ಗೌರಿ ಹತ್ಯೆ ಪ್ರಕರಣ ಆರೋಪಿಗಳು ಮತ್ತೆ ಎಸ್‌ಐಟಿ ವಶಕ್ಕೆ
Team Udayavani, Jun 12, 2018, 11:44 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಎಸ್‌ಐಟಿ ಕಸ್ಟಡಿ ಅವಧಿಯನ್ನು ಜೂ.14ರವರೆಗೆ ವಿಸ್ತರಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿಗಳಾದ ಪ್ರವೀಣ್, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಅವರ 10 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ನ್ಯಾಯಾಲದ ಮುಂದೆ ಹಾಜರುಪಡಿಸಿ, ಮತ್ತೆ ಕಸ್ಟಡಿಗೆ ನೀಡುವಂತೆ ಕೋರಿದರು.
ಸರ್ಕಾರಿ ಅಭಿಯೋಜಕರಾದ ನಿರ್ಮಲಾ ರಾಣಿ ಅವರು ವಾದ ಮಂಡಿಸಿ, ಸದ್ಯ ಎಸ್‌ಐಟಿ ವಶದಲ್ಲಿರುವ ಆರೋಪಿಗಳು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶೂಟರ್‌ಗಳನ್ನು ನೇಮಿಸಿರುವ ವಿಚಾರ ಬಂಧಿತರಿಗೆ ಗೊತ್ತಿದೆ. ಜತೆಗೆ ಶಿಕಾರಿಪುರದ ಪ್ರವೀಣ್ ಅಲಿಯಾಸ್ ಸುಜಿತ್ ಕುಮಾರ್, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್,
ವಿಜಯಪುರದ ಮನೋಹರ್ ದುಂಡಪ್ಪ ಯವಡೆ ಬಳಿ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಆರೋಪಿಗಳು ಹತ್ಯೆಗೂ ಮೊದಲು ಬೆಳಗಾವಿ, ಮೈಸೂರು ಸೇರಿ ಕೆಲವಡೆ ಶೂಟಿಂಗ್ ತರಬೇತಿ ಪಡೆದುಕೊಂಡಿದ್ದಾರೆ. ಆ ಸ್ಥಳಗಳಿಗೆ ಆರೋಪಿಗಳನ್ನು ಕರೆದೊಯ್ಯಬೇಕು. ಅಲ್ಲದೆ, ಭೂಗತನಾಗಿರುವ ಮತ್ತೂಬ್ಬ ಆರೋಪಿ ನಿಹಾರ್ ಅಲಿಯಾಸ್ ದಾದಾನನ್ನು ಬಂಧಿಸಬೇಕಿದೆ. ಹೀಗಾಗಿ ಆರೋಪಿಗಳನ್ನು ಇನ್ನು ಕೆಲ ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಮುಚ್ಚಿದ ಲಕೋಟೆಯಲ್ಲಿ ವರದಿ: ಇನ್ನೊಂದೆಡೆ ಎಸ್‌ಐಟಿ ಅಧಿಕಾರಿಗಳು ಇದುವರೆಗಿನ ತನಿಖಾ ಹಂತದ ಪ್ರಮುಖ ಅಂಶಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ, ಹೆಚ್ಚಿನ ತನಿಖೆಗಾಗಿ ಮತ್ತೆ ಆರೋಪಿಗಳನ್ನು ಎಸ್‌ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪಿಗಳ ಪರ ವಕೀಲ ವೀರೇಂದ್ರ, ಆರೋಪಿಗಳನ್ನು ಮತ್ತೂಮ್ಮೆ ಎಸ್‌ಐಟಿ ವಶಕ್ಕೆ ನೀಡದಂತೆ ಮನವಿ ಮಾಡಿದರಲ್ಲದೆ, ವಿಚಾರಣೆ ವೇಳೆ ಆರೋಪಿಗಳನ್ನು ಭೇಟಿಯಾಗಲು ಆರೋಪಿ ಪರ ವಕೀಲರಿಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು. ಈ ಹಿನ್ನೆಲೆಯಲ್ಲಿ ವಕೀಲರ ಭೇಟಿಗೆ ಅವಕಾಶ ಕಲ್ಪಿಸುವಂತೆ ನ್ಯಾಯಾಲಯ ಎಸ್‌ಐಟಿ ಅಧಿಕಾರಿಗಳಿಗೆ ಸೂಚಿಸಿತು.
ಸಿಐಡಿ ವಶಕ್ಕೆ?: ಪ್ರೊ.ಎಂ.ಎಂ.ಕಲಬುರಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಕಲಬುರಗಿ ಅವರನ್ನು ಹತ್ಯೆಗೈಯುವ ವೇಳೆ ಹಂತಕನ ಜತೆಯಲ್ಲಿದ್ದ ವ್ಯಕ್ತಿಗೂ ಮಹಾರಾಷ್ಟ್ರದ ಅಮೋಲ್ ಕಾಳೆಗೂ ಹೋಲಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಬಿಐ ತಂಡ ನಗರಕ್ಕೆ: ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ ಪನ್ಸಾರೆ ಮತ್ತು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕೂಡ ಬೆಂಗಳೂರಿಗೆ ಆಗಮಿಸಿದ್ದು, ಆ ಎರಡು ಕೊಲೆಗಳ ಬಗ್ಗೆ ಆರೋಪಿಗಳನ್ನು ವಿಚಾರಣೆಗೊಳಪಡಿಸಲಿದೆ. ಮೂಲಗಳ ಪ್ರಕಾರ ಈಗಾಗಲೇ ಸಿಬಿಐ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಎಸ್‌ಐಟಿ ವಿರುದ್ಧ ಆರೋಪ: ಎಸ್‌ಐಟಿ ಅಧಿಕಾರಿಗಳು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ನ್ಯಾಯಾಧೀಶರ ಎದುರೇ ಆರೋಪಿ ಮನೋಹರ್ ದುಂಡೆಪ್ಪ ಯಡವೆ ಆರೋಪ ಮಾಡಿದ. ಬೆಳಗ್ಗೆ ನಾಲ್ಕು ಗಂಟೆಗೆ ಬಂದು ನನ್ನನ್ನು ಎಬ್ಬಿಸುತ್ತಾರೆ. ಅವರೇ ಪ್ರಶ್ನೆ ಕೇಳಿ, ನಾನು ಉತ್ತರಿಸದಿದ್ದರೂ ಅವರೇ ಉತ್ತರ ಬರೆದುಕೊಂಡು ಬಂದು ಸಹಿ ಹಾಕು ಎನ್ನುತ್ತಾರೆ.
ಇದಕ್ಕೆ ನಿರಾಕರಿಸಿದರೆ ಹೊಡೆಯುತ್ತಾರೆ. ಹಗಲು-ರಾತ್ರಿ ಪಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾರೆ ಎಂದು ಆರೋಪಿಸಿದ. ಅಲ್ಲದೆ, ಭಗವಾನ್ ಹತ್ಯೆಗೆ ಸಂಚು ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳೇ ಗೌರಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆಯೇ ಎಂದು ಮನೋಹರ್ ನ್ಯಾಯಾಧೀಶರನ್ನು ಪ್ರಶ್ನಿಸಿದ ಪ್ರಸಂಗವೂ ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.