ಘೋಷಣೆಯಲ್ಲೇ ಉಳಿದ ಪಾಲಿಕೆ ಬಜೆಟ್
Team Udayavani, Mar 19, 2017, 11:39 AM IST
ಕೇಂದ್ರ, ರಾಜ್ಯ ಸರ್ಕಾರಗಳ ಬಜೆಟ್ ಮಂಡನೆಯಾಗಿದ್ದಾಯ್ತು. ಇದೀಗ ಪಾಲಿಕೆಯ ಸರದಿ. ಆದರೆ, ಈ ಬಾರಿ 13 ಸಾವಿರ ಕೋಟಿ ರೂ.ಗಳ ಬಜೆಟ್ ಮಂಡಿಸಲು ಹೊರಟಿರುವ ಪಾಲಿಕೆ ತನ್ನ ಹಿಂದಿನ ಬಜೆಟ್ ಅನ್ನು ಹೇಗೆ ಅನುಷ್ಠಾನಗೊಳಿಸಿದೆ ಎಂಬುದರ ಕುರಿತ ಸರಣಿ ವರದಿ ಇಂದಿನಿಂದ
ಬೆಂಗಳೂರು: ಬಿಬಿಎಂಪಿಯು 2017-18ನೇ ಸಾಲಿನಲ್ಲಿ ದಾಖಲೆಯ 13,000 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ. ಆದರೆ, ಪ್ರಸಕ್ತ ವರ್ಷ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಶೇ.60ರಷ್ಟೂ ಮೀರಿಲ್ಲ.
2016-17ನೇ ಸಾಲಿನಲ್ಲಿ 9,353 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿತ್ತು. ಪ್ರಸಕ್ತ ಹಣಕಾಸು ವರ್ಷ ಮುಕ್ತಾಯಕ್ಕೆ 10 ದಿನಗಳಷ್ಟೇ ಬಾಕಿಯಿದ್ದು ಬಜೆಟ್ ಘೋಷಿತ ಕಾರ್ಯಕ್ರಮಗಳು ಶೇ.60ರಷ್ಟು ಮಾತ್ರ ಅನುಷ್ಠಾನವಾಗಿದೆ. ಇನ್ನೂ ಶೇ.40ರಷ್ಟು ಕಾರ್ಯಕ್ರಮಗಳು ಜಾರಿಯಾಗಿಲ್ಲ.
ನಿರೀಕ್ಷಿತ ಆದಾಯ ಸಂಗ್ರಹವಾಗದ ಕಾರಣ ಪಾಲಿಕೆಯ ಸಾಲ ಮೊತ್ತವೂ ಏರುತ್ತಿದ್ದು, ಹಣಕಾಸು ಸಂಸ್ಥೆಗಳಿಂದ ಪಡೆದಿರುವ 1680 ಕೋಟಿ ರೂ. ಸಾಲಕ್ಕೆ ಅಸಲು, ಬಡ್ಡಿ ಸಹಿತ ವಾರ್ಷಿಕ 170 ಕೋಟಿ ರೂ. ಪಾವತಿಸುತ್ತಿದೆ. ಜತೆಗೆ ಗುತ್ತಿಗೆದಾರರಿಗೆ 1218 ಕೋಟಿ ರೂ. ಬಿಲ್ ಸಹ ಬಾಕಿಯಿದೆ. ಇದನ್ನು ಪಾವತಿಸಲಾಗದ ಪರಿಸ್ಥಿತಿಯಲ್ಲಿ ಬಿಬಿಎಂಪಿ ಇದೆ.
ಪ್ರತಿವರ್ಷ ಪಾಲಿಕೆಯಲ್ಲಿ ಹಲವು ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆಯಾಗುತ್ತಿದ್ದು, ಪ್ರತಿ ಬಾರಿಯ ಜನಪ್ರಿಯ ಕಾರ್ಯಕ್ರಮಗಳು ಜನರಲ್ಲಿ ನಿರೀಕ್ಷೆ ಮೂಡುತ್ತವೆ. ಆದರೆ ಪಾಲಿಕೆಯ ಆಡಳಿತ ವರ್ಗ ಬಜೆಟ್‌ನಲ್ಲಿ ಘೋಷಿತ ಕಾರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸಿಲ್ಲ. ಬಹಳಷ್ಟು ಕಾರ್ಯಕ್ರಮಗಳು ಘೋಷಣೆಗಷ್ಟೇ ಸೀಮಿತವಾಗಿದ್ದು ಇದು ಪಾಲಿಕೆಯ ಆಡಳಿತ ವೈಖರಿ ಹಾಗೂ ಆರ್ಥಿಕ ಕಾರ್ಯನಿರ್ವಹಣೆ ಸ್ಥಿತಿಗೆ ಸಾಕ್ಷಿ.
ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿಗೆ ಮುಖ್ಯಮಂತ್ರಿಯವರು 5,500 ಕೋಟಿ ರೂ. ಅನುದಾನ ಪ್ರಕಟಿಸಿದ್ದರು. ಆದರೆ, ಈವರೆಗೆ ಸರ್ಕಾರದಿಂದ ಬಿಡುಗಡೆಯಾದ ಪ್ರಸಕ್ತ ಸಾಲಿನಲ್ಲಿ ಪಾಲಿಕೆಗೆ ಕೇವಲ 1,235 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಸರ್ಕಾರ ಹಾಗೂ ಪಾಲಿಕೆಯ ಮೂಲಗಳಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗದಿರುವುದರಿಂದ ಯಾವುದೇ ಹೊಸ ಕಾಮಗಾರಿಗಳು ಆರಂಭವಾಗಿಲ್ಲ.
ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು, ಆಪ್ಟಿಕಲ್ ಫೈಬರ್ ಕೇಬಲ್ ಶುಲ್ಕ, ಸುಧಾರಣಾ ಶುಲ್ಕ, ವಾಣಿಜ್ಯ ಪರವಾನಗಿ ಹೀಗೆ ಹಲವಾರು ಆದಾಯ ಮೂಲಗಳಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹಕ್ಕೆ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಲಿಲ್ಲ. ಎರಡು ಮೂರು ತಿಂಗಳ ಮೊದಲೇ ಆಸ್ತಿ ತೆರಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡು, ನ್ಯಾಯಾಲಯದಲ್ಲಿರುವ ಪ್ರಕರಣಗಳ ಇತ್ಯರ್ಥಕ್ಕೆ ಪಾಲಿಕೆ ಮುಂದಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗುತ್ತಿತ್ತು ಎಂಬುದು ಕೆಲ ಪಾಲಿಕೆ ಸದಸ್ಯರ ಅಭಿಪ್ರಾಯ.
ಬರಲಿಲ್ಲ ಅನುದಾನ!
ಪ್ರಸಕ್ತ ವರ್ಷದ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿಗೆ 2016-17 ಮತ್ತು 2017ಧಿ-18ನೇ ಸಾಲಿಗೆ ಒಟ್ಟಾರೆಯಾಗಿ 7,300 ಕೋಟಿ ರೂ. ಅನುದಾನವನ್ನು ಸರ್ಕಾರ ಘೋಷಿಸಿತ್ತು. ಆದರೆ, 2016-17ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳಿಗೆ ಪಾಲಿಕೆಗೆ 3208 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರ ದಿಂದ ಬಿಡುಗಡೆಯಾಗಿರುವುದು 1235 ಕೋಟಿ ರೂ. ಮಾತ್ರ.
ರಾಜ್ಯ ಸರ್ಕಾರ ಬಜೆಟ್‌ನಲ್ಲಿ 7300 ಕೋಟಿ ರೂ. ಅನುದಾನ ಘೋಷಿಸಿದ್ದರೂ ಪಾಲಿಕೆಗೆ ಈ ಸಾಲಿನಲ್ಲಿ ಬಿಡುಗಡೆಯಾಗಿದ್ದು, 1300 ಕೋಟಿಯಷ್ಟು ಮಾತ್ರ. ಪ್ರಸಕ್ತ ಅವಧಿಯ ಬಜೆಟ್‌ನ ಶೇ.30ರಷ್ಟು ಕಾರ್ಯಕ್ರಮಗಳೂ ಅನುಷ್ಠಾನವಾಗಿಲ್ಲ. ಪಾಲಿಕೆಗೆ ಸಂಗ್ರಹವಾಗಬೇಕಾದ ಆದಾಯ ಸಂಗ್ರಹಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಪಾಲಿಕೆಯನ್ನು ಕಾಂಗ್ರೆಸ್ ಆಡಳಿತ ಹಿಂದಕ್ಕೆ ತೆಗೆದುಕೊಂಡು ಹೋಗಿದೆ.
-ಪದ್ಮನಾಭರೆಡ್ಡಿ, ಪಾಲಿಕೆ ಪ್ರತಿಪಕ್ಷ ನಾಯಕ
ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾಲಿಕೆಯನ್ನು ಅದರಿಂದ ಹೊರತರಲು ಒತ್ತು ನೀಡಲಾಗಿದೆ. ಹಾಗಾಗಿ ಕೆಲ ಘೋಷಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಅದರ ನಡುವೆಯೂ ಪೌರಕಾರ್ಮಿಕರಿಗೆ ಬಿಸಿಯೂಟ, ಅಂಗಳ ಹೀಗೆ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯೂ ಕೆಲ ಯೋಜನೆ ಅನುಷ್ಠಾನಕ್ಕೆ ವಿಳಂಬವಾಗಿದೆ.
-ಜಿ.ಪದ್ಮಾವತಿ, ಮೇಯರ್
* ವೆಂ.ಸುನೀಲ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.