ಮಾನಿನಿಯರಿಗೆ “ಮಹಾ’ ಕೊಡುಗೆ
Team Udayavani, Feb 19, 2019, 6:47 AM IST
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2019-20ನೇ ಸಾಲಿಗೆ ಸೋಮವಾರ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಬರೋಬ್ಬರಿ 10,688.63 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಆ ಪೈಕಿ ಒಂದು ಸಾವಿರ ಕೋಟಿ ರೂ. “ನಿಧಿ’ ಜನಪ್ರತಿನಿಧಿಗಳಿಗೆ ಮೀಸಲಿಟ್ಟಿದೆ. ಒಟ್ಟು ಬಜೆಟ್ ಗಾತ್ರದಲ್ಲಿ ಶೇ.10ರಷ್ಟು ಹಣ ಶಾಸಕರು, ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ ಕೆಲವೇ ಜನಪ್ರತಿನಿಧಿಗಳ ಕ್ಷೇತ್ರಗಳ ಪಾಲಾಗಿದೆ.
ಕಳೆದ ಬಜೆಟ್‌ನಲ್ಲಿ ಜನಪ್ರತಿನಿಧಿಗಳ ಕ್ಷೇತ್ರ ಅಭಿವೃದ್ಧಿ ಮತ್ತು ವಿವೇಚನೆ ಮೇರೆಗೆ ಬಳಸಲು ಅಂದಾಜು 800 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ “ನವ ಬೆಂಗಳೂರು ಯೋಜನೆ’ಯಡಿ 2,300 ಕೋಟಿ ರೂ. ಅನುದಾನ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಕೆಲವೇ ಜನಪ್ರತಿನಿಧಿಗಳ ಕ್ಷೇತ್ರ/ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ಜನಪ್ರತಿನಿಧಿಗಳ ಅನುದಾನದ ದೊಡ್ಡ ಪಾಲು ಕಾಂಗ್ರೆಸ್- ಜೆಡಿಎಸ್ ಶಾಸಕರ ಪಾಲಾಗಿದೆ. ಬಜೆಟ್‌ನಲ್ಲಿ ತೋರಿಸಿರುವಂತೆ ಸರ್ಕಾರದ 14ನೇ ಹಣಕಾಸು ಆಯೋಗದ ಅಡಿಯಲ್ಲಿ ಬಿಡುಗಡೆಯಾಗಿರುವ 405.76 ಕೋಟಿ ರೂ. ಅನುದಾನದಲ್ಲಿ ಬಿಜೆಪಿ ಕ್ಷೇತ್ರಗಳಿಗೆ ಕಡಿಮೆ ಅನುದಾನ ಹಂಚಿಕೆಯಾಗಿದೆ. ಅದರಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒಟ್ಟು 96 ಕೋಟಿ ರೂ. ಹಾಗೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕೇವಲ 36 ಕೋಟಿ ರೂ. ಅನುದಾನ ಘೋಷಣೆಯಾಗಿದೆ.
ಘೋಷಣೆಗಳು
ಮಹಿಳಾ ಕಲ್ಯಾಣಕ್ಕೆ ಒತ್ತು: ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು , ಒಂದು ವರ್ಷದಲ್ಲಿ ಪಾಲಿಕೆ ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ತಲಾ 1 ಲಕ್ಷ ರೂ. ಬಾಂಡ್ ನೀಡುವ “ಮಹಾಲಕ್ಷ್ಮಿ’, ಮಹಿಳಾ ಸ್ವ ಉದ್ಯೋಗಿಗಳಿಗೆ ಸಂಚಾರಿ ಕ್ಯಾಂಟೀನ್ ನಡೆಸಲು ಶೇ.50ರಷ್ಟು ಸಬ್ಸಿಡಿ ನೀಡುವ “ಅನ್ನಪೂಣೇಶ್ವರಿ’ ಎಂಬ ಎರಡು ಹೊಸ ಯೋಜನೆ ಘೋಷಿಸಲಾಗಿದ್ದು, ಮಹಿಳಾ ಹಾಗೂ ಎಸ್‌ಸಿ-ಎಸ್‌ಟಿ ಸಮುದಾಯದ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ.
ಸಮಗ್ರ ಅಭಿವೃದ್ಧಿಗೆ ಪ್ಯಾಕೇಜ್: ಮುಖ್ಯಮಂತ್ರಿಯವರ ನವ ನಗರ ನಿರ್ಮಾಣ ಯೋಜನೆಯ ಅನುದಾನದಡಿ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಯೋಜನೆ ಸೇರಿ ಮೂಲಸೌಕರ್ಯ ಅಭಿವೃದ್ಧಿ “ಪ್ಯಾಕೇಜ್’ ಘೋಷಿಸಲಾಗಿದೆ. ಆದಾಯ ಸಂಗ್ರಹಣೆಗೂ ಹೊಸ ಮಾರ್ಗ ಕಂಡುಕೊಂಡಿದ್ದು, ಖಾಸಗಿ ಶಾಲೆಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳ ಕಟ್ಟಡಗಳ ಮೇಲೆ ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. ಆಸ್ತಿ ತೆರಿಗೆ ಮೂಲದಿಂದ 3500 ಕೋಟಿ ರೂ., ನಗರ ಯೋಜನೆ ವಿಭಾಗದಿಂದ 841 ಕೋಟಿ ರೂ. ಸರ್ಕಾರ ಸಂಗ್ರಹಿಸುವ ಮುದ್ರಾಂಕ ಶುಲ್ಕದಿಂದ ಶೇ.2 ರಷ್ಟು ಪಾಲು 100 ಕೋಟಿ ರೂ. ಸಂಗ್ರಹ ನಿರೀಕ್ಷೆ ಹೊಂದಲಾಗಿದೆ.
ಬೃಹತ್ ಯೋಜನೆಗಳಿಲ್ಲ: ಕೊಳೆಗೇರಿಗಳಿಗೆ ಅಭಿವೃದ್ಧಿಗೆ ವಿಶೇಷ ಅನುದಾನ, ಮಹಿಳೆಯರ ಆರೋಗ್ಯಕ್ಕೆ ವಿಶೇಷ ಕಾಳಜಿ, ವಿಕಲಚೇತನರಿಗೆ ಹೆಚ್ಚಿನ ಅನುದಾನ, ಮಹಿಳಾ ಸಬಲೀಕರಣಕ್ಕೆ ಆದ್ಯತೆ, ಮಾಲಿನ್ಯ ಹಾಗೂ ಕೆರೆಗಳ ಸಂರಕ್ಷಣೆ ಸೇರಿದಂತೆ ಕೆಲ ಜನಪ್ರಿಯ ಯೋಜನೆಗಳ ಜತೆಗೆ ಎಲ್ಲ ಹಳೆಯ ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಆದರೆ, ಬಜೆಟ್‌ನಲ್ಲಿ ಯಾವುದೇ ಬೃಹತ್ ಯೋಜನೆಗಳಿಗೆ ಕೈಹಾಕಲು ಅಧ್ಯಕ್ಷರು ಮುಂದಾಗಿಲ್ಲ.
ಆರೋಗ್ಯ, ನೈರ್ಮಲ್ಯಕ್ಕೆ ಹಣ: ಕೊಳೆಗೇರಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ 60 ಕೋಟಿ ರೂ., ಕೊಳೆಗೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕ್ಯಾನ್ಸರ್ ಹಾಗೂ ಹೃದ್ರೋಗಿಗಳಿಗೆ ಉಚಿತ ಚಿಕಿತ್ಸೆ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಉಚಿತ ಬೈಸಿಕಲ್ ವಿತರಣೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿಯಂತಹ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಆದಾಯದ ಮೂಲಗಳ ಅನ್ವೇಷನೆ: ಹೊಸದಾಗಿ 100 ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೇಗೆ ಒಳಪಡಿಸುವ ಮೂಲಕ 400 ಕೋಟಿ ರೂ. ಆದಾಯ ಗಳಿಸುವುದು, ಮೊಬೈಲ್ ಟವರ್‌ಗಳಿಗೆ ಶುಲ್ಕ ಸಂಗ್ರಹ ಸೇರಿ ಪಾಲಿಕೆಯ ವರಮಾನದ ಮೂಲಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ.
ಅನುದಾನದ ನೀಡಿ ಸಮಾಧಾನ: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಕ್ವಾರಿಗಳು ಹಾಗೂ ಘಟಕಗಳ ಬಳಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹೇಮಲತಾ ಅವರು ಅನುದಾನದ ಮೂಲಕ ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದಾರೆ. ಪಾಲಿಕೆಯ ಘಟಕಗಳಿರುವ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವ ಮೂಲಕ ಗ್ರಾಮಸ್ಥರನ್ನು ಸಮಾಧಾನ ಪಡಿಸಲಾಗಿದೆ.
ಸಿದ್ಧಗಂಗಾ, ಆದಿಚುಂಚನಗಿರಿ ಶ್ರೀ ಪುತ್ಥಳಿ: ನಗರದ ಎರಡು ಪ್ರಮುಖ ರಸ್ತೆಗಳಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಗಳನ್ನು ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿದೆ. ತುಮಕೂರು ರಸ್ತೆಯಲ್ಲಿ ಶಿವಕುಮಾರ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ಉದ್ದೇಶಿಸಿದ್ದು, ಇದಕ್ಕಾಗಿ 5 ಕೊಟಿ ರೂ. ಮೀಸಲಿಡಲಾಗಿದೆ.
ಅಲ್ಲದೆ, ಅಂಗವಿಕಲ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ಬದುಕು ಕಟ್ಟಿಕೊಡುತ್ತಿರುವ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಪಾಲಿಕೆಯಿಂದ ಪ್ರತಿ ವರ್ಷ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ನಗದು ಪ್ರಶಸ್ತಿ ನೀಡಲಿದ್ದು, ಇದಕ್ಕಾಗಿ 25 ಲಕ್ಷ ರೂ. ಮೀಸಲಿಡಲಾಗಿದೆ. ಇದೇ ರೀತಿ, ಕಾರ್ಡ್‌ರೋಡ್ ರಸ್ತೆಯಿಂದ ಕುರುಬರಹಳ್ಳಿ ಮೂಲಕ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಗೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿಡಲಾಗುವುದು. ಜತೆಗೆ ಸ್ವಾಮೀಜಿಯ ಕಂಚಿನ ಪುತ್ಥಳಿ ಸ್ಥಾಪಿಸಲಾಗುವುದು ಎಂದು ಹೇಮಲತಾ ಗೋಪಾಲಯ್ಯ ಪ್ರಕಟಿಸಿದರು.
ಮಹಾಲಕ್ಷ್ಮಿಗೆ ಒಂದು ಲಕ್ಷ ರೂ.: 2019ರ ಏಪ್ರಿಲ್ 1ರಿಂದ 2020ರ ಮಾರ್ಚ್ 31ರ ಅವಧಿಯಲ್ಲಿ ಜನಿಸುವ ಹೆಣ್ಣುಮಗುವಿನ ಹೆಸರಿನಲ್ಲಿ ಒಂದು ಲಕ್ಷ ಮೌಲ್ಯದ ಬಾಂಡ್ ವಿತರಿಸುವ ಯೋಜನೆಯನ್ನು ಪ್ರಕಟಿಸಲಾಗಿದೆ. 15 ವರ್ಷಗಳ ಅವಧಿಯ ಈ ಬಾಂಡ್, ಹೆಣ್ಣುಮಗುವಿನ ಶಿಕ್ಷಣ ಮತ್ತು ವಿವಾಹ ಸಂದರ್ಭದಲ್ಲಿ ನೆರವಿಗೆ ಬರಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 24 ಆಸ್ಪತ್ರೆಗಳಿದ್ದು, ಅಲ್ಲೆಲ್ಲಾ ಈ ಯೋಜನೆ ಅನ್ವಯ ಆಗಲಿದೆ.
“ಅನ್ನಪೂರ್ಣೇಶ್ವರಿ’ಗೆ ಸಬ್ಸಿಡಿ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸ್ವ-ಉದ್ಯೋಗಕ್ಕಾಗಿ “ಅನ್ನಪೂರ್ಣೇಶ್ವರಿ’ ಯೋಜನೆಯನ್ನು ಪ್ರಕಟಿಸಲಾಗಿದ್ದು, ಇದರಡಿ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಸಂಚಾರಿ ಕ್ಯಾಂಟೀನ್ ವಾಹನಗಳ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ 5 ಕೋಟಿ ರೂ. ನೀಡಲಾಗಿದೆ.
ಅಲ್ಲದೆ, ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚಿ, ಚಿಕಿತ್ಸೆ ಒದಗಿಸಲು ಸುಸಜ್ಜಿತವಾದ ಎರಡು ಸುಸಜ್ಜಿತ “ಸಂಚಾರಿ ಬಸ್’ಗಳ ಖರೀದಿಗೆ 3 ಕೋಟಿ ರೂ. ಮೀಸಲಿಡಲಾಗಿದೆ. ಜತೆಗೆ ಜೆ.ಜೆ.ಆರ್. ನಗರದ ಡಾ.ಬಾಬು ಜಗಜೀವನರಾಮ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಆರಂಭಿಸಲು 50 ಲಕ್ಷ ರೂ. ಘೋಷಿಸಲಾಗಿದೆ. ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿರುವ ಮಹಿಳೆಯರಿಗಾಗಿಯೇ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು 10 ಲಕ್ಷ ರೂ. ವಿಶೇಷ ಅನುದಾನ ನೀಡಲಾಗಿದೆ.
ಆರ್‌ಒ ಘಟಕಗಳು – ಮನೆಗಳ ನಿರ್ಮಾಣ: ಕಲ್ಯಾಣ ಕಾರ್ಯಕ್ರಮದಡಿ ಪಾಲಿಕೆಯ ಎಲ್ಲ 198 ವಾರ್ಡ್‌ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಕೊಳಚೆಪ್ರದೇಶಗಳಲ್ಲಿ ವಾಸಿಸುವ ಜನರಿಗಾಗಿ ತಲಾ 15 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಿದ್ದು, ಇದಕ್ಕಾಗಿ 30 ಕೋಟಿ ರೂ. ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರತಿ ವಾರ್ಡ್ ತಲಾ ಹತ್ತು ಮನೆಗಳ ನಿರ್ಮಾಣಕ್ಕೆ ನೂರು ಕೋಟಿ ರೂ.
ಸ್ಮಶಾನ/ ರುದ್ರಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವೈಯಕ್ತಿಕ ಮನೆ ನಿರ್ಮಾಣಕ್ಕೆ ಒಂದು ಕೋಟಿ ರೂ. ತೆಗೆದಿಡಲಾಗಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಈ ಬಾರಿ 75 ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ ಪ್ರತಿ ವಾರ್ಡ್‌ಗೆ ತಲಾ ಹತ್ತು ತ್ರಿಚಕ್ರ ವಾಹನಗಳನ್ನು ವಿತರಿಸಲು ಉದ್ದೇಶಿಸಿದ್ದು, ಇದಕ್ಕಾಗಿ 10 ಕೋಟಿ ರೂ. ಮೀಸಲಿಡಲಾಗಿದೆ. ಕಿವುಡ, ಮೂಗ ಮತ್ತು ಅಂಧರಿಗಾಗಿ ಶಾಲೆಗಳನ್ನು ನಡೆಸುತ್ತಿರುವ ದತ್ತಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕವಾಗಿ ಪ್ರೋತ್ಸಾಹಿಸಲು 10 ಕೋಟಿ ರೂ. ಕೊಡಲಾಗಿದೆ.
ಬಿಸಿಯೂಟ ಪಿಯುವರೆಗೆ: ವಿಸ್ತರಣೆ ಶಿಕ್ಷಣಕ್ಕೂ ವಿಶೇಷ ಒತ್ತು ನೀಡಲಾಗಿದ್ದು, ಪಾಲಿಕೆಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೂ ಈ ಬಾರಿಯಿಂದ ಬಿಸಿಯೂಟ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ 1 ಕೋಟಿ ರೂ. ತೆಗೆದಿಡಲಾಗಿದೆ. ಎಲ್ಲ ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ಎರಡು ಕೋಟಿ ರೂ., ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟು, ಅದರಿಂದ ಬರುವ ಬಡ್ಡಿಯಿಂದ ಚಿಕಿತ್ಸಾ ವೆಚ್ಚ ಭರಿಸಲಾಗುವುದು.
ಈ ಸಂಬಂಧ 1 ಕೋಟಿ. ನೀಡಲಾಗಿದೆ. ಅದೇ ರೀತಿ, ಪಾಲಿಕೆ ಮಕ್ಕಳನ್ನು ಪ್ರೋತ್ಸಾಹಿಸಲು ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ 150 ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ., ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ ನೂರು ವಿದ್ಯಾರ್ಥಿಗಳಿಗೆ 35 ಸಾವಿರ ರೂ. ನಗದು ಬಹುಮಾನ ಕೂಡ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೋಟಿ ರೂ. ಇಡಲಾಗಿದೆ. ಇದರೊಂದಿಗೆ ರೋಷಿನಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗುತ್ತಿದೆ.
ಬರಲಿವೆ ಡಯಾಲಿಸಿಸ್ ಕೇಂದ್ರ: ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ತಲಾ ಒಂದು ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮತ್ತು ನಿರ್ವಹಣೆಗೆ 25 ಕೋಟಿ ರೂ., ಬೈಕ್ ಆಂಬ್ಯುಲನ್ಸ್ ಖರೀದಿಗೆ 2 ಕೋಟಿ, ದುಶ್ಚಟ ನಿವಾರಣಾ ಕೇಂದ್ರಕ್ಕೆ 2 ಕೋಟಿ, ತಾಯಿ ಮಡಿಲು ಯೋಜನೆಗೆ 1.50 ಕೋಟಿ, ಎಸ್‌ಡಿಎಸ್ ರಾಜೀವ್‌ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ ಆಸ್ಪತ್ರೆಯಲ್ಲಿ ಧರ್ಮಶಾಲೆ ಸ್ಥಾಪನೆಗೆ 5 ಕೋಟಿ, ಪ್ರತಿ ವಾರ್ಡ್‌ಗಳಲ್ಲಿ ತಲಾ 50 ಬೈಸಿಕಲ್ ವಿತರಣೆಗೆ 4 ಕೋಟಿ,
ಪ್ರತಿ ವಾರ್ಡ್‌ಗೆ ತಲಾ 50 ಟೈಲರಿಂಗ್ ಯಂತ್ರ ವಿತರಣೆಗೆ 8 ಕೋಟಿ, ಬೀದಿಬದಿ ವ್ಯಾಪಾರಿಗಳಿಗೆ ಪ್ರತಿ ವಾರ್ಡ್‌ಗೆ 15 ಗಾಡಿಗಳಿಗೆ 4 ಕೋಟಿ ರೂ. ಮೀಸಲಿಡಲಾಗಿದೆ. ಗಂಭೀರವಾಗಿ ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆಗೆ 375 ಕೋಟಿ ರೂ. ನೀಡಲಾಗಿದ್ದು, ತ್ಯಾಜ್ಯ ನಿರ್ವಹಣಾ ಘಟಕಗಳಿರುವ ಸುತ್ತಲಿನ ಅಭಿವೃದ್ಧಿಗೆ ತಲಾ 15ರಿಂದ 20 ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ 25 ಕೋಟಿ ರೂ., ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಹಳೆಯ ವಾರ್ಡ್‌ಗಳಿಗೆ ತಲಾ 15 ಲಕ್ಷ, ಹೊಸ ವಾರ್ಡ್‌ಗಳಿಗೆ 30 ಲಕ್ಷದಂತೆ ಒಟ್ಟಾರೆ 49.05 ಕೋಟಿ ರೂ. ನೀಡಲಾಗಿದೆ.
ಯಾವ್ಯಾವುದಕ್ಕೆ ಎಷ್ಟೆಷ್ಟು? (ಕೋಟಿ ರೂ.ಗಳಲ್ಲಿ)
-ಅಭಿವೃದ್ಧಿ ಕಾಮಗಾರಿ- 4,945.91 (ಶೇ. 46.29)
-ಘನತ್ಯಾಜ್ಯ ನಿರ್ವಹಣೆ- 1186.80 (ಶೇ. 11.10)
-ವೇತನ ಮತ್ತು ಪಿಂಚಣಿ- 796.85 (ಶೇ. 7.46)
-ಬೀದಿದೀಪ ವಿದ್ಯುತ್ ಶುಲ್ಕ- 257.01 (ಶೇ. 2.40)
-ಆಡಳಿತಾತ್ಮಕ ವೆಚ್ಚ- 247.76 (ಶೇ. 2.32)
-ಸಾಲ ಮತ್ತು ಬಡ್ಡಿ ಮರುಪಾವತಿ- 392.79 (ಶೇ. 3.67)
-ತೋಟಗಾರಿಕೆ, ಅರಣ್ಯೀಕರಣ, ಕೆರೆಗಳು- 356.34 (ಶೇ. 3.33)
-ಆರೋಗ್ಯ ಮತ್ತು ಶಿಕ್ಷಣ- 231.52 (ಶೇ. 2.17)
-ಕಲ್ಯಾಣ ಕಾರ್ಯಕ್ರಮ- 1,071.43 (ಶೇ. 10.02)
-ನಿರ್ವಹಣಾ ಕಾಮಗಾರಿ- 851.22 (ಶೇ. 7.96)
-ಠೇವಣಿಗಳು ಮತ್ತು ಮರುಪಾವತಿ- 351 (ಶೇ. 3.28)
-ಒಟ್ಟಾರೆ 10,688.63
ಎಲ್ಲೆಲ್ಲಿಂದ ಎಷ್ಟೆಷ್ಟು ನಿರೀಕ್ಷೆ? (ಕೋಟಿ ರೂ.ಗಳಲ್ಲಿ)
-ತೆರಿಗೆ ಆದಾಯ- 3,541.95 (ಶೇ. 33)
-ತೆರಿಗೆಯೇತರ ಆದಾಯ- 3,083.28 (ಶೇ. 28)
-ಸರ್ಕಾರದ ಅನುದಾನ- 3,606.11 (ಶೇ. 34)
-ವಸೂಲಾತಿ ಮತ್ತು ಮರುಪಾವತಿ- 460.48 (ಶೇ. 5)
-ಒಟ್ಟು 10,691.82
ಯಾರಿಗೆ ಎಷ್ಟು ನಿಧಿ?
-ಮೇಯರ್ 175 ಕೋಟಿ ರೂ.
-ಜಿಲ್ಲಾ ಉಸ್ತುವಾರಿ ಸಚಿವ 150 ಕೋಟಿ ರೂ.
-ಉಪ ಮೇಯರ್ 75 ಕೋಟಿ ರೂ.
-ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು 75 ಕೋಟಿ ರೂ.
-ಆಯುಕ್ತರು 15 ಕೋಟಿ ರೂ.
-ಶಾಸಕರು 132 ಕೋಟಿ ರೂ. (ಎಸ್‌ಎಫ್ಸಿ ಅನುದಾನದಡಿ)
ಜನ ಏನಂತಾರೆ
ಭಿಕ್ಷೆ ಬೇಡುವ ಹಿರಿಯ ನಾಗರಿಕರಿಗಾಗಿ ಯೋಜನೆ ರೂಪಿಸಬೇಕಿತ್ತು. ಸಂಚಾರಿ ಕ್ಯಾಂಟೀನ್‌ಗೆ 5 ಕೋಟಿ ರೂ. ಮೀಸಲಿಟ್ಟಿರುವುದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಅನುಕೂಲವಾಗಲಿದೆ.
-ಮೇರಿ ಎಲಿಜಬೆತ್, ಬನ್ನೇರುಘಟ್ಟ ನಿವಾಸಿ
ಕಸ ನಿರ್ವಹಣೆ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಮತ್ತಷ್ಟು ಹಣ ಬೇಕಿತ್ತು. ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ನಿವಾರಿಸಲು ಯೋಜನೆಗಳನ್ನು ರೂಪಿಸಬೇಕಿತ್ತು.
-ಸಾರಾ, ಆಸ್ಟಿನ್ ಟೌನ್ ನಿವಾಸಿ
ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ಹಾಗೂ ಬಡ ಕ್ರೀಡಾಪಟುಗಳ ನೆರವಿಗೆ ಒಂದು ಕೋಟಿ ರೂ. ಮೀಸಲಿಟ್ಟ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು.
-ಸ್ಟೀಫನ್, ಖಾಸಗಿ ಸಂಸ್ಥೆ ಉದ್ಯೋಗಿ
ಉಚಿತ ಬಸ್ ಪಾಸ್‌ಗಾಗಿ ಒಂದು ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ವಿದ್ಯಾರ್ಥಿಗಳು ಉಚಿತ ಪಾಸ್ ಪಡೆಯಲು ಇರುವ ತೊಡಕುಗಳ ನಿವಾರಣೆ ಅಗತ್ಯ.
-ಕನ್ನದಾಸ್, ವಿದ್ಯಾರ್ಥಿ
ಶಾಲೆ, ಕಾಲೇಜು ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆಗೆ 2 ಕೋಟಿ ರೂ. ಹಾಗೂ ಪಾಲಿಕೆ ಶಾಲೆ ವಿದ್ಯಾರ್ಥಿಗಳ ಚಿಕಿತ್ಸೆಗೆ ಒಂದು ಕೋಟಿ ರೂ. ಮೀಸಲಿಟ್ಟಿರುವುದು ಸಂತಸ ತಂದಿದೆ.
-ಮನೋಜ್‌ಕುಮಾರ್, ವಿದ್ಯಾರ್ಥಿ
ಹಿಂದಿನ ಬಜೆಟ್‌ನಲ್ಲಿ ರೂಪಿಸಿದ ಯೋಜನೆಗಳ ಅನುಷ್ಠಾನ ಮೊದಲು ಆಗಲಿ. ಮಹಿಳಾ ಸುರಕ್ಷತೆ ಕಡೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲು ಹೆಚ್ಚು ಅನುದಾನ ಮೀಸಲಿಡಬೇಕಿತ್ತು.
-ಮೇರಿ, ಕಾರ್ಪೊರೇಟ್ ಸಂಸ್ಥೆ ಉದ್ಯೋಗಿ
ಆರೋಗ್ಯ, ಔಷಧ ವಿತರಣೆ, ಶಸ್ತ್ರಚಿಕಿತ್ಸೆ, ವಸತಿ ಸೇರಿ ಹಿರಿಯ ನಾಗರಿಕರ ಕಲ್ಯಾಣಕ್ಕೆ ಯೋಜನೆಗಳಿಲ್ಲ. ಹಿರಿಯ ನಾಗರಿಕರಿಗೆ ಕೇವಲ 5 ಕೋಟಿ ರೂ. ಮೀಸಲಿಟ್ಟಿರುವುದು ಬೇಸರವಾಗಿದೆ.
-ಮುನಿರಾಜು, ಮಲ್ಲೇಶ್ವರ ನಿವಾಸಿ
ಮಾಲಿನ್ಯ ಹೆಚ್ಚಾಗಿರುವ ನಗರದಲ್ಲಿ ವಾಯು ಶುದ್ಧೀಕರಣ ಯಂತ್ರಗಳ ಅಳವಡಿಕೆ ಹಾಗೂ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ನಿರ್ವಹಣೆ ಕಡೆಗೂ ಗಮನ ನೀಡಿರುವುದು ಸ್ವಾಗತಾರ್ಹ.
-ಚೆನ್ನಮಾರಯ್ಯ, ಉಪನ್ಯಾಸಕ
ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ಬಡ ರೋಗಿಗಳಿಗೆ ಸ್ಟಂಟ್ ಅಳವಡಿಕೆ, ಹೊಸದಾಗಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ ಯೋಜನೆಗಳಿಂದ ನಮ್ಮಂಥವರಿಗೆ ಅನುಕೂಲವಾಗಲಿದೆ.
-ಸಿದ್ದು, ಭದ್ರತಾ ಸಿಬ್ಬಂದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.