲೆ ಪರವಾನಗಿ ಪಿಸ್ತೂಲ್‌ನಿಂದ ಗುಂಡು ಹಾರಿಸಿರುವ ಘಟನೆ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದನ ತಲೆಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬನಶಂಕರಿಯಲ್ಲಿ ಸ್ಟೀಲ್ ಕಂಪನಿ ನಡೆಸುತ್ತಿರುವ ಉದ್ಯಮಿ ಪ್ರಹ್ಲಾದ್, ಇತ್ತೀಚೆಗೆ ತಮ್ಮ ಮನೆ ಬಳಿ ಸಿದ್ದ ಮೂಲಕ ಬೋರ್‌ವೆಲ್ ಕೊರೆಸಿದ್ದರು.
ಇಬ್ಬರೂ ಸ್ನೇಹಿತರಾಗಿದ್ದರು. ಬೋರ್‌ವೆಲ್ ಕೊರೆಸಿದ ಮೊತ್ತ 75 ಸಾವಿರ ರೂ. ನೀಡುವ ವಿಚಾರದಲ್ಲಿ ಇಬ್ಬರ ನಡುವೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋದಾಗ ಪ್ರಹ್ಲಾದ್ ತಮ್ಮ ಪರವಾನಗಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸಿದ್ದು ತಲೆಯ ಬಲಭಾಗಕ್ಕೆ ತಾಕಿದ್ದು, ತಕ್ಷಣ ಗಾಯಾಳುವನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರಹ್ಲಾದ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.