ಪರಿಸರ ವಿಜ್ಞಾನಿಗಿಂತ ಕುವೆಂಪು ಸೂಕ್ಷ್ಮ
Team Udayavani, Aug 9, 2017, 11:44 AM IST
ಬೆಂಗಳೂರು: ಟೆಲಿಸ್ಕೋಪ್, ಮೈಕ್ರೋಸ್ಕೋಪ್ ಸಹಾಯವಿಲ್ಲದೆ ಕುವೆಂಪು ಅವರು ಪರಿಸರವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಸಿಗಳ ಬಗ್ಗೆ ಅವರು ತಿಳಿದುಕೊಂಡಷ್ಟು ಭಾರತದ ಯಾವ ವಿಜ್ಞಾನಿಯೂ ತಿಳಿದುಕೊಂಡಿಲ್ಲ ಎಂದು ಪರಿಸರವಾದಿ ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.
ಲಾಲ್‌ಬಾಗ್‌ನ ಮಾಹಿತಿ ಕೇಂದ್ರದಲ್ಲಿ ಮಂಗಳವಾರ ಡಾ.ಎಂ.ಎಚ್.ಮರಿಗೌಡ ಅವರ 101ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತೋಟಗಾರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ ಅವರು, ಕುವೆಂಪು ಅವರ ಸಾಹಿತ್ಯದಲ್ಲಿ ಇರುವ ವಿಚಾರಗಳು ಸುಮಾರು ನೂರಕ್ಕೂ ಹೆಚ್ಚು ಪಿಎಚ್‌ಡಿ ಮಾಡಬಹುದು. ಅವುಗಳಿಂದ ವಿಜ್ಞಾನಿಗಳು ಬಹಳಷ್ಟು ಅಧ್ಯಯನ ಮಾಡಬಹುದು ಎಂದು ಹೇಳಿದರು.
ಕುವೆಂಪು ಹೂವುಗಳ ಬಗ್ಗೆ ಸಾಕಷ್ಟು ಬರೆದಿದ್ದು, ಮಲೆನಾಡಿನ ಸೊಬಗು, ಗಿಡ, ಮರಗಳ ಕುರಿತು ಬಹಳಷ್ಟು ತಿಳಿದುಕೊಂಡಿದ್ದರು. ಅರಣ್ಯವನ್ನು ಬಳಕೆಯ ವಸ್ತುವಾಗಿ, ಭೂಮಿಯನ್ನು ಸೇವಕನಂತೆ ನಾವು ಪರಿಗಣಿಸಬಾರದು. ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸಮೃದ್ಧವಾಗಿ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ತೋಟಗಾರಿಕೆ ಪಿತಾಮಹಾ ಮರಿಗೌಡರು ತೋಟಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮೂರು ವರ್ಷ ವೇತನವಿಲ್ಲದೆ ಕೆಲಸ ಮಾಡಿದ್ದರು. ಸರ್ಕಾರ ಅಂದು ಸಾಕಷ್ಟು ಸಹಕಾರ ನೀಡಿರಲಿಲ್ಲ. ಆದರೂ ತಮ್ಮ ಪ್ರಾಮಾಣಿಕ ಸೇವೆ, ಬದ್ಧತೆಯಿಂದ ಕೆಲಸ ನಿರ್ವಹಿಸಿದ್ದರ ಪರಿಣಾಮ ಇಂದು ತೋಟಗಾರಿಕೆ ಕ್ಷೇತ್ರ ಪ್ರಗತಿ ಸಾಧಿಸಿದೆ.
ಮರಿಗೌಡರ ಚಿಂತನೆಗಳನ್ನು ಅಳವಡಿಸಿಕೊಂಡರೆ ತೋಟಗಾರಿಕೆ ಕ್ಷೇತ್ರವನ್ನು ಇನ್ನಷ್ಟು ಬೆಳೆಸಬಹುದು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಸ್‌ಚಂದ್ರ ರೇ, ಭಾರತೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಎಂ.ಆರ್.ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.
ಕುಪ್ಪಳಿ ಕಂಡು ಕಂಬಾರ ಮೂಕವಿಸ್ಮಿತ
ಲಾಲ್‌ಬಾಗ್‌ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ಮನೆ ಮತ್ತು ಕವಿಶೈಲವನ್ನು ಪುಷ್ಪಗಳಲ್ಲಿ ನಿರ್ಮಾಣ ಮಾಡಿರುವುದನ್ನು ವೀಕ್ಷಿಸಲು ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ ಮಂಗಳವಾರ ಭೇಟಿ ನೀಡಿದ್ದರು. ಪುಷ್ಪಗಳಲ್ಲಿ ಅರಳಿದ ಕವಿ ಮನೆ ಕಂಡು ಮಂತ್ರಮುಗ್ಧರಾದರು. “ಕುಪ್ಪಳಿ ಹೇಗಿದೆಯೋ ಹಾಗೆಯೇ ಯಥಾವತ್ತು ನಿರ್ಮಾಣ ಮಾಡಿದ್ದೀರಿ.
ಇದೊಂದು ಅದ್ಭುತವಾದ ಪರಿಕಲ್ಪನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರದರ್ಶನ ಆಕರ್ಷಕವಾಗಿದೆ,’ ಎಂದು ಶ್ಲಾ ಸಿದರು. ಕುಪ್ಪಳಿಯ ಕವಿಶೈಲ ನಿರ್ಮಿಸಿದ ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಕೂಡ ಭೇಟಿ ನೀಡಿ ಕುಪ್ಪಳಿಯಲ್ಲಿ ನಾನು ನಿರ್ಮಿಸಿದ್ದಕ್ಕಿಂತಲೂ ಚೆನ್ನಾಗಿಯೇ ಕವಿಶೈಲ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಂಗಳವಾರ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 13 ಸಾವಿರ ಮಂದಿ ಭೇಟಿ ನೀಡಿದ್ದು, ಟಿಕೆಟ್ ಶುಲ್ಕ 5.40 ಲಕ್ಷ ರೂ.ಗಳು ಸಂಗ್ರಹವಾಗಿವೆ. ಪ್ರದರ್ಶನ ಇನ್ನೂ ಒಂದು ವಾರಗಳ ಕಾಲ ನಡೆಯಲಿದ್ದು, ಸುಮಾರು 5ಲಕ್ಷಕ್ಕೂ ಅಧಿಕ ಮಂದಿ ಲಾಲ್‌ಬಾಗ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ.
-ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.