ರಫ್ತು ಸಂಸ್ಥೆಗಳ ಮಹಾಮಂಡಳಕ್ಕೆ ಗಣೇಶ್ ಕುಮಾರ್ ಗುಪ್ತಾ ಅಧ್ಯಕ್ಷ
Team Udayavani, Apr 5, 2017, 12:27 PM IST
ಬೆಂಗಳೂರು: ಭಾರತೀಯ ರಫ್ತು ಸಂಸ್ಥೆಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗಣೇಶ್ ಕುಮಾರ್ ಗುಪ್ತಾ ಅಧಿಕಾರ ಸ್ವೀಕರಿಸಿದ್ದಾರೆ. ಮಹಾಮಂಡಳದ ಸಭೆಯಲ್ಲಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜುಲೈನಿಂದ ಏಕರೂಪದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದ್ದು, ಇಂತಹ ಸಂದರ್ಭದಲ್ಲಿ ರಫ್ತು ವ್ಯವಹಾರಕ್ಕೆ ಅತಿ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ ಅವರು, ಉನ್ನತ ತಂತ್ರಜ್ಞಾನದ ರಫ್ತಿನಲ್ಲಿ ಭಾರತದ ಪಾಲು ಕಡಿಮೆ ಇರುವುದರಿಂದ ಆ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಎಂದರು.
ಭಾರತದ ರಫ್ತುದಾರಿಕೆಯಲ್ಲಿನ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರವರ್ಧನೆ ಮಾಡಲು ಮತ್ತು ಭಾರತೀಯ ರಫ್ತು ದಾರರಿಗೆ ಅನುಕೂಲ ಮಾಡಿಕೊಡಲು ಮಹಾಮಂಡಳಿಯು ಮಾರು ಕಟ್ಟೆ ಪ್ರವರ್ಧನೆ ತಂತ್ರೋಪಾಯಗಳನ್ನು ರೂಪಿಸಲು ಯೋಜಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪದ್ಮಶ್ರೀ ಎಂ.ರಫೀಕ್ ಅಹಮದ್ ಅವರನ್ನು ಮಹಾಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.