ಕಮಲ ಪಾಳಯಕ್ಕೆ ಕೃಷ್ಣ; ಅಮಿಶ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ
Team Udayavani, Mar 23, 2017, 3:45 AM IST
ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ದೆಹಲಿಯಲ್ಲಿ ಬುಧವಾರ ಬಿಜೆಪಿ ಸೇರುವ ಮೂಲಕ ತಮ್ಮ ಮತ್ತೂಂದು ಹೊಸ ರಾಜಕೀಯ ಶಖೆ ಆರಂಭಿಸಿದ್ದಾರೆ.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಸೇರಿದ ನಂತರ ಎಸ್.ಎಂ.ಕೃಷ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಗುಣಗಾನ ಮಾಡಿದರು. ಮಹಾನ್ ನಾಯಕರ ನೇತೃತ್ವ ಹೊಂದಿರುವ ಪಕ್ಷವೊಂದನ್ನು ಸೇರುತ್ತಿರುವ ಈ ದಿನ ನನ್ನ ಪಾಲಿಗೆ ಮಹತ್ವಪೂರ್ಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ವಿನೀತ ಭಾವವನ್ನು ಹೊಂದಿದ್ದೇನೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರಿಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಕಾಣುತ್ತಿದೆ. ದೇಶವು ಅತ್ಯುನ್ನತ ಸ್ಥಾನಕ್ಕೆ ಏರಲಿದ್ದು, ತಮ್ಮ ಈ ಮಾತು ಯಾವುದೇ ಉತ್ಪ್ರೇಕ್ಷೆಯಿಂದ ಕೂಡಿಲ್ಲವೆಂದರು.
ಸುದೀರ್ಘ ಕಾಲದ ರಾಜಕೀಯದಲ್ಲಿ ಬಹುದೊಡ್ಡ ಪ್ರಯಾಣ ಮಾಡಿದ್ದೇನೆ. ನನ್ನ ಪ್ರಯಾಣ ಈಗ ಅತ್ಯಂತ ಪ್ರಮುಖ ನಿಲ್ದಾಣಕ್ಕೆ ಬಂದು ನಿಂತಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ತಮ್ಮ ಅಧಿಕಾರಾವಧಿಯ ಸಾಧನೆಗಳನ್ನು ಮೆಲುಕು ಹಾಕಿದರು. ಅಲ್ಲದೆ, ಅಟಲ್‌ಬಿಹಾರಿ ವಾಜಪೇಯಿ ಅವರ ಕಾಲದಿಂದಲೂ ನಾನು ಬಿಜೆಪಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೆ ಎಂದು ಹೇಳಿದರು.
ಕೃಷ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಅಮಿತ್ ಶಾ ಮಾತನಾಡಿ, ಹಿರಿಯ ರಾಜಕಾರಣಿಯಾದ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಅಪಾರ ರಾಜಕೀಯ ಅನುಭವ ಹೊಂದಿದ ಅವರು ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲ ಇತ್ಯಾದಿ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರ ಅಪಾರ ರಾಜಕೀಯ ಜ್ಞಾನವು ಮುಂದಿನ ದಿನಗಳಲ್ಲಿ ಬಿಜೆಪಿಗೆ ನೆರವಾಗಲಿದೆ ಎಂದು ಶ್ಲಾ ಸಿದರು.
ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿರುವುದು ಎಲ್ಲಾ ಪ್ರಾಮಾಣಿಕ ರಾಜಕಾರಣಿಗಳು ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತಿದ್ದಾರೆ ಎಂಬ ಸಂದೇಶ ಸಾರಿದೆ. ಬಿಜೆಪಿ ಸೇರುವ ಅವರ ನಿರ್ಧಾರ ಸಮಯೋಚಿತವಾಗಿದ್ದು, ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದುದು ಮಾತ್ರವಲ್ಲ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿಯೂ ಕೆಲಸ ಮಾಡಿದ್ದರು.ಹೀಗಾಗಿ ಅವರ ಸೇರ್ಪಡೆ ಕರ್ನಾಟಕ ಮಾತ್ರವಲ್ಲ, ದೇಶಾದ್ಯಂತ ಬಿಜೆಪಿಗೆ ಶಕ್ತಿ ತಂದುಕೊಟ್ಟಿದೆ. ದಕ್ಷಿಣ ಭಾರದಲ್ಲಿ ಬಿಜೆಪಿ ಇನ್ನಷ್ಟು ಬಲಗೊಳ್ಳಲು ಸಹಕಾರಿಯಾಗುವುದರ ಜತೆಗೆ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ನೆರವಾಗಲಿದೆ ಎಂದರು.
ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಎಸ್.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.
ಸ್ವಾಗತಕ್ಕೆ ಅದ್ದೂರಿ ಸಿದ್ಧತೆ
ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಶುಕ್ರವಾರ ಸಂಜೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದ್ದು, ಬೈಕ್ ರ್ಯಾಲಿ ಮೂಲಕ ಅವರನ್ನು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಕರೆತರಲಾಗುತ್ತದೆ.ಬುಧವಾರ ಬಿಜೆಪಿ ಸೇರಿರುವ ಕೃಷ್ಣ ಅವರು ಗುರುವಾರ ಅಲ್ಲಿಯೇ ಉಳಿದು ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಗೆ ವಿಶೇಷ ವಿಮಾನದಲ್ಲಿ ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿಗೆ ಬರಲಿರುವ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸ್ವಾಗತಿಸಿ ಪಕ್ಷದ ಕಚೇರಿಗೆ ಕರೆದುಕೊಂಡು ಬರಲಿದ್ದಾರೆ. ಅಲ್ಲಿ ಔಪಚಾರಿಕವಾಗಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪಚುನಾವಣೆ ಪ್ರಚಾರಕ್ಕೆ ಕೃಷ್ಣ
ಎಸ್.ಎಂ.ಕೃಷ್ಣ ಅವರು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಔಪಚಾರಿಕ ಸಭೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಎಸ್.ಎಂ.ಕೃಷ್ಣ ಅವರ ಚುನಾವಣಾ ಪ್ರಚಾರದ ಸ್ಥಳ ಮತ್ತು ದಿನಾಂಕ ನಿಗದಿಪಡಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಅವರ ನೆರವು ಸಿಗಲಿದೆ. ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರ ಜತೆಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೂ ಅವರು ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿಗೆ ಬಲ ತಂದ ಎಸ್.ಎಂ.ಕೃಷ್ಣ ಸೇರ್ಪಡೆ
ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಬಿಜೆಪಿ ಸೇರ್ಪಡೆಯಿಂದ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರುವ ಕನಸು ಕಾಣುತ್ತಿರುವ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಎಸ್.ಎಂ.ಕೃಷ್ಣ ಅವರು ಸುಮಾರು 46 ವರ್ಷಗಳ ಸುದೀರ್ಘ ಅವಧಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದರಲ್ಲದೆ, ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರ ಹುದ್ದೆಯನ್ನೂ ಅನುಭವಿಸಿದ್ದರು.
ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿರುವ ಕೃಷ್ಣಾಗಮನದಿಂದ ಬಿಜೆಪಿಗೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಬೆಂಬಲ ಕೊಂಚ ಮಟ್ಟಿಗೆ ಹೆಚ್ಚಳವಾಗಲಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಸಾಕಷ್ಟು ಲಾಭ ತಂದುಕೊಡಲಿದೆ ಎಂಬ ನಿರೀಕ್ಷೆಯಿದೆ. ಇದು ಬಿಜೆಪಿಯನ್ನು ಗೆಲ್ಲಿಸುವಷ್ಟು ಶಕ್ತಿ ಹೊಂದಿಲ್ಲದಿದ್ದರೂ ಕಾಂಗ್ರೆಸ್‌ಗೆ ಸೋಲು ತಂದುಕೊಡಬಹುದು. ಇದು ಅಂತಿಮವಾಗಿ ಬಿಜೆಪಿಗೆ ಲಾಭವಾಗಹುದು ಎಂದು ಹೇಳಲಾಗುತ್ತಿದೆ.
ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಕರೆತರಲು ಕಳೆದ ಒಂದೂವರೆ ತಿಂಗಳಿನಿಂದ ಸಾಕಷ್ಟು ಓಡಾಡಿ ಅದರಲ್ಲಿ ಯಶಸ್ವಿಯಾಗಿದ್ದೇನೆ. ಕೃಷ್ಣ ಸೇರ್ಪಡೆಯಿಂದ ಬಿಜೆಪಿಗೆ ಬಲ ಬಂದಿದ್ದು, ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಿಷನ್-150 ಗುರಿ ಸಾಧಿಸಲು ನೆರವಾಗಲಿದೆ. ಅವರು ಒಕ್ಕಲಿಗ ನಾಯಕರಾಗಿರುವುದರಿಂದ ಆ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ.
– ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಎಸ್.ಎಂ.ಕೃಷ್ಣ ಅವರ ಸೇರ್ಪಡೆಯಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ನೆರವಾಗಲಿದೆ. ಅವರನ್ನು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.