ಮತ ಹಾಕಿ ಬಂದ್ರು ಬಿರಿಯಾನಿ ತಿಂದ್ರು…
Team Udayavani, May 11, 2023, 10:57 AM IST
ಬೆಂಗಳೂರು: ಬಿಸಿಲ ಧಗೆ ನಡುವೆ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದ ಮತದಾರರು, ಮತ ಹಾಕಿ ಬಂದ್ರು ಬಿರಿಯಾನಿ ತಿಂದ್ರು, “ಪಿಂಕ್ ಬೂತ್’ನಲ್ಲಿ ಪುರುಷ ಅಧಿಕಾರಿಗಳು, ಮತ ಹಾಕಲು ಬಂದವರಿಗೆ ಹಸಿರಿನ ಪಾಠ…!
-ಇದು ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಆರ್.ಆರ್. ನಗರ, ವಿಜಯ ನಗರ, ಗೋವಿಂದರಾಜನಗರದಲ್ಲಿ ಬುಧವಾರ ನಡೆದ ಮತದಾನದಲ್ಲಿ ಕಂಡುಬಂದ ದೃಶ್ಯಗಳಿವು. ಸಾಮಾನ್ಯವಾಗಿ ಮತದಾನ ಎಂದರೆ ನಗರದ ಜನ ಮಾರುದೂರ ಎಂಬ ಆರೋಪ ಇದೆ. ಆದರೆ, ಬುಧವಾರ ನಗರದ ಪಶ್ಚಿಮ ಮತ್ತು ದಕ್ಷಿಣದಲ್ಲಿ ಕಂಡುಬಂದ ದೃಶ್ಯಗಳು ಈ ಆರೋಪಕ್ಕೆ ಅಪವಾದ ಎನ್ನುವಂತಿದ್ದವು.
ಬೆಳಗ್ಗೆ ತುಸು ನೀರಸವಾಗಿತ್ತು. ಹೊತ್ತು ಏರುತ್ತಿದ್ದಂತೆ ನಿಧಾನವಾಗಿ ಜನ ಹತ್ತಿರದ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿರು. ಕೆಲವೆಡೆ ದಟ್ಟಣೆ ಇತ್ತು. ಆದರೂ ತಾಳ್ಮೆಯಿಂದ ಸರದಿಯಲ್ಲಿ ನಿಂತು ಮತದಾನ ಮಾಡಿದರು. ಇದರಿಂದ ಮಧ್ಯಾಹ್ನದ ಹೊತ್ತಿಗಾಗಲೇ ಬಹುತೇಕ ಬೂತ್ ಗಳಲ್ಲಿ ಶೇ.25ರಿಂದ 30ರಷ್ಟು ಮತಗಳು ಚಲಾವಣೆ ಆಗಿದ್ದವು. ನಗರದ ಹೃದಯಭಾಗಗಳಲ್ಲಿ ವಿಶೇಷವಾಗಿ ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ವಿಜಯ ನಗರದಲ್ಲಿ ಬೆಳಗ್ಗೆ 10ರ ಸುಮಾರಿಗೆ ಮತಗಟ್ಟೆಗಳ ಮುಂದೆ ಜನಸಂದಣಿ ಹೆಚ್ಚಿತ್ತು. ಕುಟುಂಬ ಸಮೇತ ಮತ ಚಲಾಯಿಸಿ ಹೊರಗೆ ಬರುವ ಜನ ಕ್ಯಾಮೆರಾಕ್ಕೊಂದು ಪೋಸ್ ಕೊಟ್ಟು, ಮತಗಟ್ಟೆಗಳ ಮುಂದೆ ಸೆಲ್ಫಿ ಹಿಡಿದುಕೊಂಡು ಖುಷಿಯಿಂದ ಮನೆಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂತು.
ಇನ್ನು ನಗರದಿಂದ ಸ್ವಲ್ಪ ಹೊರವಲಯಗಳಿಗೆ ಹೋದರೆ, ಅಲ್ಲಿ ಹಬ್ಬದ ಕಳೆಗಟ್ಟಿತ್ತು. ಮತಗಟ್ಟೆಗಳಿಗೆ ಬರುವ ಜನ ಮತ ಚಲಾಯಿಸಿ, ರೈಸ್ ಬಾತ್ ಅಥವಾ ಬಿರಿಯಾನಿ ಪ್ಯಾಕೆಟ್ ತೆಗೆದುಕೊಂಡು ಬಿಂದಾಸ್ ಆಗಿ ಹೋಗುತ್ತಿದ್ದರು. ಆರ್.ಆರ್. ನಗರದ ಮುತ್ತುರಾಯನಗರ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಕಡೆಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಓಮ್ನಿ ವ್ಯಾನ್‌ಗಳಲ್ಲಿ ಬಂದು ಮತ ಚಲಾಯಿಸಿದವರಿಗೆ ಬಿರಿಯಾನಿ ಅಥವಾ ಕುಷ್ಕಾ ವಿತರಿಸುತ್ತಿದ್ದರು. ಜನ ಮುಗಿಬಿದ್ದು ತೆಗೆದುಕೊಳ್ಳುತ್ತಿದ್ದರು.
ಚುನಾವಣಾ ಆಯೋಗವು ಕೆಲವೆಡೆ ಮತ ದಾರರನ್ನು ಆಕರ್ಷಿಸುವುದು ಸೇರಿದಂತೆ ಹಲವು ಕಾರಣಗಳ ಹಿನ್ನೆಲೆಯಲ್ಲಿ ವಿವಿಧ ಪರಿಕಲ್ಪನೆಯಲ್ಲಿ ಮತಗಟ್ಟೆಗಳನ್ನು ನಿರ್ಮಿಸಿದ್ದರು. ಉದಾಹರಣೆಗೆ ಪಿಂಕ್ ಬೂತ್‌ಗಳಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವುದು, ಯುವ ಮತಗಟ್ಟೆಯಲ್ಲಿ ಯುವಕರನ್ನು ನಿಯೋಜಿಸಲಾಗಿತ್ತು. ಅದರಂತೆ ಮಲ್ಲೇಶ್ವರದ ವಾರ್ಡ್ ವೊಂದರ ಶಾಲೆಯಲ್ಲಿ ಪಿಂಕ್ ಬೂತ್ ಇತ್ತು. ಆದರೆ, ಅಲ್ಲಿ ಚುನಾವಣಾಧಿಕಾರಿ ಹೊರತುಪಡಿಸಿ ಉಳಿದೆಲ್ಲರೂ ಪುರುಷರಿದ್ದರು. ವಿಜಯನಗರದ ಸೆಂಟ್ ಮೈಕಲ್ ಶಾಲೆ ಬೂತ್‌ನಲ್ಲಿ ಯುವ ಮತಗಟ್ಟೆಯಲ್ಲಿ ಒಬ್ಬರು ಮಾತ್ರ ಯುವಕರಿದ್ದರು. ಇನ್ನು ಮುತ್ತುರಾಯನಗರದಲ್ಲಿ ಅರಣ್ಯ ಮತ್ತು ಪರಿಸರದ ಕಲ್ಪನೆಯಲ್ಲಿ ಮತಗಟ್ಟೆ ರೂಪಿಸ ಲಾಗಿತ್ತು. ಅದಕ್ಕೆ ಪೂರಕವಾಗಿ ಮತಗಟ್ಟೆಗೆ ಹೋಗುವ ದಾರಿಯುದ್ದಕ್ಕೂ ಗಿಡಗಳ ಕುಂಡಗಳನ್ನು ಸಾಲುಗಟ್ಟಿ ಇಡಲಾಗಿತ್ತು. ಪರಿಸರದ ಜತೆಗೆ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಬಿಡಿಸಲಾಗಿತ್ತು. ಮಧ್ಯಾಹ್ನ ತುಸು ನೀರಸವಾಗಿತ್ತು. ಸಂಜೆ ವೇಳೆಗೆ ಮತ್ತೆ ದಟ್ಟಣೆ ಹೆಚ್ಚಾಯಿತು. ಸಮಯ ಮುಗಿಯು ತ್ತಿದ್ದರೂ ಎಲ್ಲರಿಗೂ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು.
ಮಸಾಲೆ ದೋಸೆ, ಮೈಸೂರು ಪಾಕ್ ಫ್ರೀ:
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರಿಗೆ ನಗರದ ಕೆಲವು ಹೋಟೆಲ್‌ಗಳಲ್ಲಿ ಮಸಾಲೆ ದೋಸೆ, ಮೈಸೂರು ಪಾಕ್ ಹಾಗೂ ತಂಪು ಪಾನೀಯಗಳನ್ನು ಉಚಿತವಾಗಿ ಹಾಗೂ ಇನ್ನೂ ಕೆಲವು ಹೊಟೇಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ತಿಂಡಿ ವಿತರಿಸಲಾಯಿತು.
ಹೌದು..! ಅದು ಎಲ್ಲಿ ಅಂತೀರಾ, ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‌ನಲ್ಲಿ ಮತದಾನ ಮಾಡಿದವರು ಬೆರಳಿಗೆ ಹಾಕಿದ ನೀಲಿ ಶಾಯಿಯನ್ನು ತೋರಿಸಿದರೆ ಫ್ರೀಯಾಗಿ ಮಸಾಲೆ ದೋಸೆ ಜತೆಗೆ ಮೈಸೂರು ಪಾಕ್ ಮತ್ತು ತಂಪು ಪಾನೀಯವನ್ನು ಸವಿಯಬಹುದಾಗಿತ್ತು. ನಗರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಮತದಾನವನ್ನು ನಿರ್ಲಕ್ಷಿಸಿ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಒಂದು ಸಣ್ಣ ಪ್ರಯಯತ್ನ ಇದಾಗಿದೆ.
ಕಳೆದ ಬಾರಿ ಮೊದಲ ಮತದಾರರಿಗೆ ಉಚಿತ ಟೀ, ಕಾಫಿ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿತ್ತು. ಆದ್ದರಿಂದ ಈ ಬಾರಿ ಮತದಾನ ಮಾಡಿದವರಿಗೆಲ್ಲಾ ಬೆಣ್ಣೆ ಖಾಲಿ ದೋಸೆ, ಸಿಹಿ ಹಾಗೂ ತಂಪು ಪಾನೀಯವನ್ನು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮತದಾರರು ಸಂತೋಷದಿಂದ ಉಪಾಹಾರ ಸೇವಿಸಿದ್ದಾರೆ ಎಂದು ಹೋಟೆಲ್ ಮಾಲೀಕ ಕೃಷ್ಣರಾಜ್ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಯಾವುದೇ ಆಮಿಷಕ್ಕೆ ಒಳಗಾಗದೆ ಮತ್ತು ಹೋಟೆಲ್‌ಗಳ ಮುಂದೆ ಯಾವುದೇ ರೀತಿಯ ಬೋರ್ಡ್ ಹಾಕಬಾರದು ಎಂಬ ಕೆಲವು ನಿರ್ಭಂದಗಳನ್ನು ಹಾಕಿದ ಹೈಕೋರ್ಟ್, ಮತದಾರರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ತಿಂಡಿ/ಊಟ ನೀಡಲು ಮಂಗಳವಾರ ತಡರಾತ್ರಿ ಅನುಮತಿ ನೀಡಿತು. ಇದರನ್ವಯ ನಗರದ ಕೆಲವು ಹೋಟೆಲ್‌ಗಳಲ್ಲಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಉಪಾಹಾರ ನೀಡಲಾಗಿದೆ ಎಂದು ತಿಳಿಸಿದರು.
ಶನಿವಾರ ತನಕ 10 ರೂ.ಗೆ ಮಸಾಲ ದೋಸೆ: ನಗರದ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ಇಡ್ಲಿ ಗುರು ಔಟ್‌ಲೆಟ್‌ನಲ್ಲಿ ಮತದಾನ ಮಾಡಿದವರಿಗೆ ಕೇವಲ 10 ರೂ.ಗಳಿಗೆ ಮಸಾಲ ದೋಸೆ, ಪ್ಲೇನ್ ದೋಸೆ ಮತ್ತು ಪುಡಿ ಮಸಾಲ ದೋಸೆ ಸಿಗಲಿದೆ. ಈ ರಿಯಾಯಿತಿಯು ಶನಿವಾರ(ಮೇ 13) ವರೆಗೆ ಇರಲಿದ್ದು, ಮತದಾನದ ದಿನದಂತೆ ಉತ್ತಮ ಸ್ಪಂದನೆ ದೊರಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.