ಜಾನಪದ ಉಳಿಸಿಕೊಳ್ಳುವುದೇ ಕನ್ನಡದ ಅಸ್ಮಿತೆ
Team Udayavani, Apr 30, 2018, 12:29 PM IST
ಬೆಂಗಳೂರು: “ಜಾನಪದ ಉಳಿಸಿಕೊಳ್ಳುವುದೇ ಕನ್ನಡದ ಅಸ್ಮಿತೆ ಆಗಿದೆ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ. ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ 3ನೇ ವರ್ಷದ ಯುವ ಕಾವ್ಯ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾನಪದದ ವಿವೇಕವನ್ನು ನಾವು 1800ರಲ್ಲಿ ಕಳೆದುಕೊಂಡೆವು. ಬ್ರಿಟಿಷರ ಜ್ಞಾನವೇ ಸರ್ವಸ್ವವನ್ನೂ ಕೊಡುತ್ತದೆ ಎಂಬ ಭ್ರಮೆ ನಮ್ಮ ಮನಸ್ಸನ್ನೂ ಹೊಕ್ಕಿತು. ಈಗ ವಿವೇಕ ಸಂಪೂರ್ಣ ನಾಶವಾಗುವ ಮುನ್ನ ಆ ಭ್ರಮೆಯಿಂದ ಹೊರಬಂದು ಜಾನಪದದಲ್ಲಿರುವ ಮೌಡ್ಯ ಮತ್ತು ಜಾತಿವಾದದ ಬೇರುಗಳನ್ನು ಬೇರ್ಪಡಿಸಬೇಕು. ನಂತರದಲ್ಲಿ ನಮ್ಮ ಪೂರ್ವಿಕರು ಕಟ್ಟಿಕೊಟ್ಟಿರುವ ಮಹಾಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾನಪದ ಪರಂಪರೆಗೆ ಮರಳುವ ಅವಶ್ಯಕತೆಯಿದೆ ಎಂದು ಹೇಳಿದರು.
ಅರಿಶಿನ, ಚಂದನ, ಆಲೋವೆರಾ ಮುಂತಾದ ವಸ್ತುಗಳು ಇಂದು ಬಹುರಾಷ್ಟ್ರೀಯ ಕಂಪೆನಿಗಳ ಪಾಲಿಗೆ ಮಾರಾಟದ ವಸ್ತುಗಳಾಗಿವೆ. ಆದರೆ, ನಮ್ಮ ಪರಂಪರೆಯಲ್ಲಿ ಎರಡು ಸಾವಿರ ವರ್ಷಗಳ ಹಿಂದೆಯೇ ಈ ವಸ್ತುಗಳನ್ನು ಬಳಸುತ್ತಿದ್ದೆವು. ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡದಿದ್ದರೂ ಇವುಗಳ ಬೆಲೆ ಮತ್ತು ಅಗತ್ಯತೆಯ ಬಗ್ಗೆ ನಮ್ಮ ಹಿರಿಯರಿಗೆ ತಿಳಿದಿತ್ತು. ಆದರೆ, ಇಂದು ಆ ಜ್ಞಾನ ಸಂಪತ್ತು ಬದಿಗೊತ್ತಿ, ಅನುಕರಣೆ ಹಿಂದೆ ಬಿದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯದ ಮೂಲ ಜಾನಪದ: ವಿಭೂತಿಪುರ ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಸಾಹಿತ್ಯಕ್ಕೂ ಮೂಲ ಜಾನಪದ. ಸ್ವಾತಂತ್ರ ಪೂರ್ವದಲ್ಲಿ ರಾಜರು ಕಲೆ, ಸಾಹಿತ್ಯ ಪೋಷಿಸುತ್ತಿದ್ದರು. ಇಂದು ಮಠ-ಮಾನ್ಯಗಳು ಸಾಹಿತ್ಯ, ಕಲೆಗೆ ಪ್ರೋತ್ಸಾಹ ನೀಡುತ್ತಿದೆ. ಇಂತಹ ಶ್ರೇಷ್ಠ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು.
ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ 2018ನೇ ಸಾಲಿನ ಕಾವ್ಯ ಸಂಭ್ರಮ ಪ್ರಶಸ್ತಿಗೆ ಭಾಜನರಾದರು. ಸಾಹಿತ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಸಾಧಕರಿಗೆ ಲೋಹಿಯಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರ ಸಾಹಿತಿ ದೊಡ್ಡಹುಲ್ಲೂರು ರುಕ್ಕೋಜಿರಾವ್, ಕೈಗಾರಿಕೆ ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಡಾ.ಸಿ.ಕೆ.ಮೂರ್ತಿ, ಡಾ.ಬಿ.ಇಂದಿರಾದೇವಿ, ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ ಹಾಗೂ ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.