ಹೆಬ್ಟಾಳ ಸೇತುವೆ ವಿಸ್ತರಣೆ, ರೈಲು ಸೇವೆಯಷ್ಟೇ ಪರಿಹಾರ
Team Udayavani, Mar 6, 2017, 11:52 AM IST
* ನರೇಶ್ ನರಸಿಂಹನ್, ನಗರ ವಿನ್ಯಾಸಕರು,,
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಮಾತ್ರ ಸಂಚಾರದಟ್ಟಣೆ ಸಮಸ್ಯೆ ಇಲ್ಲ. ಕೆ.ಆರ್. ಪುರ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಉಳಿದ ಕಡೆಗಳಲ್ಲೂ ಜನ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಿದ್ದರೆ, ಅಲ್ಲೆಲ್ಲಾ ಉಕ್ಕಿನ ಸೇತುವೆಗಳು ಪರಿಹಾರ ಒದಗಿಸುತ್ತವೆಯೇ? ಖಂಡಿತ ಇಲ್ಲ. ಸಂಚಾರದಟ್ಟಣೆ ನಿವಾರಣೆಗೆ ಪರ್ಯಾಯ ಮಾರ್ಗಗಳು ಅನೇಕ ಇವೆ. ಅವುಗಳ ಅನುಷ್ಠಾನಕ್ಕೆ ಸರ್ಕಾರ ಮನಸ್ಸು ಮಾಡಬೇಕಿದೆ ಅಷ್ಟೇ.
ಹೆಬ್ಟಾಳ ಮಾರ್ಗವನ್ನೇ ನೋಡುವುದಾದರೆ, ಏರ್‌ಪೋರ್ಟ್ ಕಡೆಯಿಂದ ಬರುವಾಗ ಎಸ್ಟೀಮ್ ಮಾಲ್ ಮುಂದೆ ಚತುಷ್ಪಥದ ರಸ್ತೆ ಇದೆ. ವಾಹನಗಳು ಹೆಬ್ಟಾಳ ಮೇಲ್ಸೇತುವೆ ಏರುತ್ತಿದ್ದಂತೆ ರಸ್ತೆ ದ್ವಿಪಥ ಆಗುತ್ತದೆ. ಇದರಿಂದ ಸಂಚಾರದಟ್ಟಣೆ ಉಂಟಾಗುತ್ತದೆ. ಆದ್ದರಿಂದ ಈ ಸೇತುವೆಯನ್ನು ಚತುಷ್ಪಥಗೊಳಿಸುವ ಮೂಲಕ ತಕ್ಕಮಟ್ಟಿಗೆ ವಾಹನದಟ್ಟಣೆ ಕಡಿಮೆ ಮಾಡಬಹುದು.
ಆದರೆ, ಇದಕ್ಕೆ ಹೆಬ್ಟಾಳ ಕೆರೆ ಅಡ್ಡಿ ಆಗಬಹುದು. ಹಸಿರು ನ್ಯಾಯಾಧೀಕರಣದ ಆದೇಶದ ಪ್ರಕಾರ ಕೆರೆ ಅಂಚಿನಿಂದ 70 ಮೀ. ಜಾಗವನ್ನು ಬಫರ್ ಝೋನ್‌ಗೆ ಬಿಡಬೇಕು. ಹಾಗಾಗಿ, ಈಗಿರುವ ಮೇಲ್ಸೇತುವೆ ಮೇಲೆ ಮತ್ತೂಂದು ಆಧುನಿಕ ದ್ವಿಪಥ ಸೇತುವೆ ನಿರ್ಮಿಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಿದೆ. ಇದಕ್ಕೆ ವೆಚ್ಚವೂ ಕಡಿಮೆ ಆಗುತ್ತದೆ.
ಥಣಿಸಂದ್ರ ರಸ್ತೆ: ಇನ್ನು ಮತ್ತೂಂದೆಡೆ ಥಣಿಸಂದ್ರ ರಸ್ತೆಯೂ ವಿಮಾನ ನಿಲ್ದಾಣದ ಕಡೆಗೆ ಹೋಗುತ್ತದೆ. ಇದು ಬೆಂಗಳೂರು ಮಧ್ಯ ಭಾಗದಿಂದ ಶಿವಾಜಿನಗರ ಮಾರ್ಗವಾಗಿ ಟ್ಯಾನರಿ ರಸ್ತೆ, ಶಾಂಪುರ ರಸ್ತೆ, ನಾಗವಾರ ರಸ್ತೆ, ಥಣಿಸಂದ್ರ ರಸ್ತೆ, ಬೆಳ್ಳಹಳ್ಳಿ ವೃತ್ತ, ಬಾಗಲೂರು ರಸ್ತೆ, ಸಾತನೂರು ರಸ್ತೆ, ಬಾಗಲೂರು ಗ್ರಾಮ ಬಂಡಿಕೊಡಿಗೇಹಳ್ಳಿ ಮೈಲನಹಳ್ಳಿ ಮಾರ್ಗವಾಗಿ ವಿಮಾನ ನಿಲ್ದಾಣ ಸಂಪರ್ಕಿಸುತ್ತದೆ. ಹೊರವರ್ತುಲ ರಸ್ತೆಯ ನಾಗವಾರ ವೃತ್ತದಿಂದ ವಿಮಾನ ನಿಲ್ದಾಣಕ್ಕೆ 20.63 ಕಿ.ಮೀ ದೂರವಾಗುತ್ತದೆ. ಪ್ರಸ್ತುತ ನಗರದ ಕೇಂದ್ರ ಭಾಗದ ಜನರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು ಒಟ್ಟು ದೂರ 22 ಕಿ.ಮೀ ಆಗುತ್ತದೆ.
ಬಳ್ಳಾರಿ ರಸ್ತೆ ವಿಸ್ತರಣೆ: ಹೆಬ್ಟಾಳ ಮೇಲ್ಸೇತುವೆ ನಂತರ ಮತ್ತೂಂದು ಸಮಸ್ಯೆ ಎಂದರೆ ಬಳ್ಳಾರಿ ರಸ್ತೆಯ ಅರಮನೆ ಕ್ರಾಸ್‌ನಿಂದ ಮೇಕ್ರಿ ವೃತ್ತ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯವು ಈ ರಸ್ತೆಯ ವಿಸ್ತರಣೆಗೆ ಸೂಚನೆ ನೀಡಿದೆ. ಇದಕ್ಕೆ ಅಡ್ಡಿಯಾಗುವ ಮರಗಳನ್ನು ಪಕ್ಕದಲ್ಲೇ ಇರುವ ಅರಮನೆ ಮೈದಾನಕ್ಕೆ ಸ್ಥಳಾಂತರಿಸಬೇಕು. ಇದಲ್ಲದೆ, ಹೊರವರ್ತುಲ ರಸ್ತೆ ಉದ್ದಕ್ಕೂ ಸಕ್ಯುಲರ್ ರೈಲಿನ ಅವಶ್ಯಕತೆ ಇದೆ.
ಆಗ ನಗರ ಪ್ರವೇಶ ಮತ್ತು ನಿರ್ಗಮನ ತುಂಬಾ ಸುಲಭ ಆಗಲಿದೆ. ಜತೆಗೆ ನಗರದಲ್ಲೇ 180 ಕಿ.ಮೀ. ರೈಲು ಮಾರ್ಗ ಹಾದುಹೋಗಿದೆ. 30ಕ್ಕೂ ಹೆಚ್ಚು ನಿಲ್ದಾಣಗಳಿವೆ. ಇವುಗಳನ್ನು ಬಳಸಿಕೊಳ್ಳಬಹುದಲ್ಲವೇ? ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರುಗಳು ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು. ಮತ್ತೂಂದು ಕಡೆ ರಾಜ್ಯ ಸರ್ಕಾರ ಇದಕ್ಕೆ ಭೂಮಿ ಮತ್ತು ಯೋಜನೆಗೆ ತಗಲುವ ವೆಚ್ಚದಲ್ಲಿ ಅಧಿಕ ಹೂಡಿಕೆಗೆ ಮನಸ್ಸು ಮಾಡಬೇಕು.
ನಗರದ ತಜ್ಞರಿಗೆ ನಮ್ಮಲ್ಲಿ ಕೊರತೆ ಇಲ್ಲ. ಆ ತಜ್ಞರು, ನಗರ ಯೋಜನೆಯಲ್ಲಿ ಸಕ್ರಿಯವಾಗಿರುವ ಸರ್ಕಾರೇತರ ಸಂಘ-ಸಂಸ್ಥೆಗಳು, ನಗರ ಭೂಸಾರಿಗೆ ನಿರ್ದೇಶನಾಲಯದಂತಹ ಸರ್ಕಾರಿ ಸಂಸ್ಥೆಗಳು, ವಿವಿಧ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಸರ್ಕಾರ ಒಂದೇ ವೇದಿಕೆಗೆ ತಂದು, ಸಲಹೆಗಳನ್ನು ಪಡೆಯಲಿ. ಆ ಮೂಲಕ ಒಂದು ಸೂಕ್ತ ನಿರ್ಧಾರಕ್ಕೆ ಬರಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.