ಕಾಂಕ್ರೀಟ್ ಕಾಡಿನಲ್ಲಿ ಹಸಿರಿನ ಮಂತ್ರ
Team Udayavani, Jun 6, 2019, 3:10 AM IST
ನಗರದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದವು. ಸ್ವಯಂಸೇವಾ ಸಂಸ್ಥೆಯ ಸದಸ್ಯರು ಬೀದಿಗಿಳಿದು ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯವನ್ನು ಸಂಗ್ರಹಣೆ ಮಾಡಿದರು. ಮಾಲ್‌ಗಳು ಸಹ ಭಿನ್ನವಾದ ಕಲಾಕೃತಿಗಳನ್ನು ನಿರ್ಮಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವು. ಲಾಲ್‌ಬಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಬೆಂಗಳೂರು: ಕಾಂಕ್ರೀಟ್ ಕಾಡಿನಲ್ಲಿ ಹಸಿರು ಮಂತ್ರ, ಎಳೆಯ ಕೈಗಳಲ್ಲಿ ಚಿಗುರಿದ ಹಸಿರು, ಸ್ವಯಂ ಸೇವಾ ಸಂಸ್ಥೆಗಳಿಂದ ಸಾವಿರಾರು ಸಸಿಗಳ ವಿತರಣೆ, ಪರಿಸರ ಸಂರಕ್ಷಣೆಯ ಹೊಣೆಯ ಬಗ್ಗೆ ಚಿಂತನ ಮಂಥನ ಕಾರ್ಯಕ್ರಮಗಳು ಮತ್ತು ನಾಟಕಗಳ ಮೂಲಕ ಜಾಗೃತಿ. ಇವು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದಲ್ಲಿ ಕಂಡುಬಂದ ದೃಶ್ಯಗಳು.
ಅಭಿವೃದ್ಧಿ ಕಾಮಗಾರಿಗಳಿಂದ ಪರಿಸರದ ಮೇಲಾಗುವ ಪರಿಣಾಮ, ಅದನ್ನು ತಡೆಯಲು ಇರುವ ಮಾರ್ಗಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪರಿಸರ ತಜ್ಞರು ಅರಿವು ಮೂಡಿಸಿದರು. ಆ ಮೂಲಕ ನಮ್ಮೆಲ್ಲರ ಹೊಣೆ ನೆನಪಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸಸಿ ನೆಡಿ: ಸರ್ಕಾರಿ ಶಾಲೆಯ ಅಂಗಳದಲ್ಲಿ ಸಸಿ ನೆಡುವುದು ಹೆಮ್ಮೆಯ ವಿಚಾರ. ನಾನು ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಎಂದು ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಹೇಳಿದರು.
ಪರಿಸರ ದಿನಾಚರಣೆಯ ಪ್ರಯುಕ್ತ ಬುಧವಾರ ಶಿಲ್ಪ ಫೌಂಡೇಷನ್ ವಿಕ್ಟೋರಿಯಾ ಲೇಔಟ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನದಲ್ಲಿ ಮಾತನಾಡಿ, ಪ್ರತಿಯೊಂದು ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳು ಸಸಿ ನೆಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಹಾನಗರದಲ್ಲಿ ಹಸಿರನ್ನು ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ನಿತ್ಯ ನಗರದಲ್ಲಿ 85ಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗೆ ಇಳಿಯುತ್ತಿವೆ. ಕಟ್ಟಡಗಳ ನಿರ್ಮಾಣಕ್ಕೂ ಗಾಜು ಬಳಸಲಾಗುತ್ತಿದೆ. ಇದೆಲ್ಲದರ ಕಾರಣ ನಗರದಲ್ಲಿ ಉಷ್ಣಾಂಶ ಹೆಚ್ಚಾತ್ತಿದೆ ಜತೆಗೆ ಮಾಲಿನ್ಯವೂ ಹೆಚ್ಚುತ್ತಿದೆ ಎಂದರು.
ಒರಾಯನ್ ಮಾಲ್‌ನಲ್ಲಿ ಪರಿಸರ ಜಾಗೃತಿ: ಒರಾಯನ್ ಸಂಸ್ಥೆಯ ಪರಿಸರ ಜಾಗೃತಿ ವಿಭಿನ್ನವಾಗಿತ್ತು. ಬಳಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ ಮತ್ತು ತ್ಯಾಜ್ಯ ವಸ್ತುಗಳಿಂದ ಬೃಹತ್ ಮೀನು, ಶೂ ಸೇರಿದಂತೆ ವಿಭಿನ್ನವಾದ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ವಿಶ್ವದಲ್ಲಿ ಪ್ರತಿ ನಿಮಿಷಕ್ಕೆ ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲ್ ಬಳಸಲಾಗುತ್ತಿದೆ ಎಂದು ಬರೆದು ಜಾಗೃತಿ ಮೂಡಿಸಲಾಯಿತು.
ಒರಾಯನ್ ಮಾಲ್‌ನ ಜನರಲ್ ಮ್ಯಾನೇಜರ್ ಸುನೀಲ್ ಮುನ್ಶಿ ಮಾತನಾಡಿ, ಒರಾಯಲ್ ಮಾಲ್‌ನ ಸಿಬ್ಬಂದಿ ಈ ಕಲಾಕೃತಿಗೆ ಬಳಸಿರುವ ತ್ಯಾಜ್ಯವನ್ನು ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಬಿಸಾಡಿದ್ದ ತ್ಯಾಜ್ಯದಿಂದ ಸಂಗ್ರಹಿಸಿದ್ದಾರೆ. ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದರು.
ಅದಮ್ಯ ಚೇತನದಿಂದ ಮೈಕ್ರೋ ಪ್ಲಾಸ್ಟಿಕ್ ಜಾಗೃತಿ: ಕಣ್ಣಿಗೆ ಕಾಣದ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್ ನಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯವಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆಯೋಜಿಸಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು. ಐಐಟಿ ಬಾಂಬೆ ನಡೆಸಿರುವ ಸಂಶೋಧನೆಯ ಪ್ರಕಾರ ದೇಶದ ಬಹುತೇಕ ಬ್ರಾಂಡಿನ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶವಿದೆ.
ಇದು ಉದ್ದೇಶಪೂರ್ವಕವಾಗಿ ಸೇರ್ಪಡೆಯಾಗಿರುವ ಪ್ಲಾಸ್ಟಿಕ್ ಅಲ್ಲ. ನಮ್ಮ ದಿನ ನಿತ್ಯದ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆಹಾರಕ್ಕೆ, ನೀರು ಹಾಗೂ ಪರಿಸರಕ್ಕೆ ಸೇರ್ಪಡೆಯಾಗುತ್ತಿರುವ ಮೈಕ್ರೋ ಕಣಗಳು ಇದಕ್ಕೆ ಕಾರಣ. ಇದರ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ತುರ್ತು ಅಗತ್ಯವಿದೆ ಎಂದರು.
ವಿಶ್ವಸಂಸ್ಥೆ ನಡೆಸಿರುವ ಸಂಶೋಧನೆಯ ಪ್ರಕಾರ, ನಾವು ಸುರಕ್ಷಿತ ಎಂದು ಕುಡಿವ ನೀರಿನ ಬಾಟಲ್‌ನಲ್ಲಿ 40 ರಿಂದ 900 ರಷ್ಟು ಮೈಕ್ರೋ ಕಣಗಳನ್ನು ಪತ್ತೆಹಚ್ಚಿರುವ ಆಘಾತಕಾರಿ ಅಂಶ ಬಯಲಾಗಿದೆ. ಇಂತಹ ಅಂಶಗಳನ್ನು ಜನರಿಗೆ ತಿಳಿಸಬೇಕಾಗಿದೆ. ನಾವು ಬಳಸುವ ಪಾಲಿಸ್ಟರ್ ಬಟ್ಟೆಗಳು, ಶೃಂಗಾರ ಪ್ರಸಾದನಗಳಲ್ಲೂ ಕೂಡಾ ಮೈಕ್ರೋ ಪ್ಲಾಸ್ಟಿಕ್ ಅಂಶಗಳಿವೆ. ಪಾಲಿಸ್ಟರ್ ಬಟ್ಟೆಗಳನ್ನು ತೊಳೆದಾಗ ಮೈಕ್ರೋ ಪ್ಲಾಸ್ಟಿಕ್ ನೀರು ಸೇರುತ್ತದೆ.
ಈ ನೀರು ಸಮುದ್ರ ಹಾಗೂ ಸಮುದ್ರದ ನೀರಿನಿಂದ ತಯಾರಾಗುವ ಉಪ್ಪಿನಿಂದ ನಮ್ಮ ದೇಹ ಸೇರುತ್ತಿದೆ ಎಂದು ಹೇಳಿದರು. ನ್ಯಾಷನಲ್ ಕಾಲೇಜಿನ ಪ್ರೊ.ರಮೇಶ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಸರ್ಕಾರ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ.
ಆದರೆ, ಇದನ್ನು ಸಕಾರಾತ್ಮಕವಾಗಿ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು ಹಾಗೂ ನೌಕರರಿಗೆ ಅಗತ್ಯವಾದ ತರಬೇತಿ ಇಲ್ಲ. ಇದು ಸಮಸ್ಯೆಯಾಗಿ ಪರಿಣಮಿಸಿದೆ ಎಂದರು. ಈ ವೇಳೆ ನಟಿ ತಾರಾ ಅನುರಾಧಾ, ಮೇದಿನಿ ಗರುಡಾಚಾರ್, ಬಿ ಎನ್ ಪ್ರಹ್ಲಾದ್ ಬಾಬು ಮತ್ತು ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿ ಎಚ್.ಎನ್.ಎ. ಪ್ರಸಾದ್ ಮತ್ತಿತರರು ಹಾಜರಿದ್ದರು. ಪರಿಸರ ಜನಜಾಗೃತಿ ಜಾಥಾ ನಡೆಸಲಾಯಿತು.
ಲಾಲ್‌ಬಾಗ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮ: ಪರಿಸರ ದಿನಾಚರಣೆಯ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿತ್ತು. ಹಿರಿಯ ಕಲಾವಿದೆ ಅರುಂಧತಿ ನಾಗ್ ಮತ್ತು ಲೀಲಾವತಿ ಲಾಲ್‌ಬಾಗ್‌ಗೆ ಭೇಟಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಣೆ ಮಾಡಿದರು.
ಅಲ್ಲದೆ, ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಸಾರ್ವಜನಿಕರು, ಪತ್ರಕರ್ತರಿಗೂ ಗಿಡ ನೆಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಲೀಲಾವತಿ ಮಾತನಾಡಿ, ವಿಶ್ವ ಮಟ್ಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿಯಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ನಗರದಲ್ಲಿ ಶುದ್ಧ ಗಾಳಿ ಲಭ್ಯವಾಗುವ ಸ್ಥಳಗಳನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದ್ದರಿಂದ ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು.ಅವುಗಳ ರಕ್ಷಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ನಟ ವಿನೋದ್ ರಾಜ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಮತ್ತು ಸಹಾಯಕ ನಿರ್ದೇಶಕ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ಸ್ಟೀಲ್ ಲೋಟ ಬಳಕೆ ಮೂಲಕ ಅರಿವು
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ರಾಜ್ಯ ಬಿಜೆಪಿ ಸಂಸದರಿಗೆ ಅಭಿನಂದನಾ ಸಮಾರಂಭ ಪ್ಲಾಸ್ಟಿಕ್ ಮುಕ್ತವಾಗಿ ಪರಿಸರಸ್ನೇಹಿಯಾಗಿದ್ದುದು ವಿಶೇಷವಾಗಿತ್ತು. ಕೇಂದ್ರ ಸಚಿವರು ಸೇರಿದಂತೆ ಎಲ್ಲ ಗಣ್ಯರಿಗೂ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬದಲಿಗೆ ಸ್ಟೀಲ್ ಲೋಟಗಳಲ್ಲೇ ನೀರು ಒದಗಿಸಲಾಗಿತ್ತು.
ಸಮಾರಂಭದಲ್ಲಿ ಭಾಗವಹಿಸಿದ್ದವರಿಗೆ ಏರ್ಪಡಿಸಲಾಗಿದ್ದ ಭೋಜನಕ್ಕೂ ಅದಮ್ಯ ಚೇತನ ಸಂಸ್ಥೆಯ ಪ್ಲೇಟ್ ಬ್ಯಾಂಕ್‌ನಿಂದ ತರಿಸಿದ್ದ ಸ್ಟೀಲ್ ತಟ್ಟೆ, ಲೋಟಗಳನ್ನೇ ಬಳಸಲಾಗಿತ್ತು. ಸಮಾರಂಭ ನಡೆದ ಆವರಣದಲ್ಲೂ ಸ್ವತ್ಛತೆಗೆ ವಿಶೇಷ ಒತ್ತು ನೀಡಲಾಗಿತ್ತು. ಇಡೀ ಕಾರ್ಯಕ್ರಮವನ್ನು ಪ್ಲಾಸ್ಟಿಕ್ ಮುಕ್ತವಾಗಿ ಪರಿಸರ ಸ್ನೇಹಿಯಾಗಿ ಆಯೋಜಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಪ್ರಯತ್ನ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.