ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆಗೆ ವಿವಾದದ ಬಿಸಿ
Team Udayavani, May 24, 2017, 12:24 PM IST
ಬೆಂಗಳೂರು: ಬ್ರಿಟಿಷರ ಆಡಳಿತಾವಧಿಯಲ್ಲಿ ಕುದುರೆಗಳ ಚಿಕಿತ್ಸೆಗೆಂದು ಸ್ಥಾಪನೆಯಾಗಿದ್ದ ಪಶು ಚಿಕಿತ್ಸಾಲಯದಲ್ಲಿ ಸಾಕು ಪ್ರಾಣಿಗಳು ಹಾಗೂ ಇತರ ಜಾನುವಾರುಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ 87 ಮರಗಳ ತೆರವು ಹಾಗೂ ಪಾರಂಪರಿಕ ಕಟ್ಟಡ ತೆರವುಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆ ಸ್ಥಳದಲ್ಲಿ ಸುಮಾರು 6.25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆ ತಲೆಯೆತ್ತಲಿದೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರಿಗೆ ಮಾತ್ರವಲ್ಲದೆ ರಾಜ್ಯದ ಯಾವುದೇ ಭಾಗದಲ್ಲಿ ಸಾಕುಪ್ರಾಣಿಗಳು, ಜಾನುವಾರುಗಳಲ್ಲಿ ಸಂಕೀರ್ಣ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆ ಪಡೆಯುವ ಸುಸಜ್ಜಿತ ಕೇಂದ್ರ ನಿರ್ಮಾಣವಾಗಲಿದೆ.
ದಂಡು ರೈಲು ನಿಲ್ದಾಣ ಕಡೆಯಿಂದ ಕ್ವೀನ್ಸ್ ರಸ್ತೆ ಕೂಡುವ ಜಂಕ್ಷನ್‌ನಲ್ಲಿ ಸರ್ಕಾರಿ ಪಶು ಆಸ್ಪತ್ರೆ ಇದೆ. ಹಳೆಯ ಕಟ್ಟಡ ಶಿಥಿಲಗೊಂಡಿರುವುದರಿಂದ ಹೊಸದಾಗಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಪಶುಸಂಗೋಪನಾ ಇಲಾಖೆ ಮುಂದಾಗಿದೆ. ನೆಲಮಹಡಿ ಜತೆಗೆ ಮೊದಲ ಮಹಡಿ ಒಳಗೊಂಡ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ.
ಸಾಕುಪ್ರಾಣಿಗಳು ಹಾಗೂ ಜಾನುವಾರುಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ, ಸಂತಾನಾಭಿವೃದ್ಧಿ ಸಂದರ್ಭದಲ್ಲಿ ಸಂಕೀರ್ಣತೆ ಎದುರಾದರೆ ತುರ್ತು ಚಿಕಿತ್ಸೆಗೆ ಪೂರಕವಾದ ವ್ಯವಸ್ಥೆ ಇಲ್ಲಿರಲಿದೆ. ಜತೆಗೆ ಪಾಲನೆ- ಪೋಷಣೆಗೂ ಪ್ರತ್ಯೇಕ ವಾರ್ಡ್ ಸೌಲಭ್ಯವನ್ನು ಆಸ್ಪತ್ರೆ ಒಳಗೊಂಡಿರಲಿದೆ. ಅದರಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಶುರುವಾಗಿರುವ ಬೆನ್ನಲ್ಲೇ ವಿರೋಧದ ಅಪಸ್ವರ ಕೇಳಿಬರುತ್ತಿದೆ.
“ಹಾಲಿ ಸರ್ಕಾರಿ ಪಶು ಆಸ್ಪತ್ರೆಯಿರುವ ಜಾಗದಲ್ಲಿ ಸುಮಾರು 6.25 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಕೀರ್ಣ ನಿರ್ಮಾಣವಾಗಲಿದ್ದು, ಸಣ್ಣ- ದೊಡ್ಡ ಪ್ರಾಣಿಗಳಿಗೆ ಚಿಕಿತ್ಸೆ ವ್ಯವಸ್ಥೆ ಇರಲಿದೆ. ಮುಂಭಾಗದಲ್ಲಿರುವ ಪಾರಂಪರಿಕ ಕಟ್ಟಡವನ್ನು ನವೀಕರಿಸಬಹುದಾಗಿದೆ. ಆದರೆ ಉಳಿದ ಹೆಂಚಿನ ಹೊದಿಕೆ ರುವ ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಲಿದೆ.
ತಮಿಳುನಾಡಿನಲ್ಲಿ ಪ್ರಾಣಿಗಳ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿದ್ದು, ರಾಜ್ಯದಲ್ಲೂ ಅತ್ಯಾಧುನಿಕ ಪಶು ಆಸ್ಪತ್ರೆ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಪಶುಸಂಗೋಪನಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕ್ವೀನ್ಸ್ ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಪಶು ಆಸ್ಪತ್ರೆ ನಿರ್ಮಾಣವಾಗಲಿದೆ.
ಸಾಕುಪ್ರಾಣಿಗಳು, ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ, ಸಂತಾನೋತ್ಪತ್ತಿ ಸಂದರ್ಭದಲ್ಲಿ ಸಂಕೀರ್ಣತೆ ಎದುರಾದರೆ ಸೂಕ್ತ ಚಿಕಿತ್ಸೆ ಜತೆಗೆ ಪಾಲನೆ, ಪೋಷಣೆ ವ್ಯವಸ್ಥೆ ಹೊಂದಿರಲಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ (ಬೆಂಗಳೂರು) ಡಾ.ಎನ್.ಸೋಮಶೇಖರ್ “ಉದಯವಾಣಿ’ಗೆ ತಿಳಿಸಿದ್ದಾರೆ. ಪ್ರಾಣಿಗಳ ಚಿಕಿತ್ಸೆಗೆ ಅತ್ಯಾಧುನಿಕ ಯಂತ್ರೋಪಕರಣಗಳು, ವೈದ್ಯಕೀಯ ಸಲಕರಣೆಗಳೊಂದಿಗೆ ಹಿರಿಯ ಪಶು ವೈದ್ಯಾಧಿಕಾರಿ ಜತೆಗೆ ಇಬ್ಬರು ತಜ್ಞ ವೈದ್ಯರಿರಲಿದ್ದಾರೆ.
ದಿನದ 24 ಗಂಟೆಯೂ ಪ್ರಾಣಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಹೊಂದಿರುತ್ತದೆ. ಶ್ವಾನ, ಕುದುರೆ ಸೇರಿದಂತೆ ಇತರೆ ಸಾಕುಪ್ರಾಣಿಗಳ ಜತೆಗೆ ಜಾನುವಾರುಗಳಿಗೂ ಚಿಕಿತ್ಸೆ ವ್ಯವಸ್ಥೆ ಇರಲಿದೆ. 18 ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಅಂದಾಜು ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದಿಂದ ಬೆಂಗಳೂರಿನ ಸಾಕುಪ್ರಾಣಿ ಪ್ರಿಯರು ಮಾತ್ರವಲ್ಲದೆ ಅಕ್ಕಪಕ್ಕದ ಪ್ರದೇಶದ ಜನರು ತಮ್ಮ ಜಾನುವಾರುಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಕಟ್ಟಡ- ಮರ ತೆರವಿಗೆ ವಿರೋಧ
ಪಾರಂಪರಿಕ ಎನ್ನಲಾದ ಕಟ್ಟಡ ಹಾಗೂ 80ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸುವ ಬದಲು ಹಾಲಿ ಕಟ್ಟಡವನ್ನು ದುರಸ್ತಿಪಡಿಸಿ ಸೂಕ್ತ ಚಿಕಿತ್ಸೆ ದೊರೆಯುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪರಿಸರ ಪ್ರೇಮಿಗಳ ಒತ್ತಾಯ. ಮರ ತೆರವುಗೊಳಿವುದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಕುಮಾರ್ ಜಹಗೀರಾªರ್ ನೇತೃತ್ವದಲ್ಲಿ ಹಲವರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
“ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯು ಪಾರಂಪರಿಕ ಕಟ್ಟಡವಾಗಿದೆ. ಹಾಗಾಗಿ ಕಟ್ಟಡವನ್ನು ತೆರವುಗೊಳಿಸುವ ಬದಲಿಗೆ ನವೀಕರಿಸಿ ಗುಣಮಟ್ಟದ ಪಶು ಚಿಕಿತ್ಸೆ ಸಿಗುವ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೇ ನೂತನ ಕಟ್ಟಡ ನಿರ್ಮಾಣಕ್ಕಾಗಿ 87 ಮರಗಳನ್ನು ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಯೋಜನೆ ಕೈಬಿಡುವಂತೆ ಕೋರಿ 500ಕ್ಕೂ ಹೆಚ್ಚು ಮಂದಿ ಆನ್‌ಲೈನ್‌ನಲ್ಲಿ ಅಭಿಯಾನ ನಡೆಸಿ ಪಶುಸಂಗೋಪನಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ,’ ಎಂದು ಕುಮಾರ್ ಜಹಗೀರಾªರ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಏನೆಲ್ಲಾ ಇರಲಿದೆ?
* ಪ್ರಾಣಿಗಳ ಚಿಕಿತ್ಸೆಗೆ ಅತ್ಯಾಧುನಿಕ ಯಂತ್ರೋಪಕರಣಗಳು
* ಪಾಲನೆ- ಪೋಷಣೆಗೂ ಪ್ರತ್ಯೇಕ ವಾರ್ಡ್ ಸೌಲಭ್ಯ
* ಹಿರಿಯ ಪಶು ವೈದ್ಯಾಧಿಕಾರಿ ಜತೆಗೆ ಇಬ್ಬರು ತಜ್ಞ ವೈದ್ಯರು
* ದಿನದ 24 ಗಂಟೆಯೂ ಪ್ರಾಣಿಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ
* ಶ್ವಾನ, ಕುದುರೆ ಸೇರಿ ಸಾಕುಪ್ರಾಣಿಗಳಿಗೆ ಚಿಕಿತ್ಸೆ ವ್ಯವಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.