ಕೆಂಪೇಗೌಡ ಬಸ್ ನಿಲ್ದಾಣಕೀಗ ಸುವರ್ಣ ಸಂಭ್ರಮ
ಕೆರೆಯಿಂದ ಕೆಎಸ್ಸಾರ್ಟಿಸಿ ನಿಲ್ದಾಣದವರೆಗೆ...
Team Udayavani, May 27, 2019, 12:11 PM IST
ಕಾಲ 15ನೇ ಶತಮಾನದ ಆಸುಪಾಸುಇರಬಹುದು. ಹಿರಿಯ ಕೆಂಪೇಗೌಡರು ನಗರದ ಕೇಂದ್ರದಲ್ಲಿ ಧರ್ಮಾಂಬುಧಿ ಕೆರೆ ಕಟ್ಟಿಸಿದರು. ಹೊರಗಡೆಯಿಂದ ಇಲ್ಲಿಗೆ ಬರುವ ಯಾತ್ರಿಕರು ಮೊದಲು ಆ ಕೆರೆಯ ಆವರಣದಲ್ಲಿ ದಣಿವಾರಿಸಿಕೊಳ್ಳುತ್ತಿದ್ದರು. ಸುಮಾರು ಐದು ದಶಕಗಳ ನಂತರವೂ ನಾನಾ ಭಾಗಗಳಿಂದ ಪ್ರಯಾಣಿಕರು ಅಲ್ಲಿಗೇ ಬಂದಿಳಿಯುತ್ತಾರೆ. ಆದರೆ ವ್ಯತ್ಯಾಸ ಇಷ್ಟೇ- ಅಂದು ಜನ ತಂಗುವ ತಾಣವಾಗಿತ್ತು. ಇಂದು ಅದೇ ಜನರನ್ನು ಹೊತ್ತು ತರುವ ಬಸ್‌ಗಳು ತಂಗುವ ತಾಣವಾಗಿದೆ. ಅದುವೇ ಈಗಿನ ನಗರದ ಹೃಯದಭಾಗ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಕೆಂಪೇಗೌಡ ಬಸ್ ನಿಲ್ದಾಣ.
1961ರಲ್ಲಿ ಕೆಎಸ್‌ಆರ್‌ಟಿಸಿ ಅಸ್ತಿತ್ವಕ್ಕೆ ಬಂದಿತು. ನಂತರದಲ್ಲಿ ಇಲ್ಲಿಂದ ರಾಜ್ಯದ ಬೇರೆ ಬೇರೆ ಕಡೆಗೆ ಕಾರ್ಯಾಚರಣೆ ಮಾಡುವ ನಿಗಮದ ಬಸ್‌ಗಳ ನಿಲುಗಡೆಗೆ ಒಂದು ಸೂಕ್ತ ಜಾಗ ಬೇಕಾಯಿತು. ಆಗ ಆಯ್ಕೆ ಮಾಡಿದ್ದೇ ಈಗಿನ ಮೆಜೆಸ್ಟಿಕ್. 1969ರ ಜೂನ್ 2ರಂದು ನಿಲ್ದಾಣ ಉದ್ಘಾಟನೆಯೂ ಆಯಿತು. ಪ್ರಸ್ತುತ ನಿತ್ಯ ಸುಮಾರು ಮೂರು ಸಾವಿರ ಬಸ್‌ಗಳು ಅಲ್ಲಿಂದ ಕಾರ್ಯಾಚರಣೆ ಮಾಡುತ್ತವೆ. ಲಕ್ಷ ಜನ ಬಂದು ಹೋಗುತ್ತಾರೆ. ನಾಲ್ಕೂ ದಿಕ್ಕುಗಳು ಸಂಧಿಸುವ “ನಮ್ಮ ಮೆಟ್ರೋ’ಗೂ ಈಗ ಅದು ಅವಕಾಶ ಕಲ್ಪಿಸಿದೆ. ಈಗ ಆ ನಿಲ್ದಾಣಕ್ಕೆ ಸುವರ್ಣ ಸಂಭ್ರಮ. ಈಗಿನ ಕೆಂಪೇಗೌಡ ಬಸ್ ನಿಲ್ದಾಣ ಮೂಲತಃಒಂದು ಕೆರೆ ಆಗಿತ್ತು. 1513-1569ರ ನಡುವೆ ಹಿರಿಯ ಕೆಂಪೇಗೌಡರು ನಗರದ ನಿವಾಸಿಗಳು ಮತ್ತು ಹೊರಗಿನಿಂದ ಬರುವ ಯಾತ್ರಿಕರಿಗಾಗಿ ದಕ್ಷಿಣದಲ್ಲಿ ತಮ್ಮ ಕುಲದೇವತೆ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುಧಿ ಹಾಗೂ ಕೇಂದ್ರದಲ್ಲಿ ಅಂದರೆ ಈಗಿನ ಮೆಜೆಸ್ಟಿಕ್‌ನಲ್ಲಿ ಧರ್ಮದೇವತೆ ಹೆಸರಿನಲ್ಲಿ ಧರ್ಮಾಂಬುಧಿ ಕೆರೆಯನ್ನೂ ಕಟ್ಟಿಸಿದರು. ಈಗಿನ ಸ್ಯಾಂಕಿ ಕೆರೆಯ ಕೋಡಿ ಹರಿದಾಗ, ಆ ನೀರು ಇದೇ ಧರ್ಮಾಂಬುಧಿ ಕೆರೆಗೆ ಬರುತ್ತಿತ್ತು. ಅಷ್ಟು ದೊಡ್ಡ ಕೆರೆ ಇದಾಗಿತ್ತು.
1892ರಲ್ಲಿ ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದಾಗ ಹಲಸೂರಿನಲ್ಲಿ ತಂಗಿದ್ದರು. ಆಹ್ಲಾದಕರ ವಾತಾವರಣ ಸವಿಯಲು ಅವರು ಇಲ್ಲಿನ ಪೂರ್ಣಯ್ಯ ಛತ್ರದ ಮುಂದಿದ್ದ ಕೊಳದ ಬಳಿಯೇ ಕುಳಿತುಕೊಳ್ಳುತ್ತಿದ್ದರಂತೆ ಎಂದು ಉದಯಭಾನು ಕಲಾಸಂಘದ “ಬೆಂಗಳೂರು ದರ್ಶನ’ ಗ್ರಂಥದಲ್ಲಿ ಉಲ್ಲೇಖೀಸಲಾಗಿದೆ. ಕೆರೆ ಇದ್ದದ್ದು ನಿಜ. ಆದರೆ, 150-200 ವರ್ಷಗಳ ಹಿಂದೆಯೇ ಆ ಕೆರೆ ಒಣಗಲು ಶುರುವಾಯಿತು. ನಿಧಾನಕ್ಕೆ ಅದು ಸ್ವಾತಂತ್ರ್ಯ ಹೋರಾಟಗಾರರು ಸಭೆ ನಡೆಸಲು ವೇದಿಕೆ ಆಯಿತು. ಅನೇಕ ವೃತ್ತಿಪರ ತಂಡಗಳು ರಂಗಮಂದಿರ ಕಟ್ಟಿಕೊಂಡು ನಾಟಕವಾಡುತ್ತಿದ್ದುದೂ ಇಲ್ಲಿಯೇ. ತದನಂತರ 1946ರಲ್ಲಿ ಮೈಸೂರು ಕಾಂಗ್ರೆಸ್ ಎಕ್ಸಿಬಿಷನ್ (ವಸ್ತುಪ್ರದರ್ಶನ)ಗಳು ನಡೆಯುತ್ತಿದ್ದವು. ಅದರ ವೀಕ್ಷಣೆಗೆ ಬರುವವರು ಇದೇ ನಿಲ್ದಾಣದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದರು. ನಾನೂ ಒಂದು ಎಕ್ಸಿಬಿಷನ್‌ಗೆ ಹೋಗಿದ್ದು ನೆನಪಿದೆ.
1960ರ ದಶಕದಲ್ಲಿ ಇಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತಿತ್ತು. ಅದಕ್ಕೂ ಹಿಂದಿನ ದಶಕಗಳಲ್ಲಿ ವ್ಯಾಪಾರ, ಧಾರ್ಮಿಕ ಕಾರ್ಯಗಳಿಗೆ ಜನ ನಗರಕ್ಕೆ ಬರುತ್ತಿದ್ದರು. ಅವರಿಗೆ ಈ ಕೆರೆ ತುಂಬಾ ಅನುಕೂಲ ಆಗಿತ್ತು ಎಂದು ಇತಿಹಾಸಕಾರ ಸುರೇಶ್ ಮೂನ ಮೆಲುಕು ಹಾಕುತ್ತಾರೆ. ಅಲ್ಲದೆ, ಧರ್ಮಾಂಬುಧಿ ಕೆರೆಯ ತೂಬು ಈಗಿನ ಶಾಂತಲಾ ಸಿಲ್ಕ್ಹೌಸ್ ಕಟ್ಟಡದ ಭಾಗದಲ್ಲೇ ಇತ್ತು. ಅಷ್ಟೇ ಯಾಕೆ, ತಗ್ಗಿನಲ್ಲಿರುವ ಚಿಕ್ಕಲಾಲ್‌ಬಾಗ್‌ಗೆ ನೀರೊದಗಿಸುತ್ತಿದ್ದುದೇ ಈ ಕೆರೆಯಿಂದ. ಇದರ ಕುರುಹಾಗಿ ಸುಬೇದಾರ್ ಛತ್ರಂ ರಸ್ತೆ ಸೇರಿದಂತೆ ಭಾಗಶಃ ಗಾಂಧಿನಗರದವರೆಗೆ ಇರುವ ಧನ್ವಂತರಿ ರಸ್ತೆ ಏರಿ ಇದೆ. ಕಾಲಾನುಕ್ರಮದಲ್ಲಿ ಅದರ ಸ್ವರೂಪ ಬದಲಾಗಿರಬಹುದು. ಇಂದಿಗೂ ಅದರ ಪ್ರಾಮುಖ್ಯತೆ ಹಾಗೇ ಇದೆ ಎಂದು ಅವರು ವಿಶ್ಲೇಷಿಸುತ್ತಾರೆ.
ಇದೇ ಜಾಗ ಯಾಕೆ ಆಯ್ಕೆ?: ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೂ ಮೊದಲು ನಿಗಮದ ಅಂತಾರಾಜ್ಯ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದುದು ಕಲಾಸಿಪಾಳ್ಯದಿಂದ. ಅಲ್ಲಿಯೇ ಖಾಸಗಿ ಬಸ್‌ಗಳು ಕೂಡ ಇದ್ದವು. ಆದರೆ, ಆ ಜಾಗ ಇಕ್ಕಟ್ಟಾಗಿತ್ತು. ಆದ್ದರಿಂದ ಮೆಜೆಸ್ಟಿಕ್ ಜಾಗವನ್ನು ಆಯ್ಕೆ ಮಾಡಲಾಯಿತು. ಪಕ್ಕದಲ್ಲಿಯೇ ರೈಲು ನಿಲ್ದಾಣ ಇದ್ದದ್ದು ಕೂಡ ಈ ಆಯ್ಕೆಗೆ ಮತ್ತೂಂದು ಕಾರಣ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರಕೊಂಡಾರೆಡ್ಡಿ ತಿಳಿಸಿದರು.
ಧರ್ಮಾಂಬುಧಿ ಕೆರೆ ನಗರದ ಕೊನೆಯ ತುದಿ ಆಗಿತ್ತು. ಹಾಗಾಗಿ ಅಲ್ಲಿಯೇ ರೈಲು ನಿಲ್ದಾಣ ಇತ್ತು. ನಗರದ ಹೃದಯ ಭಾಗದಲ್ಲಿದ್ದವರು ಕೆರೆ ಅಂಗಳದಲ್ಲಿ ಹಾದು ರೈಲು ನಿಲ್ದಾಣಕ್ಕೆ ಹೋಗಬೇಕಿತ್ತು. ಬರಗಾಲದಲ್ಲಿ ಕೆರೆ ಬತ್ತಿ ಹೋಗುತ್ತಿತ್ತು. ಆಗ, ಸರ್ಕಸ್ ಕಂಪನಿಗಳು, ನಾಟಕ ಕಂಪನಿಗಳು ಅಲ್ಲಿ ಬಂದು ಪ್ರದರ್ಶನ ನೀಡುತ್ತಿದ್ದವು. ಈ ಭಾಗದಲ್ಲಿಯೇ ಆ ಸಮಯದಲ್ಲೊಂದು ಮೆಜೆಸ್ಟಿಕ್ ಎಂಬ ಚಿತ್ರಮಂದಿರ ಇತ್ತು. ಥಿಯೇಟರ್ ಹೋದರೂ ಅದರ ಹೆಸರು ಮಾತ್ರ ಹಾಗೇ ಉಳಿಯಿತು ಎಂದು ಅವರು ಸ್ಮರಿಸಿದರು.
ಇದ್ದಿಲು ಗ್ಯಾಸ್‌ನಿಂದ ಬಸ್ ಓಡಾಟ!:
ಈ ಮಧ್ಯೆ ಕೆಎಸ್‌ಆರ್‌ಟಿಸಿ ಜತೆಗೇ ಬಿಟಿಎಸ್ (ಬೆಂಗಳೂರು ಸಾರಿಗೆ ಸೇವೆ) ಕೂಡ ಬೆಳೆದುಬಂದಿತು. ಇದಕ್ಕೂ ಮುನ್ನ ಅಂದರೆ 40ರ ದಶಕದಲ್ಲಿ ಬೆಂಗಳೂರು ಟ್ರಾನ್ಸ್‌ಪೊರ್ಟ್ ಕಂಪೆನಿ ಲಿ., (ಬಿಟಿಸಿ) ನಗರದಲ್ಲಿ ಸಾರಿಗೆ ಸೇವೆ ಸಲ್ಲಿಸುತ್ತಿತ್ತು. ಅದರಡಿ 20 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಮೈಸೂರು ಸರ್ಕಾರ ಆಗ ಶೇ. 10ರಷ್ಟು ಬಂಡವಾಳ ಹೂಡಿಕೆ ಮಾಡಿತ್ತು. ಉಳಿದದ್ದು ಸಾರ್ವಜನಿಕರಿಂದ ಸಂಗ್ರಹವಾಗುತ್ತಿತ್ತು. ಆದರೆ, ಪೆಟ್ರೋಲ್ ಅಲಭ್ಯತೆ ಹಾಗೂ ಜಟಕಾ ಓಡಿಸುವವರ ವಿರೋಧದ ಹಿನ್ನೆಲೆಯಲ್ಲಿ ಕಂಪೆನಿ ನಷ್ಟ ಅನುಭವಿಸಿತು. ಈ ಸಂದರ್ಭದಲ್ಲಿ ಇದ್ದಿಲು ಗ್ಯಾಸ್‌ನಿಂದ ಬಸ್ ಓಡಿಸಿದ ಉದಾಹರಣೆಗಳೂ ಇವೆ ಎಂದು ಕರ್ನಾಟಕ ಗೆಜೆಟಿಯರ್‌ನಲ್ಲಿ ಉಲ್ಲೇಖೀಸಲಾಗಿದೆ. ನಂತರದಲ್ಲಿ ಅಂದರೆ 1962ರಲ್ಲಿ ನಗರದ ಮಾರ್ಗಗಳು ರಾಷ್ಟ್ರೀಕರಣಗೊಂಡವು.ಆಗ ಬಿಟಿಸಿಯು ಬಿಟಿಎಸ್ ಆಗಿ ಮರುನಾಮಕರಣಗೊಂಡಿದೆ.
ಹೊಯ್ಸಳರ ಶಾಸನದಲ್ಲಿದೆ “ದೊಡ್ಡ ಕೆರೆ’ ಉಲ್ಲೇಖ: ಧರ್ಮಾಂಬುಧಿ ಕೆರೆಯ ಬಗ್ಗೆ ಮತ್ತೂಂದು ಅಭಿಪ್ರಾಯವೂ ಇದೆ. ಕ್ರಿ.ಶ. 1927ರಲ್ಲಿ ಹೊಯ್ಸಳರ ಕಾಲದ ಶಾಸನದಲ್ಲಿ ಇದನ್ನು “ದೊಡ್ಡ ಕೆರೆ’ ಎಂದೂ ಉಲ್ಲೇಖೀಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಕೆಂಪೇಗೌಡರ ಆಡಳಿತಕ್ಕೂ ಮೊದಲೇ ಈ ಕೆರೆ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಈ ಶಾಸನ ಆಧಾರ ಒದಗಿಸುತ್ತದೆ. ಬೆಂಗಳೂರಿನ ನರಗುಂದದೇವರ ಮಠದ 1844ರ ದಾಖಲೆ ಹಾಗೂ ಸರ್ಪಭೂಷಣ ಮಠದ 1876ರ ದಾಖಲೆಯಲ್ಲಿ ಧರ್ಮಾಂಬುಧಿ ಕೆರೆಯನ್ನು ಸ್ಪಷ್ಟವಾಗಿ ದೊಡ್ಡಕೆರೆ ಎಂದು ದಾಖಲಿಸಿರುವುದಾಗಿ ಉದಯಭಾನು ಕಲಾಸಂಘ ಹೊರತಂದ “ಬೆಂಗಳೂರು ದರ್ಶನ’ ಕುರಿತ ಕೃತಿಯಲ್ಲಿ ಟಿ.ಆರ್. ಅನಂತರಾಮು ಉಲ್ಲೇಖೀಸಿದ್ದಾರೆ.
1928ರಲ್ಲೇ ಟೋಲ್‌ಗೇಟ್!: 1928-29ರಲ್ಲಿ ಕೇವಲ 8 ಬಸ್‌ಗಳು ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಇದಲ್ಲದೆ ಹತ್ತು ಬಸ್ ಗಳು ಬೆಂಗಳೂರು ಕಂಟೋನ್‌ಮೆಂಟ್‌ನಿಂದ ನಗರದ ಇತರೆ ಭಾಗಗಳ ನಡುವೆ ಕಾರ್ಯಾಚರಣೆ ಮಾಡುತ್ತಿದ್ದವು.
ಅಂದಹಾಗೆ ಆ ಕಾಲದಲ್ಲೇ ನಗರ ಪ್ರವೇಶದಲ್ಲಿ ಐದು ಟೋಲ್ ಗೇಟ್‌ಗಳಿದ್ದವು. ಈ ಗೇಟ್‌ಗಳಿಂದ ವಾರ್ಷಿಕ 33,280 ರೂ. ಸಂಗ್ರಹ ಆಗುತ್ತಿತ್ತು. ಬೈರಪಟ್ಟಣ, ಅತ್ತಿಬೆಲೆ, ದಾಬಸ್‌ಪೇಟೆ, ಹಿಂಡಿಗನಾಳ್, ಅವತಿ ಎಂಬಲ್ಲಿ ಈ ಟೋಲ್‌ಗೇಟ್‌ಗಳಿದ್ದವು.
ನೆನಪಿಗಾಗಿ ಕಾಫಿ ಟೇಬಲ್ ಬುಕ್ : ಸುವರ್ಣ ಮಹೋತ್ಸವದ ಸ್ಮರಣಾರ್ಥ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಕುರಿತ ಟೇಬಲ್ ಬುಕ್ ಹಾಗೂ ವಸ್ತುಸಂಗ್ರಹಾಲಯ ಮಾಡಲು ನಿಗಮ ಉದ್ದೇಶಿಸಿದೆ. ರೈಲ್ವೆ ವಸ್ತುಸಂಗ್ರಹಾಲಯದ ಮಾದರಿಯಲ್ಲಿ ಈ ವಸ್ತುಸಂಗ್ರಹಾಲಯ ಇರಲಿದೆ. ಜತೆಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಕಾಫಿ ಟೇಬಲ್ ಬುಕ್ ಹೊರತರಲಾಗುವುದು. ಅಲ್ಲದೆ, ಕೆಂಪೇಗೌಡ ಬಸ್ ನಿಲ್ದಾಣದ ಚಿತ್ರ ಮತ್ತು ಸುವರ್ಣ ಮಹೋತ್ಸವದ ಲಾಂಛನ ಒಳಗೊಂಡ ವಿಶೇಷ ಅಂಚೆ ಚೀಟಿ ಹಾಗೂ ಲಕೋಟೆ ಬಿಡುಗಡೆ ಮಾಡುವ ಚಿಂತನೆಯೂ ಇದೆ. ಆದರೆ, ಇನ್ನೂ ಅಂತಿಮಗೊಂಡಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಬಸ್‌ಗಳೂ ಬಂದವು: 1969ರ ಜೂನ್‌ನಲ್ಲೇ ಕೆಂಪೇಗೌಡ ಬಸ್ ನಿಲ್ದಾಣ ಉದ್ಘಾಟನೆಯಾದರೂ, ಆರಂಭದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಅಲ್ಲಿಂದ ಕಾರ್ಯಾಚರಣೆ ಮಾಡುತ್ತಿದ್ದವು. ಅಷ್ಟಕ್ಕೂ ಆಗ ಬಸ್‌ಗಳ ಸಂಖ್ಯೆಯೇ ಕಡಿಮೆ ಇತ್ತು. ನಂತರದಲ್ಲಿ ನಿಧಾನವಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಾದಂತೆ ಬಸ್ ಗಳೂ ಸ್ಥಳಾಂತರಗೊಂಡವು. ಯಾವಾಗ ಸರ್ಕಾರಿ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದವೋ, ಬೆನ್ನಲ್ಲೇ ಖಾಸಗಿ ಬಸ್‌ಗಳೂ ಇತ್ತ ಲಗ್ಗೆ ಇಟ್ಟವು. 70ರ ದಶಕದಲ್ಲಿ ಶರ್ಮಾ ಟ್ರಾವೆಲ್ ಸೇರಿದಂತೆ ಕೆಲವು ಟ್ರಾವೆಲ್ ಕಂಪನಿಗಳು ಇಲ್ಲಿಗೆ ಸ್ಥಳಾಂತರಗೊಂಡಿದ್ದು ನನಗೆ ನೆನಪಿದೆ ಎಂದು ದೇವರಕೊಂಡಾರೆಡ್ಡಿ ಮೆಲುಕುಹಾಕಿದರು. ಕೆಎಸ್‌ಆರ್‌ಟಿಸಿ ನಿಲ್ದಾಣ ಬರುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಕಾಲದಲ್ಲಿ ಬಿಟಿಎಸ್ ಬಸ್ ನಿಲ್ದಾಣವೂ ತಲೆಯೆತ್ತಿತು. ಅಲ್ಲಿಗೆ ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಮತ್ತು ನಗರ ಬಸ್ ನಿಲ್ದಾಣಗಳು ಒಂದೇ ಕಡೆಗೆ ಬಂದವು. ಇದರಿಂದ ಜನರಿಗೂ ಅನುಕೂಲ ಆಯಿತು ಎಂದು ತಿಳಿಸಿದರು.
● ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.