ಕೋವಿಡ್ 19 ವೈರಸ್ ಸೋಂಕು : ಅತಂತ್ರದಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು
Team Udayavani, Mar 21, 2020, 11:55 AM IST
ಬೆಂಗಳೂರು: ವೇತನ, ಕೆಲಸದ ಭದ್ರತೆ ಹಾಗೂ ಸುರಕ್ಷತೆಯ ಸಮಸ್ಯೆಗಳಲ್ಲಿ ಸದಾ ತೊಳಲಾಡುವ ಗಾರ್ಮೆಂಟ್ಸ್ ಕಾರ್ಮಿಕರಿಗೆ “ಕೋವಿಡ್ 19 ವೈರಸ್’ ಭೀತಿ ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.
ಮುಂಜಾಗ್ರತೆ, ಸುರಕ್ಷತೆ ಬೇಕೆಂದರೆ ಕೆಲಸಬಿಡಬೇಕು. ಆದರೆ, ಕೆಲಸ ಬಿಟ್ಟರೆ ಕೈಗೆ ವೇತನ ಸಿಗುವುದು ಅನುಮಾನ. ವೇತನ ಸಹಿತ ರಜೆ ಕೊಡಿ ಎಂದು ಗಾರ್ಮೆಂಟ್ಸ್ ಕಾರ್ಮಿಕರು ಬೇಡಿಕೆ ಇಟ್ಟರೆ, ರಜೆ ಬೇಕಿದ್ದರೆ ತಗೋಳಿ ಆದರೆ, ವೇತನ ಮಾತ್ರ ಕೇಳಬೇಡಿ ಎಂದು ಮಾಲೀಕರು ಹೇಳುತ್ತಿದ್ದಾರೆ.
ಹೀಗಾಗಿ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಗಾರ್ಮೆಂಟ್ಸ್ ಗಳಲ್ಲಿ ದುಡಿಯುತ್ತಿರುವ ಲಂಕ್ಷಾಂತರ ಕಾರ್ಮಿಕರು ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಬೆಂಗಳೂರು, ಮೈಸೂರು, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ 200ಕ್ಕೂ ಹೆಚ್ಚು ಗಾರ್ಮೆಂಟ್ಸ್ ಕಾರ್ಖಾನೆಗಳಿದ್ದು, ಅದರಲ್ಲಿ 7ರಿಂದ 8 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಅದರಂತೆ ಐಟಿ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳು ಮತ್ತು ಉದ್ದಿಮೆಗಳು ‘ಮನೆಯಿಂದಲೇ ಕೆಲಸ’ ಪದ್ಧತಿಯನ್ನು ಜಾರಿಗೆ ತಂದಿವೆ. ಆದರೆ, ಗಾರ್ಮೆಂಟ್ಸ್ ಕಾರ್ಮಿಕರಿಗೆ ಈ ಅವಕಾಶ ಲಭಿಸಿಲ್ಲ. ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಶುಚಿತ್ವ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಒಂದು ಗಾರ್ಮೆಂಟ್ಸ್‌ನಲ್ಲಿ ದಿನಕ್ಕೆ ನೂರಾರು, ಸಾವಿರಾರು ಮಂದಿ ಏಕಕಾಲಕ್ಕೆ ಕೆಲಸ ಮಾಡುತ್ತಾರೆ.
ಅಕ್ಕ-ಪಕ್ಕ ಕೆಲಸ ಮಾಡಬೇಕಾಗಿರುವುದರಿಂದ ‘ಸೋಶಿಯಲ್ ಡಿಸ್ಟೆನ್ಸ್’ ಅಸಾಧ್ಯ. ಆದ್ದರಿಂದ ಹೇಗೂ ಸರ್ಕಾರ ರಜೆ ಘೋಷಿಸಿದೆ. ಅದರಂತೆ ನಮಗೂ ವೇತನ ಸಹಿತ ರಜೆ ಕೊಡಿ ಎಂದು ಕಳೆದ ವಾರದಿಂದ ಮನವಿ ಮಾಡಲಾಗಿದೆ. ಆದರೆ, ಕೆಲವರು ರಜೆ ಕೊಡಲು ಒಪ್ಪಿಕೊಂಡಿದ್ದು, ವೇತನ ರಹಿತ ರಜೆ ಕೊಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ರಜೆ ಕೊಡಲ್ಲ ಎಂದಿದ್ದಾರೆ ಎಂದು ಗಾರ್ಮೆಂಟ್ಸ್ ಕಾರ್ಮಿಕರ ಸಂಘಟನೆಗಳ ಮುಖಂಡರು ಅಳಲು ತೋಡಿಕೊಂಡಿದ್ದಾರೆ.
ನಮ್ಮ ಕಷ್ಟ ಯಾರಿಗೆ ಹೇಳ್ಳೋದು: ಪರಿಸ್ಥಿ ಗಂಭೀರತೆ ನಮಗೂ ಗೊತ್ತಿದೆ. ಹಾಗಾಗಿ, ಮುಂಜಾಗ್ರತಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಮುಂದೆ ಯಾವ ಪರಿಸ್ಥಿತಿ ಹೇಳಲಾಗದು. ಆದ್ದರಿಂದ ರಜೆಗಳ ವಿಚಾರದಲ್ಲಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ರಜೆ ನೀಡಿದರೆ ತಯಾರಿಕೆ ಕುಸಿಯುತ್ತದೆ. ಉದ್ದಿಮೆಗೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ವೈರಸ್ ಭೀತಿಯಿಂದ ಮಾರುಕಟ್ಟೆ ಬಿದ್ದು ಹೋಗಿದೆ. ಈ ಸ್ಥಿತಿಯಲ್ಲಿ ರಜೆ ಜತೆ ಸಂಬಳವನ್ನೂ ನೀಡಿದರೆ ನಾವು ಬೀದಿಗೆ ಬರಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಗಾರ್ಮೆಂಟ್ಸ್ ಕಾರ್ಖಾನೆ ಪ್ರತಿನಿಧಿಯೊಬ್ಬರು ತಿಳಿಸಿದರು.
“ಗಾರ್ಮೆಂಟ್ಸ್ ಕಾರ್ಮಿಕರು ಅಪಾಯದ ಸ್ಥಿತಿಯಲ್ಲಿದ್ದಾರೆ. ಉತ್ಪಾದನಾ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಸುರಕ್ಷತೆ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಕೇರಳದಂತೆ ರಾಜ್ಯದಲ್ಲಿಯೂ ಸುರಕ್ಷತಾ ಕ್ರಮ ವಹಿಸಬೇಕು.
–ಎಸ್. ವರಲಕ್ಷ್ಮೀ, ಸಿಐಟಿಯು ಅಧ್ಯಕ್ಷೆ
“ಗಾರ್ಮೆಂಟ್ಸ್‌ಗಳಲ್ಲಿ ಸ್ವಚ್ಛತೆ ಮತ್ತು ಮುಂಜಾಗ್ರತೆಯ ಜೊತೆಗೆ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಈವರೆಗೆ ಮೂರು ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಅಧಿಕಾರಿಗಳನ್ನೂ ಕಳುಹಿಸಿ ಸಭೆಗಳನ್ನು ನಡೆಸಲಾಗಿದೆ. ರಜೆಯ ವಿಚಾರ ಗಾರ್ಮೆಂಟ್ಸ್ ಗಳಿಗೆ ಬಿಟ್ಟಿದ್ದು, ವೇತನ ಸಹಿತ ರಜೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
–ಶಿವರಾಮ್ ಹೆಬ್ಟಾರ್, ಕಾರ್ಮಿಕ ಸಚಿವ.
–ರಫೀಕ್ ಅಹ್ಮದ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.