ನದಿ ಜೋಡಣೆ… ಕರ್ನಾಟಕದ ಪ್ರತಿಪಾದನೆ: ಸಚಿವ ಗೋವಿಂದ ಕಾರಜೋಳ
Team Udayavani, Dec 13, 2022, 10:45 PM IST
ಬೆಂಗಳೂರು: ಕೇಂದ್ರ ಜಲಶಕ್ತಿ ಸಚಿವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ 36ನೇ ವಾರ್ಷಿಕ ಸಾಮಾನ್ಯ ಮತ್ತು ನದಿ ಜೋಡಣೆ ವಿಶೇಷ ಸಮಿತಿಯ 20ನೇ ಸಭೆಯಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಭಾಗವಹಿಸಿ ಕರ್ನಾಟಕದ ನಿಲುವು ಮಂಡಿಸಿದರು.
ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಮಹಾನದಿ ಮತ್ತು ಗೋದಾವರಿ ಕಣಿವೆ ನದಿ ಜೋಡಣೆಯ ಮೂಲಕ ನೀರು ತಿರುವುಗೊಳಿಸುವ ಯೋಜನೆಯಲ್ಲಿ ಕರ್ನಾಟಕದ ಪಾಲನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ಸಭೆಯ ಗಮನಕ್ಕೆ ತಂದರು.
2010ರಿಂದಲೂ ಕರ್ನಾಟಕ ಈ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯನ್ನು ಕೋರುತ್ತಿದೆ. ಈ ನಿಲುವನ್ನು ಕರ್ನಾಟಕದ ಮುಖ್ಯಮಂತ್ರಿಯವರು ದಕ್ಷಿಣ ರಾಜ್ಯಗಳ ಪರಿಷತ್ತಿನ ಸಭೆಗಳಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು ಸಚಿವರು ಸಭೆಗೆ ತಿಳಿಸಿದರು.
ಗೋದಾವರಿ ಮತ್ತು ಕೃಷ್ಣಾ ಕಣಿವೆಗಳ ಸದ್ಯ ಚಾಲ್ತಿಯಲ್ಲಿರುವ ನ್ಯಾಯ ಮಂಡಳಿಯ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಮಹಾನದಿ ಮತ್ತು ಗೋದಾವರಿ ನದಿಗಳ ಹೆಚ್ಚುವರಿ ನೀರಿನ ಹಂಚಿಕೆಯನ್ನು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ 2015ರಲ್ಲಿ ಕರ್ನಾಟಕಕ್ಕೆ ತಿಳಿಸಿದೆ ಎಂದು ಸಚಿವರು ವಿವರಿಸಿದರು. ಆದರೆ, ಕೇಂದ್ರ ಜಲಸಂಪನ್ಮೂಲ ಇಲಾಖೆ ಮತ್ತು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ನೀಡಿದ ಭರವಸೆಯ ಹೊರತಾಗಿಯೂ ಗೋದಾವರಿ ಮತ್ತು ಕಾವೇರಿ ನದಿ ಜೋಡನೆ ಯೋಜನೆಯ ಡಿಪಿಆರ್‌ನಲ್ಲಿ ಗೋದಾವರಿ ಜಲಾನಯನದ ಹೆಚ್ಚುವರಿ ನೀರಿನಿಂದ ಕರ್ನಾಟಕ ರಾಜ್ಯಕ್ಕೆ ನ್ಯಾಯಸಮ್ಮತ ನೀರಿನ ಪ್ರಮಾಣವನ್ನು ಸೂಚಿಸಿಲ್ಲ ಮತ್ತು ಮಾಡಿರುವುದಿಲ್ಲ ಎಂದು ತಿಳಿಸಿದರು.
ಆಲಮಟ್ಟಿ-ಪೆನ್ನಾರ ನದಿ ಜೋಡಣೆ ಯೋಜನೆ ಕುರಿತು ಈಗಾಗಲೇ ಕರ್ನಾಟಕ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಡಿಸುವ ಪ್ರಕ್ರಿಯೆ ಮುಂದುವರಿಸಬಾರದು ಎಂದು ಕರ್ನಾಟಕ ಪ್ರತಿಪಾದಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.