ನಟನೆ ಅವಕಾಶದ ನೆಪದಲ್ಲಿ ವಂಚನೆ
Team Udayavani, Aug 30, 2019, 3:05 AM IST
ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ಮಹಿಳೆಯರಿಗೆ, ಯುವತಿಯರಿಗೆ ಸಿನಿಮಾ ಮತ್ತು ಧಾರಾವಾಹಿ ಹಾಗೂ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪಿ ನಂದಿನಿ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೆಸರುಘಟ್ಟ ಮುಖ್ಯ ರಸ್ತೆಯ ಕಿರ್ಲೋಸ್ಕರ್ ಲೇಔಟ್ ನಿವಾಸಿ ನಿಖೀಲ್ ಗೌಡ ಅಲಿಯಾಸ್ ವಾದಿರಾಜ್ (43) ಬಂಧಿತ. ಆರೋಪಿಯು ಇದುವರೆಗೂ 9ಕ್ಕೂ ಹೆಚ್ಚು ಮಹಿಳೆಯರಿಗೆ 4.23 ಲಕ್ಷ ರೂ. ವಂಚಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮಂಜುನಾಥ್ ಎಂಬವರಿಗೆ ಬಿಡಿಎ ನಿವೇಶನ ಕೊಡಿಸುವುದಾಗಿ ಮುಂಗಡ 50 ಸಾವಿರ ರೂ. ಪಡೆದು ವಂಚನೆ ಮಾಡಿರುವುದೂ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಇತ್ತೀಚೆಗೆ ನಂದಿನಿ ಲೇಔಟ್‌ನ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡು, ಜಾಹೀರಾತು, ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿದ್ದ. ನಂತರ ನೇರವಾಗಿ ಅವರ ಮನೆಗೆ ಹೋದ ಆತ, ಪೋತೀಸ್ ಸ್ಯಾರೀಸ್, ಧವನಂ ಜ್ಯೂವೆಲ್ಲರಿ ಜಾಹೀರಾತಿಗೆ ಆಯ್ಕೆಯಾಗಿದ್ದೀರಿ ಎಂದು 25 ಸಾವಿರ ರೂ. ಪಡೆದುಕೊಂಡಿದ್ದಾನೆ. ನಂತರ ಯಾವುದೇ ಅವಕಾಶ ಕೊಡಿಸದೆ, ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂಬಂಧ ಆ.21ರಂದು ಮಹಿಳೆ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಂತ್ರಿಕ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಬಿ.ಎನ್.ಲೋಹಿತ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ನಾನಾ ಹೆಸರು: ಪೋಷಕರಿಂದ ದೂರವಾಗಿರುವ ಆರೋಪಿ, ಯಶವಂತರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಂಗಿದ್ದು, ವಂಚನೆ ಮಾಡಿದ ಹಣದಲ್ಲಿ ಜೀವನ ನಡೆಸುತ್ತಿದ್ದ. ಫೇಸ್‌ಬುಕ್‌ನಲ್ಲಿ ನಿಖೀಲ್ ಗೌಡ, ವಾದಿರಾಜ್, ಸಂಜಯ್, ಸತೀಶ್ ಸೇರಿ ನಾನಾ ಹೆಸರುಗಳಲ್ಲಿ ಖಾತೆ ತೆರೆದಿರುವ ಆರೋಪಿ, ಖಾತೆ ಮೂಲಕ ಮಹಿಳೆಯರು, ಯುವತಿಯರನ್ನು ಪರಿಚಿಯಿಸಿಕೊಳ್ಳುತ್ತಿದ್ದ. ನಂತರ ಅವರ ಮೊಬೈಲ್ ನಂಬರ್ ಪಡೆದು, ನೋಡಲು ಸುಂದರವಾಗಿದ್ದೀರಿ.
ಸಿನಿಮಾ, ಧಾರವಾಹಿ, ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಸಂಪರ್ಕಿಸುತ್ತಿದ್ದ. ನಂತರ ಅವರ ಮನೆಗಳಿಗೆ ನೇರವಾಗಿ ಹೋಗಿ, ಅವರೊಂದಿಗೆ ಮಾತುಕತೆ ನಡೆಸಿ, 25 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಹಣ ಪಡೆಯುತ್ತಿದ್ದ. ಕೆಲವೊಮ್ಮೆ ತನ್ನೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದ ಯುವತಿ, ಮಹಿಳೆಯರನ್ನು ಫೋಟೋ ಶೂಟ್ ನೆಪದಲ್ಲಿ ಮೈಸೂರು, ಮಡಿಕೇರಿ ಹಾಗೂ ಇತರೆಡೆ ಕರೆದೊಯ್ದು ವಂಚನೆ ಮಾಡುತ್ತಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಬ್ಲೌಸ್ ಪಡೆಯುತ್ತಿದ್ದ!: ಪರಿಚಯಸ್ಥ ಮಹಿಳೆಯರು, ಯುವತಿಯರ ಪೈಕಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಆರೋಪಿ, ಜಾಹೀರಾತು ಚಿತ್ರೀಕರಿಸಲು ಹೊಸ-ಹೊಸ ಮಾದರಿಯ ಬಟ್ಟೆಗಳನ್ನು ಧರಿಸಬೇಕು. ಹೀಗಾಗಿ ತಮ್ಮ ಬಟ್ಟೆಯ ಅಳತೆ ಮುಖ್ಯವಾಗಿರುತ್ತದೆ. ತಮ್ಮ ಬ್ಲೌಸ್ ಹಾಗೂ ಮೈಮೇಲೆ ಧರಿಸುವ ಇತರೆ ಬಟ್ಟೆಗಳನ್ನು ನೀಡಿದರೆ, ಅದೇ ಅಳತೆಗೆ ಬಟ್ಟೆಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ನಂಬಿಸುತ್ತಿದ್ದ. ಆತನ ಮಾತು ನಂಬುತ್ತಿದ್ದ ಮಹಿಳೆಯರು, ತಮ್ಮ ಬ್ಲೌಸ್ ಹಾಗೂ ಇತರೆ ಬಟ್ಟೆಗಳನ್ನು ಕೊಡುತ್ತಿದ್ದರು. ಆದರೆ, ಇದುವರೆಗೂ ಯಾರಿಗೂ ಹೊಸ ಬಟ್ಟೆ ನೀಡಿಲ್ಲ. ಪೋಟೋ ಶೂಟ್ ಕೂಡ ಮಾಡಿಸಿಲ್ಲ ಎಂದು ಪೊಲೀಸರು ಹೇಳಿದರು.
90 ಲಕ್ಷ ರೂ.ವಂಚನೆ – ವಿಚ್ಛೇದನ: 2018ರ ನವೆಂಬರ್‌ನಲ್ಲಿ ಪತಿಯಿಂದ ದೂರವಾಗಿದ್ದ ಬಸವೇಶ್ವರನಗರದ ಮಹಿಳೆಯೊಬ್ಬರನ್ನು ಫೇಸ್‌ಬುಕ್ ಮೂಲಕ ಪರಿಚಯಿಸಿಕೊಂಡಿದ್ದ ಆರೋಪಿ, ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿಹೇಳಿದ್ದ. ಅಲ್ಲದೆ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಆಕೆಯೊಂದಿಗೆ ಮಡಿಕೇರಿ, ಊಟಿಯಲ್ಲಿ ನಾಲ್ಕೈದು ದಿನ ಕಾಲ ಕಳೆದಿದ್ದ. ಅಲ್ಲದೆ, ಆಕೆಯಿಂದ ಬಾಡಿಗೆ ಮನೆ ಮಾಡಲು ಐದು ಲಕ್ಷ ರೂ. ಪಡೆದುಕೊಂಡಿದ್ದ.
ನಂತರ ಕೆಲ ಸಚಿವರ ಆಪ್ತರು ಪರಿಚಯವಿದ್ದು, ಕಡಿಮೆ ಮೊತ್ತಕ್ಕೆ ಬಿಡಿಎ ನಿವೇಶನ ಕೊಡಿಸುವುದಾಗಿ ಹೇಳಿ ಮಹಿಳೆ ಮತ್ತು ಅವರ ಸಂಬಂಧಿಕರಿಂದ ಒಟ್ಟು 90 ಲಕ್ಷ ರೂ. ಸಂಗ್ರಹಿಸಿದ್ದ. ಸಾಲದೆಂಬಂತೆ ಮಹಿಳೆಗೆ ಪತಿಯಿಂದ ವಿಚ್ಛೇಧನ ಕೊಡಿಸಿ, ಆಕೆಯಿಂದಲೇ ಹಣ, ಚಿನ್ನಾಭರಣ, ಆಕೆಯ ಹೆಸರಿನಲ್ಲಿ ಮೊಬೈಲ್, ಸಿಮ್‌ಕಾರ್ಡ್‌ಗಳನ್ನು ಪಡೆದು ತಲೆಮರೆಸಿಕೊಂಡಿದ್ದ. ಈ ಸಂಬಂಧ ತನಿಖೆ ನಡೆಸಿದ ಯಶವಂತಪುರ ಪೊಲೀಸರು ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.