ಬಂಡೀಪುರದಲ್ಲಿ ಇರುಳ ಸಂಚಾರ? ಕೇರಳ ಒತ್ತಾಯಕ್ಕೆ ಕೇಂದ್ರ ಧ್ವನಿ
Team Udayavani, Aug 3, 2018, 6:00 AM IST
ಬೆಂಗಳೂರು: ರಾಜ್ಯದ ನಿರಂತರ ವಿರೋಧ, ಆಕ್ಷೇಪದ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ (ಹೊಸ ಸಂಖ್ಯೆ 766) ರಾತ್ರಿ ವಾಹನ ಸಂಚಾರಕ್ಕೆ ಇರುವ ನಿಷೇಧವನ್ನು ತೆರವುಗೊಳಿಸುವ ಕೇರಳದ ಪ್ರಯತ್ನಕ್ಕೆ ಇದೀಗ ಕೇಂದ್ರ ಸರ್ಕಾರವೂ ಕೈಜೋಡಿಸಿದೆ.
ಹೆದ್ದಾರಿಯನ್ನು 10 ಮೀಟರ್‌ನಿಂದ 15 ಮೀಟರ್‌ಗೆ ವಿಸ್ತರಿಸುವುದು ಮತ್ತು ಈ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿದ ಬಳಿಕ ಪರ್ಯಾಯ ರಸ್ತೆ ಬಳಕೆಯಿಂದ ಇಂಧನ ಬಳಕೆ ಹೆಚ್ಚಾಗುತ್ತಿದೆ ಎಂಬ ನೆಪವೊಡ್ಡಿ ರಾತ್ರಿ ಸಂಚಾರ ನಿಷೇಧ ಹಿಂಪಡೆಯುವ ಕುರಿತು ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ವನ್ಯಜೀವಿಗಳಿಗೆ ರಾತ್ರಿ ಸಂಚಾರದಿಂದ ತೊಂದರೆಯಾಗದಂತೆ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ.
ಈ ಕುರಿತಂತೆ ಜುಲೈ 21ರಂದು ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವೈ.ಎಸ್.ಮಲಿಕ್ ಅವರು ಪತ್ರ ಬರೆದಿದ್ದಾರೆ. ಬಂಡೀಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಹಿಂಪಡೆಯುವ ಬಗ್ಗೆ ತಕ್ಷಣವೇ ಅಭಿಪ್ರಾಯ ತಿಳಿಸಬೇಕು ಎಂದು ಕೋರಿದ್ದಾರೆ.
ರಾತ್ರಿ ವಾಹನ ಸಂಚಾರ ನಿಷೇಧ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣದಲ್ಲಿ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ತಿಳಿಸಲು 15 ದಿನ ಕಾಲಾವಕಾಶ ಪಡೆದಿದ್ದು, ಮುಂದಿನ ವಿಚಾರಣೆ ಆ.8ಕ್ಕೆ ನಡೆಯಲಿದೆ. ಅಷ್ಟರೊಳಗೆ ಬಂಡೀಪುರದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸುವ ಯೋಜನೆ ಕುರಿತು ಅಂತಿಮ ನಿರ್ಣಯ ಕೈಗೊಂಡು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವ ಉದ್ದೇಶದಿಂದ ಈ ಪತ್ರ ಬರೆಯಲಾಗಿದೆ.
ಹೆದ್ದಾರಿ ವಿಸ್ತರಣೆ ಮತ್ತು ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕೈಗೊಳ್ಳಬೇಕಾದರೆ ನಿಷೇಧ ತೆರವುಗೊಳ್ಳಬೇಕಾಗುತ್ತದೆ. ಹೀಗಾಗಿ ವನ್ಯಜೀವಿಗಳು, ಅರಣ್ಯ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಕೈಗೊಳ್ಳುವ ಭರವಸೆಯನ್ನೂ ಕೇಂದ್ರ ಸರ್ಕಾರ ನೀಡಿದೆ. ಜತೆಗೆ ಕಾರಿಡಾರ್ ನಿರ್ಮಾಣದ ವೆಚ್ಚವನ್ನು (4,600 ಕೋಟಿ ರೂ.) ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರ ಭರಿಸುವುದಾಗಿ ಹೇಳಿ ಕರ್ನಾಟಕದ ಮೇಲೆ ಯಾವುದೇ ಹೊರೆಯಾಗುವುದಿಲ್ಲ ಎಂದೂ ಮನವೊಲಿಸುವ ಪ್ರಯತ್ನ ಮಾಡಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ವೇಳೆ ಈ ಕುರಿತು ಚರ್ಚಿಸಿತ್ತು. ಇದಾದ ನಾಲ್ಕು ದಿನಗಳ ನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವೈ.ಎಸ್.ಮಲಿಕ್ ಅವರು ರಾಷ್ಟ್ರೀಯ ಹೆದ್ದಾರಿ 212ರನ್ನು 10 ಮೀಟರ್‌ನಿಂದ 15 ಮೀಟರ್‌ಗೆ ವಿಸ್ತರಿಸಲು ಹೆದ್ದಾರಿ ಸಚಿವಾಲಯ ತೀರ್ಮಾನಿಸಿದೆ. ಅಲ್ಲದೆ, ಯೋಜನೆ ಮತ್ತು ರಾತ್ರಿ ಸಂಚಾರ ನಿಷೇಧ ತೆರವು ಕುರಿತು ಸರ್ಕಾರದ ಅಭಿಪ್ರಾಯವನ್ನು ತಕ್ಷಣವೇ ತಿಳಿಸಿ ಎಂದು ಸೂಚಿಸಿದೆ.
ಏನಿದು ವಿವಾದ?:
ಕರ್ನಾಟಕ-ಕೇರಳ-ತಮಿಳುನಾಡು ಮಧ್ಯೆ ಸಂಪರ್ಕ ಕಲ್ಪಿಸುವ ರಾ.ಹೆದ್ದಾರಿ 212 ಮತ್ತು ರಾ.ಹೆದ್ದಾರಿ 67 ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುತ್ತಿದ್ದು, 2004ರಿಂದ 2007ರ ಮಧ್ಯೆ ರಾತ್ರಿ ವೇಳೆ ವಾಹನಗಳಿಗೆ ಸಿಲುಕಿ ಪ್ರಾಣಿಗಳು ಮೃತಪಟ್ಟ ಕಾರಣ ಈ ಎರಡೂ ಮಾರ್ಗಗಳಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿತ್ತು.
ತಮಿಳುನಾಡು ನಿಷೇಧಕ್ಕೆ ಸಮ್ಮತಿಸಿತ್ತಾದರೂ ಕೇರಳ ಸರ್ಕಾರ ನಿಷೇಧ ತೆರವಿಗೆ ಪ್ರಯತ್ನ ಮಾಡುತ್ತಲೇ ಬಂದಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಕರ್ನಾಟಕ ಸರ್ಕಾರ ನಿಷೇಧ ತೆರವಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮಧ್ಯೆ ಜನವರಿಯಲ್ಲಿ ಸುಪ್ರೀಂ ಕೋರ್ಟ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿ, ಮೂರೂ ರಾಜ್ಯಗಳ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವನ್ನೊಳಗೊಂಡ ಸಮಿತಿ ರಚನೆ ಮಾಡಿತ್ತು. ಈ ಮಧ್ಯೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೂ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಬೇಡ ಎಂದು ಅಭಿಪ್ರಾಯಪಟ್ಟಿದೆ.
ಅರಣ್ಯ ಇಲಾಖೆ ವಿರೋಧ
ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮತ್ತು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿಷೇಧದಿಂದ ಸಂಚಾರಕ್ಕೆ ತೊಂದರೆಯಾಗದಂತೆ ಪರ್ಯಾಯ ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ಇದು ಕೇವಲ 30 ಕಿ.ಮೀ. ಹೆಚ್ಚುವರಿಯಾಗಿದೆ ಅಷ್ಟೆ. ಹೀಗಿರುವಾಗ ರಸ್ತೆ ವಿಸ್ತರಣೆ ನೆಪದಲ್ಲಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಿದರೆ ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಈಗಾಗಲೇ ಪರಿಸರ ತಜ್ಞರು ಹೇಳುತ್ತಿದ್ದಾರೆ.
ಶೀಘ್ರ ಉಭಯ ರಾಜ್ಯ ಸಿಎಂಗಳ ಸಭೆ
ರಾತ್ರಿ ಸಂಚಾರ ನಿಷೇಧ ತೆರವು ಕುರಿತಂತೆ ರಾಜ್ಯದ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಶೀಘ್ರವೇ ಸಭೆ ನಡೆಸುವ ಸಾಧ್ಯತೆ ಇದೆ. ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು ವಾರದಲ್ಲಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಬಾರಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಸಾಕಷ್ಟು ಸಭೆಗಳು ನಡೆದಿತ್ತಾದರೂ ಕರ್ನಾಟಕ ನಿಷೇಧ ತೆರವಿಗೆ ಒಪ್ಪಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.