ಹ್ಯಾಪಿ ನ್ಯೂ ಇಯರ್ ಬೆಂಗಳೂರು
Team Udayavani, Jan 1, 2018, 12:20 PM IST
ಬೆಂಗಳೂರು: ನಿಂತಲ್ಲೇ ಹೆಜ್ಜೆ ಹಾಕುತ್ತಾ, “ಹ್ಯಾಪಿ ನ್ಯೂ ಇಯರ್’ ಎಂದು ಮುಗಿಲು ಮುಟ್ಟುವಂತೆ ಕೇಕೆ ಹಾಕಿದ ಯುವ ಸಮೂಹ, 2017ಕ್ಕೆ ವಿದಾಯ ಹೇಳಿ, 2018ನೇ ವರ್ಷವನ್ನು ಹರ್ಷೋದ್ಘಾರದೊಂದಿಗೆ ಬರಮಾಡಿಕೊಂಡಿತು. ಆದರೆ ಇ ಬಾರಿ ಯುವ ಸಮೂಹದಲ್ಲಿ ಎಂದಿನ ಹುರುಪು ಕಾಣಲಿಲ್ಲ. ಬದಲಿಗೆ, ಮನದ ಮೂಲೆಯಲ್ಲೆಲ್ಲೋ ದುಗುಡ.
ಇ ಸಂಭ್ರಮದ ನಡುವೆಯೇ ಯುವತಿ ಜತೆ ಅಸಭ್ಯ ವರ್ತನೆ ತೋರಿದ ಯುವಕನೊಬ್ಬನನ್ನು ಶೋಕ್ ನಗರ ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ ಗುಂಪಿನಲ್ಲಿ ಸೇರಿಕೊಂಡು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ನಾಲ್ವರು ಜೇಬುಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಎಂಜಿ ರಸ್ತೆ , ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳಲ್ಲಿ ಸೇರಿದ್ದ ಸಾವಿರಾರು ಮಂದಿ ಹೊಸ ವರ್ಷವನ್ನು ಅತ್ಯುತ್ಸಾಹದಿಂದ ಬರಮಾಡಿಕೊಂಡರು. ಖಾಕಿ ಕಣ್ಗಾವಲಿನಲ್ಲಿಯೇ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಹೊಸವರ್ಷಾಚರಣೆಗೆ ಆಗಮಿಸಿದ್ದ ಜನರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಹಾರೈಕೆ ಜತೆಗೊಂದಿಷ್ಟು ಕೇಕೆ, ಹರ್ಷೋದ್ಘಾರದಿಂದ ಸಂಭ್ರಮ ಕಳೆಗಟ್ಟಿತ್ತು. ಪ್ರತ್ಯೇಕವಾಗಿ ಮೀಸಲಿಡಲಾಗಿದ್ದ ನಾಲ್ಕು ಪಥಗಳಲ್ಲಿ ಸಾವಿರಾರು ಮಂದಿ ಮಹಿಳೆಯರು ಹಾಗೂ ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಹೊಸವರ್ಷಾಚರಣೆಗೆ ಕಟ್ಟೆಚ್ಚರ ವಹಿಸಿದ್ದ ನಗರ ಪೊಲೀಸ್ ಇಲಾಖೆ ಶಾಂತಿಯುತವಾಗಿ, ಮತ್ತೂಬ್ಬರಿಗೆ ತೊಂದರೆಯಾಗದಂತೆ ಸಂಭ್ರಮಾಚರಣೆ ಮಾಡುವಂತೆ ಸೂಚನೆ ನೀಡುತ್ತಿತ್ತು. ಮುಂಜಾಗ್ರತೆ ಕ್ರಮವಾಗಿ ಗುಂಪುಗಳು ಹೆಚ್ಚು ಹೊತ್ತು ನಿಲ್ಲದಂತೆ ಕಳಿಸುವ, ಗುಂಪು ಚದುರಿಸುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದರು.
ಭಾನುವಾರ ರಾತ್ರಿ 8 ಗಂಟೆಯಿಂದಲೇ ಹೊಸ ವರ್ಷಾಚರಣೆಯ ಹಾಟ್‌ಸ್ಪಾಟ್ ಬ್ರಿಗೇಡ್ ಹಾಗೂ ಎಂ.ಜಿ.ರಸ್ತೆಗಳತ್ತ ಸಾರ್ವಜನಿಕರು ಹೆಜ್ಜೆಹಾಕಿದರು. ಎಂ.ಜಿ.ರಸ್ತೆ ಸುತ್ತಲ ಪ್ರದೇಶಗಳು ಹೊಸ ವರ್ಷದ ಸ್ವಾಗತಕ್ಕೆಂದೇ ಜಗಮಗಿಸುವ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದವು.
ಪಬ್, ರೆಸ್ಟೋರೆಂಟ್, ಸ್ಟಾರ್ ಹೋಟೆಲ್‌ಗಳಲ್ಲಿ ಮಾರ್ಡನ್ ನೃತ್ಯ, ಪಾರ್ಟಿ ಜೋರಾಗಿತ್ತು. ಅಲ್ಲದೆ ಜೆ.ಪಿ.ನಗರ, ಜಯನಗರ, ಗಾಂಧಿಬಜಾರ್, ಚಾಮರಾಜಪೇಟೆ, ಮಲ್ಲೇಶ್ವರ, ಕೆ.ಆರ್.ಪುರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಯಶವಂತಪುರ ಮೊದಲಾದ ಭಾಗದಲ್ಲೂ ಜನ ಪಟಾಕಿ ಸಿಡಿಸಿ ನೂತನ ವರ್ಷ ಬರಮಾಡಿಕೊಂಡರು.
ಲಘು ಲಾಠಿ ಪ್ರಹಾರ!: ರಾತ್ರಿ 11.30ರ ಸುಮಾರಿಗೆ ಕಾವೇರಿ ಎಂಪೋರಿಯಂ ಬಳಿ ಯುವಕರ ಗುಂಪೊಂದು ಏಕಾಏಕಿ ಬ್ಯಾರಿಕೇಡ್ ಪಕ್ಕದಲ್ಲಿ ನುಗ್ಗಲು ಯತ್ನಿಸಿದ್ದರಿಂದ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ, ಯುವಕರನ್ನು ಚದುರಿಸಿದ ಘಟನೆ ನಡೆಯಿತು.
ಜಾಧವ್‌ಗೆ ಬಿಡುಗಡೆಗೆ ಪ್ರಾರ್ಥನೆ!: ಹೊಸ ವರ್ಷದ ಸಂಭ್ರಮದಲ್ಲಿಯೇ, ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಕುಲಭೂಷಣ್ ಜಾಧವ್ ಅವರ ಬಿಡುಗಡೆಗೆ ಪ್ರಾರ್ಥಿಸಿದ ಡಾ. ರಾಜ್‌ಕುಮಾರ್ ಅಭಿಮಾನಿ ಬಳಗ, ಮೇಣದ ಬತ್ತಿಗಳನ್ನು ಬೆಳಗಿಸಿದ್ದು ವಿಶೇಷವಾಗಿತ್ತು. ಜತೆಗೆ ಕಟ್ಟುನಿಟ್ಟಿನ ಬಿಗಿ ಪೊಲೀಸ್ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದ್ದ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್‌ಗೆ ಜೈ ಎಂದು ಅಭಿನಂದನೆ ಸಲ್ಲಿಸಿದರು.
ದಾಖಲೆಯ ಮೆಟ್ರೋ ಪ್ರಯಾಣ: ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಕೇವಲ 6 ಗಂಟೆಗಳ ಅವಧಿಯಲ್ಲಿ 2,94,472 ಪ್ರಯಾಣಿಕರು ಸಂಚರಿಸಿ ದಾಖಲೆ ನಿರ್ಮಿಸಿದ್ದಾರೆ. ಇ ಪೈಕಿ ಬೈಯಪ್ಪನಹಳ್ಳಿ-ನಾಯಂಡಹಳ್ಳಿಯ ನೇರಳೆ ಮಾರ್ಗದಲ್ಲಿ 1.48,296 ಮಂದಿ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರವರೆಗಿನ ಹಸಿರು ಮಾರ್ಗದಲ್ಲಿ 1,46,176 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಹೊಸ ವರ್ಷಾಚರಣೆಗೆ ಆಗಮಿಸುತ್ತಿದ್ದೇನೆ. ಇಲ್ಲಿ ಸಾವಿರಾರು ಜನರ ಜತೆ ಹೊಸ ವರ್ಷ ಆಚರಿಸುವುದೇ ನಮಗೆ ಖುಷಿ ಸಂಗತಿ. ಇ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಜನ ಸೇರಿದ್ದಾರೆ.
-ಪ್ರಣೀತ್, ಸಾಫ್ಟ್ವೇರ್ ಉದ್ಯೋಗಿ
ವಿ ಲವ್ ಬೆಂಗಳೂರು. ಇಲ್ಲಿನ ನ್ಯೂ ಇಯರ್ ಸೆಲಬ್ರೇಷನ್ ನನಗೆ ತುಂಬಾ ಇಷ್ಟ. ಪರಿಚಯವೇ ಇಲ್ಲದ ಸಾವಿರಾರು ಜನರ ಜತೆ ಹೊಸ ವರ್ಷಕ್ಕೆ ಸ್ವಾಗತ ಕೋರುವುದೇ ಖುಶಿಯ ವಿಚಾರ.
-ಅಭಿನವ್, ಕೋರಮಂಗಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.