ಹಳ್ಳಿಯತ್ತ ಆರೋಗ್ಯ; ನೂತನ ಕೇಂದ್ರಗಳ ಆರಂಭಕ್ಕೆ ಆದೇಶ
Team Udayavani, Jan 9, 2018, 6:00 AM IST
ಬೆಂಗಳೂರು: ಹಳ್ಳಿಗಳಲ್ಲಿ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಮತ್ತೂಂದು ಹೆಜ್ಜೆ ಇಟ್ಟಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಹೊಸದಾಗಿ ಆರೋಗ್ಯ ವಿಸ್ತರಣಾ ಕೆಂದ್ರಗಳನ್ನು ತೆರೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 8 ರಿಂದ 10 ಕಿಲೋ ಮೀಟರ್ ದೂರ ಇರುವ ಗ್ರಾಮಗಳಲ್ಲಿ ಇಂಥ ಕೇಂದ್ರಗಳನ್ನು ತೆರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಒಟ್ಟು 150 ಹಳ್ಳಿಗಳಲ್ಲಿ ಆರೋಗ್ಯ ವಿಸ್ತರಣಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಈ ಯೋಜನೆಗೆ 14 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರತಿ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಒಬ್ಬರು ವೈದ್ಯರು, ಒಬ್ಬರು ಶುಶ್ರೂಷಕರು ಹಾಗೂ ಒಬ್ಬರು ಡಿ ಗ್ರೂಪ್ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.
ವಿಸ್ತರಣಾ ಘಟಕಗಳಿಗೆ ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಜನವರಿ 12 ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗುತ್ತದೆ. ಜ.22 ರಂದು ಸಂದರ್ಶನ, ಜ. 25ಕ್ಕೆ ಅಂತಿಮ ಪಟ್ಟಿ ಪ್ರಕಟಿಸಿ, ಜ. 27 ಕ್ಕೆ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ. ಫೆಬ್ರವರಿ 1 ರಿಂದಲೇ ಈ ವಿಸ್ತರಣಾ ಕೇಂದ್ರಗಳು ಕಾರ್ಯಾರಂಭ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ವೈದ್ಯರಿಗೆ ಮಾಸಿಕ 45 ಸಾವಿರ ಸಂಭಾವನೆ, ಶುಶ್ರೂಷಕರಿಗೆ 13072 ಹಾಗೂ ಡಿ ಗ್ರೂಪ್ ನೌಕರರಿಗೆ 12,243 ರೂಪಾಯಿ ಸಂಭಾವನೆಯನ್ನು ಜಿಲ್ಲಾ ಪಂಚಾಯತಿ ಮೂಲಕ ನೀಡಬೇಕೆಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಹೊಸ ಕಟ್ಟಡ ಆರಂಭವಿಲ್ಲ
ವಿಸ್ತರಣಾ ಘಟಕ ಸ್ಥಾಪನೆಗೆ ಪಂಚಾಯತಿ ಕಟ್ಟಡ, ಶಾಲೆಯ ಸಮುದಾಯ ಭವನ ಅಥವಾ ಸರ್ಕಾರದ ಇತರ ಕಟ್ಟಡಗಳಲ್ಲಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರುವುದನ್ನು ನೋಡಿಕೊಂಡು ಘಟಕ ಸ್ಥಾಪನೆ ಮಾಡಬೇಕು. ಸರ್ಕಾರಿ ಜಾಗ ದೊರೆಯದಿದ್ದರೆ, 2 ಸಾವಿರ ಮಾಸಿಕ ಬಾಡಿಗೆ ನೀಡಿ ಮನೆ ಪಡೆಯಬಹುದು. ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಒಂದು ಘಟಕಕ್ಕೆ ಮಾಸಿಕ 10 ಸಾವಿರ ರೂಪಾಯಿ ಔಷಧ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಘಟಕದ ಪಿಠೊಪಕರಣ ಖರೀದಿಗೆ 50 ಸಾವಿರ ವೆಚ್ಚ ಮಾಡಲು ಅವಕಾಶವಿದ್ದು, ಒಂದು ವಿಸ್ತರಣಾ ಕೇಂದ್ರಕ್ಕೆ ತಿಂಗಳಿಗೆ 80,315 ರೂಪಾಯಿ ವೆಚ್ಚವಾಗಲಿದ್ದು, 150 ವಿಸ್ತರಣಾ ಕೇಂದ್ರಗಳಿಗೆ ವಾರ್ಷಿಕ 14ಕೋಟಿ 45 ಲಕ್ಷ 67 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂದಾಜಿಸಿದೆ.
ವೈದ್ಯರ ಕೊರತೆ: ಇತ್ತೀಚೆಗೆ ವೈದ್ಯರೇ ತಮಗೆ
ಅಗತ್ಯವಿರುವಷ್ಟು ವೇತನ ಮೊತ್ತಕ್ಕೆ ಬಿಡ್ ಮಾಡಿ ಹುದ್ದೆ ಪಡೆಯುವ ಪ್ರಯತ್ನವನ್ನೂ ಆರೋಗ್ಯ ಇಲಾಖೆ ನಡೆಸಿತ್ತು. “ನಿಮ್ಮ ಕೋಟ್, ನಮ್ಮ ಪೋಸ್ಟ್’ ಹೆಸರಿನಡಿ ನಡೆಸಿದ ಬಿಡ್ ವ್ಯವಸ್ಥೆಗೂ ವೈದ್ಯರಿಂದ ಹೆಚ್ಚಿನ ಸ್ಪಂದನೆ ಸಿಗಲಿಲ್ಲ. ಸರ್ಕಾರ ಗರಿಷ್ಠ 90,000 ರೂ. ವೇತನ ನೀಡಲು ಒಲವು ತೋರಿದರೂ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ.
250 ಕೇಂದ್ರಗಳಲ್ಲಿ ಇಲ್ಲ ವೈದ್ಯರು
ರಾಜ್ಯದಲ್ಲಿ ಒಟ್ಟು 2359 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಸುಮಾರು 250 ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಹೀಗಾಗಿ ಹೆಚ್ಚಿನ ವಿಸ್ತರಣಾ ಕೇಂದ್ರಗಳನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲೇ ತೆರೆಯಲು ಸರ್ಕಾರ ನಿರ್ಧರಿಸಿದೆ.
ಹೊಂದಿಸುವುದೇ ಕಷ್ಟ
ರಾಜ್ಯ ಸರ್ಕಾರದ ಈ ಯೋಜನೆ ಎಲ್ಲರಿಗೂ ಆರೋಗ್ಯ ಭಾಗ್ಯ ನೀಡುವುದೇ ಆಗಿದ್ದರೂ ವೈದ್ಯರನ್ನು ಹೊಂದಿಸುವುದೇ ಕಷ್ಟದ ಕೆಲಸ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಯೋಜನೆ ಪ್ರಕಾರ ಇನ್ನೂ 150 ಗ್ರಾಮಗಳಿಗೆ ವೈದ್ಯರ ಸೇವೆ ಬೇಕು. ಸದ್ಯ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಇನ್ನು ಈ ವಿಸ್ತರಣಾ ಕೇಂದ್ರಗಳಲ್ಲೂ ತಲಾ ಒಬ್ಬೊಬ್ಬ ವೈದ್ಯರನ್ನು ಹೊಂದಿಸಬೇಕು. ಆದರೆ, ಸದ್ಯದ ಸಮಸ್ಯೆ ಏನೆಂದರೆ ವೈದ್ಯರು ಗ್ರಾಮೀಣ ಸೇವೆಗೆ ಬರದೇ ಇರುವುದು. ಇದಕ್ಕಾಗಿಯೇ ರಾಜ್ಯ ಆರೋಗ್ಯ ಇಲಾಖೆ, ವೈದ್ಯರಿಗೆ ಭಾರಿ ವೇತನದ ಆಹ್ವಾನವನ್ನೂ ನೀಡಿತ್ತು. ಆಗಲೂ ನಿರೀಕ್ಷೆಯಷ್ಟು ವೈದ್ಯರು ಬರಲಿಲ್ಲ ಎಂದು ಹೇಳಲಾಗಿದೆ.
ಸಂಭಾವನೆ ಎಷ್ಟು?
ವೈದ್ಯರು – 45,000
ನರ್ಸ್ – 13072
ಡಿ ಗ್ರೂಪ್ ನೌಕರ – 12,243
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.