ಸೇವೆಯಿಂದ ಮನಗೆದ್ದ ಬಿಎಂಟಿಸಿ ಚಾಲಕರು
Team Udayavani, Apr 2, 2020, 1:12 PM IST
ಬೆಂಗಳೂರು: ಕೋವಿಡ್ 19 ವೈರಸ್ ಶಂಕಿತ ಮತ್ತು ಸೋಂಕಿತರೊಂದಿಗೆ ಜೀವದ ಹಂಗುತೊರೆದು ನಿತ್ಯ ವ್ಯವಹರಿಸುವರು ವೈದ್ಯರು. ಆ ವೈದ್ಯರೊಂದಿಗೆ ವ್ಯವಹರಿಸುವ ಇನ್ನೊಂದು ವರ್ಗ ಇದೆ. ಅದು ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು!
ಪ್ರಸ್ತುತ ಉಂಟಾಗಿರುವ ಸಂದಿಗ್ಧ ಸ್ಥಿತಿಯಲ್ಲೂ ಹೆಚ್ಚು-ಕಡಿಮೆ ವೈದ್ಯರು, ಪೊಲೀಸರಷ್ಟೇ ಈ ಸಿಬ್ಬಂದಿ ಕಳೆದ ಒಂದು ವಾರದಿಂದ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ತುರ್ತು ಸೇವಾ ಸಿಬ್ಬಂದಿಯ ಮನ ಗೆದ್ದಿದ್ದಾರೆ. ಇಡೀ ನಗರ ಸ್ತಬ್ದಗೊಂಡಿದೆ. ಸಮೂಹ ಸಾರಿಗೆಗಳಲ್ಲಿ ಕೋವಿಡ್ 19 ವೈರಸ್ ಹರಡುವಿಕೆಯ ಸಾಧ್ಯತೆ ಹೆಚ್ಚೆಂದು ಅದನ್ನು ನಿಲ್ಲಿಸಲಾಗಿದೆ. ಕೆಲವು ಬಸ್‌ಗಳನ್ನು ಮಾತ್ರ ತುರ್ತು ಸೇವೆಗೆ ಬೀದಿಗಿಳಿಸಲಾಗಿದೆ. ಅದರಲ್ಲಿ 300ಕ್ಕೂ ಅಧಿಕ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸಲು ಮುಂದೆಬಂದಿದ್ದಾರೆ.
ನಿತ್ಯ ವೈದ್ಯರು, ಪೊಲೀಸರು, ಬಿಬಿಎಂಪಿಯ ಕೆಲವು ವಿಭಾಗಗಳ ನೌಕರರು, ಜಲಮಂಡಳಿ, ಬ್ಯಾಂಕ್ ಸಿಬ್ಬಂದಿ ಸೇರಿದಂತೆ ತುರ್ತುಸೇವೆ ಸಲ್ಲಿಸುವ ಸಾವಿರಾರು ಜನರಿಗೆ ನಿತ್ಯ ನಿಗದಿತ ಸ್ಥಳಕ್ಕೆ ಕೊಂಡೊಯ್ದು, ಅಷ್ಟೇ ಸುರಕ್ಷಿತವಾಗಿ ಮನೆಗೆ ತಂದುಬಿಡುವ ಕೆಲಸವನ್ನು ಚಾಲನಾ ಸಿಬ್ಬಂದಿ ಕಳೆದ ಒಂದು ವಾರದಿಂದ ಮಾಡುತ್ತಿದ್ದಾರೆ. ಈ ವೇಳೆ ಬಿಡುವು ಮಾಡಿಕೊಂಡು ಚಾಲಕರು-ನಿರ್ವಾಹಕರು “ಉದಯವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.
ಆತಂಕದ ನಡುವೆ ಸಾರ್ಥಕತೆ: ವೈರಸ್ ಹಾವಳಿ ನಡುವೆಯೂ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜಲಗಾರರು ನೀರು ಬಿಡುತ್ತಿದ್ದಾರೆ. ಪೊಲೀಸರು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳೂ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರಿಗೆ ಸ್ವಂತ ವಾಹನ ಇಲ್ಲ. ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಇಂತಹ ವೇಳೆ ತುರ್ತು ಸೇವಾ ಸಿಬ್ಬಂದಿಗೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಆತಂಕದ ನಡುವೆಯೂ ಖುಷಿ ತಂದಿದೆ’ ಎಂದು ಕೆಂಗೇರಿ ಘಟಕದ ಬನಶಂಕರಿ ಮಾರ್ಗದ ಬಸ್ ನಿರ್ವಾಹಕ ಹರೀಶ್ ತಿಳಿಸಿದರು.
“ನಿತ್ಯ 6 ಟ್ರಿಪ್‌ಗ್ಳಲ್ಲಿ 150 ಕಿ.ಮೀ. ಓಡಾಟ. ಬೆಳಗ್ಗೆ ಗೃಹರಕ್ಷಕ ದಳ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್, ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳ 10-15 ಜನ ಪ್ರಯಾಣಿಕರು ನಮ್ಮ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಎಲ್ಲರಿಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಗುರುತಿನಚೀಟಿ ತೋರಿಸಿ ಬಸ್ ಏರುತ್ತಾರೆ ಎಂದು ಹರೀಶ್ ಹೇಳಿದರು.
ಬಿಎಂಟಿಸಿ ವ್ಯಾಪ್ತಿಯಲ್ಲಿ ತುರ್ತು ಸೇವೆಗಳಿಗಾಗಿ 185ಕ್ಕೂ ಅಧಿಕ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ಈ ಪೈಕಿ ಪಶ್ಚಿಮ ವಲಯದಿಂದ ನಿತ್ಯ 32-42 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ನಿತ್ಯ 300 ಟ್ರಿಪ್ ಪೂರೈಸುತ್ತಿವೆ. 65-80 ಚಾಲನಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಲ್ಲರೂ ಸ್ವಯಂಪ್ರೇರಿತವಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಶ್ಚಿಮ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ತಿಳಿಸಿದರು.
ಪಾಸ್ ಅವಧಿ ವಿಸ್ತರಣೆ : ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಮಾಸಿಕ ಪಾಸ್ ಅವಧಿಯನ್ನು ಬಿಎಂಟಿಸಿ ವಿಸ್ತರಣೆ ಮಾಡಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾಸಿಕ ಪಾಸು ವಿತರಿಸುತ್ತಿಲ್ಲ. ಹಾಗಾಗಿ, ಪ್ರಯಾಣಿಕರ ಅನುಕೂಲಕ್ಕಾಗಿ ಹಿಂದಿನ ತಿಂಗಳ (ಮಾರ್ಚ್ ಪಾಸು) ಪಾಸನ್ನು ಏ. 15ರವರೆಗೆ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರು ಮಾರ್ಚ್‌ನಲ್ಲಿ ಪಾಸು ಹಾಗೂ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇವೆಗೆ ಉತ್ತಮ ಅವಕಾಶ : “ಕೆಲವರು ಬೇರೆ ಬೇರೆ ಕಡೆಗಳಿಂದ ಬಂದಿರುತ್ತಾರೆ. ರೋಗಿಯೊಂದಿಗೆ ವ್ಯವಹರಿಸಿರಬಹುದು. ಅದರ ಭಯ ಇದ್ದೇ ಇರುತ್ತದೆ. ಆದರೆ, ಈ ಸಮಯದಲ್ಲಿ ಸೇವೆ ಸಲ್ಲಿಸಲು ನಮಗೊಂದು ಅವಕಾಶ. ರಸ್ತೆಗಿಳಿಯುವ ಮುನ್ನ ಬಸ್ ಸಂಪೂರ್ಣ ಸ್ವಚ್ಛಗೊಳಿಸಲಾಗಿರುತ್ತದೆ. ನಮಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗಿದ್ದು, ಅಂತರ ಕಾಯ್ದುಕೊಳ್ಳುತ್ತೇವೆ. ಹಾಗಾಗಿ, ಸಮಸ್ಯೆ ಇಲ್ಲ’ ಎಂದು ಬನಶಂಕರಿ ಮಾರ್ಗದ ಚಾಲಕ ಸತೀಶ್ ತಿಳಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೈಕ್‌ಗಳ ಮಧ್ಯೆ ಡಿಕ್ಕಿ: ಸವಾರ 3 ಪಲ್ಟಿ ಹೊಡೆದರೂ ಪಾರು
Metro Rail: ಮೆಟ್ರೋ ಹಳಿಗೆ ಜಿಗಿದ ಏರ್‌ಫೋರ್ಸ್ ನಿವೃತ ಅಧಿಕಾರಿ
Bengaluru: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾ*ಚಾರ!
Arrested: ಪತ್ನಿ, ಅತ್ತೆ ಮೇಲೆ ಹಲ್ಲೆ; ಆರೋಪಿ ಬಂಧನ
Bengaluru: ಟೆಕಿಯ 1 ತಿಂಗಳು ಡಿಜಿಟಲ್ ಅರೆಸ್ಟ್ ಮಾಡಿ 11.8 ಕೋಟಿ ರೂ. ವಂಚಿಸಿದ ಮೂವರ ಸೆರೆ