ಗಲ್ಲಿ ಗಲ್ಲಿಯಲ್ಲೂ ಗಾರ್ಬೇಜ್!
Team Udayavani, Oct 8, 2017, 11:05 AM IST
ಬೆಂಗಳೂರು: ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಮರ್ಪಕ ತ್ಯಾಜ್ಯ ವಿಲೇವಾರಿ ಕಷ್ಟವಾಗಿದ್ದು, ಮತ್ತೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುವ ಆತಂಕ ಮೂಡಿಸಿದೆ. ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಾಲಿಕೆಗೆ ತ್ಯಾಜ್ಯ ವಿಲೇವಾರಿ ಸವಾಲಾಗಿದೆ.
ಪಾಲಿಕೆಯ ತ್ಯಾಜ್ಯ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಜತೆಗೆ ಸಂಪರ್ಕ ರಸ್ತೆ ಸಮಸ್ಯೆಯಿಂದಾಗಿ ಕ್ವಾರಿಗಳಲ್ಲಿ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇದರಿಂದ ಕಸ ನಗರದಲ್ಲಿಯೇ ಉಳಿಯುತ್ತಿದ್ದು, ಮಳೆಯಿಂದ ವಿಲೇವಾರಿಯಾಗದೆ ಉಳಿದ ತ್ಯಾಜ್ಯ ಕೊಳೆಯುತ್ತಿದೆ.
ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ದಿಢೀರ್ ಮುಷ್ಕರ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಹೆಚ್ಚುವರಿ ತ್ಯಾಜ್ಯದಿಂದಾಗಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಇದರಿಂದಾಗಿ ಪಾಲಿಕೆಯ ಹಲವೆಡೆ ರಾಶಿ ರಾಶಿ ತ್ಯಾಜ್ಯ ಬಿದ್ದಿದ್ದು, ಶೀಘ್ರ ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಕ್ರಮಕೈಗೊಳ್ಳದಿದ್ದರೆ ಮತ್ತೂಮ್ಮೆ ಉದ್ಯಾನ ನಗರಿ “ಗಾರ್ಬೇಜ್ ಸಿಟಿ’ ಎಂಬ ಅಪಖ್ಯಾತಿಗೆ ಒಳಗಾಗಬೇಕಾಗುತ್ತದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಏಳು ಸಂಸ್ಕರಣಾ ಘಟಕಗಳಲ್ಲಿ ನಿತ್ಯ 2350 ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿದ್ದರೂ, ಘಟಕಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಘಟಕಗಳನ್ನು ಮುಚ್ಚುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಘಟಕಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲಾಗದೆ ಬಿಬಿಎಂಪಿ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.
ಮಳೆಗೆ ಕೈಕೊಟ್ಟ ಕ್ವಾರಿಗಳು: ಬಿಬಿಎಂಪಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಹಲವು ಕಡೆಗಳಲ್ಲಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು, ನಗರದ ಹೊರವಲಯಗಳಲ್ಲಿನ ಕಲ್ಲು ಕ್ವಾರಿಗಳಲ್ಲಿ ತ್ಯಾಜ್ಯ ಸುರಿಯಲು ಕ್ರಮಕೈಗೊಂಡಿದ್ದಾರೆ. ಆದರೆ, ನಗರದಲ್ಲಿ ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ದಾಖಲೆಯ ಮಳೆಯಿಂದ ಕ್ವಾರಿಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಪೂರ್ಣವಾಗಿ ಗದ್ದೆಯಂತಾಗಿವೆ. ಇದರಿಂದ ಕಾಂಪ್ಯಾಕ್ಟರ್‌ಗಳು ಕ್ವಾರಿಗಳ ಬಳಿಗೆ ಸಂಚರಿಸಲಾಗದೆ, ಸಮೀಪದಲ್ಲಿಯೇ ಸುರಿಯಲಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ನಾಗರಿಕರಿಂದ ಸಂಗ್ರಹಿಸಿದ ತ್ಯಾಜ್ಯವೂ ವಿಲೇವಾರಿಯಾಗದೆ ಉಳಿಯುತ್ತಿದೆ.
ಪ್ರತಿಭಟನೆ, ಹಬ್ಬದ ಪರಿಣಾಮ ಹೆಚ್ಚು: ಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ವೇತನ ಪಾವತಿ ವಿರೋಧಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ದಿಢೀರ್ ಪ್ರತಿಭಟನೆಗೆ ಮುಂದಾಗಿ, ನಗರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಸಾವಿರಾರು ಟನ್ ತ್ಯಾಜ್ಯ ರಸ್ತೆಗಳಲ್ಲಿಯೇ ಉಳಿಯುವಂತಾಗಿತ್ತು. ಅದರ ನಂತರವೇ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದಿಂದ ಸಾವಿರಾರು ಟನ್ ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಅದರ ವಿಲೇವಾರಿಗೆ ಪೌರಕಾರ್ಮಿಕರು ಹರಸಾಹಸ ಪಡೆಬೇಕಾಗಿದೆ.
ಕಾಲುವೆ ಸೇರುತ್ತಿದೆ ತ್ಯಾಜ್ಯ: ಸಮರ್ಪಕವಾಗಿ ವಿಲೇವಾರಿಯಾಗದ ತ್ಯಾಜ್ಯ ಬಹುತೇಕ ಕಡೆಗಳಲ್ಲಿ ರಾಜಕಾಲುವೆಗಳನ್ನು ಸೇರುತ್ತಿದೆ. ಹೀಗೆ ಕಾಲುವೆಗಳಲ್ಲಿ ಸೇರುತ್ತಿರುವ ತ್ಯಾಜ್ಯ ನೀರು ಹರಿಯಲು ಅಡ್ಡಿಯಾಗುತ್ತಿದ್ದು, ಮಳೆ ಹೆಚ್ಚಾದಾಗ ನೀರು ಉಕ್ಕಿ ಹರಿದು ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿಸಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ.
ತ್ಯಾಜ್ಯ ಸಂಗ್ರಹಿಸುತ್ತಿಲ್ಲ: ಪಾಲಿಕೆಯ ಹಲವಾರು ವಾರ್ಡ್‌ಗಳಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯದಿರುವುದರಿಂದ ಸಾರ್ವಜನಿರು ಅನಿವಾರ್ಯವಾಗಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಸುರಿಯಬೇಕಾಗಿದೆ. ಇದರಿಂದಾಗಿ ನಗರದಲ್ಲಿ ಬ್ಲಾಕ್‌ಸ್ಪಾರ್ಟ್‌ಗಳು ಸೃಷ್ಟಿಯಾಗುತ್ತಿದೆ. ಬ್ಲಾಕ್‌ಸ್ಪಾಟ್‌ಗಳ ಬಳಿ ಬೀದಿ ನಾಯಿಗಳು ಹಾಗೂ ಬಿಡಾಡಿ ಹಸುಗಳು ಜಮಾಯಿಸುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.
ಗುತ್ತಿಗೆದಾರರ ದಿಢೀರ್ ಪ್ರತಿಭಟನೆ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದು, ಅದರ ವಿಲೇವಾರಿಗೆ ಕಾಲಾವಕಾಶ ಬೇಕಾಗುತ್ತದೆ. ಮಳೆಯಿಂದಾಗಿ ಕ್ವಾರಿಗಳಿಗೆ ಕಾಂಪ್ಯಾಕ್ಟರ್ ಹೋಗಲು ಕಷ್ಟವಾಗುತ್ತಿರುವುದರಿಂದ ತ್ಯಾಜ್ಯ ವಿಲೇವಾರಿ 3-4 ಗಂಟೆಗಳು ತಡವಾಗುತ್ತಿದ್ದು, ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹೆಚ್ಚಿನ ತ್ಯಾಜ್ಯ ಕಳುಹಿಸಲಾಗುತ್ತಿದೆ.
-ಸಫ್ರಾಜ್ ಖಾನ್, ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ
ಪೌರಕಾರ್ಮಿಕರು ಒಂದು ತಿಂಗಳಿನಿಂದ ತ್ಯಾಜ್ಯ ಸಂಗ್ರಹಿಸಲು ಬರುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಅನಿವಾರ್ಯವಾಗಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದು, ಪಾಲಿಕೆಯ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
-ಅರುಣ್ ಕುಮಾರ್, ನಾಗಸಂದ್ರ ನಿವಾಸಿ
* ವೆಂ. ಸುನೀಲ್ ಕುಮಾರ್