ಗೆದ್ದ ತಕ್ಷಣವೇ ಕ್ಷೇತ್ರ ಅಭಿವೃದ್ಧಿಗೆ ನೀಲನಕ್ಷೆ: ಪ್ರಿಯಕೃಷ್ಣ
Team Udayavani, May 4, 2023, 10:23 AM IST
ಬೆಂಗಳೂರು: ಕಳೆದ ಮೂರು ಚುನಾವಣೆಯಲ್ಲಿ ನೋಡಿದಂತೆ ಬಿಜೆಪಿ ಪಕ್ಷವನ್ನು ಎದುರಾಳಿ ಎನ್ನಬಹುದು. ಆದರೆ, ಈ ಚುನಾವಣೆ ವಿಶೇಷವಾಗಿದ್ದು, ಗೋವಿಂದರಾಜನಗರದ ಜನರ ಪೂರ್ಣ ಆಶೀರ್ವಾದ ನನ್ನ ಮೇಲಿದೆ. ಯಾವುದೇ ಲಂಚಾವತಾರ, ದುರಾಡಳಿತ, ಜನರಿಗೆ ತೊಂದರೆ ಕೊಡುವ ಪ್ರವೃತ್ತಿ ಇಲ್ಲ. ಜನರಿಗೆ ಕೈಲಾದ ಸಹಾಯ ಮಾಡುವ, ಮೂಲಭೂತ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದ್ದು, ಮನೆ ಮಗನ ರೀತಿ ಇರುತ್ತೇನೆ. ಚುನಾವಣೆ ಗೆದ್ದ ಮರುಕ್ಷಣವೇ ಕ್ಷೇತ್ರದ ಸಮಸ್ಯೆಗಳ ಪಟ್ಟಿ ಮಾಡಿ, ಅವುಗಳ ನಿವಾರಣೆಗೆ ನೀಲನಕ್ಷೆ ತಯಾರಿಸಿ ಇಡೀ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಇವು ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅವರ ಮಾತುಗಳು. “ಉದಯವಾಣಿ’ ಸಂದರ್ಶನದಲ್ಲಿ ಕ್ಷೇತ್ರದ ಬಗ್ಗೆ ಇರುವ ಕನಸುಗಳನ್ನು ಬಿಚ್ಚಿಟ್ಟರು.
ಜತೆಗೆ ಅಭಿವೃದ್ಧಿ ವಿಷಯವನ್ನೇ ಮುಂದಿಟ್ಟುಕೊಂಡು ನನಗೆ ಮತ ನೀಡುವಂತೆ ಕೇಳುತ್ತಿದ್ದೇನೆ. ಹಿರಿಯರು, ಯುವಕರು, ಮಹಿಳೆಯರು ಎನ್ನದೇ ಎಲ್ಲರೂ ಸಹಕಾರ ನೀಡುತ್ತಿದ್ದೂ, ಒಂದು ಲಕ್ಷಕ್ಕೂ ಅಧಿಕ ಮತ ಪಡೆಯುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜನರಿಗೆ ಸೂಕ್ತ ಶಿಕ್ಷಣ, ಆರೋಗ್ಯ ನೀಡುವ ನಿಟ್ಟಿನಲ್ಲಿ ನಿಮ್ಮ ಸಾಧನೆ ಏನು?
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಾನು ಶಾಸಕನಾಗಿದ್ದ ವೇಳೆ ಹೆಚ್ಚು ಒತ್ತು ನೀಡಿದ್ದೇನೆ. ಸರ್ಕಾರಿ ಆಸ್ಪತ್ರೆಗಳ, ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಶಾಸಕನಿಗೆ ಬರುವ ಸಂಬಳವನ್ನು ನಿಮ್ಹಾನ್ಸ್, ಕಿದ್ವಾಯಿ, ವಿಕ್ಟೋರಿಯಾ ಆಸ್ಪತ್ರೆಯ ಬಡ ರೋಗಿಗಳ ವೈದ್ಯಕೀಯ ಸೇವೆಗೆ ನೀಡಲಾಗಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತಿದೆ. ಕೊರೊನಾ ಸಮಯದಲ್ಲಿ ಆಕ್ಸಿಜನ್ ಇರುವ ಬಸ್‌ಗಳು, ಔಷಧ, ಆಹಾರ ಕಿಟ್ ನೀಡಲಾಗಿದೆ.
ನಿಮ್ಮ ಕ್ಷೇತ್ರದ ಚುನಾವಣಾ ಪ್ರಚಾರವು ಯಾವ ರೀತಿಯಲ್ಲಿ ಸಾಗುತ್ತಿದೆ ? ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಅತ್ಯಂತ ಭರದಿಂದ ನಡೆಯುತ್ತಾ ಇದೆ. ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ, ಪ್ರಣಾಳಿಕೆ ಬಗ್ಗೆ, ನಾನು ಶಾಸಕನಾಗಿದ್ದ ಸಮಯದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ವಿವರಿಸುತ್ತಾ ಮತಯಾಚನೆ ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ನಾಯಕರು, ಜನರು ಸ್ವಯಂ ಪ್ರೇರಿತರಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಎದುರಾಳಿ ಬಗ್ಗೆ ಏನು ಹೇಳಲು ಇಚ್ಛಿಸುತ್ತೀರಿ ? ಎದುರಾಳಿ ಯಾರು ಎಂಬುದರ ಬಗ್ಗೆ ಗಮನ ಹರಿಸದೆ ಜನರ ನಡುವೆ ಬೆರೆಯುತ್ತಾ ಮತ ಯಾಚನೆ ಮಾಡುತ್ತಿದ್ದೇವೆ. ಒಂದು ಲಕ್ಷಕ್ಕೂ ಅಧಿಕ ಮತ ಪಡೆಯುವ ಗುರಿಯೇ ಪ್ರಮುಖವಾಗಿದೆ. ಸದಾ ಜನರ ಒಳಿತಿಗಾಗಿ ನಮ್ಮ ಕರ್ತವ್ಯ ನಿಭಾಯಿಸುತ್ತೇನೆ. ಎದುರಾಳಿಗಳ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ಈ ಬಾರಿ ಕ್ಷೇತ್ರದ ಜನರು ನಮ್ಮ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ.
ನೀವು ಶಾಸಕರಾಗಿದ್ದ ಸಂರ್ಭದಲ್ಲಿ ಏನೆಲ್ಲಾ ಸೌಕರ್ಯ ಒದಗಿಸಿದ್ದೀರಿ?
ಹೌದು. ನಾನು ಶಾಸಕನಾಗಿದ್ದ ವೇಳೆ ಉತ್ತಮ ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ತುಂಬಾ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಕ್ಷೇತ್ರದಲ್ಲಿ ಆಟದ ಮೈದಾನಗಳು, ಪಾರ್ಕ್‌ಗಳ ಅಭಿವೃದ್ಧಿ, ಅಂಡರ್ ಪಾಸ್ ಅಭಿವೃದ್ಧಿ, ಶಾಲೆಗಳ ಅಭಿವೃದ್ಧಿ, ಗ್ರಂಥಾಲಯ ನಿರ್ಮಾಣ, ಉತ್ತಮ ಒಳಚರಂಡಿ ವ್ಯವಸ್ಥೆ, ಪಂಚಶೀಲನಗರದ ಖಾತಾ ನೀಡುವಿಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಮುಂತಾದವು ಪ್ರಮುಖ ಕೆಲಸಗಳನ್ನು ಮಾಡಿದ್ದೇವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.