ಸೈಕೋ ರಾಜೇಂದ್ರನಿಗೆ ಗುಂಡೇಟು
Team Udayavani, Mar 31, 2019, 12:23 PM IST
ಬೆಂಗಳೂರು: ಹತ್ತು ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ದಾರುಣವಾಗಿ ಕೊಂದಿದ್ದ ಹಾಗೂ ಗಾಂಜಾ ಚಟ ತೀರಿಸಿಕೊಳ್ಳಲು ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ನಡೆಸಿಕಲ್ಲು ಎತ್ತಿ ಹಾಕಿ ಕೊಲೆಗೈದು ಹಣ ದೋಚುತ್ತಿದ್ದ ಆರೋಪಿಯ ಎರಡೂ ಕಾಲುಗಳಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ರಾಜೇಂದ್ರ ಅಲಿಯಾಸ್ ಬೆಂಕಿ ರಾಜ ಅಲಿಯಾಸ್ ಸೈಕೋ ರಾಜೇಂದ್ರ (28) ಗುಂಡೇಟು ತಿಂದ ಆರೋಪಿ. ಆರೋಪಿಯ ಬಲಗಾಲಿನ ಪಾದ ಮತ್ತು ಎಡಗಾಲಿನ ಮಂಡಿಗೆ ಗುಂಡುಗಳು ತಗುಲಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಕಿರಾಜನ ವಿರುದ್ಧ ಸಹೋದರಿಯ ಹತ್ಯೆ ಸೇರಿ ಮೂರು ಕೊಲೆ ಪ್ರಕರಣಗಳಿದ್ದು, ನಗರದ ವಿವಿಧ ಠಾಣೆಗಳಲ್ಲಿ ಹಲ್ಲೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಮಾ.23ರಂದು ತಡರಾತ್ರಿ ಉತ್ತರಹಳ್ಳಿ ಮುಖ್ಯರಸ್ತೆಯ ಕದಿರೇನಹಳ್ಳಿ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಲಿಂಗಪ್ಪ (62) ಅವರ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ.
ನಂತರ ನಾಲ್ಕು ದಿನಗಳ ಹಿಂದಷ್ಟೇ ಜೆ.ಪಿ.ನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಆ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಆತನ ಪತ್ತೆಗಾಗಿ ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ವಿಶೇಷ ತಂಡಗಳನ್ನು ರಚಿಸಿದ್ದರು.
ಎರಡೂ ಕಾಲಿಗೆ ಗುಂಡು: ಬೆಂಕಿ ರಾಜನ ಚಲವಲನಗಳ ಮೇಲೆ ನಿಗಾ ಇರಿಸಿದ್ದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಶನಿವಾರ ಮುಂಜಾನೆ 4.30ರ ಸುಮಾರಿಗೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ನಾರಾಯಣನಗರದ ಡಬಲ್ ರಸ್ತೆಯಲ್ಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು.
ಈ ಮಾಹಿತಿ ಆಧಾರದ ಮೇಲೆ ಇನ್‌ಸ್ಪೆಕ್ಟರ್ ಹಜರೇಶ್ ಎ. ಕಿಲ್ಲೆದಾರ್, ಪಿಎಸ್‌ಐ ಶಿವಕುಮಾರ್, ಶ್ರೀನಿವಾಸಪ್ರಸಾದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಯ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಆಗ ಪಿಐ ಹಜರೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಆದರೂ ಆರೋಪಿ ದೊಡ್ಡ ಕಲ್ಲೊಂದನ್ನು ಪೊಲೀಸ್ ಸಿಬ್ಬಂದಿಯತ್ತ ಎಸೆದಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಐ ಹಜರೇಶ್ ಎ. ಕಿಲ್ಲೆದಾರ್, ಆರೋಪಿ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದು, ಎರಡೂ ಕಾಲುಗಳಿಗೆ ಗುಂಡುಗಳು ತಗುಲಿವೆ ಎಂದು ಪೊಲೀಸರು ಹೇಳಿದರು.
ಸೈಕೋ ರಾಜನ ಹಿನ್ನೆಲೆ: ಸೈಕೋ ರಾಜೇಂದ್ರ, ಹತ್ತು ವರ್ಷಗಳ ಹಿಂದೆ ಸ್ವಂತ ಸಹೋದರಿಯನ್ನೇ ಬೆಂಕಿ ಹಚ್ಚಿ ಕೊಲೆಗೈದಿದ್ದ. ಅಂದಿನಿಂದ ಆತನಿಗೆ ರಾಜೇಂದ್ರ ಅಲಿಯಾಸ್ ಬೆಂಕಿರಾಜ ಎಂದು ಕರೆಯಲಾಗುತ್ತದೆ. ಈ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದಿದ್ದ ಆರೋಪಿ, ಎಂಟು ವರ್ಷಗಳ ಹಿಂದೆ ತ್ಯಾಗರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇಲ್ವಿಚಾರಕನೊಬ್ಬನನ್ನು ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ.
ಕೆಲ ವರ್ಷಗಳ ಹಿಂದೆ ನಡೆದ ಕಾವೇರಿ ಗಲಾಟೆ ಸಂದರ್ಭದಲ್ಲಿ ನಗರದ ಕೆಲವೆಡೆ ಕಾರುಗಳಿಗೆ ಬೆಂಕಿ ಹಾಕಿದ್ದ. 2019 ಮಾ.24ರಂದು ಭದ್ರತಾ ಸಿಬ್ಬಂದಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ, ಐದು ದಿನಗಳ ಹಿಂದೆ ಜೆ.ಪಿ.ನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಹಾಕಿದ್ದ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಕೇವಲ 150 ರೂ.ಗಾಗಿ ಕೊಲೆ: ವಿಪರೀತ ಗಾಂಜಾ ವ್ಯಸನಿಯಾಗಿರುವ ಬೆಂಕಿ ರಾಜ, ಗಾಂಜಾ, ಊಟ, ಮದ್ಯ ಸೇವನೆಗಾಗಿ ಹಣ ಕೊಡುವಂತೆ ರಸ್ತೆ ಪಕ್ಕ ಮಲಗಿರುವ ವ್ಯಕ್ತಿಗಳಿಗೆ ದುಂಬಾಲು ಬೀಳುತ್ತಿದ್ದ. ಒಂದು ವೇಳೆ ಹಣ ಕೊಡಲು ನಿರಾಕರಿಸಿದರೆ, ಕಲ್ಲು ಎತ್ತಿ ಹಾಕಿ ಹತ್ಯೆಗೈದು, ಜೇಬಿನಲ್ಲಿರುವ ಹಣ ದೋಚಿ ಪರಾರಿಯಾಗುತ್ತಿದ್ದ. ಇತ್ತೀಚೆಗೆ ಸೆಕ್ಯೂರಿಟಿ ಗಾರ್ಡ್ ಲಿಂಗಪ್ಪ ಅವರನ್ನು ಕೊಂದು ಅವರ ಜೇಬಿನಲ್ಲಿದ್ದ ಕೇವಲ 150 ರೂ. ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.