ಕೆಲ ಬುದ್ಧಿ ಜೀವಿಗಳಿಗೆ ನನ್ನದು ಅಸ್ಪೃಶ್ಯ ಸಾಹಿತ್ಯ
Team Udayavani, Feb 18, 2019, 6:18 AM IST
ಬೆಂಗಳೂರು: “ನನ್ನ ಸಾಹಿತ್ಯವನ್ನು ಕೆಲವು ಬುದ್ಧಿ ಜೀವಿಗಳು ಅಸ್ಪೃಶ್ಯತೆ ರೀತಿಯಲ್ಲಿ ನೋಡುತ್ತಿರುವುದು ದುಃಖವನ್ನುಂಟು ಮಾಡಿದೆ,’ ಎಂದು ಕವಿ ದೊಡ್ಡರಂಗೇಗೌಡ ವಿಷಾದ ವ್ಯಕ್ತಪಡಿಸಿದರು.
ದೊಡ್ಡರಂಗೇಗೌಡರ 74ನೇ ಹುಟ್ಟುಹಬ್ಬದ ಅಂಗವಾಗಿ ಸದ್ಭಾವನಾ ಪ್ರತಿಷ್ಠಾನ, ಗೌಡರ “ಸಮನ್ವಯ ಕಾವ್ಯ’ ಮತ್ತು “ಸಾಹಿತ್ಯ ಸಿಂಚನ’ ಪುಸ್ತಕವನ್ನು ಹೊರ ತಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಈ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಕವಿ, “ನಾನು ಸಿನಿಮಾಗಳಿಗೆ ಹಾಡು ಬರೆಯುತ್ತೇನೆ ಅಂತಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಗೊತ್ತಿಲ್ಲ; ಸಾಹಿತ್ಯವಲಯದಲ್ಲಿರುವ ಕೆಲವು ಬುದ್ಧಿ ಜೀವಿಗಳು ನನ್ನ ಸಾಹಿತ್ಯವನ್ನು ಅಸ್ಪೃಶ್ಯ ಸಾಹಿತ್ಯದ ರೀತಿಯಲ್ಲಿ ನೋಡುತ್ತಿದ್ದಾರೆ. ಇದು ಮನಸ್ಸಿಗೆ ಅತೀವ ಬೇಸರವನ್ನುಂಟು ಮಾಡಿದೆ,’ ಎಂದರು.
ಕೇವಲ ಬುದ್ಧಿಜೀವಿಗಳು ಅಷ್ಟೇ ಅಲ್ಲ, ವ್ಯಾಪಾರಿ ಜಗತ್ತು ಸಹ ಅದೇ ರೀತಿಯಲ್ಲಿ ನೋಡುತ್ತಿದೆ. ಹೀಗಾಗಿ, ನಾನೊಂದು ರೀತಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದೇನೆ ಅನಿಸುತ್ತದೆ. ಆದರೂ ಸಾಹಿತ್ಯದಲ್ಲೇ ತೊಡಗಿಕೊಳ್ಳುವ ಮೂಲಕ ನಾನು ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಕಾಯಕದಲ್ಲೇ ಮಾನವೀಯತೆಯನ್ನು ಕಂಡುಕೊಂಡಿದ್ದೇನೆ ಎಂದು ಹೇಳಿದರು.
ಕಾವ್ಯ ಕೃಷಿ ಬಿಟ್ಟರೆ ನನಗೆ ಬೇರೆ ಜಗತ್ತು ಗೊತ್ತಿಲ್ಲ. ಕಾವ್ಯದಲ್ಲಿನ ಕಾಯಕ ನನಗೆ ಎಲ್ಲವನ್ನೂ ಕೊಟ್ಟಿದೆ. ಬರಹವೇ ನನ್ನ ಬದುಕು. ಅಂತರಂಗದ ಮಿಡಿತ. ಸಾಹಿತ್ಯದಿಂದಾಗುವ ಲಾಭ ಬಹಳಷ್ಟಿದ್ದು, ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಕನ್ನಡ ವಿಜ್ಞಾನಿಯೊಬ್ಬರು ನನ್ನ ಕವಿತೆಯನ್ನು ಓದಿ ತನ್ನೂರನ್ನು ನೆನಪಿಸಿಕೊಂಡಿದ್ದರು. ಅಲ್ಲದೆ ಮತ್ತೆ ತಾಯ್ನೆಲಕ್ಕೆ ಬಂದು ಉಳುಮೆ ಮಾಡುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ಇದರಿಂದಾದ ಆನಂದ ಅಷ್ಟಿಲ್ಲ ಎಂದು ಖುಷಿ ಪಟ್ಟರು.
ಹಿರಿಯ ಸುಗಮ ಸಂಗೀತ ಕಲಾವಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ದೊಡ್ಡರಂಗೇಗೌಡ ಅವರ ಕಾವ್ಯ ರಚನೆಯನ್ನು ವರ್ಣಿಸುವುದು ಅಸಾಧ್ಯ. ಅದನ್ನು ಹೇಳುವುದಕ್ಕಿಂತಲೂ ಓದಿ ಅನುಭವಿಸಬೇಕು.
ಕನ್ನಡ ಸಾಹಿತ್ಯ ಲೋಕದ ಜತೆಗೆ ಸಿನಿಮಾ ಗೀತೆ ರಚನೆಯಲ್ಲೂ ಹೆಸರು ಮಾಡಿರುವ ಅವರ ಕಾವ್ಯ ರಚನೆಯ ಕಾಯಕ ಹೀಗೇ ಮುಂದುವರಿಯಲಿ. ಮುಂದಿನ ವರ್ಷ ದೊಡ್ಡರಂಗೇಗೌಡ ಅವರು 75ನೇ ಸಂಭ್ರಮಕ್ಕೆ ಹೆಜ್ಜೆ ಇರಿಸಲಿದ್ದು, ಗೌಡರ ಎಪ್ಪತ್ತೈದರ ಸಂಭ್ರಮವನ್ನು ತಮ್ಮ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಘೋಷಿಸಿದರು.
ಕೃಷ್ಣದೇವರಾಯ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶೇಷ ಶಾಸ್ತ್ರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ರಚನೆ ಬಗ್ಗೆ ಗೊತ್ತಿರದವರು ಕೂಡ ವಿಮರ್ಶೆ ಮಾಡುತ್ತಿದ್ದಾರೆ. ಕಾವ್ಯವನ್ನು ವಿಮರ್ಶೆ ಮಾಡುವ ಮೊದಲು ವಿಮರ್ಶಕರು ಆ ಕಾವ್ಯದ ತಳ ಸ್ಪರ್ಶವನ್ನು ಅರಿಯಬೇಕು ಎಂದು ಸಲಹೆ ನೀಡಿದರು.
“ಸಾಹಿತ್ಯ ಸಿಂಚನ’ ಕೃತಿ ಸಾಹಿತ್ಯ ದಿಗ್ಗಜರ ಸಮಗ್ರ ಪರಿಚಯವನ್ನು ಕಟ್ಟಿಕೊಡುತ್ತದೆ. ಖ್ಯಾತನಾಮರ ಜತಗೆ ತಮಗಿಂತ ಚಿಕ್ಕ ವಯಸ್ಸಿನವರ ಸಾಹಿತ್ಯದ ಬಗ್ಗೆಯೂ ಈ ಪುಸ್ತಕದಲ್ಲಿ ದೊಡ್ಡರಂಗೇಗೌಡರು ಕಟ್ಟಿಕೊಟ್ಟಿದ್ದಾರೆ ಎಂದರು. ಇದೇ ವೇಳೆ “ಸಮನ್ವಯ ಕಾವ್ಯದ’ ಬಗ್ಗೆ ಕವಿ ಸುಬ್ಬು ಹೊಲೆಯಾರ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.