ಜಿಎಸ್‌ಟಿ, ಬಾರ್ ಬಂದ್‌ನಿಂದ ನಷ್ಟ
Team Udayavani, Sep 6, 2017, 12:00 PM IST
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕ ರೂಪ ಸರಕು ಮತ್ತು ಸೇವಾ ತೆರಿಗೆಯಿಂದಾಗಿ ರಾಜ್ಯ ಸರ್ಕಾರದ ಆದಾಯಕ್ಕೆ ಖೋತಾ ಆಗಿದೆ. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದಿಂದ ಹೆದ್ದಾರಿಗಳ ಬಾರ್‌ಗಳು ಬಂದ್ ಆಗಿದ್ದರಿಂದ ಅಬಕಾರಿ ತೆರಿಗೆಯಲ್ಲೂ ಹೊಡೆತ ಬಿದ್ದಿದ್ದು, ರಾಜ್ಯ ಸರ್ಕಾರಕ್ಕೆ ನಿರೀಕ್ಷಿತ ಆದಾಯ ಬಂದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ವಾಣಿಜ್ಯ ತೆರಿಗೆ, ಸಾರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಐದು ತಿಂಗಳಲ್ಲಿ ಆದಾಯ ಸಂಗ್ರಹದಲ್ಲಿ ಆಗಿರುವ ಪ್ರಗತಿ ಪರಿಶೀಲನೆ ನಡೆಸಿದರು. ಡಿ ಮಾನಿಟೈಜೆಶನ್, ಜಿಎಸ್‌ಟಿ ಹಾಗೂ ಹೆದ್ದಾರಿ ಬಾರ್ ಬಂದ್ ಮತ್ತು ಆನ್‌ಲೈನ್ ವ್ಯವಹಾರದಿಂದ ಎಲ್ಲ ಇಲಾಖೆಗಳಲ್ಲೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಮುಂದಿನ ಒಂದು ತಿಂಗಳಲ್ಲಿ ನಿರೀಕ್ಷಿತ ಗುರಿ ಮುಟ್ಟುವಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಹೆಸರು ನೋಂದಾಯಿಸಿರುವ ಎಲ್ಲಾ ವರ್ತಕರು ರಿಟರ್ನ್ಸ್ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಹಿರಿಯ ಅಧಿಕಾರಿಗಳು ವರ್ತಕರು ರಿಟರ್ನ್ಸ್ ಸಲ್ಲಿಸುವಂತೆ ನೋಡಿಕೊಳ್ಳಬೇಕು. ಮುಂದಿನ ಸಭೆಯಲ್ಲಿ ಸಬೂಬುಗಳನ್ನು ಹೇಳಿದರೆ ಕೇಳುವುದಿಲ್ಲ. ನೂರು ಕೋಟಿ ರೂಪಾಯಿ ವಹಿವಾಟು ನಡೆಸುವ ವರ್ತಕರು ಗ್ರಾಹಕರಿಂದ ತೆರಿಗೆ ವಸೂಲಿ ಮಾಡಿದ್ದಾರೆ. ಆದರೆ, ಆದಾಯ ತೆರಿಗೆ ಸಲ್ಲಿಸದಿರುವುದು ಸರಿಯಲ್ಲ. ಅವರು ಆದಾಯ ತೆರಿಗೆ ಸಲ್ಲಿಸುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಅಸಮಾಧಾನ: ನಂತರ ಅಬಕಾರಿ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್‌ಗಳು ಬಂದ್ ಆಗಿದ್ದರಿಂದ ನಿರೀಕ್ಷಿತ ಆದಾಯ ಸಂಗ್ರಹವಾಗಿಲ್ಲ ಎಂದು ಹೇಳಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಬಕಾರಿ ಇಲಾಖೆಯಿಂದ 18 ಸಾವಿರ ಕೋಟಿ ರೂಪಾಯಿ ಗುರಿ ಇಟ್ಟುಕೊಂಡಿದ್ದು, ಐದು ತಿಂಗಳಲ್ಲಿ ಶೇಕಡಾ 40 ರಷ್ಟು ಮಾತ್ರ ಸಂಗ್ರಹವಾಗಿದೆ.
ನಿರೀಕ್ಷಿತ ಗುರಿಗಿಂತ ಶೇಕಡಾ 5 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಹೆದ್ದಾರಿ ಬಾರ್ ಬಂದ್ ಆದ ಮೇಲೂ ಕೆಲವು ಜಿಲ್ಲೆಗಳಲ್ಲಿ ಆದಾಯ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಸಬೂಬು ಹೇಳಬಾರದು. ಜಿಲ್ಲಾಧಿಕಾರಿಗಳು ಬಾರ್ ಲೈಸೆನ್ಸ್ ನವೀಕರಣಕ್ಕೆ ವಿಳಂಬ ಮಾಡದೇ ಸೆಪ್ಟಂಬರ್ 15 ರೊಳಗೆ ಎಲ್ಲ ಬಾರ್ ಲೈಸೆನ್ಸ್‌ಗಳನ್ನು ನವೀಕರಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಆದಾಯ ಸಂಗ್ರಹದ ಭರವಸೆ: ಸತತ ಬರಗಾಲ ಹಾಗೂ ಒಂದು ಸಾವಿರ ಮತ್ತು 500 ರೂಪಾಯಿ ನೋಟು ಅಮಾನ್ಯಿಕರಣಗೊಳಿಸಿದ ನಂತರ ಬೆಂಗಳೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುದ್ರಾಂಕ ಮತ್ತು ನೋಂದಣಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 2017-18 ನೇ ಸಾಲಿಗೆ 9 ಸಾವಿರ ಕೋಟಿ ಆದಾಯದ ಗುರಿ ಹೊಂದಲಾಗಿದ್ದು, ಐದು ತಿಂಗಳಲ್ಲಿ 3409 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ನಿರೀಕ್ಷಿತ ಆದಾಯಕ್ಕಿಂತ 121 ಕೋಟಿ ರೂಪಾಯಿ ಕಡಿಮೆ ಸಂಗ್ರಹವಾಗಿದೆ. ಡಿಸೆಂಬರ್ ಬಳಿಕ ನಿರೀಕ್ಷಿತ ಆದಾಯ ಸಂಗ್ರಹವಾಗುವ ಭರವಸೆಯನ್ನು ಅಧಿಕಾರಿಗಳು ಸಭೆಯಲ್ಲಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಾರಿಗೆ ಇಲಾಖೆಯಲ್ಲಿಯೂ 6006 ಕೋಟಿ ರೂಪಾಯಿ ಗುರಿ ನೀಡಲಾಗಿದೆ. ಆದರೆ, ಇದುವರೆಗೂ 2360 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ತಿಳಿಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿಯೂ 2667 ಕೋಟಿ ರೂ. ಗುರಿ ಹೊಂದಲಾಗಿದ್ದು, ಶೇಕಡಾ 90 ರಷ್ಟು ಸಾಧನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಭೆ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಎಸ್‌ಟಿ ಹಾಗೂ ಹೆದ್ದಾರಿ ಬಾರ್ ಬಂದ್ ಆಗಿದ್ದರಿಂದ ಸ್ವಲ್ಪ ತೆರಿಗೆ ಸಂಗ್ರಹ ಕಡಿಮೆಯಾಗಿದೆ.
ಮುಂದಿನ ದಿನಗಳಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್ ಹಾಗೂ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.