ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ
ಮೂರು ದಿನಗಳ ಭಾರತೀಯ ಸೇನೆಯ ಸುವರ್ಣ ಮಹೋತ್ಸವದಲ್ಲಿ ಅಜಯ್ ಕುಮಾರ್ ಸಲಹೆ
Team Udayavani, Oct 23, 2021, 10:45 AM IST
Representative Image used
ಬೆಂಗಳೂರು: ಐತಿಹಾಸಿಕ ಯುದ್ಧದ ವಿಜಯೋತ್ಸವದ ಜತೆಗೆ ಭವಿಷ್ಯದಲ್ಲಿ ಎದುರಾಗಲಿರುವ ತಂತ್ರಜ್ಞಾನ ಆಧಾರಿತ ಯುದ್ಧಗಳನ್ನು ಎದುರಿಸಲು ನಾವು ಸಜ್ಜಾಗಬೇಕಿದ್ದು, ಈ ನಿಟ್ಟಿನಲ್ಲಿ ನಮ್ಮ ನೀತಿಗಳಲ್ಲಿ ಬದಲಾವಣೆಗಳು ಆಗಬೇಕಿದೆ ಎಂದು ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದರು.
ಯಲಹಂಕ ವಾಯುನೆಲೆಯಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ ಭಾರತೀಯ ಸೇನೆಯ ಸುವರ್ಣ ಮಹೋತ್ಸವದಲ್ಲಿ “ಯುದ್ಧದ ಪೂರ್ವಸಿದ್ಧತೆ’ ಕುರಿತು ಮಾತನಾಡಿದರು. ನಾವು ಇಂದು ಅಸಾಂಪ್ರದಾಯಿಕ ಯುದ್ಧ ನೀತಿ ಗಳನ್ನು ಎದುರಿಸುತ್ತಿದ್ದೇವೆ.
ಕೃತಕ ಬುದ್ಧಿಮತ್ತೆ, ರೋಬೊ ಟಿಕ್ಸ್ ಇನ್‌ಫಾರ್ಮೇಷನ್, ಸೈಬರ್ ಮತ್ತು ಬಾಹ್ಯಾಕಾಶ ಆಧಾರಿತ ಯುದ್ಧ ತಂತ್ರಗಳು ಈಗಿರುವ ದೊಡ್ಡ ಸವಾಲುಗಳು. ಈ ನಿಟ್ಟಿನಲ್ಲಿ ನೆರೆಯ ಚೀನಾ ಒಂದು ಹೆಜ್ಜೆ ಮುಂದಿದ್ದು, ಅದು ನಡೆಸುತ್ತಿರುವ ತಂತ್ರಜ್ಞಾನ ಆಧಾರಿತ ಪ್ರಯೋಗಗಳನ್ನು ನಿರ್ಲಕ್ಷಿಸುವಂತಿಲ್ಲ ಎಂದ ಅವರು, ಅಮೆರಿಕ ನಂತರ ಅತಿ ಹೆಚ್ಚು 281 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಚೀನಾ. ಅದು ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ತನ್ನ ಸೇನಾ ಸಾಮರ್ಥ್ಯವನ್ನು ಸದ್ದಿಲ್ಲದೆ ವೃದ್ಧಿಸಿಕೊಳ್ಳುತ್ತಿದೆ.
ಭಾರತವು 33 ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದರು. ಚೀನಾ 2035ರ ವೇಳೆಗೆ ಸೇನೆಯನ್ನು ಸಂಪೂರ್ಣ ಆಧುನೀಕರಣಗೊಳಿಸುವುದು ಹಾಗೂ 2049ಕ್ಕೆ ವಿಶ್ವದ ಅತ್ಯುನ್ನತ ದರ್ಜೆಯ ಸೇನಾಬಲದ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆಗಳನ್ನೂ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡ ತಂತ್ರಜ್ಞಾನ ಆಧಾರಿತ ಯುದ್ಧನೀತಿಗಳನ್ನು ಎದುರಿಸಲು ಸನ್ನದ್ಧರಾಗಬೇಕಿದೆ ಎಂದು ಹೇಳಿದರು.
ದತ್ತಾಂಶ ಕಳವು ಸೇರಿದಂತೆ ಹಲವು ರೀತಿಯ ಅಸಾಂಪ್ರದಾಯಿಕ ಯುದ್ಧಗಳು ದೇಶದ ಆರ್ಥಿಕತೆ ಸೇರಿದಂತೆ ವಿವಿಧ ಪ್ರಕಾರದಲ್ಲಿ ಬಿಕ್ಕಟ್ಟು ಸೃಷ್ಟಿ ಸುತ್ತವೆ. ಈ ನಿಟ್ಟಿನಲ್ಲಿ ತಂತ್ರಜ್ಞಾನದ ಪಾತ್ರ ಬಹು ಮುಖ್ಯವಾಗಿದೆ. ಇದನ್ನು ಮನಗಂಡು ಕಳೆದ ಐದು ವರ್ಷಗಳಲ್ಲಿ ಭಾರತೀಯ ವಾಯುಸೇನೆ ಆಧುನೀಕರಣ ಕ್ಕಾಗಿ ಎರಡೂವರೆ ಲಕ್ಷ ಕೋಟಿ ರೂ. ನೀಡಲಾಗಿದೆ.
ಇದು ಅದರ ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ದುಪ್ಪಟ್ಟು ಆಗಲಿದೆ. ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಹೊಸ ತಂತ್ರಜ್ಞಾನಗಳನ್ನು ಪೂರೈಸು ವಲ್ಲಿ ನಿರತವಾಗಿದ್ದು, 50 ಹೊಸ ತಂತ್ರಜ್ಞಾನಗಳಿಗೆ ಸಂಬಂ ಧಿಸಿದ ಪ್ರಾಜೆಕ್ಟ್ಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಥಿಯೇಟರ್ ಕಮಾಂಡ್‌ಗಳ ರಚನೆ ನಂತರ ಮಾತನಾಡಿದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ವ್ಯವಸ್ಥೆಯನ್ನು ಸೈಬರ್ ದಾಳಿಯಿಂದ ರಕ್ಷಿಸುವುದೇ ದೇಶದ ಮುಂದಿರುವ ದೊಡ್ಡ ಸವಾಲಾಗಿದ್ದು, ಸೇನೆಯಲ್ಲಿ ಮೂರೂ ಪಡೆಗಳ ನಡುವೆ ಪರಸ್ಪರ ಸಂಬಂಧ ವೃದ್ಧಿಸಿ, ಅಂತರ್‌ಶಿಸ್ತೀಯ ಥಿಯೇಟರ್ ಕಮಾಂಡ್‌ಗಳ ರಚನೆಗೆ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸಾಕಷ್ಟು ಅಧ್ಯಯನ ಕೂಡ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ:- ಪ್ರಚಾರದ ಅಬ್ಬರ ಜೋರು: ಸಮಸ್ಯೆಗಳ ಚಿಂತನೆ ಚೂರು
ಧರ್ಮದ ವಿಜಯ; ರಾಜನಾಥ್ ಸಿಂಗ್ ವಿಶ್ಲೇಷಣೆ
“1971ರ ಯುದ್ಧದಲ್ಲಿ ಧರ್ಮದ ಜಯ ಆಗಿದೆ. ಲಂಕಾದಲ್ಲಿ ರಾಮ ಮತ್ತು ಮಧುರೆಯಲ್ಲಿ ಕೃಷ್ಣ ಮಾಡಿದ್ದನ್ನೇ ನಮ್ಮ ಯೋಧರು ಭಾರತ-ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಮಾಡಿದರು’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶ್ಲೇಷಿಸಿದರು. ಯಲಹಂಕ ವಾಯುನೆಲೆಯಲ್ಲಿ ಹಮ್ಮಿಕೊಂಡ ಮೂರು ದಿನಗಳ ಭಾರತೀಯ ವಾಯುಸೇನೆಯ “ಸುವರ್ಣ ವಿಜಯ ವರ್ಷ’ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
“50 ವರ್ಷಗಳ ಹಿಂದೆ ನಡೆದ ಯುದ್ಧವು ಯಾವುದೇ ಗಡಿ ಉಲ್ಲಂಘನೆ ಅಥವಾ ಶತ್ರುವಿನ ಪ್ರದೇಶ ವನ್ನು ಆಕ್ರಮಿಸಿಕೊಳ್ಳಲು ನಡೆಯಲಿಲ್ಲ. ಬದಲಿಗೆ ಶಾಂತಿ, ನ್ಯಾಯ ಮತ್ತು ಮಾನವೀಯತೆಗಾಗಿ ನಡೆದ ಯುದ್ಧವಾಗಿದೆ. ಬಾಂಗ್ಲಾ ನಾಗರಿಕರನ್ನು ಅತ್ಯಾ ಚಾರ, ಶೋಷಣೆಗಳಿಂದ ವಿಮೋಚನೆಗೊಳಿಸಲು ಯುದ್ಧ ಮಾಡಬೇಕಾಯಿತು.
ಈ ನಿಟ್ಟಿನಲ್ಲಿ ಅದು ಧರ್ಮದ ಗೆಲುವು. ಹಾಗಂತ ಆ ಧರ್ಮವು ಯಾವು ದೋ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ; ಮಾನವ ಧರ್ಮಕ್ಕೆ ಸಂಬಂಧಿಸಿದ್ದಾಗಿದೆ’ ಎಂದು ಬಣ್ಣಿಸಿದರು. ಬಾಂಗ್ಲಾ ವಿಮೋಚನೆಗಾಗಿ ನಡೆದ ಆ ಯುದ್ಧದಲ್ಲಿ ಪಾಲ್ಗೊಳ್ಳುವ ಮೂಲಕ ರಾಜಧರ್ಮ, ರಾಷ್ಟ್ರಧರ್ಮ ಮತ್ತು ಸೇನೆಯ ಧರ್ಮದ ಪಾಲನೆ ಸಹ ಆಗಿದೆ ಎಂದ ಅವರು, ಇತಿಹಾಸ ಎಂದರೆ ವಿಶ್ವಾಸವೂ ಹೌದು ಮತ್ತು ವಿಶ್ಲೇಷಣೆ ಕೂಡ ಆಗಿದೆ.
ಹಾಗಾಗಿ, ನಮ್ಮ ಹಿಂದಿನ ಅನುಭವಗಳ ನೆರವಿನಿಂದ ಭವಿಷ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಬೇಕಿದೆ ಎಂದು ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ 1971ರಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿನ ಛಾಯಾಚಿತ್ರಗಳ ಪ್ರದರ್ಶನವನ್ನು ರಾಜನಾಥ್ ಸಿಂಗ್ ಅನಾವರಣಗೊಳಿಸಿದರು. ಕಂದಾಯ ಸಚಿವ ಆರ್. ಅಶೋಕ್, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧುರಿ,ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಮನವಿಂದರ್ ಸಿಂಗ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.