ಮಾನ್ಸೂನ್‌ಗೆ ಮಹಾಕೆಲಸ
Team Udayavani, Jul 2, 2018, 11:07 AM IST
ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ ನಗರದಲ್ಲಿ ವಿವಿಧ ಸಂಸ್ಥೆಗಳಿಂದ ನಡೆಸಲಾಗುತ್ತಿರುವ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಮಂಜುನಾಥ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಬಸವೇಶ್ವರ ನಗರ ಮೇಲ್ಸೇತುವೆ ಕೊನೆಯ ಹಂತ ತಲುಪಿದೆ. ಇದರ ನಡುವೆಯೂ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮುತ್ತುರಾಜ ಜಂಕ್ಷನ್ ಕಾಮಗಾರಿ ಭರದಿಂದ ಸಾಗಿದ್ದು, ರೀಚ್-5ರ ಹಳದಿ ಮಾರ್ಗ ಹಾಗೂ ರೀಚ್-6ರ ಕೆಂಪು ಮಾರ್ಗದ ಹಲವಾರು ಕಡೆಗಳಲ್ಲಿ ಪಿಲ್ಲರ್ ಕಾಮಗಾರಿ ನಡೆಯುತ್ತಿದೆ.
ಓಕಳಿಪುರ ಜಂಕ್ಷನ್ ಅಷ್ಟಪಥ ಅಂಡರ್‌ಪಾಸ್‌ನಲ್ಲಿ ಪೈಪ್‌ಲೈನ್
ಯೋಜನೆ: ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್ ಮುಕ್ತವಾಗಲಿದೆ.
ಗುತ್ತಿಗೆದಾರ: ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಈ ತಿಂಗಳ ಪ್ರಗತಿ: ಆರ್.ಜೆ.ಕಲ್ಯಾಣ ಮಂಟಪ ಹಾಗೂ ಕೋಡೆ ವೃತ್ತದ ಕಡೆಗೆ ಹೋಗುವ ಕಡೆಗಳಲ್ಲಿ ರೈಲ್ವೆ ಹಳಿಗಳಿಗೆ ಒಟ್ಟು 4 ಕಾಂಕ್ರಿಟ್ ಎಲಿಮೆಂಟ್ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ಜತೆಗೆ ಕಾಮಗಾರಿ ಸ್ಥಳದಲ್ಲಿ ನೀರು ನಿಲ್ಲದಂತೆ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್-2 ನಿರ್ಮಾಣಕ್ಕೆ ಪಿಲ್ಲರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ವಸ್ತುಸ್ಥಿತಿ: ಈಗಾಗಲೇ ಸಂಚಾರಕ್ಕೆ ಅವಕಾಶ ನೀಡಿರುವ ಅಂಡರ್‌ಪಾಸ್‌ನಲ್ಲಿ ಮಳೆ ಬಂದಾಗ ನೀರು ತುಂಬಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ಮಳೆನಿರು ಹರಿದು ಹೋಗಲು ಪೈಪ್‌ಲೈನ್
ಅಳವಡಿಸಲಾಗುತ್ತಿದ್ದು, ಕೋಡೆ ವೃತ್ತ ಹಾಗೂ ಆರ್.ಜೆ.ಕಲ್ಯಾಣ ಮಂಟಪದ ಬಳಿ ಕಾಂಕ್ರಿಟ್ ಎಲಿಮೆಂಟ್ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.
ಪಾಲಿಕೆಯ ಎಂಜಿನಿಯರ್ ಏನಂತಾರೆ?
ಮೂರು ಪಥಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದರೂ, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತು ತೊಂದರೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮಳೆ ನೀರು ಪಂಪ್ ಮಾಡುವ ಉದ್ದೇಶದಿಂದ 60 ಮೀಟರ್ ಪೈಪ್ ಅಳವಡಿಸಲಾಗುತ್ತಿದ್ದು, ಮಲ್ಲೇಶ್ವರದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಲೂಪ್ 2 ಕಾಮಗಾರಿಗೆ ನಡೆಸಲಾಗುತ್ತಿದೆ ಎಂದು ಸಹಾಯಕ ಎಂಜಿನಿಯರ್ ಮಾಹಿತಿ ನೀಡಿದರು.
ಪಶ್ಚಿಮ ಕಾರ್ಡ್ ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್ ಸೇತುವೆ ಕಾಮಗಾರಿ ಕೊನೆ ಹಂತ
ಯೋಜನೆ: ಸಿಗ್ನಲ್ ಮುಕ್ತ ಕಾರಿಡಾರ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಶ್ಚಿಮ ಕಾರ್ಡ್ ರಸ್ತೆಯ ಬಸವೇಶ್ವರ ನಗರ, ಮಂಜುನಾಥ ನಗರ ಹಾಗೂ ಶಿವನಗರದ ಮೇಲ್ಸೇತುವೆ ನಿರ್ಮಾಣದಿಂದ ಕಾರ್ಡ್ ರಸ್ತೆ ಸಿಗ್ನಲ್ ಮುಕ್ತವಾಗಲಿದೆ.
ಗುತ್ತಿಗೆದಾರ: ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಈ ತಿಂಗಳ ಪ್ರಗತಿ: ಮಂಜುನಾಥನಗರ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಡಾಂಬರೀಕರಣ ನಡೆಸಲಾಗುತ್ತಿದೆ. ಬಸವೇಶ್ವರ ನಗರ ಮೇಲ್ಸೇತುವೆ ಕಾಮಗಾರಿಯೂ ಬಹುತೇಕ ಅಂತಿಮ ಹಂತದಲ್ಲಿದ್ದು, ಒಂದು ಭಾಗದಲ್ಲಿ ರ್‍ಯಾಂಪ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
ವಸ್ತುಸ್ಥಿತಿ: ಬಸವೇಶ್ವರನಗರ ಜಂಕ್ಷನ್ ಮೇಲ್ಸೇತುವೆಯ ಒಂದು ಭಾಗದ ರ್‍ಯಾಂಪ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮಂಜುನಾಥ ನಗರ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧಗೊಂಡಿದೆ. ರಸ್ತೆಗೆ ಡಾಂಬರೀಕರಣ
ಕಾಮಗಾರಿ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪಾಲಿಕೆಯ ಎಂಜಿನಿಯರ್ ಏನಂತಾರೆ? ಮಂಜುನಾಥ ನಗರ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಬಸವೇಶ್ವರ ನಗರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಸೆಪ್ಟಂಬರ್ ವೇಳೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಜತೆಗೆ ಶಿವನಗರ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಕಾಮಗಾರಿ ಆರಂಭಿಸಲಾಗುವುದು ಎಂದು ಸಹಾಯಕ ಎಂಜಿನಿಯರ್ ಮಾಹಿತಿ ನೀಡಿದರು.
ಮುತ್ತುರಾಜ ಜಂಕ್ಷನ್ ಅಂಡರ್ ಪಾಸ್ ವರ್ಷಗಳ ಬಳಿಕ ಚುರುಕಿನ ಕೆಲಸ ಯೋಜನೆ: ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್, ಫುಡ್ ವರ್ಲ್ಡ್ ಜಂಕ್ಷನ್ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ಮತ್ತು ಡಾಲರ್ ಕಾಲೋನಿ, ಹೊಸಕೆರೆ ಹಳ್ಳಿಯ ಕೆಇಬಿ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಗುತ್ತಿಗೆದಾರ: ಎಂವಿಆರ್ ಇನ್ಪ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಈ ತಿಂಗಳ ಪ್ರಗತಿ: ಬೆಸ್ಕಾಂ, ಕುಡಿಯುವ ನೀರು, ಒಳಚರಂಡಿ ಸೇವಾಜಾಲಗಳ ಹಳೆಯ ಸಂಪರ್ಕಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದ್ದು, ಅಂಡರ್‌ಪಾಸ್‌ಗಾಗಿ ಮಣ್ಣು ಅಗೆಯುವ ಕಾಮಗಾರಿಯನ್ನು ಆರಂಭಿಸಿದ್ದಾರೆ.
ವಸ್ತುಸ್ಥಿತಿ: ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಆರಂಭವಾಗಿದ್ದು, ಸಂಪೂರ್ಣವಾಗಿ ರಸ್ತೆಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಜತೆಗೆ ಮಣ್ಣು ಅಗೆಯುವ ವೇಳೆ ಬೃಹದಾಕಾರದ ಬಂಡೆ ಸಿಕ್ಕಿರುವುದು ಕಾಮಗಾರಿಗೆ ಹಿನ್ನಡೆಯುಂಟು ಮಾಡಿದೆ.
ಪಾಲಿಕೆಯ ಎಂಜಿನಿಯರ್ ಏನಂತಾರೆ?
ಸಂಚಾರ ಪೊಲೀಸರು ಸಂಪೂರ್ಣ ರಸ್ತೆಬಂದ್ ಮಾಡಿ ಕಾಮಗಾರಿ ನಡೆಸಲು ಅವಕಾಶ ನೀಡಿದರೂ, ಈ ಹಿಂದೆ ಒಂದು ಬಾಗದಲ್ಲಿ ಮಾತ್ರ ಕಾಮಗಾರಿ ಕೈಗೆತ್ತಿಕೊಂಡಿದ್ದೇವು. ಆದರೆ, ಇದರಿಂದ ಕಾಮಗಾರಿಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಸಂಪೂರ್ಣ ರಸ್ತೆ ಬಂದ್ ಮಾಡಿ ಕಾಮಗಾರಿ ನಡೆಸಲಾಗುತ್ತಿದ್ದು, ಕಾಮಗಾರಿ ಮುಗಿಯಲು ಒಂದು ವರ್ಷ ಬೇಕಾಗುತ್ತದೆ ಎಂದು ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ಕಾಮಗಾರಿ ಪ್ರಗತಿ: ಶೇ. 12ರಿಂದ 14 ಗುತ್ತಿಗೆ ಪಡೆದವರು: ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಬಾಕಿ ಇರುವ ಕಾಮಗಾರಿ: ಜಯದೇವ ಹೃದ್ರೋಗ ಸಂಸ್ಥೆ ಬಳಿಯ ಮೇಲ್ಸೇತುವೆ ನೆಲಸಮಗೊಳಿಸುವುದು, ಪೈಲಿಂಗ್, ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್ ಲೈನ್ ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ. ಪೂರ್ಣಗೊಳಿಸುವ ಗುರಿ: 27 ತಿಂಗಳು (ಸಿವಿಲ್ ಕಾಮಗಾರಿ) ಸುರಂಗ ಮಾರ್ಗಕ್ಕೆ ಕತ್ತರಿ
ಕಾಮಗಾರಿ ಪ್ರಗತಿ: ಶೇ. 6ರಿಂದ 7 ಬಾಕಿ ಇರುವ ಕಾಮಗಾರಿ: ಟೆಂಡರ್ ಅವಾರ್ಡ್, ಮಾರ್ಗದಲ್ಲಿ ಬರುವ ಯುಟಿಲಿಟಿಗಳ ಸ್ಥಳಾಂತರ, ಮರಗಳ ತೆರವು, ಪೈಲಿಂಗ್, ಕಂಬಗಳ ನಿರ್ಮಾಣ, ಹಳಿಗಳ ಜೋಡಣೆ, ವಿದ್ಯುತ್ ಲೈನ್
ಜೋಡಣೆ, ನಿಲ್ದಾಣಗಳ ನಿರ್ಮಾಣ ಕಾಮಗಾರಿ, ಪ್ರಾಯೋಗಿಕ ಸಂಚಾರ. ಪೂರ್ಣಗೊಳಿಸುವ ಗುರಿ: 27 ತಿಂಗಳು (ಸಿವಿಲ್ ಕಾಮಗಾರಿ) ವಸ್ತುಸ್ಥಿತಿ: ಗೊಟ್ಟಿಗೆರೆಯಿಂದ ಡೈರಿ ವೃತ್ತದವರೆಗಿನ ಕಾಮಗಾರಿ ನಡೆದಿದ್ದು, ಒಂದು ಕಂಬ ತಲೆಯೆತ್ತಿದೆ. ವೆಲ್ಲಾರ್ ಜಂಕ್ಷನ್-ಶಿವಾಜಿನಗರ-ಪಾಟರಿ ಟೌನ್ ನಡುವೆ 2,230 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ನಿರ್ಧರಿಸಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಉಳಿದದ್ದು ಎತ್ತರಿಸಿದ ಮಾರ್ಗವಾಗಿದ್ದು, ಇನ್ನೂ ಟೆಂಡರ್ ಕರೆಯಬೇಕಿದೆ. ಮತ್ತೂಂದೆಡೆ ಆರ್.ವಿ. ರಸ್ತೆ-ಬೊಮ್ಮಸಂದ್ರ ನಡುವೆ ರಸ್ತೆ ಅಗಲೀಕರಣ ಕಾರ್ಯ ನಡೆದಿದ್ದು, ಲಭ್ಯ ಇರುವ ಮಾರ್ಗದಲ್ಲಿ ವಯಾಡಕ್ಟ್ ಮತ್ತು ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ವಿಳಂಬಕ್ಕೆ ಕಾರಣ: 2ನೇ ಹಂತ ಒಟ್ಟಾರೆಯಾಗಿ ತಡವಾಗಿದೆ. ಅದರಲ್ಲೂ ಗೊಟ್ಟಿಗೆರೆ- ನಾಗವಾರ ನಡುವಿನ ಸುರಂಗ ಮಾರ್ಗದಲ್ಲಿ ಕರೆದ ಟೆಂಡರ್ ರದ್ದುಗೊಂಡು ಮರು ಟೆಂಡರ್ ಆಹ್ವಾನಿಸಲಾಗಿದೆ. ಇದು ಮತ್ತೆ ಮೂರು ತಿಂಗಳ ವಿಳಂಬಕ್ಕೆ ಎಡೆಮಾಡಿಕೊಟ್ಟಿತು. ಈಗ ಸುರಂಗ ಮಾರ್ಗದ ವಿಸ್ತೀರ್ಣವನ್ನು ಕಡಿತಗೊಳಿಸಿ, ವೆಲ್ಲಾರ್ ಜಂಕ್ಷನ್-ಪಾಟರಿ ಟೌನ್ ನಡುವೆ ಮಾತ್ರ ಸುರಂಗ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಇತ್ತ ಚುನಾವಣೆ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆ ಬಳಿಯ ಮೇಲ್ಸೇತುವೆ ನೆಲಸಮಗೊಳಿಸುವ ಕಾರ್ಯ ಮುಂದೂಡಲಾಯಿತು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಸರ್ಕಾರ ಬಂದು ತಿಂಗಳಾದರೂ ಈ ನಿಟ್ಟಿನಲ್ಲಿ ನಿಗಮ ಯೋಚಿಸುತ್ತಿಲ್ಲ. ಇದೆಲ್ಲವೂ ಯೋಜನೆ ಪ್ರಗತಿ ಮೇಲೆ ಪರಿಣಾಮ ಬೀರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.