ಕೇಬಲ್ ಮಾಸಿಕ 130 ಶುಲ್ಕ ನಿಗದಿ? ಪರಮೇಶ್ವರ್ ಭರವಸೆ
Team Udayavani, Mar 21, 2017, 3:45 AM IST
ವಿಧಾನಪರಿಷತ್ತು: ಖಾಸಗಿ ಕೇಬಲ್ ಟಿವಿ ಸೇವೆ ಒದಗಿಸುವವರು ಗ್ರಾಹಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುವುದನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ರೂಪಿಸಲು ಚಿಂತನೆ ನಡೆದಿದ್ದು ಗ್ರಾಹಕರಿಂದ ಮಾಸಿಕ 130 ರೂ.ಗಿಂತ ಹೆಚ್ಚು ಬಾಡಿಗೆ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಪುಟ್ಟಣ್ಣ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಕೇಬಲ್ ಟಿವಿ ಸೇವೆ ಒದಗಿಸುವವರು ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡಲು ಸೂಕ್ತ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.
1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ ಹಾಗೂ ನಿಯಮಾವಳಿ ಜಾರಿಯ ಮೇಲ್ವಿಚಾರಣೆಗೆ ರಾಜ್ಯಮಟ್ಟದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ಹಾಗೂ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯನ್ನು 2012ರ ಜ.30ರ ಸರ್ಕಾರಿ ಆದೇಶದಂತೆ ರಚಿಸಲಾಗಿದೆ.
ಕಾಯ್ದೆಯನ್ವಯ 2017ರ ಮಾರ್ಚ್ 3ರಂದು ಕೇಂದ್ರ ಸರ್ಕಾರ ದರ ಪರಿಷ್ಕರಿಸಿದ್ದು, 100 ಚಾನೆಲ್‌ಗಳಿಗೆ ಮಾಸಿಕ 130 ರೂ. ಬಾಡಿಗೆ ಮತ್ತು ತೆರಿಗೆ ವಿಧಿಸಿದ್ದು, ಹೆಚ್ಚುವರಿ 25 ಎಸ್.ಡಿ. ಚಾನೆಲ್‌ಗೆ 20 ರೂ. ಬಾಡಿಗೆ ಹಾಗೂ ತೆರಿಗೆ ನಿಗದಿಪಡಿಸಿದೆ. ಇದರ ಅನ್ವಯವೇ ದರ ಸಂಗ್ರಹಿಸುವಂತೆ ಮೇಲ್ವಿಚಾರಣೆ ನಡೆಸಲು ರಾಜ್ಯ ಮತ್ತು ಜಿಲ್ಲಾಮಟ್ಟದ ಸಮಿತಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಕೇಬಲ್ ವ್ಯವಹಾರದಲ್ಲಿ ವಾರ್ಷಿಕ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ. ವಿದ್ಯುತ್ ಕಂಬ, ಟೆಲಿಕಾಂ ಕಂಬಗಳ ಮೇಲೆಯೂ ಕೇಬಲ್ ಅಳವಡಿಸಿದ್ದು, ರಸ್ತೆಗಳಲ್ಲೂ ಒಎಫ್ಸಿ ಅಳವಡಿಸಿ ಸೇವೆ ನೀಡುತ್ತಿದ್ದರೂ ಸರ್ಕಾರಕ್ಕೆ ಯಾವುದೇ ತೆರಿಗೆ ಬರುತ್ತಿಲ್ಲ. ಹಾಗಾಗಿ ಇದಕ್ಕೆ ಕಾಯಕಲ್ಪ ನೀಡಬೇಕಾದ ಅಗತ್ಯವಿದೆ. ಜತೆಗೆ ಸಮಾಜಘಾತುಕ ಶಕ್ತಿಗಳು ಈ ವ್ಯವಹಾರದಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದು, ಗ್ರಾಹಕರನ್ನು ಶೋಷಿಸಲಾಗುತ್ತಿದೆ ಎಂಬ ಮಾತು ಕೇಳಿಬಂದಿವೆ. ಹಾಗಾಗಿ ಈ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಕೇಂದ್ರ ಸರ್ಕಾರದ ಕಾಯ್ದೆ ಇತಿಮಿತಿಯೊಳಗೆ ಸೂಕ್ತ ಕಾನೂನು ರೂಪಿಸಲಾಗುವುದು ಎಂದರು.
ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಹುತೇಕ ಸದಸ್ಯರು, ಕೇಬಲ್ ವ್ಯವಹಾರದಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದು, ಮಾಫಿಯಾ ಹಾವಳಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ವಿಷಯ ಪ್ರಸ್ತಾಪಿಸಿದ ಪುಟ್ಟಣ್ಣ, ಕೇಬಲ್ ಸೇವೆ ಒದಗಿಸುವ ಖಾಸಗಿ ಏಜೆನ್ಸಿಗಳು ಗ್ರಾಹಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿವೆ. ಕೇಬಲ್ ಬಾಡಿಗೆ 150 ರೂ.ನಿಂದ 600 ರೂ.ವರೆಗೆ ಸಂಗ್ರಹಿಸಿದರೆ, ಸೆಟ್‌ಅಪ್ ಬಾಕ್ಸ್ ವಿತರಣೆಯೂ ಮಾಫಿಯಾ ನಿಯಂತ್ರಣದಲ್ಲಿದೆ. ಇದರಲ್ಲಿ ದೊಡ್ಡ ಮಾಫಿಯಾವಿದೆ. ವ್ಯವಹಾರದಲ್ಲಿ ಮೇಲುಗೈ ಸಾಧಿಸಲು ಕೊಲೆಗಳು ಸಂಭವಿಸುತ್ತಿದ್ದು ನಿಯಂತ್ರಿಸಬೇಕಿದೆ. ಹಾಗೆಯೇ ಸರ್ಕಾರವೇ ಕೇಬಲ್ ಭಾಗ್ಯ ಕರುಣಿಸಿದರೆ ಉತ್ತಮ ಎಂದು ಸಲಹೆ ನೀಡಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ, ರಾಜ್ಯದ ಕೇಬಲ್ ದಂಧೆಯು ಬಹುತೇಕ ಗ್ಯಾಂಗ್‌ಸ್ಟರ್, ರೌಡಿಗಳ ನಿಯಂತ್ರಣದಲ್ಲಿದೆ. ಒಂದೇ ಮನೆಯಲ್ಲಿ ಎರಡು ಟಿ.ವಿ ಇದ್ದರೂ ಸಮಾನ ಬಾಡಿಗೆ ವಿಧಿಸಲಾಗುತ್ತಿದೆ. ಇಷ್ಟಾದರೂ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳು ಮೇಲ್ವಿಚಾರಣೆ ನಡೆಸುತ್ತಿಲ್ಲ. ಕೇಬಲ್ ವ್ಯವಹಾರದಲ್ಲಿ ಹಣ ಲೂಟಿಯಾಗುತ್ತಿದ್ದು, ಸರ್ಕಾರವೇ ಸೇವೆ ಒದಗಿಸಲು ಮುಂದಾಗುವುದು ಸೂಕ್ತ ಎಂದು ಹೇಳಿದರು.
ಬಿಜೆಪಿಯ ರಾಮಚಂದ್ರಗೌಡ, ಕೇಬಲ್ ದಂಧೆ ಅವ್ಯವಸ್ಥೆಯ ಆಗರವೆನಿಸಿದೆ. ಗ್ರಾಹಕರು ಬಯಸುವ ಚಾನೆಲ್ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರವೇ ಕೇಬಲ್ ಸೇವೆ ಒದಗಿಸುವತ್ತ ಗಮನ ಹರಿಸಬಹುದು. ಅವ್ಯವಸ್ಥೆ ಸರಿಪಡಿಸಲು ಟಿವಿ ಮೇಲೆ ತೆರಿಗೆ ಹಾಕುವ ಬಗ್ಗೆಯೂ ಚಿಂತಿಸಬಹುದು ಎಂದರು. ಜೆಡಿಎಸ್‌ನ ಟಿ.ಎ.ಶರವಣ ಕೂಡ ಸರ್ಕಾರವೇ ಕೇಬಲ್ ಭಾಗ್ಯ ಘೋಷಿಸಲಿ ಎಂದರು.
ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ, ರಾಜ್ಯದಲ್ಲಿ 1.25 ಕೋಟಿ ಮನೆಗಳಿವೆ ಎಂಬ ಅಂದಾಜಿದ್ದು, ಈ ಪೈಕಿ ಕನಿಷ್ಠ 1 ಕೋಟಿ ಟಿವಿಗಳಿದೆ ಎಂದು ಭಾವಿಸಿದರೆ ಮಾಸಿಕ 300 ರೂ. ಬಾಡಿಗೆ ಎಂದು ಲೆಕ್ಕಾ ಹಾಕಿದರೆ ವ್ಯವಹಾರ ಮೊತ್ತ ವರ್ಷಕ್ಕೆ 3,600 ಕೋಟಿ ರೂ. ಮೀರುತ್ತದೆ. ಹಾಗೆಯೇ ಸೆಟ್‌ಅಪ್ ಬಾಕ್ಸ್‌ಗೆ 1,800ರಿಂದ 3,000 ರೂ. ಸಂಗ್ರಹಿಸುತ್ತಿದ್ದು, ಒಟ್ಟಾರೆ ವಹಿವಾಟು 5,000 ಕೋಟಿ ರೂ. ದಾಟುತ್ತದೆ. ಆಂಧ್ರ ಪ್ರದೇಶದಲ್ಲಿ ಸರ್ಕಾರವೇ ಕೇಬಲ್ ಸೇವೆ ಒದಗಿಸಿದೆ ಎಂಬ ಮಾಹಿತಿ ಇದೆ. ಕೇಬಲ್ ದುರಸ್ತಿ ನೆಪದಲ್ಲಿ ಬರುವವರು ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಕಿಚಾಯಿಸುವುದು, ಹೇಳದೆ, ಕೇಳದೆ ತಾರಸಿಗೆ ಏರುವುದರಿಂದ ಕಳವು, ದರೋಡೆ ಪ್ರಕರಣಗಳು ಸಂಭವಿಸುತ್ತಿವೆ. ಹಾಗಾಗಿ ದಿಟ್ಟ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, 2012ರಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದ ಸಮಿತಿ ರಚನೆಯಾದರೂ ಒಂದೂ ಸಭೆ ನಡೆದಂತಿಲ್ಲ. ಇದನ್ನು ಮಾಫಿಯಾ ನಿಯಂತ್ರಿಸುತ್ತಿದೆ. ಸರ್ಕಾರದ ವಿದ್ಯುತ್, ಟೆಲಿಕಾಂ ಕಂಬಗಳ ಮೇಲೆ ಕೇಬಲ್ ಅಳವಡಿಸುತ್ತಿದ್ದರೂ ಸರ್ಕಾರಕ್ಕೆ ಯಾವುದೇ ಶುಲ್ಕ ಪಾವತಿಸುತ್ತಿಲ್ಲ. ಹಾಗಾಗಿ ದಂಡ ಸಹಿತ ಶುಲ್ಕ ಸಂಗ್ರಹಿಸಬೇಕು. ಮೇಲ್ವಿಚಾರಣೆಯನ್ನೇ ನಡೆಸದ ಸಮಿತಿ ಅಗತ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಐವಾನ್ ಡಿಸೋಜಾ, ಮಂಗಳೂರಿನಲ್ಲಿ ಕೇಬಲ್ ಮಾಸಿಕ ಬಾಡಿಗೆ 600 ರೂ. ಸಂಗ್ರಹಿಸಲಾಗುತ್ತದೆ. ಸೆಟ್‌ಅಪ್ ಬಾಕ್ಸ್‌ಅನ್ನು ಅವರಿಂದಲೇ ಖರೀದಿಸಬೇಕೆಂದು ತಾಕೀತು ಮಾಡುತ್ತಾರೆ. ಹಾಗಾಗಿ ಸರ್ಕಾರವೇ ಈ ಸೇವೆ ಒದಗಿಸುವುದು ಒಳಿತು ಎಂದರು. ಜೆಡಿಎಸ್‌ನ ರಮೇಶ್‌ಬಾಬು, ಜಿಲ್ಲಾಧಿಕಾರಿಗಳಿಗೆ ಕಾರ್ಯ ಒತ್ತಡ ಹೆಚ್ಚಾಗಿದ್ದು, ಎಲ್ಲ ಸಮಿತಿ ಅಧ್ಯಕ್ಷತೆಯನ್ನು ಅವರಿಗೆ ಒದಗಿಸುವುದು ಸರಿಯಲ್ಲ. ಹಾಗೆಯೇ ತಾಲೂಕು ಸಮಿತಿ ರಚಿಸಿದರೆ ಮೇಲ್ವಿಚಾರಣೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ನ ಜಯಮಾಲಾ, ಕಳಪೆ ಗುಣಮಟ್ಟದ ಸೆಟ್‌ಟಾಪ್ ಬಾಕ್ಸ್ ನೀಡಿ ವಂಚಿಸಲಾಗುತ್ತದೆ. ಹಾಗೆಯೇ ಡಿಟಿಎಚ್ ಸೇವೆ ಹೆಸರಿನಲ್ಲಿ ಸಾಕಷ್ಟು ಅವ್ಯವಸ್ಥೆಯಿದ್ದು, ಬಹುರಾಷ್ಟ್ರೀಯ ಕಂಪನಿಗಳು ನಿಯಂತ್ರಿಸುತ್ತಿವೆ. ಈ ಬಗ್ಗೆಯೂ ಗಮನ ಹರಿಸಬೇಕು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.