ರಾಜ್ಯದ ಮೆಕ್ಕೆಜೋಳಕ್ಕೆ ಅಂಟಿದ ವಿದೇಶಿ ಕೀಟ!
Team Udayavani, Aug 13, 2018, 6:00 AM IST
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕೃಷಿ ಕ್ಷೇತ್ರವನ್ನು ತೀವ್ರವಾಗಿ ಕಾಡುತ್ತಿರುವ ವಿದೇಶಿ ಕೀಟವೊಂದು ಕರ್ನಾಟಕದ ಮೆಕ್ಕೆಜೋಳದ ಸುರುಳಿಗಳಲ್ಲಿ ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ನ್ಪೋಡಾಪ್ಟೆರಾ ಪ್ರೂಜಿಪರ್ಡಾ ಎಂಬ ಹೆಸರಿನ ಕೀಟ ರಾಜ್ಯದ ಗೌರಿಬಿದನೂರು, ನೆಲಮಂಗಲ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮಂಡ್ಯ, ದಾವಣಗೆರೆ ಮತ್ತಿತರ ಜಮೀನುಗಳಲ್ಲಿ ವ್ಯಾಪಕವಾಗಿ ಇರುವುದು ಕಂಡುಬಂದಿದೆ. ಸಮೀಕ್ಷೆ ಕೈಗೊಂಡ ಸ್ಥಳಗಳಲ್ಲಿ ಈ ಕೀಟದ ಹಾನಿಯ ತೀವ್ರತೆ ಶೇ. 12ರಿಂದ ಶೇ. 70ರವರೆಗೂ ಕಂಡುಬಂದಿದೆ. ಇದು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲೂ ಪತ್ತೆಯಾಗಿದೆ.
ತಮಿಳುನಾಡಿನಲ್ಲೂ ನ್ಪೋಡಾಪ್ಟೆರಾ ಪ್ರೂಜಿಪರ್ಡಾ ಇರುವುದು ದೃಢಪಟ್ಟಿದೆ. ತೆಲಂಗಾಣದಲ್ಲಿ ಇದೇ ಲಕ್ಷಣಗಳನ್ನು ಹೋಲುವ ಕೀಟಗಳು ಕಂಡುಬಂದಿದ್ದು, ಇನ್ನೂ ದೃಢಪಟ್ಟಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಅಮೆರಿಕ, ಟರ್ಕಿ, ಚಿಲಿ, ಅರ್ಜೆಂಟೀನಾಗಳಲ್ಲಿ ನ್ಪೋಡಾಪ್ಟೆರಾ ಪ್ರೂಜಿಪರ್ಡಾ ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲಿನ ಸುಮಾರು ನೂರಕ್ಕೂ ಹೆಚ್ಚು ಬೆಳೆಗಳ ಮೇಲೆ ದಾಳಿ ಮಾಡುತ್ತದೆ. ಅಲ್ಲಿನ ವಾತಾವರಣ ಭಾರತಕ್ಕೆ, ಅದರಲ್ಲೂ ಕರ್ನಾಟಕಕ್ಕೆ ಹೋಲಿಸಿದರೆ, ಸಾಕಷ್ಟು ವ್ಯತ್ಯಾಸ ಇದೆ. ಹಾಗಾಗಿ, ಇಲ್ಲಿ ಬದುಕುವುದು ಈ ಕೀಟಗಳಿಗೆ ತುಂಬಾ ಕಷ್ಟ. ಆದರೂ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. 2016ರಲ್ಲಿ ಇದು ಆಫ್ರಿಕಾದಲ್ಲಿ ಕಾಣಿಸಿಕೊಂಡಿತ್ತು. 2017ರಲ್ಲಿ ಘಾನಾದಲ್ಲಿ ಪತ್ತೆಯಾಗಿತ್ತು. ಈಗ ನಮ್ಮೂರಿನ ಹೊಲಗಳಲ್ಲೇ ಕಂಡುಬಂದಿವೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಭು ಸಿ. ಗಾಣಿಗೇರ ಹೇಳುತ್ತಾರೆ.ಆದರೆ ಭಾರತಕ್ಕೆ ಹೇಗೆ ಬಂದಿವೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
2 ಸಾವಿರ ಕಿ.ಮೀ. ಪ್ರಯಾಣ!
ಈ ಕೀಟ ಸೈನಿಕ ಹುಳುವಿನ ಹೊಸ ಪ್ರಭೇದವಾಗಿದ್ದು, ಮೊಟ್ಟೆ, ಮರಿಹುಳ, ಕೋಶ, ಪ್ರೌಢಾವಸ್ಥೆಯಲ್ಲಿ ಕಾಣಬಹುದು. ಲಾರ್ವಾದ ಮೇಲೆ ಕಪ್ಪುಚುಕ್ಕೆ ಇರುತ್ತದೆ. ಗಂಡು ಕೀಟದ ರೆಕ್ಕೆ ಮೇಲೆ ಬಿಳಿಬಣ್ಣದ ಕಲೆಗಳು ಇರುತ್ತವೆ. ಹೆಣ್ಣು ಕೀಟದಲ್ಲಿ ಈ ಕಲೆ ಇರುವುದಿಲ್ಲ. ಎರಡು ಸಾವಿರ ಕಿ.ಮೀ.ವರೆಗೂ ಈ ಕೀಟ ಪ್ರಯಾಣ ಬೆಳೆಸುತ್ತದೆ. ಒಮ್ಮೆಲೆ 100-103 ಮೊಟ್ಟೆಗಳನ್ನು ಇದು ಇಡುತ್ತದೆ. ಒಂದು ಗಿಡದಲ್ಲಿ 1-3 ಹುಳುಗಳು ಎಲೆಗಳ ಸುಳಿಗಳಲ್ಲಿ ಕುಳಿತಿರುತ್ತವೆ. ಹಾಗಾಗಿ, ಇದರ ನಿಯಂತ್ರಣ ಕಷ್ಟಕರವಾಗಿದೆ ಎಂದು ಅವರು ಪ್ರಭು ಗಾಣಿಗೇರ ಮಾಹಿತಿ ನೀಡಿದರು.
ಕೀಟ ಪತ್ತೆಹಚ್ಚುವುದೇ ಕಷ್ಟ
ಬಿತ್ತನೆಯಾದ 25 ದಿನಗಳ ನಂತರದಿಂದ 2 ತಿಂಗಳವರೆಗಿನ ಬೆಳೆಯಲ್ಲಿ ಇದು ಕಾಣಸಿಗುತ್ತದೆ. ಆದರೆ, 25 ದಿನಗಳಲ್ಲಿದ್ದಾಗ ಕೀಟವನ್ನು ರೈತರು ಪತ್ತೆಹಚ್ಚುವುದೇ ಕಷ್ಟ. 2 ತಿಂಗಳು ತುಂಬುವ ವೇಳೆಗೆ ಬೆಳೆ ಎಲ್ಲಾ ಹಾಳಾಗಿರುತ್ತದೆ. ಮೊದಲು ಎಲೆಯನ್ನು ಕೆದರಿ, ಬಿಳಿ ಕಲೆಯನ್ನು ಸೃಷ್ಟಿಸುತ್ತದೆ. ನಂತರ ಇಡೀ ಎಲೆ ಹಾಳು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ನಿಯಂತ್ರಣಕ್ಕೆ ತುರ್ತು ಸಭೆ
ಹೊಸ ಕೀಟ ಪತ್ತೆಯಾದ ಬೆನ್ನಲ್ಲೇ ರಾಜ್ಯ ಪೀಡೆ ಸರ್ವೇಕ್ಷಣಾ ಮತ್ತು ಸಲಹಾ ಘಟಕ ತುರ್ತು ಸಭೆ ನಡೆಸಿ, ರೋಗ ನಿಯಂತ್ರಣದ ಬಗ್ಗೆ ಸಮಗ್ರ ಚರ್ಚೆ ನಡೆಸಿದೆ. ಅದರಲ್ಲಿ ಕೀಟಶಾಸ್ತ್ರಜ್ಞರು, ಸಸ್ಯ ರೋಗ, ಸಂರಕ್ಷಣೆ ಸೇರಿದಂತೆ ಸಂಬಂಧಪಟ್ಟ ವಿಭಾಗಗಳ ಅಧಿಕಾರಿಗಳು, ವಿವಿಧ ಜಿಲ್ಲೆಗಳ ಕೃಷಿ ಜಂಟಿ ನಿರ್ದೇಶಕರು ಭಾಗವಹಿಸಿದ್ದರು.
ಸದ್ಯ ಗಂಭೀರವಾಗಿ ಹಾನಿ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಆದರೆ, ರೈತ ಸಂಪರ್ಕ ಕೇಂದ್ರಗಳ ಮೂಲಕವೂ ರೈತರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ರಾಸಾಯನಿಕ ಸಿಂಪರಣೆಗೂ ಸಲಹೆ ಮಾಡಲಾಗಿದೆ.
– ಬಿ.ವೈ. ಶ್ರೀನಿವಾಸ್,ಕೃಷಿ ನಿರ್ದೇಶಕ.
ನಿಯಂತ್ರಣ ವಿಧಾನ ಹೀಗೆ
ಕ್ವಿನೊಲೊ³ಸ್ 2 ಮಿ.ಲೀ. ದ್ರಾವಣವನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ ಅಥವಾ ಇಮಾ ಮೆಕ್ಟಿನ್ ಬೆಂಝೋಟ್ 0.4 ಗ್ರಾಂ ಅನ್ನು 1 ಲೀ. ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಅಥವಾ 10 ಕೆಜಿ ಬೂಸ ಮತ್ತು ಒಂದು ಕೆಜಿ ಬೆಲ್ಲವನ್ನು ಮಿಶ್ರಣ ಮಾಡಿ, ಒಂದು ರಾತ್ರಿ ನೆನೆಸಿಟ್ಟು, ಅದರೊಂದಿಗೆ ಕ್ವಿಲ್ಪಿಡಿಯೊಕಾರ್ಬ್ ಸೇರಿಸಿ, ಎಲೆಗಳ ಸುರುಳಿಯಲ್ಲಿ ಸುರಿಯಬೇಕು ಎಂದು ವಿಜ್ಞಾನಿಗಳು ಸಲಹೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.