Team Udayavani, Apr 12, 2019, 11:49 AM IST
ಬೆಂಗಳೂರು: ರಸ್ತೆ ಗುಂಡಿ ಸಮಸ್ಯೆ ಪರಿಹಾರಕ್ಕಾಗಿ ಬಿಬಿಎಂಪಿ ಕೈಗೆತ್ತಿಕೊಂಡ ವೈಟ್ ಟಾಪಿಂಗ್ ಕಾಮಗಾರಿಗೆ ನೂರಾರು ಗಿಡಗಳು ಜೀವ ಕಳೆದುಕೊಂಡಿದ್ದು, ಜನರ ಅನುಕೂಲಕ್ಕಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ
ಪಾದಚಾರಿ ಮಾರ್ಗ ಖಾಸಗಿ ವಾಹನಗಳ ನಿಲುಗಡೆ, ಬೀದಿ ವ್ಯಾಪಾರಕ್ಕೆ ಬಳಕೆಯಾಗುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಿಶ್ವೇಶ್ವರಪುರದ ವೈಟ್‌ಟಾಪಿಂಗ್ ರಸ್ತೆ ಬದಿ ಹಾಗೂ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಕಂಡುಬರುವ ದೃಶ್ಯಗಳಿವು.
ಈಗಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿರುವ ವಿಶ್ವೇಶ್ವರಪುರ ವಾರ್ಡ್‌ನ ಪ್ರಮುಖ ರಸ್ತೆಗಳಲ್ಲಿ ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕೈಗೆತ್ತಿಕೊಂಡ ವೈಟ್‌ಟಾಪಿಂಗ್ ಕಾಮಗಾರಿಗೆ ಸುಮಾರು 40ಕ್ಕೂ ಹೆಚ್ಚಿನ ಗಿಡ-ಮರಗಳು ಜೀವ ಕಳೆದುಕೊಂಡಿವೆ.
ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಪಾಲಿಕೆಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಪಾದಚಾರಿ ರಸ್ತೆಗಳ ಮೇಲ್ದರ್ಜೆಗೇರಿಸುವ ವೇಳೆ ಕೆಲ ಸಂಘ ಸಂಸ್ಥೆಗಳು ಸ್ವಂತ ಖರ್ಚಿನಲ್ಲಿ ನೆಟ್ಟು ಪೋಷಿಸಿದ ಗಿಡಗಳನ್ನು ತೆರವುಗೊಳಿಸಲಾಗಿದ್ದು, ಪಾದಚಾರಿ ರಸ್ತೆಗಳು ಗಿಡಗಳಿಲ್ಲದೆ ಬಣಗುಡುತ್ತಿವೆ.
ಪಾಲಿಕೆಯಿಂದ ನಗರದಲ್ಲಿ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ವೈಟ್‌ಟಾಪಿಂಗ್ ಯೋಜನೆ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ ಕಾಮಗಾರಿ ಅನುಷ್ಠಾನಗೊಂಡಿರುವ ಬಹುತೇಕ ಕಡೆಗಳಲ್ಲಿ ಗಿಡಗಳಿಗೆ ಹಾನಿಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಯೋಜನೆ ಅನುಷ್ಠಾನ ವೇಳೆ ಗಿಡಗಳ ಸಂರಕ್ಷಣೆಗೆ ಅಧಿಕಾರಿಗಳು ಗಮನ ನೀಡಬೇಕೆಂಬ ಸಲಹೆಯನ್ನು ಪರಿಸರವಾದಿಗಳು ನೀಡಿದ್ದಾರೆ.
ಕಾಮಗಾರಿ ಸ್ಥಳದಲ್ಲಿನ ಗಿಡಗಳು ನಾಶ ವಿ.ವಿ.ಪುರ ಕೆ.ಆರ್.ರಸ್ತೆಯಲ್ಲಿ ಪಾಲಿಕೆಯಿಂದ ಟ್‌ಟಾಪಿಂಗ್ ಕಾಮಗಾರಿ
ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ರಸ್ತೆಯ ಎರಡೂ ಬದಿಯಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಪರಿಣಾಮ ರಸ್ತೆಬದಿಯ ಗಿಡಗಳು ಹಾಗೂ ಲಾನ್ ಮೇಲೆಯೇ ಕಾಮಗಾರಿಗೆ ಬಳಸುವ ಪರಿಕರಗಳನ್ನು ಇಡುವ ಮೂಲಕ ಗಿಡಗಳನ್ನು ಹಾಳು ಮಾಡಲಾಗಿದೆ.
ನೆಡಲಾಗಿದ್ದ ಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ನಿರ್ವಹಣೆಯಿಲ್ಲದೆ ಒಣಗಿದ ಲಾನ್ ಕೆ.ಆರ್.ರಸ್ತೆಯಲ್ಲಿ ಹಾದು ಹೋಗುವ ನಮ್ಮ ಮೆಟ್ರೋ ಮಾರ್ಗದ ಕೆಳಗೆ ಲಾನ್ ಹಾಗೂ ಹಲವಾರು ಅಲಂಕಾರಿಕ ಹೂವುಗಳನ್ನು ಬಿಡುವ ಗಿಡಗಳನ್ನು ನೆಡಲಾಗಿದೆ. ಆದರೆ, ಬಿಬಿಎಂಪಿಯಾಗಲಿ, ಬಿಎಂಆರ್‌ಸಿಎಲ್ ಆಗಲಿ ಗಿಡಗಳಿಗೆ ನೀರು ಹಾಯಿಸುವ ಕೆಲಸಕ್ಕೆ ಮುಂದಾಗದ ಪರಿಣಾಮ ಮೆಟ್ರೋ ಮಾರ್ಗದ ಕೆಳಗಿನ ಲಾನ್ ಹಾಗೂ ಬಹುತೇಕ ಗಿಡಗಳು ಒಣಗಿವೆ.
ಫುಟ್‌ಪಾತ್ ಮೇಲೆ ವ್ಯಾಪಾರ ಜೋರು ವಾರ್ಡ್‌ನ ಮಾಧವ ಕೃಷ್ಣರಾವ್ ಉದ್ಯಾನದ ಸುತ್ತಮುತ್ತಲಿನ ರಸ್ತೆಗಳ ಪಾದಚಾರಿ
ಮಾರ್ಗಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಆದರೆ, ಪಾದಚಾರಿಗಳಿಗಿಂತಲೂ ಬೀದಿ ವ್ಯಾಪಾರಿಗಳಿಗೆ ಪಾದಚಾರಿ ಮಾರ್ಗ ಹೆಚ್ಚಿನ ಅನುಕೂಲವಾಗುತ್ತಿದ್ದು, ಮಾರ್ಗದ ಶೇ.75ರಷ್ಟು ಜಾಗವನ್ನು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದರೂ ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪವಿದೆ.
ನಿವೃತ್ತ ಉದ್ಯೋಗಿಯಾಗ ನಾಗರಾಜು ಎಂಬುವವರು ತಮ್ಮ ಪಿಂಚಣಿ ಹಣದಲ್ಲಿ ನಗರದಾದ್ಯಂತ ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅದೇ ರೀತಿ ಕೆ.ಆರ್. ರಸ್ತೆಯಲ್ಲಿ ಸುಮಾರು 220ಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ, ಪಾಲಿಕೆಯಿಂದ ನಡೆಸಿದ ವೈಟ್‌ಟಾಪಿಂಗ್ ಕಾಮಗಾರಿ ಯಿಂದಾಗಿ ಒಂದೂವರೆ ವರ್ಷದ ಸುಮಾರು 30ಕ್ಕೂ ಹೆಚ್ಚು ಗಿಡಗಳು ಜೀವ ಕಳೆದು ಕೊಂಡಿವೆ. ಜತೆಗೆ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ಗಿಡ-ಮರಗಳನ್ನು ತೆರವು ಗೊಳಿಸಿದ ಪಾಲಿಕೆಯ ಕ್ರಮ ಖಂಡನಾರ್ಹ.
●ಆನಂದ್, ಹಸಿರು ರಥ ಸಂಸ್ಥೆಯ ಸದಸ್ಯ
ವೆಂ.ಸುನೀಲ್‌ಕುಮಾರ್