ಸಿಡಿಪಿ ಕರಡು ವಾಪಸ್‌ಗೆ ಒತ್ತಾಯ
Team Udayavani, Jan 17, 2018, 12:07 PM IST
ಬೆಂಗಳೂರು: ರಾಜಧಾನಿ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧಪಡಿಸಿರುವ ಕಾಂಪ್ರಹೆನ್ಸಿವ್ ಡೆವಲಪ್‌ಮೆಂಟ್ ಪ್ಲಾನ್ (ಸಿಡಿಪಿ-2031) ಕರಡು ಪ್ರತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ಕೂಡಲೇ ವಾಪಸ್ ಪಡೆದು ಪರಿಷ್ಕರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಸಭೆಯಲ್ಲಿ ಸಿಡಿಪಿ ಕರಡು ಕುರಿತು ಆಕ್ಷೇಪಿಸಿದ ಬಹುತೇಕರು, ಕರಡು ಪ್ರತಿಯಲ್ಲಿ ಸಾಕಷ್ಟು ದೋಷಗಳಿದ್ದು, ಕೂಡಲೇ ವಾಪಸ್ ಪಡೆದು ಹೊಸದಾಗಿ ಸಿಡಿಪಿ ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ಆದರೆ, ಇದಕ್ಕೆ ಒಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕರಡು ಯೋಜನೆಯಾಗಿದ್ದು, ಬಿಡಿಎ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈ ಆಕ್ಷೇಪಣೆಗಳನ್ನು ಆಧರಿಸಿ ಕೆಲವು ಬದಲಾವಣೆಗಳೊಂದಿಗೆ ಬಿಡಿಎ ಯೋಜನಾ ಸಮಿತಿ ಅಂತಿಮ ಮಹಾ ಯೋಜನೆ ಪ್ರಕಟಿಸಲಿದೆ ಎಂದು ಹೇಳಿದರು.
ಅವೈಜ್ಞಾನಿಕ ಮತ್ತು ಜನವಿರೋಧಿ: ಸಭೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, “ಸಿಡಿಪಿ ಕರಡು ಸಿದ್ಧಪಡಿಸುವಾಗ ಮಹಾನಗರ ಯೋಜನಾ ಸಮಿತಿ ಸಭೆ ಕರೆದು ಚರ್ಚಿಸಬೇಕು ಎಂಬ ನಿಯಮವಿದ್ದರೂ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕರಡು ಕುರಿತು ಇತ್ತೀಚೆಗೆ ಬಿಜೆಪಿ ಆಕ್ಷೇಪಿಸಿತ್ತು. ಹೀಗಾಗಿ ಸಮಿತಿ ಸಭೆ ಕರೆಯಲಾಗಿದೆ. ಆದರೆ, ಸಿಡಿಪಿ ಕರಡು ಅತ್ಯಂತ ವೈಜ್ಞಾನಿಕವಾಗಿದ್ದು, ಕೂಡಲೇ ವಾಪಸ್ ಪಡೆಯುವಂತೆ ಸಲಹೆ ಮಾಡಿದ್ದೇವೆ.
ಕೆಲವು ಜನವಸತಿ ಪ್ರದೇಶಗಳಲ್ಲಿರುವ ಕಟ್ಟಡಗಳು, ಕೆರೆಗಳನ್ನು ರಸ್ತೆಗಳೆಂದು ಗುರುತಿಸಲಾಗಿದೆ. ಕೃಷಿ ಭೂಮಿಯನ್ನು ಪಾರ್ಕ್ ಝೋನ್ ಎಂದು ತೋರಿಸಿದ್ದಾರೆ. ಕೈಗಾರಿಕಾ ಚಟುವಟಿಕೆಗಳಿಗಾಗಿ ಹೊರವಲಯದಲ್ಲಿ ನಿರ್ದಿಷ್ಟ ಜಾಗ ಗುರುತಿಸದ ಕಾರಣ, ನಗರದ ವಾಯುಮಾಲಿನ್ಯ, ಶಬ್ಧ ಮಾಲಿನ್ಯ, ಸಂಚಾರ ದಟ್ಟಣೆ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿವೆ,’ ಎಂದು ದೂರಿದರು.
“ಇನ್ನೂ ಕೆಲವೆಡೆ ಅರಣ್ಯ ಪ್ರದೇಶವನ್ನು ವಾಣಿಜ್ಯ ಪ್ರದೇಶವೆಂದು ಗುರುತಿಸಲಾಗಿದೆ. ಒಂದೆಡೆ 1907ರ ನಕಾಶೆ ಪಾಲಿಸಿದ್ದಾಗಿ ಹೇಳುವ ಬಿಡಿಎ, ಮತ್ತೂಂದೆಡೆ ಸ್ಯಾಟಲೈಟ್ ದೃಶ್ಯಗಳನ್ನು ಪರಿಗಣಿಸಿದ್ದಾಗಿ ಹೇಳುತ್ತಿದೆ. ಹಲವಾರು ಗೊಂದಲಗಳ ಗೂಡಾಗಿರುವ ಸಿಡಿಪಿಯನ್ನು ವಾಪಸ್ ಪಡೆದು, ಮತ್ತೂಮ್ಮೆ ಸಿದ್ಧಪಡಿಸಬೇಕು,’ ಎಂದು ಆಗ್ರಹಿಸಿದರು.
“ಜನವಸತಿ, ಜಲಮೂಲಗಳು, ಅರಣ್ಯ, ರಸ್ತೆಗಳು ಹೀಗೆ ಶೇಕಡಾವಾರು ಪ್ರಮಾಣವನ್ನು ಸರಿದೂಗಿಸುವ ಭರದಲ್ಲಿ ಎನ್‌ಜಿಟಿ ನೀಡಿದ ಆದೇಶವನ್ನೇ ಧಿಕ್ಕರಿಸಿ, ಕೆರೆ ಕೋಡಿಗಳನ್ನು ರಸ್ತೆಗಳೆಂದು ದಾಖಲಿಸಿದ ನಿದರ್ಶನಗಳಿವೆ. ಹೀಗಾಗಿ ಮಹಾಯೋಜನೆ ಜಾರಿಗೊಂಡರೆ ಭವಿಷ್ಯದಲ್ಲಿ ಭಾರಿ ತೊಂದರೆ ಆಗಲಿದೆ. ಇದನ್ನು ವಾಪಸ್ ಪಡೆಯದೆ ಬೇರೆ ಬಾರಿ ಇಲ್ಲ,’ ಎಂದು ಲಿಂಬಾವಳಿ ಅಭಿಪ್ರಾಯಪಟ್ಟರು.
ವಾಸ್ತವ ಅಂಶಗಳೊಂದಿಗೆ ಅಂತಿಮ: ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಸಿಡಿಪಿ ಕರಡು ಪ್ರತಿ ಬಗ್ಗೆ ಮಹಾನಗರ ಯೋಜನಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಮತ್ತು ಕರಡು ಪ್ರತಿಗೆ ಬರುವ ಆಕ್ಷೇಪಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಡಿಎ ವಾಸ್ತವಿಕ ಅಂಶಗಳೊಂದಿಗೆ ಸಿಡಿಪಿ ಅಂತಿಮಗೊಳಿಸಲಿದೆ,’ ಎಂದು ಹೇಳಿದರು.
2600ಕ್ಕೂ ಹೆಚ್ಚು ಆಕ್ಷೇಪಣೆ: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, “ಸಿಡಿಪಿ ಕರಡು ಪ್ರತಿಗೆ ಸಾರ್ವಜನಕರಿಂದ ಆಕ್ಷೇಪಣೆ ಆಹ್ವಾನಿಸಿದ್ದು, ಈಗಾಗಲೇ 2600ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿವೆ. ಆಕ್ಷೇಪಣೆ ಸಲ್ಲಿಸಲು ಜ.23ರವರೆಗೂ ಅವಕಾಶವಿದೆ. ಈ ಮಧ್ಯೆ ಬೆಂಗಳೂರು ಮಹಾನಗರ ಯೋಜನೆ ಸಮಿತಿಯ ಸದಸ್ಯರ ಸಲಹೆ ಪಡೆಯಲು ಸಭೆ ನಡೆಸಲಾಗಿದೆ.
ಇವೆಲ್ಲವನ್ನೂ ಪರಿಶೀಲಿಸಿದ ಬಳಿಕ ಸಿಡಿಪಿ ಅಂತಿಮಗೊಳಿಸಲಾಗುವುದು,’ ಎಂದರು. ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ವಿಸ್ತರಿಸುವಂತೆ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಸಲಹೆ ಬಂದಿದೆಯಾದರೂ ಸದ್ಯಕ್ಕೆ ಅದರ ಅವಶ್ಯಕತೆ ಕಂಡುಬರುತ್ತಿಲ್ಲ ಎಂದು ಹೇಳಿದರು. ಸಭೆಯಲ್ಲಿ ಬೆಂಗಳೂರು ನಗರದ ಕೆರೆಗಳಿಗೆ ಬಫರ್ ಜೋನ್ ಗುರುತು ಮಾಡಿರುವ ಸಂಬಂಧ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
“ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಬೆಂಗಳೂರು ನಗರದ ಕೆರೆಗಳಿಗೆ ಮಾತ್ರ 75 ಮೀಟರ್ ಬಫರ್ ಜೋನ್ ನಿಗದಿ ಮಾಡಿದೆ. ಈ ನಿಟ್ಟಿನಲ್ಲಿ ಕೆರೆಗಳ ವರ್ಗೀಕರಣ ಮಾಡಿ, ಅವುಗಳ ಬಫರ್ ಜೋನ್ ನಿರ್ಧರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ ಎನ್‌ಜಿಟಿ ಆದೇಶವನ್ನು ಸುಪ್ರಿಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮಹಾ ಯೋಜನೆ ರೂಪಿಸಲಾಗಿದೆ,’ ಎಂದು ಸಿಎಂ ಸಮರ್ಥಿಸಿಕೊಂಡರು.
ಅಲ್ಲದೆ, ಸಿಡಿಪಿ ಕುರಿತು ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆಯುವಂತೆ ಸಭೆಯಲ್ಲಿ ಕೆಲವರು ನೀಡಿದ್ದ ಸಲಹೆಯನ್ನು ಪರಿಶೀಲಿಸುವುದಾಗಿ ಸಿಎಂ ಹೇಳಿದರು. ಸಚಿವರಾದ ಆರ್.ರೋಶನ್ ಬೇಗ್, ಎಚ್.ಎಂ.ರೇವಣ್ಣ, ಮೇಯರ್ ಸಂಪತ್‌ರಾಜ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಬಿಡಿಎ ಆಯುಕ್ತ ರಾಕೇಶ್‌ಸಿಂಗ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಬಿಎಂಪಿ, ಬಿಡಿಎ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
Champions Trophy: ಬಾಂಗ್ಲಾದೇಶ ತಂಡ ಪ್ರಕಟ; ಇಬ್ಬರು ಹಿರಿಯ ಆಟಗಾರರಿಗೆ ಇಲ್ಲ ಸ್ಥಾನ
Kundapura: ಕೋಡಿ ಸಮುದ್ರ ತೀರದಲ್ಲಿ ಶೌಚಾಲಯ ಸಿದ್ಧವಾದರೂ ಪ್ರವಾಸಿಗರ ಬಳಕೆಗೆ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.