ಇನ್ನು ಮುಂದೆ ಗಂಜಿ ಕೇಂದ್ರಗಳಲ್ಲಿ ಸಿಗಲಿದೆ ಫುಲ್ ಮೀಲ್ಸ್
Team Udayavani, Jun 19, 2021, 7:34 PM IST
ಬೆಂಗಳೂರು: ಮಳೆ ಅನಾಹುತಗಳು ಸಂಭವಿಸಿದಾಗ ಸ್ಥಳಾಂತರ ಮಾಡಿದವರಿಗೆ ಗಂಜಿ ಕೇಂದ್ರಗಳಲ್ಲಿ ಗಂಜಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಆ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಗಂಜಿ ಕೇಂದ್ರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗುತ್ತಿದ್ದು, ಪ್ರತಿ ದಿನ ತರಹೇವಾರಿ ಉಪಹಾರ, ಚಪಾತಿ, ಪಲ್ಯ, ಹಪ್ಪಳ, ಮೊಟ್ಟೆ ನೀಡಲು ಆದೇಶ ನೀಡಲಾಗಿದೆ”, ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ 20 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ನಡೆಸಿದ ವೀಡಿಯೋ ಸಂವಾದ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಅಶೋಕ, “ಮಂಡ್ಯ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಎರಡರಿಂದ ಮೂರು ತಿಂಗಳಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಬಹುದು ಎಂಬ ವಿಶ್ವಾಸವಿದೆ. ಸದ್ಯದಲ್ಲೇ ಮುಂಗಾರು ಆರಂಭವಾಗುತ್ತಿದ್ದು, ಆ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಅನಾಹುತಗಳು ಘಟಿಸಿದರೆ ಯಾವ ರೀತಿ ನಿರ್ವಹಿಸಬೇಕು ಎಂಬುದರ ಕುರಿತು ಜಿಲ್ಲಾಡಳಿತಗಳಿಗೆ ಮಾಹಿತಿ ನೀಡಲಾಯಿತು. ಮಳೆ ಅನಾಹುತಗಳು ನಡೆದರೆ ಶಾಲೆ, ಕಲ್ಯಾಣ ಮಂಟಪಗಳಿಗೆ ಸ್ಥಳಾಂತರ ಮಾಡಲು ಜಿಲ್ಲಾ, ತಾಲ್ಲೂಕುಗಳಲ್ಲಿ ಸ್ಥಳ ಗುರುತಿಸಲಾಗಿದೆ. ಹಾಗೆಯೇ ಆ ರೀತಿಯ ಪ್ರದೇಶಗಳನ್ನು ಗುರುತಿಸಲಾಗಿದೆ”, ಎಂದು ತಿಳಿಸಿದರು.
ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 996 ಕೋಟಿ ರೂಪಾಯಿ ಹಣವಿದೆ. ಎನ್ ಡಿ ಆರ್ ಎಫ್ ತಂಡ ಅದಾಗಲೇ ಆಗಮಿಸಿದ್ದು, ಉಡುಪಿ, ಚಿಕ್ಕಮಗಳೂರು ಹಾಗೂ ಕಾರವಾರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಆಗಿರುವ ಅನಾಹುತಗಳ ಕುರಿತು ಕೇಂದ್ರದ ತಂಡಕ್ಕೆ ಮಾಹಿತಿ ನೀಡಲಾಗುತ್ತದೆ. ಕಳೆದ ಬಾರಿ ನೆರೆಹಾವಳಿಯಾದಾಗ ಮನೆ ಬಿದ್ದವರಿಗೆ ರೂ.5 ಲಕ್ಷ, ಭಾಗಶಃ ಮನೆ ಬಿದ್ದವರಿಗೆ ರೂ.1 ಲಕ್ಷ ಹಾಗೂ ಮನೆಗೆ ನೀರು ನುಗ್ಗಿದರೆ ರೂ.10 ಸಾವಿರ ಕೊಡಲಾಗಿತ್ತು. ಈ ಬಾರಿಯೂ ಅದನ್ನೇ ಅನುಸರಿಸಲಾಗುತ್ತದೆ. ಮೊನ್ನೆ ಟೌಟೆ ಚಂಡಮಾರುತದಲ್ಲಿ 300 ಮನೆಗಳು ಬಿದ್ದಿದ್ದು, ಅವರಿಗೂ ರೂ.5 ಲಕ್ಷ ಕೊಡಲು ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ,” ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು,”ಕಾಂಗ್ರೆಸ್ ನಲ್ಲಿ ಒಡುಕು ಸಾಮಾನ್ಯವಾಗಿದ್ದು, ಕರ್ನಾಟಕದಲ್ಲಿ ಡಿಕೆ ಕಾಂಗ್ರೆಸ್, ಸಿದ್ದರಾಮಯ್ಯನವರ ಕಾಂಗ್ರೆಸ್ ಎಂದು ಎರಡು ಕಾಂಗ್ರೆಸ್ ಆಗುವ ಮುನ್ಸೂಚನೆಗಳು ಕಾಣಿಸುತ್ತಿವೆ. ಅವರು ಅಧಿಕಾರಕ್ಕಾಗಿ ಒಂದಾಗಿದ್ದಾರೆ ಅಷ್ಟೇ. ನಮ್ಮಲ್ಲಿ ಪಕ್ಷದ ವಿರುದ್ಧ ಮಾತನಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದು ಶತಃ ಸಿದ್ಧ”, ಎಂದು ಪುನರುಚ್ಚರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.