![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 26, 2017, 12:35 PM IST
ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸಾರ್ವಜನಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನದೊಡ್ಡಿಯ ಮಹದೇವ, ವೆಂಕಟೇಶ, ಪ್ರತಾಪ, ಕೃಷ್ಣ ಹಾಗೂ ಅರಸೀಕೆರೆಯ ಶಿವಕುಮಾರ ಬಂಧಿತರು.
ಆರೋಪಿಗಳ ಬಂಧನದಿಂದ ಚಂದ್ರಲೇಔಟ್, ಬ್ಯಾಟರಾಯನಪುರ, ಕೆಂಗೇರಿ ಹಾಗೂ ಬನ್ನೇರುಘಟ್ಟ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾಗಿದ್ದ 40 ಲಕ್ಷ ಮೌಲ್ಯದ ಚಿನ್ನಾಭರಣಗಳು, ವಿವಿಧ ಕಂಪನಿಗಳ ಸುಮಾರು 80 ಸಾವಿರ ರೂ. ಮೌಲ್ಯದ 13 ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ್ದ ಹುಂಡೈ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ಆರೋಪಿಗಳು ಐಷಾರಾಮಿ ಜೀವನ ನಡೆಸಲು ಸುಲಿಗೆಗೆ ಇಳಿದಿದ್ದರು. ರಾತ್ರಿ ವೇಳೆ ಒಂಟಿಯಾಗಿ ಒಡಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಆರೋಪಿಗಳು ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಿಂತಿದ್ದ ಗಿರೀಶ್ ಎಂಬುವವರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ, ನಂತರ ಬಿಡದಿಗೆ ಡ್ರಾಪ್ ಕೊಡುವ ನೆಪದಲ್ಲಿ ಕರೆದೊಯ್ದು ಮಾರ್ಗ ಮಧ್ಯೆ ಮಾರಕಾಸ್ತ್ರಗಳನ್ನು ತೋರಿಸಿ 9,500 ರೂ. ಮೌಲ್ಯದ ಮೊಬೈಲ್ ಹಾಗೂ 10 ಸಾವಿರ ರೂ. ನಗದು ಕಸಿದುಕೊಂಡು ಕೆಂಗೇರಿ ಬಳಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸುಲಭವಾಗಿ ಹಣ ಗಳಿಸಬಹುದು ಎಂದಿದ್ದ: ಪ್ರಕರಣದ ಪ್ರಮುಖ ಆರೋಪಿ ಮಹದೇವ ಹಾಗೂ ಈತನ ಸಹಚರರು ಆಗಾಗ ಒಂದೆಡೆ ಸೇರುತ್ತಿದ್ದರು. ಈ ವೇಳೆ ತಮ್ಮ ಕಷ್ಟಗಳನ್ನು ಮಹದೇವನ ಬಳಿ ಇತರರು ಹೇಳಿಕೊಳ್ಳುತ್ತಿದ್ದರು. ಸ್ನೇಹಿತರ ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಮಹದೇವ, ನಾನು ಹೇಳಿದಂತೆ ಕೇಳಿದರೆ ಸುಲಭವಾಗಿ ಹಣ ಗಳಿಸಬಹುದು.
ಇದಕ್ಕಾಗಿ ನನಗೆ ನೀವು ಸಾಥ್ ನೀಡಿದರೆ ಸಾಕು ಎಂದು ಆಮಿಷವೊಡ್ಡಿದ್ದ. ಹಣದಾಸೆಗೆ ಸಹಚರರು ತಲೆಯಾಡಿಸಿದ್ದರು. ಅದರಂತೆ ಸಂಚು ರೂಪಿಸಿ ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಬನ್ನೇರುಘಟ್ಟ ಠಾಣೆಯಲ್ಲಿ ಮಹದೇವನ ವಿರುದ್ಧ ಪೋಕೊÕà ಕಾಯ್ದೆ ಸೇರಿದಂತೆ ಹಲವು ಸುಲಿಗೆ ಪ್ರಕರಣಗಳು ದಾಖಲಾಗಿವೆ.
You seem to have an Ad Blocker on.
To continue reading, please turn it off or whitelist Udayavani.