ರೈಲ್ವೆ ಯೋಜನೆಗಳಿಗೆ ನೆರವು ನೀಡಿ
Team Udayavani, Jan 17, 2017, 12:14 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಿರುವ ಮೆಟ್ರೋ ಎರಡು ಮತ್ತು ಮೂರನೇ ಹಂತದ ಯೋಜನೆ ಹಾಗೂ ವರ್ತುಲ ರೈಲು ಯೋಜನೆಗೆ ಕೇಂದ್ರ ಸರ್ಕಾರ ಹೆಚ್ಚಿನ ನೆರವು ಕೊಡಬೇಕು. ಉದ್ದೇಶಿತ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ.
ಕೇಂದ್ರಕ್ಕೆ ಮನವಿ: ವಿಧಾನಸೌಧದಲ್ಲಿ ಸೋಮವಾರ ಕೇಂದ್ರ ಯೋಜನಾ ಮತ್ತು ಸಾಂಖೀಕ ಸಚಿವ ಡಿ.ವಿ.ಸದಾನಂದಗೌಡರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಮೆಟ್ರೋ ಮತ್ತು ವರ್ತುಲ ರೈಲು ಯೋಜನೆಗಳಿಗೆ ರಾಜ್ಯ ಸರ್ಕಾರ ಇನ್ನೋವೇಟೀವ್ ಪ್ರೋಗ್ರಾಂ (ಸ್ಥಳೀಯ ವಾಗಿ ಸೆಸ್ ಹಾಗೂ ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹ) ಸ್ವಲ್ಪ ಮಟ್ಟಿಗೆ ಹಣಕಾಸು ಹೊಂಚಿಕೊಳ್ಳಲಿದ್ದು, ಇದರೆ ಜತೆಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನೇರವಾಗಿ ಸಾಲ ಪಡೆಯಲು ಒಪ್ಪಿಗೆ ನೀಡಬೇಕು. ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಲಾಯಿತು.
ನೆರವಿನ ಭರವಸೆ: ಇದಕ್ಕೆ ಸ್ಪಂದಿಸಿದ ಡಿ.ವಿ.ಸದಾನಂದಗೌಡ, ಈ ಬಗ್ಗೆ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿ. ಸಂಬಂಧಪಟ್ಟ ಇಲಾಖೆಗಳ ಜತೆ ಮಾತುಕತೆ ನಡೆಸಿ ಹೆಚ್ಚಿನ ನೆರವು ದೊರಕುವಂತೆ ಹಾಗೂ ನೀತಿ ಆಯೋಗದ ಜತೆ ಚರ್ಚಿಸಿ ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರೂಪಿಸಿರುವ ವಿಶೇಷ ಯೋಜನೆಯಡಿ ಅನುದಾನ ದೊರಕುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಏನೇನು ಬೇಡಿಕೆ?: ಮೆಟ್ರೋ ಮೊದಲ ಹಂತ 72 ಕಿ.ಮೀ. ಮಾರ್ಗಕ್ಕೆ 26405 ಕೋಟಿ ರೂ. ವೆಚ್ಚವಾಗುತ್ತಿದ್ದು, 12 ಸಾವಿರ ಕೋಟಿ ರೂ. ಸಾಲ ಪಡೆಯಲಾಗಿದೆ. ಎರಡನೇ ಹಂತದಲ್ಲಿ 72 ಕಿ.ಮೀ. ಮಾರ್ಗದ ಯೋಜನೆಗೆ 26 ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, ಆ ಪೈಕಿ ಕೆ.ಆರ್.ಪುರ-ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಕ್ಕೆ 4200 ಕೋಟಿ ರೂ. ವೆಚ್ಚವಾಗಲಿದೆ.
ಹಣ ಸಂಗ್ರಹಣೆ ಗುರಿ: ಇನ್ನೋವೇಟಿವ್ ಪ್ರೋಗ್ರಾಂ ಮೂಲಕ 2000 ಕೋಟಿ ರೂ. ಸಂಗ್ರಹದ ಗುರಿ ಹೊಂದಾಗಿದೆ. ಕೇಂದ್ರ ಸರ್ಕಾರ 500 ಕೋಟಿ ರೂ.ವರೆಗೆ ನೆರವು ನೀಡಬೇಕು. ಅದೇ ರೀತಿ ಮೂರನೇ ಹಂತದಡಿ 110 ಕಿ.ಮೀ. ಮಾರ್ಗದಲ್ಲಿ ಬರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 30 ಕಿ.ಮೀ. ಯೋಜನೆಗೆ 6 ಸಾವಿರ ಕೋಟಿ ರೂ. ಬೇಕಿದ್ದು, ಕೇಂದ್ರ ಸರ್ಕಾರ ಅನುದಾನ ಕೊಡಬೇಕು. ವರ್ತುಲ ರೈಲು ವ್ಯವಸ್ಥೆ ಯೋಜನೆಗೂ ಕೇಂದ್ರದ ನೆರವು ಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಫೆರಿಫೆರಲ್ ರಿಂಗ್ ರಸ್ತೆ: ಐದು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಬೆಂಗಳೂರು ಹೊರವಲಯದ ಫೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಬೇಕು. ಹಿಂದೆ ನಿತಿನ್ ಗಡ್ಕರಿ ಅವರು ಹೆದ್ದಾರಿ ಸಚಿವರಾಗಿದ್ದಾಗ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಪೂರಕ ಸ್ಪಂದನೆ ದೊರೆತಿತ್ತು ಎಂದು ಸಭೆಯಲ್ಲಿ ತಿಳಿಸಲಾಯಿತು.
ಬೆಂಗಳೂರು ಸುತ್ತಮುತ್ತ ರೈಲ್ವೆ ಕೆಳ ಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣ ಯೋಜನೆಗಳಿಗೆ ಭೂ ಸ್ವಾಧೀನ ಪ್ರಮುಖ ಅಡ್ಡಿಯಾಗಿದ್ದು, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಬಿಬಿಎಂಪಿ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸಭೆಯಲ್ಲಿ ರೈಲ್ವೆ ಅಧಿಕಾರಿಗಳು ಮನವಿ ಮಾಡಿದರು.
224 ಕಿ.ಮೀ.
ಮೆಟ್ರೋ ಮೂರೂ ಹಂತದ ಪೂರ್ಣಗೊಂಡರೆ 224 ಕಿ.ಮೀ ಬೃಹತ್ ಮಾರ್ಗದಲ್ಲಿ ಸಂಚಾರ ಸುಲಲಿತವಾಗಲಿದೆ. ಮೊದಲನೇ ಹಂತ 42 ಕಿ.ಮೀ., ಎರಡನೇ ಹಂತ 72 ಕಿ.ಮೀ., 3 ನೇ ಹಂತ 110 ಕಿ.ಮೀ. ಇರಲಿದೆ. ಎರಡನೇ ಹಾಗೂ ಮೂರನೇ ಹಂತದಲ್ಲಿ ಬಹುತೇಕ ಮಾರ್ಗಗಳು ಇಂಟರ್‌ಲಿಂಕ್ ಯೋಜನೆಗಳು. ಈಗಿರುವ ಮಾರ್ಗಗಳು ಹೊರತುಪಡಿಸಿದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ, ಕೆ.ಆರ್.ಪುರ- ಸೆಂಟ್ರಲ್ ಸಿಲ್ಕ್ ಬೋರ್ಡ್, ನಾಗವಾರ- ಗೊಟ್ಟಿಗೆರೆ ಪ್ರಮುಖವಾದುವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.