ಪ್ರಶಸ್ತಿ ಮೊತ್ತ ನಮಗೇ ಕೊಡಿ
Team Udayavani, Sep 5, 2018, 12:11 PM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪ್ರಶಸ್ತಿ ಮೊತ್ತವನ್ನು ಕೊಡಗು ನಿರಾಶ್ರಿತರಿಗೆ ನೀಡುವ ಪಾಲಿಕೆ ನಿರ್ಧಾರಕ್ಕೆ ಪ್ರಶಸ್ತಿ ಪುರಸ್ಕೃತರಿಂದ ಆಕ್ಷೇಪ ವ್ಯಕ್ತವಾಗಿದೆ. ಬಿಬಿಎಂಪಿ ವತಿಯಿಂದ ಇತ್ತೀಚೆಗೆ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ 550ಕ್ಕೂ ಹೆಚ್ಚು ಜನರಿಗೆ ಕೆಂಪೇಗೌಡ ಪ್ರಶಸ್ತಿ ವಿತರಿಸಲಾಗಿತ್ತು.
ಇದರಿಂದ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿ, ಸಾರ್ವಜನಿಕರ ತೀವ್ರ ಟೀಕೆ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲೂ ಜಾಲತಾಣಿಗರು ಪಾಲಿಕೆ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಜತೆಗೆ ಅನರ್ಹರ ಹೆಸರುಗಳನ್ನು ಪ್ರಶಸ್ತಿ ಪಟ್ಟಿಗೆ ಸೇರಿಸಿರುವುದು, ನಿಜವಾದ ಸಾಧಕರು ಹಾಗೂ ಕೆಂಪೇಗೌಡ ಪ್ರಶಸ್ತಿಗೆ ಮಾಡಿದ ಅವಮಾನ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ತಲಕಾಡು ಚಿಕ್ಕರಂಗೇಗೌಡ ಸೇರಿದಂತೆ ಕೆಲ ಪುರಸ್ಕೃತರು ತಮಗೆ ಬಂದಿರುವ ಪ್ರಶಸ್ತಿ ಮೊತ್ತವನ್ನು ಕೊಡಗು ನಿರಾಶ್ರಿತರಿಗೆ ನೀಡುವಂತೆ ಪಾಲಿಕೆಗೆ ಪತ್ರ ಬರೆದಿದ್ದಾರೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿ ಮೊತ್ತಕ್ಕೆಂದು ಮೀಸಲಿಟ್ಟಿದ್ದ 75 ಲಕ್ಷ ರೂ.ಗಳನ್ನು ಕೊಡಗು ನೆರೆ ಸಂತ್ರಸ್ತರ ಅನುಕೂಲಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಪಾಲಿಕೆ ಮುಂದಾಗಿತ್ತು.
ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಹುತೇಕ ಪುರಸ್ಕೃತರು, “ನಮ್ಮ ಪ್ರಶಸ್ತಿಯ ಮೊತ್ತವನ್ನು ನಮಗೇ ಕೊಡಿ’ ಎಂದು ಕಿಡಿಕಾರುತ್ತಿದ್ದಾರೆ. ಪ್ರಶಸ್ತಿ ಮೊತ್ತವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡುತ್ತಿರುವ ವಿಷಯ ತಿಳಿದು, ಹಲವು ಪುರಸ್ಕೃತರು ಪಾಲಿಕೆಗೆ ಕರೆ ಮಾಡುತ್ತಿದ್ದು, ಪ್ರಶಸ್ತಿ ಹಿಂದಿರುಗಿಸುವುದಾಗಿ ಹೇಳುತ್ತಿದ್ದಾರೆ ಇದೇ ವೇಳೆ ಈ ಬಗ್ಗೆ ಪುರಸ್ಕೃತರ ವಲಯದಲ್ಲೇ ಎರಡು ರೀತಿಯ ವಾದ ಕೇಳಿಬರುತ್ತಿದೆ.
“ಸಂತ್ರಸ್ತರ ನಿಧಿಗೆ ಪ್ರಶಸ್ತಿ ಮೊತ್ತ ನೀಡಲು ನಮ್ಮದೇನು ತರಕಾರಿಲ್ಲ. ಆದರೆ, ನಮ್ಮ ಗಮನಕ್ಕೆ ತರದೆ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ’ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರೆ, ಇನ್ನು ಕೆಲವರು, “ಯಾರು ತಮ್ಮ ಪ್ರಶಸ್ತಿ ಮೊತ್ತವನ್ನು ಸಂತ್ರಸ್ತರಿಗೆ ನೀಡುವಂತೆ ಹೇಳುತ್ತಾರೋ ಅವರ ಹಣವನ್ನು ಮಾತ್ರ ನೀಡಿ. ಉಳಿದವರ ಹಣ ಅವರ ಖಾತೆಗೆ ಜಮಾ ಮಾಡಿ’ ಎನ್ನುತ್ತಿದ್ದಾರೆ.
ಏಕಪಕ್ಷೀಯ ನಿರ್ಧಾರ ತಪ್ಪು: ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಿಗೆ ಪ್ರತಿ ವರ್ಷ ನಗದು ಪ್ರಶಸ್ತಿ ನೀಡಲಾಗುತ್ತದೆ. ಇದೀಗ ಏಕಾಏಕಿ ನಗದು ನೀಡದಿರುವುದು ಸರಿಯಲ್ಲ. ಪುರಸ್ಕೃತರ ಅನುಮತಿ ಇಲ್ಲದೆ ಬಹುಮಾನ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡುವ ನಿರ್ಧಾರ ಕೈಗೊಂಡಿರುವುದು ತಪ್ಪು. ಸಂತ್ರಸ್ತರಿಗೆ ಹಣ ನೀಡುವವರು ಸ್ವಯಂ ಪ್ರೇರಿತವಾಗಿ ನೀಡಲಿ. ಆದರೆ, ಪುರಸ್ಕೃತರಿಗೆ ಮೀಸಲಿಟ್ಟ ಅಷ್ಟೂ ಹಣವನ್ನು ಪರಿಹಾರ ನಿಧಿಗೆ ಕೊಡುತ್ತೇವೆ ಎನ್ನುವುದು ಸರಿಯಲ್ಲ ಎಂದು ಪಾಲಿಕೆಯ ಹಿರಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕರ್ತರ ಕಾರುಬಾರು: ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದವರ ಪೈಕಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಬೆಳಕಿಗೆ ಬಂದಿದೆ. ಅಂದರೆ, ಯಾವುದೇ ಮಾನದಂಡ ಇಲ್ಲದೆ ಪ್ರಶಸ್ತಿ ನೀಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯೆ ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, 550ಕ್ಕೂ ಹೆಚ್ಚಿನವರಿಗೆ ಪ್ರಶಸ್ತಿ ನೀಡುವ ಮೂಲಕ ಕೆಂಪೇಗೌಡರಿಗೆ ಹಾಗೂ ಪ್ರಶಸ್ತಿಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿಯ ಹಿರಿಯ ಸದಸ್ಯರೊಬ್ಬರು ದೂರಿದ್ದಾರೆ. ಹಾಗೇ, “ನಮ್ಮ ವಾರ್ಡ್‌ನ 10 ಮಂದಿಗೆ ನಾನೇ ಕೆಂಪೇಗೌಡ ಪ್ರಶಸ್ತಿ ಕೊಡಿಸಿದ್ದೇನೆ.
ಅದರಲ್ಲಿ ನಮ್ಮ ಕಚೇರಿ ಸಹಾಯಕರೂ ಇದ್ದಾರೆ. ಕಾರ್ಯಕ್ರಮ ಗೊಂದಲದ ಗೂಡಾದ ಪರಿಣಾಮ, ನಮ್ಮವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಲಿಲ್ಲ,’ ಎಂದು ಅದೇ ಹಿರಿಯ ಸದಸ್ಯರು ಹೇಳಿದ್ದಾರೆ. ಸದಸ್ಯರ ಈ ಹೇಳಿಕೆ, ಪ್ರಶಸ್ತಿ ಪುರಸ್ಕೃತರ ಆಯ್ಕೆ ವಿಧಾನದ ಕುರಿತು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಪುರಸ್ಕೃತರ ಗಮನಕ್ಕೆ ತಾರದೆ, ಪ್ರಶಸ್ತಿ ಮೊತ್ತವನ್ನು ಸಂತ್ರಸ್ತರಿಗೆ ನೀಡುವ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಪುರಸ್ಕೃತರಿಗೆ ಪ್ರಶಸ್ತಿ ಮೊತ್ತವನ್ನು ಪಾಲಿಕೆ ಕೊಡಲಿ, ಮುಂದಿನ ನಿರ್ಧಾರ ಪುರಸ್ಕೃತರಿಗೆ ಬಿಟ್ಟದ್ದು. ಪಾಲಿಕೆಯೇ ಏಕಪಕ್ಷೀಯ ನಿರ್ಧಾರ ಕೈಗೊಂಡರೆ, ಪುರಸ್ಕೃತರಿಗೆ ಅವಮಾನ ಮಾಡಿದಂತೆ.
-ಜಿ.ಪದ್ಮಾವತಿ, ಮಾಜಿ ಮೇಯರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.