14ರಿಂದ ನಾಲ್ಕು ದಿನ ಭಾಗವತ ಸಮ್ಮೇಳನ
Team Udayavani, Jun 2, 2017, 12:27 PM IST
ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಇಸ್ಕಾನ್ ಸಹಯೋಗದಲ್ಲಿ ಜೂ.14ರಿಂದ 18ರವರೆಗೆ ಶ್ರೀಮದ್ ಭಾಗವತದ ಬಗ್ಗೆ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವಿದ್ಯಾಭವನದ ಗೌರವ ಕಾರ್ಯದರ್ಶಿ ಕೆ.ಜಿ. ರಾಘವನ್ ತಿಳಿಸಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಐದು ದಿನಗಳ ಕಾಲ ಇಸ್ಕಾನ್‌ನ ಮಲ್ಟಿ ವಿಷನ್ ಥಿಯೇಟರ್‌ನಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಭೌತಶಾಸ್ತ್ರ, ಖಗೋಳ, ಭೂವಿಜ್ಞಾನ, ಯೋಗ, ಪುರಾಣ, ಸಂಗೀತ, ನೃತ್ಯ ಪ್ರಕಾರಗಳಲ್ಲಿ ಭಾಗವತರನ್ನು ಗುರುತಿಸುವ ಸಂಬಂಧ ವಿಚಾರ ಸಂಕಿರಣ, ವಿಚಾರ ಮಂಡನೆ ನಡೆಯಲಿದೆ.
ಇದರಲ್ಲಿ ಆಚಾರ್ಯ ಶ್ರೀವತ್ಸವ ಗೋಸ್ವಾಮೀಜಿ, ಪ್ರೊ. ಉಮಾಕಾಂತ್ ಭಟ್, ಡಾ. ಹರಿದಾಸ ಭಟ್, ಪ್ರೊ. ಪಾದೆಕಲ್ಲು ವಿಷ್ಣುಭಟ್, ಪ್ರೊ. ಚೌಮಿತ್ರ ಚಕ್ರವರ್ತಿ ಸೇರಿದಂತೆ ಹಲವು ವಿದ್ವಾಂಸರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಜೂ.14ಕ್ಕೆ ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ಭಾಗವತರ ವಿಚಾರಗಳನ್ನು ಇಂದಿನ ಯುವಕರಿಗೆ ತಿಳಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸ್ ಆಗಮಿಸಲಿದ್ದಾರೆ. ಮಹಾಕಾವ್ಯಗಳ ಸಂದೇಶ ಸಾರುವ ಕೃತಿಗಳನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪದ್ಮಾಶೇಖರ್ ಲೋಕಾರ್ಪಣೆ ಮಾಡಲಿದ್ದಾರೆ.
ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇಸ್ಕಾನ್ ಸಂಸ್ಥೆಯ ಮಧು ಪಂಡಿತ್ ದಾಸ್ ಮಾತನಾಡಿ, ಕೂಚುಪುಡಿ ನೃತ್ಯ, ಸಂಗೀತ ಕಾರ್ಯಕ್ರಮ, ಹರಿಕಥೆ, ಪ್ರಹ್ಲಾದಚರಿತೆ, ದುಷ್ಯಂತ್ ಶ್ರೀಧರ್‌ರ ಉಪನ್ಯಾಸ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ವಿದ್ವಾಂಸರನ್ನು ಗೌರವಿಸಲಾಗುವುದು.
ಪುಸ್ತಕ ಪ್ರದರ್ಶನ ಹಾಗೂ ಸಂಕೀರ್ಣದ ಸಿ.ಡಿ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಆಹ್ವಾನ ಪತ್ರಿಕೆಯನ್ನು ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನ ಅಥವಾ ರಾಜಾಜಿನಗರದ ಇಸ್ಕಾನ್‌ನಲ್ಲಿ ಪಡೆಯಬಹುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್. ಎನ್. ಸುರೇಶ್, ಇಸ್ಕಾನ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರನ್ ಚೈತನ್ ದಾಸ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.