ಗುತ್ತಿಗೆದಾರರ ನೇಮಕ ಮತ್ತಷ್ಟು ವಿಳಂಬ
Team Udayavani, Sep 25, 2019, 3:08 AM IST
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಹೊಸ ಗುತ್ತಿಗೆದಾರರ ನೇಮಕ ಮತ್ತಷ್ಟು ವಿಳಂಬವಾಗಲಿದೆ. ಅ. 1ರಿಂದ ಹೊಸ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡಲಿದ್ದು, ನಗರದಲ್ಲಿನ ತ್ಯಾಜ್ಯ ಕ್ವಾರಿಗಳಿಗೆ ಹೋಗುವುದು ತಪ್ಪಲಿದೆ ಎಂದೇ ಹೇಳಲಾಗಿತ್ತು. ಆದರೆ ಅಕ್ಟೋಬರ್‌ನಲ್ಲಿಯೂ ಬಿಬಿಎಂಪಿಯಿಂದಲೇ ತ್ಯಾಜ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿಯ ವಿಶೇಷ ಆಯುಕ್ತ ರಂದೀಪ್, ಹಸಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಗುತ್ತಿಗೆದಾರರು ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ್ದಾರೆ. ಆಯ್ಕೆಯಾಗಿರುವ ಗುತ್ತಿಗೆದಾರರು ತಮ್ಮಲ್ಲಿರುವ ವಾಹನಗಳ ಮಾಹಿತಿಯನ್ನು ಸರ್ಮಪಕವಾಗಿ ನೀಡದೆ ಇರುವುದರಿಂದ ಕಾರ್ಯಾದೇಶ ನೀಡಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.
ವಾರ್ಡ್ ಮಟ್ಟದಲ್ಲಿಯೇ ತ್ಯಾಜ್ಯ ಸಂಸ್ಕರಣೆ: ಬೆಂಗಳೂರಿನಲ್ಲಿ 2,500 ಟನ್ ಮಿಶ್ರತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ ಶೇ. 35ರಿಂದ 40 ಮಾತ್ರ ತ್ಯಾಜ್ಯ ವಿಂಗಡಣೆಯಾಗುತ್ತಿದೆ. ಹೀಗಾಗಿ ಅವುಗಳ ಸಂಸ್ಕರಣೆ ಕಷ್ಟವಾಗುತ್ತಿದೆ. ಜತೆಗೆ 7 ತ್ಯಾಜ್ಯ ಸಂಸ್ಕರಣಾ ಘಟಕಗಳ ಸಾಮರ್ಥ್ಯ 1,500 ಟನ್ ಆಗಿದ್ದರೂ, 700 ಟನ್ ಮಾತ್ರ ಸಂಸ್ಕರಣೆಯಾಗುತ್ತಿದೆ. ಹೀಗಾಗಿ ಮಿಶ್ರತ್ಯಾಜ್ಯ ವಿಂಗಡಣೆಗೆ ಹೆಚ್ಚಿನ ಒತ್ತು ನೀಡಿ, ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ. ವಾರ್ಡ್ ಮಟ್ಟದಲ್ಲಿಯೇ ಸಣ್ಣ ಪ್ರಮಾಣದ ತ್ಯಾಜ್ಯ ಸಂಸ್ಕರಿಸಲು ಘಟಕ ಸ್ಥಾಪಿಸಲೂ ಯೋಜನೆ ರೂಪಿಸಲಾಗಿದೆ. ಅದರಿಂದ ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ವಾರ್ಡ್‌ನಲ್ಲಿಯೇ ಸಂಸ್ಕರಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಮಿಟಗಾನಹಳ್ಳಿಗೆ ಮಿಶ್ರತ್ಯಾಜ್ಯ: ಬೆಳ್ಳಳ್ಳಿ ಕ್ವಾರಿ ಇನ್ನು ಹತ್ತು ದಿನಗಳಲ್ಲಿ ಭರ್ತಿಯಾಗಲಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ರಂದೀಪ್ ಹೇಳಿದರು. ಬೆಳ್ಳಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತವಾದ ನಂತರ ಮಿಟಗಾನಹಳ್ಳಿ ಕ್ವಾರಿಯಲ್ಲಿ ಮಿಶ್ರತ್ಯಾಜ್ಯ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಬಾಗಲೂರು ಮತ್ತು ಹುಲ್ಲಹಳ್ಳಿ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮನೆಗೆ ಆರ್‌ಐಎಫ್ಡಿ ಕಾರ್ಡ್: ಸಮರ್ಪಕ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಬಿಬಿಎಂಪಿ ಶೀಘ್ರದಲ್ಲಿ ಸ್ಮಾರ್ಟ್ ಕಂಟ್ರೋಲ್ ರೂಂ ತೆರೆಯುವುದಕ್ಕೆ ಮುಂದಾಗಿದೆ. ಇದರ ಮೊದಲ ಭಾಗವಾಗಿ ಮನೆಗಳಿಂದ ತ್ಯಾಜ್ಯ ಸಂಗ್ರಹದ ವಿವರವನ್ನು ನಮೂದಿಸಲು ಮನೆಗಳಲ್ಲಿ ಆರ್‌ಐಎಫ್‌ಡಿ ಕಾರ್ಡ್ ಅಂಟಿಸಲಾಗುತ್ತದೆ. ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳು ಮನೆಗಳಿಗೆ ಅಂಟಿಸಿರುವ ಕಾರ್ಡನ್ನು ಸ್ಕ್ಯಾನ್ ಮಾಡಿ, ವಿಂಗಡಿಸಿದ ತ್ಯಾಜ್ಯ ಪಡೆದಿರುವ ಕುರಿತು ನಮೂದಿಸಬೇಕಿದೆ. ವಿಶಾಖಪಟ್ನಂನಲ್ಲಿ ಈ ಮಾದರಿ ಇದೆ. ಪ್ರಾಯೋಗಿಕವಾಗಿ ಕೆಲ ವಾರ್ಡ್ ಅಥವಾ ಬಡಾವಣೆಗಳಲ್ಲಿ ಈ ಮಾದರಿ ವ್ಯವಸ್ಥೆ ಜಾರಿಗೆ ಚಿಂತಿಸಲಾಗಿದೆ. ಇದರಿಂದ ತ್ಯಾಜ್ಯ ಪ್ರಮಾಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಸದಿಂದ ವಿದ್ಯುತ್ ತಯಾರಿಕೆಗೆ ಗ್ರೀನ್ ಸಿಗ್ನಲ್: ಕಸದಿಂದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೊರವಲಯದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಈಗಾಗಲೇ ಟೆಂಡರ್ ನೀಡಲಾಗಿದ್ದು, ನಗರದ ನಾಲ್ಕು ಭಾಗಗಳಲ್ಲಿ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು. ಚಿಕ್ಕನಾಗಮಂಗಲ- ತ್ರೀ ವೇಸ್ಟ್ ಕಂಪನಿ, ಕೆಪಿಸಿಎಲ್- ಬಿದಡಿ ಸಂಸ್ಥೆ. ದೊಡ್ಡಬಿದಿರೆಕಲ್ಲು, – ಇಂಡಿಯಂ ಸಂಸ್ಥೆ, ಕನ್ನಹಳ್ಳಿ – ಸತರಾಂ ಸಂಸ್ಥೆಗಳು ವೇಸ್ಟು ಟು ಎನರ್ಜಿ ಪ್ಲಾಂಟ್‌ನಲ್ಲಿ ಉತ್ಪಾದನೆಯಾಗಲಿದೆ.
ಕಸ ನಿರ್ವಹಣೆ ಪ್ರತ್ಯೇಕ ಕಾರ್ಪೊರೇಷನ್: ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಾರ್ಪೊರೇಷನ್ ರಚನೆ ಮಾಡುವುದಕ್ಕೆ ಸರ್ಕಾರ ಸೂಚಿಸಿದ್ದು, ಈ ಸಂಬಂಧ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು ಪಾಲಿಕೆಯ ಅಂಗವಾಗಿಯೇ ಉಳಿಯಲಿದೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಇರುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಹೊಸ ಟೆಂಡರ್ ಪ್ರಕ್ರಿಯೆ ಕೆಲವು ತಾಂತ್ರಿಕ ಕಾರಣಗಳಿಂದ ತಡವಾಗಿದ್ದು, ಅ. 1ರಿಂದ ಹೊಸ ಗುತ್ತಿಗೆದಾರರ ನೇಮಕ ಸಾಧ್ಯವಿಲ್ಲ. ಹೊಸ ಟೆಂಡರ್ ಪ್ರಕ್ರಿಯೆ ಮುಗಿಯುವ ವರೆಗೆ ಬಿಬಿಎಂಪಿಯಿಂದಲೇ ತ್ಯಾಜ್ಯ ನಿರ್ವಹಣೆ ಮಾಡಲಾಗುವುದು.
-ರಂದೀಪ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ)
***
ಪ್ಲಾಸ್ಟಿಕ್ ತಡೆಗೆ ಪ್ಲಾಗ್ ರನ್ ಅಭಿಯಾನ
ಬೆಂಗಳೂರು: ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.2ಕ್ಕೆ ಬಿಬಿಎಂಪಿ ವ್ಯಾಪ್ತಿಯ ಆಯ್ದ 50 ಪ್ರದೇಶಗಳಲ್ಲಿ ಪ್ಲಾಗ್ ರನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಹೇಳಿದರು. ಮಂಗಳವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ, ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ಸಹಯೋಗದಲ್ಲಿ “ಪ್ಲಾಗ್ ರನ್’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವವರು 2 ಕಿ.ಮೀ. ದೂರ ಓಡುವುದಲ್ಲದೆ, ರಸ್ತೆಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಸ್ವತ್ಛತಾ ಸೇವಾ ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದು, ಇದರಡಿ ಅ. 2ರಂದು ನಗರದ 50 ಕಡೆಗಳಲ್ಲಿ ಸಾವಿರಾರು ಮಂದಿ ಸೇರಿ ಓಟದ ಜತೆಗೆ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಿದ್ದಾರೆ. ಹೀಗೆ ಸಂಗ್ರಹ ಮಾಡುವ ಪ್ಲಾಸ್ಟಿಕ್ ಅನ್ನು ಹಸಿರುದಳದವರು ಸ್ವೀಕರಿಸಲಿದ್ದು, ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿದ್ದಾರೆ ಎಂದರು. ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದ್ದರೂ ಸಂಪೂರ್ಣವಾಗಿ ನಿಷೇಧವಾಗಿಲ್ಲ.
2016ರಿಂದ ಇಲ್ಲಿಯವರಿಗೆ ಬಿಬಿಎಂಪಿ ವಿವಿಧ ಕಡೆ ದಾಳಿ ಮಾಡಿ 32 ಸಾವಿರ ಕೆ.ಜಿ. ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಗಿದ್ದು, 3.5 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಅಭಿಯಾನಕ್ಕೆ ಬಿಬಿಎಂಪಿಯಿಂದ 15 ಲಕ್ಷರೂ.ಗಳನ್ನು ನೀಡಲಾಗಿದೆ. ಒಂದು ವಾರಗಳ ಕಾಲ ನಗರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವಂತೆ ಕಸ ಸಂಗ್ರಹ ಮಾಡುವ ಆಟೋ ಟಿಪ್ಪರ್‌ಗಳವರಿಗೆ ಸೂಚಿಸಲಾಗಿದೆ. ಇದರಿಂದ ನಗರದಲ್ಲಿ ಒಂದು ಬಾರಿ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್ ಪ್ರಮಾಣ ಎಷ್ಟಿದೆ, ಅನವಶ್ಯಕವಾಗಿ ನಗರದಲ್ಲಿ ಎಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎನ್ನುವುದು ತಿಳಿಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಚಾಲಕ ರಾಮಕೃಷ್ಣ ಗಣೇಶ್ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ 7 ಸಾವಿರ ಮಂದಿ ಭಾಗಿಯಾಗಿದ್ದರು. ಈ ವರ್ಷವೂ ಇನ್ನೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. ಈಗಾಗಲೇ 5 ಸಾವಿರ ಜನ ಈ ಅಭಿಯಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಬಾರಿ ಕೊಳಚೆ ಪ್ರದೇಶ, ಮಾರುಕಟ್ಟೆ ಪ್ರದೇಶಗಳಲ್ಲೂ ಪ್ಲಾಗ್ ರನ್ ಯೋಜನೆ ಹಮ್ಮಿಕೊಳ್ಳಲಾಗುವುದು. ಆಸಕ್ತರು www.indiaplog.run ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಣಿ ಮಾಡಿಕೊಳ್ಳಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.