ತೂಕ, ಅಳತೆಯಲ್ಲಿ ವಂಚನೆ: 4 ಕೋಟಿ ರೂ. ದಂಡ
Team Udayavani, Jun 11, 2018, 6:10 AM IST
ಬೆಂಗಳೂರು: ಗ್ರಾಹಕರು ಖರೀದಿಸುವ ವಸ್ತುಗಳ ತೂಕ ಮತ್ತು ಅಳತೆಯಲ್ಲಿ ಮೋಸ, ದೋಷಪೂರಿತ ತೂಕ ಸಾಧನಗಳಿಂದ ವಂಚನೆ, ಪೊಟ್ಟಣ ಸಾಮಗ್ರಿಗಳಲ್ಲಿನ (ಪ್ಯಾಕೇಜ್x ಕಮಾಡಿಟಿ) ದೋಷಕ್ಕೆ ಸಂಬಂಧಪಟ್ಟಂತೆ ಕಾನೂನು ಮಾಪನಶಾಸ್ತ್ರ ಇಲಾಖೆಯು ಕಳೆದ ವರ್ಷದಲ್ಲಿ 16,250 ಪ್ರಕರಣ ದಾಖಲಿಸಿದ್ದು, ಬರೋಬ್ಬರಿ 4 ಕೋಟಿ ರೂ.ದಂಡ ಸಂಗ್ರಹಿಸಿದೆ!
ನಿಯಮ ಉಲ್ಲಂಘನೆಗೆ ಪ್ರಕರಣ ದಾಖಲಿಸಿ ದಂಡ ವಿಧಿಸುತ್ತಿರುವ ಇಲಾಖೆಯು ಮತ್ತೂಂದೆಡೆ ಗ್ರಾಹಕರಲ್ಲಿ ಜಾಗೃತಿಗೂ ಆದ್ಯತೆ ನೀಡಿದೆ. ಅಲ್ಲದೇ, ಕಾನೂನು ಮಾಪನಶಾಸ್ತ್ರ ಇಲಾಖೆಯ ಕಾರ್ಯವ್ಯಾಪ್ತಿ ಹಾಗೂ ನಿಯಮಗಳ ಬಗ್ಗೆಯೂ ತಿಳಿವಳಿಕೆ ನೀಡುತ್ತಿದೆ. ಇನ್ನೊಂದೆಡೆ ಪ್ರಸಕ್ತ ವರ್ಷದಲ್ಲಿ ಇಲಾಖೆಯು 10 ಜಾರಿ ದಳಗಳಿಗೂ ತಲಾ 1,700 ಪರಿಶೀಲನೆ ನಡೆಸಬೇಕೆಂಬ ಗುರಿ ನೀಡಿದೆ.
ವ್ಯಾಪಾರ- ವಹಿವಾಟಿನಲ್ಲಿ ಮಾರಾಟ ಮಾಡುವ, ಪೂರೈಸುವ ಉತ್ಪನ್ನಗಳು “ಹೆಚ್ಚು ಇಲ್ಲದ, ಕಡಿಮೆಯೂ ಆಗದ ನಿಖರ’ ಅಳತೆ ಮತ್ತು ತೂಕ ಕಾಯ್ದುಕೊಳ್ಳುವುದು ಕಾನೂನು ಮಾಪನಶಾಸ್ತ್ರದ ಮೂಲ ಧ್ಯೇಯ. ಹಾಗಾಗಿ ಸಾಮಾನ್ಯರಿಂದ ಶ್ರೀಮಂತರವರೆಗೆ ಎಲ್ಲರೂ ದಿನನಿತ್ಯ ಬಳಸುವ ಬಹುಪಾಲು ವಸ್ತುಗಳು ಇಲಾಖೆ ನಿಯಮಗಳ ವ್ಯಾಪ್ತಿಗೆ ಒಳಪಡುತ್ತವೆ. ಇಷ್ಟಾದರೂ ನಿಯಮ ಉಲ್ಲಂಘನೆ ಮುಂದುವರಿದಿದ್ದು, ಗ್ರಾಹಕರ ವಂಚನೆ ನಡೆದೇ ಇದೆ.
ತೂಕ ಮತ್ತು ಅಳತೆಯಲ್ಲಿ ವಂಚನೆ, ಪೊಟ್ಟಣ ಸಾಮಗ್ರಿಯಲ್ಲಿ ನಿಯಮಾನುಸಾರ ಘೋಷಣೆ, ವಿವರ ನಮೂದಿಸದೆ ಲೋಪ, ಆಟೋರಿಕ್ಷಾ ಮೀಟರ್‌ಗಳಲ್ಲಿ ದೋಷಕ್ಕೆ ಸಂಬಂಧಪಟ್ಟಂತೆ 2017-18ನೇ ಹಣಕಾಸು ವರ್ಷದಲ್ಲಿ ಒಟ್ಟು 16,250 ಪ್ರಕರಣಗಳನ್ನು ಕಾನೂನು ಮಾಪನಶಾಸ್ತ್ರ ಇಲಾಖೆ ದಾಖಲಿಸಿದೆ. ದಂಡ ರೂಪದಲ್ಲಿ 4.04 ಕೋಟಿ ರೂ. ಸಂಗ್ರಹಿಸಿದೆ.
ತೂಕ ಮತ್ತು ಅಳತೆಯಲ್ಲಿ ವಂಚನೆ: ಉತ್ಪನ್ನಗಳ ತೂಕ ಮತ್ತು ಅಳತೆಯಲ್ಲಿ ಲೋಪ ಮಾಡಿ ಗ್ರಾಹಕರನ್ನು ವಂಚಿಸುವುದು ಹೆಚ್ಚಾಗುತ್ತಿದೆ. ಉತ್ಪನ್ನದ ಘೋಷಿತ ಪ್ರಮಾಣಕ್ಕಿಂತ ವಾಸ್ತವದ ತೂಕ ಕಡಿಮೆ ಮಾಡಿ ವಂಚಿಸುವ ಸಂಬಂಧ 7,556 ಪ್ರಕರಣ ದಾಖಲಾಗಿದ್ದು, 83.70 ಲಕ್ಷ ರೂ. ದಂಡ ವಿಧಿಸಿದೆ. ತಳ್ಳುಗಾಡಿಯ ತಕ್ಕಡಿಯಿಂದ ಹಿಡಿದು ಮಾಲ್‌ಗಳ ಮಾಪನ ಸಾಧನಗಳನ್ನು ವರ್ಷಕ್ಕೊಮ್ಮೆ ಇಲಾಖೆಯಿಂದ ಪರಿಶೀಲನೆಗೊಳಪಡಿಸಿ ದೃಢೀಕರಿಸಿಕೊಳ್ಳಬೇಕಿದ್ದು, ಈ ನಿಯಮ ಉಲ್ಲಂಘನೆಗೂ ದಂಡ ವಿಧಿಸಿದೆ.
3.67 ಕೋಟಿ ರೂ. ದಂಡ: ಪೊಟ್ಟಣ ಸಾಮಗ್ರಿ ನಿಯಮಾವಳಿ ಉಲ್ಲಂಘನೆ ಸಂಬಂಧಿಸಿ 2,745 ಪ್ರಕರಣ ದಾಖಲಾಗಿದ್ದು, 3.67 ಕೋಟಿ ರೂ. ದಂಡ ವಿಧಿಸಲಾಗಿದೆ. ಪೊಟ್ಟಣ ಸಾಮಗ್ರಿಗಳ ಮೇಲೆ ಎಂಆರ್‌ಪಿ (ಎಲ್ಲ ತೆರಿಗೆ ಒಳಗೊಂಡಂತೆ), ನಿವ್ವಳ ತೂಕ, ಉತ್ಪಾದಕರ ಹೆಸರು, ವಿಳಾಸ, ಉತ್ಪನ್ನದ ಹೆಸರು, ಉತ್ಪನ್ನದ ಆಕಾರ, ಸ್ವರೂಪದ ವಿವರ ಹಾಗೂ ದೋಷವಿದ್ದರೆ ದೂರು ಸಲ್ಲಿಸಬೇಕಾದ ವಿಳಾಸ, ಸಂಪರ್ಕ ಸಂಖ್ಯೆ ಮಾಹಿತಿ ಇರಬೇಕೆಂಬ ನಿಯಮವಿದೆ. ಆದರೆ ಇದರಲ್ಲಿ ಸಾಕಷ್ಟು ನಿಯಮ ಉಲ್ಲಂಘನೆಯಾಗುತ್ತಿದ್ದು, ಹೆಚ್ಚು ಪ್ರಕರಣ ದಾಖಲಾಗಿವೆ.
ಆಮದು ಮಾಡಿಕೊಳ್ಳುವ ಪೊಟ್ಟಣ ಸಾಮಗ್ರಿ ಸಂಬಂಧ ನಿಯಮ ಉಲ್ಲಂಘನೆಯಡಿ ಹೆಚ್ಚು ಪ್ರಕರಣ ದಾಖಲಾಗಿದ್ದು, ದೊಡ್ಡ ಮೊತ್ತದ ದಂಡ ಸಂಗ್ರಹವಾಗಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳುವ ಇಲ್ಲವೇ ಏಜೆನ್ಸಿ, ಮಳಿಗೆದಾರರು ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ನಿಯಮಾನುಸಾರ ಮಾಹಿತಿ ಪ್ರಕಟಿಸದಿರುವುದು ಸೇರಿ ವಿವಿಧ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಟೋರಿಕ್ಷಾಗಳು ವರ್ಷಕ್ಕೊಮ್ಮೆ ಮೀಟರ್‌ಗಳನ್ನು ಇಲಾಖೆಯಿಂದ ಪರಿಶೀಲನೆಗೊಳಪಡಿಸಿ ದೃಢೀಕರಿಸಬೇಕು. ಆದರೆ ಬಹಳಷ್ಟು ಚಾಲಕರು ದೃಢೀಕರಿಸದೆ ದೋಷಪೂರಿತ ಮೀಟರ್ ಬಳಸುತ್ತಿರುತ್ತಾರೆ. ಇಲಾಖೆ ಕಳೆದ ವರ್ಷ ಪರಿಶೀಲಿಸಿ 1,781 ಪ್ರಕರಣ ದಾಖಲಿಸಿ, 8.92 ಲಕ್ಷ ರೂ. ದಂಡ ಸಂಗ್ರಹಿಸಿದೆ. ರಾಜ್ಯದಲ್ಲಿ ದಾಖಲಾಗುವ ಪ್ರಕರಣಗಳ ಪೈಕಿ ಅತಿ ಹೆಚ್ಚು ಬೆಂಗಳೂರಿನಲ್ಲಿ ದಾಖಲಾಗುತ್ತಿದೆ.
ರಾಜ್ಯಾದ್ಯಂತ ತಪಾಸಣೆ, ಪರಿಶೀಲನೆಗಾಗಿ ಒಟ್ಟು 10 ಜಾರಿ ತಂಡಗಳಿವೆ. ಬೆಂಗಳೂರಿನಲ್ಲಿ 3 ತಂಡಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಒಟ್ಟು 7 ಜಾರಿ ತಂಡಗಳಿವೆ. ಪ್ರಸಕ್ತ ವರ್ಷದಲ್ಲಿ 10 ತಂಡಗಳಿಗೆ ತಲಾ 1,700 ಪರಿಶೀಲನೆ ನಡೆಸಬೇಕೆಂದು ಇಲಾಖೆ ಗುರಿ ನೀಡಿದೆ. ತೂಕ ಮತ್ತು ಅಳತೆ ದೋಷ ಸಂಬಂಧ ಗ್ರಾಹಕರು ದೂರು ಸಲ್ಲಿಸಬಹುದಾದ ದೂರವಾಣಿ ಸಂಖ್ಯೆ: 080- 2225 3500. ಇಮೇಲ್ ವಿಳಾಸ: [email protected]
ತೂಕ ಮತ್ತು ಅಳತೆಯಲ್ಲಿ ದೋಷ, ಪೊಟ್ಟಣ ಸಾಮಗ್ರಿ ನಿಯಮ ಉಲ್ಲಂಘನೆ ಹಾಗೂ ದೋಷಪೂರಿತ ಆಟೊರಿಕ್ಷಾ ಮೀಟರ್‌ಗೆ ಸಂಬಂಧಪಟ್ಟಂತೆ ಕಳೆದ ವರ್ಷದಲ್ಲಿ 16,250 ಪ್ರಕರಣ ದಾಖಲಿಸಲಾಗಿದ್ದು, ನಾಲ್ಕು ಕೋಟಿ ರೂ. ದಂಡ ವಿಧಿಸಲಾಗಿದೆ. ಪ್ರಕರಣ ದಾಖಲಿಸಿ, ದಂಡ ವಿಧಿಸುವುದು ಮಾತ್ರವಲ್ಲದೇ ಜಾಗೃತಿಗೂ ಒತ್ತು ನೀಡಲಾಗಿದೆ.
– ಎಂ. ಮಮತಾ, ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ
– ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.