ಪ್ರತ್ಯೇಕ ಪಥದ ಬಸ್‌ನಲ್ಲಿ ಹೈಟೆಕ್ ಕ್ಯಾಮೆರಾ
Team Udayavani, Oct 15, 2019, 3:10 AM IST
ಬೆಂಗಳೂರು: ನಗರದ ಹೊರವರ್ತುಲ ರಸ್ತೆ ಸಿಲ್ಕ್ಬೋರ್ಡ್ ಜಂಕ್ಷನ್-ಬೈಯಪ್ಪನಹಳ್ಳಿ ನಡುವೆ ನಿರ್ಮಿಸಲಾಗುತ್ತಿರುವ ಪ್ರತ್ಯೇಕ ಬಸ್ ಪಥದಲ್ಲಿ ಇತರೆ ವಾಹನಗಳು ನುಗ್ಗದಂತೆ ನಿಗಾ ಇಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಆಟೋಮೆಟಿಕ್ ಆಗಿ ಚಿತ್ರಗಳನ್ನು ಸೆರೆಹಿಡಿದು ರವಾನಿಸುವ ಸೆನ್ಸರ್ ಆಧಾರಿತ ಸಿಸಿಟಿವಿಗಳನ್ನು ಅಳವಡಿಸಲು ಚಿಂತನೆ ನಡೆಸಿದೆ.
ಈ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ರಾಬರ್ಟ್ ಬಾಷ್ ಸೆಂಟರ್ ಫಾರ್ ಸೈಬರ್ ಫಿಸಿಕಲ್ ಸಿಸ್ಟಮ್ಸ್ ಜತೆ ಬಿಎಂಟಿಸಿ ಚರ್ಚೆ ನಡೆಸಿದ್ದು, ಸಂಸ್ಥೆಯ ನೆರವಿನಿಂದ ಪ್ರತ್ಯೇಕ ಪಥದಲ್ಲಿ ಭವಿಷ್ಯದಲ್ಲಿ ಬಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಶಿಸ್ತು ಕಾಯ್ದುಕೊಳ್ಳಲು ಈ ಚಿತ್ರಗಳನ್ನು ವಿಶ್ಲೇಷಣೆ ಮಾಡಿ, ರವಾನಿಸುವ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆ ಇದೆ.
ಪ್ರಸ್ತುತ ಬಸ್‌ಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳು ಕೇವಲ ದೃಶ್ಯಗಳನ್ನು ಸೆರೆಹಿಡಿಯುತ್ತವೆ. ನಂತರ ಯಾವುದಾದರೂ ದೂರುಗಳು ಬಂದರೆ, ಅದರಲ್ಲಿರುವ ವೀಡಿಯೊ ತುಣುಕುಗಳನ್ನು ಪರಿಶೀಲಿಸಲಾಗುತ್ತದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಇದರ ನಿರ್ವಹಣೆ ಆಗುತ್ತಿಲ್ಲ. ಈಗ ಅಳವಡಿಸಲು ಚಿಂತನೆ ನಡೆಸಿರುವ ಸಿಸಿಟಿವಿ ಈಗಾಗಲೇ ಇರುವ ವ್ಯವಸ್ಥೆಯ ಮುಂದುವರಿದ ಭಾಗವಾಗಿವೆ.
ಸ್ವತಃ ಚಿತ್ರಗಳನ್ನು ಸೆರೆಹಿಡಿದು ಕಳುಹಿಸುವುದರಿಂದ ಪ್ರತ್ಯೇಕ ಪಥದಲ್ಲಿ ಇತರೆ ವಾಹನಗಳು ಸಂಚರಿಸಿದರೆ, ತಕ್ಷಣ ಕಂಡುಹಿಡಿಯಬಹುದು. ನಿರ್ವಹಣೆ ಜಂಜಾಟವೂ ಇರುವುದಿಲ್ಲ. ಆ ಚಿತ್ರಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
40 ಬಸ್‌ಗಳಲ್ಲಿ ಅಳವಡಿಕೆ: ಪ್ರಾಯೋಗಿಕವಾಗಿ 40ರಿಂದ 45 ಬಸ್‌ಗಳಲ್ಲಿ ಈ ಮಾದರಿಯ ಸಿಸಿಟಿವಿಗಳನ್ನು ಪ್ರಾಯೋಗಿಕವಾಗಿ ಅಳವಡಿಸಲು ಉದ್ದೇಶಿಸಿದ್ದು, ಬಸ್‌ಗಳ ಹೊರಗೆ ಮುಂಭಾಗದಲ್ಲಿ ಇವುಗಳನ್ನು ಹಾಕಲಾಗುವುದು. ಆಗ ಬಸ್ ಒಳಗೆ ಮತ್ತು ಹೊರಗೆ ಎರಡೂ ಭಾಗಗಳಲ್ಲಿನ ದೃಶ್ಯಗಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗುತ್ತವೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಆರಂಭದಲ್ಲಿ ಮೂರ್‍ನಾಲ್ಕು ತಿಂಗಳು ಇವುಗಳನ್ನು ಐಐಎಸ್ಸಿಯೇ ನಿರ್ವಹಣೆ ಮಾಡಲಿದೆ.
ಆದರೆ ಇದು ಇನ್ನೂ ಆರಂಭಿಕ ಹಂತದಲ್ಲಿದ್ದು, ಪೂರ್ಣಪ್ರಮಾಣದಲ್ಲಿ ಪ್ರತ್ಯೇಕ ಪಥದಲ್ಲಿ ಬಸ್‌ಗಳ ಕಾರ್ಯಾಚರಣೆ ನಂತರ ಅನುಷ್ಠಾನಕ್ಕೆ ಬರಲಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರತ್ಯೇಕ ಪಥದಲ್ಲಿ ಬಸ್‌ಗಳ ಯಶಸ್ವಿ ಕಾರ್ಯಾಚರಣೆಗೆ ಹಲವು ರೀತಿಯ ಸಿದ್ಧತೆಗಳನ್ನು ಬಿಎಂಟಿಸಿ ಮಾಡಿಕೊಂಡಿದೆ. ಈಗಾಗಲೇ ಆ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಬಸ್ ಚಾಲಕರಿಗೆ ತರಬೇತಿ ನೀಡಲಾಗಿದೆ. ಕರಪತ್ರಗಳನ್ನು ಮುದ್ರಿಸಿ, ಪ್ರಯಾಣಿಕರಿಗೆ ವಿತರಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಪಥದಲ್ಲಿ ಇತರೆ ವಾಹನಗಳು ನುಗ್ಗಿದರೆ, ಅಂತಹವರ ವಿರುದ್ಧ ದಂಡ ವಿಧಿಸುವಂತಹ ನಿಯಮ ಜಾರಿಗೆ ಸಾರಿಗೆ ಇಲಾಖೆಗೆ ಮನವಿ ಮಾಡಲಾಗಿದೆ. ಇದಲ್ಲದೆ, ಸಿಸಿಟಿವಿಗಳನ್ನೂ ಅಳವಡಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ವತಃ ಸೆರೆಹಿಡಿದು ಚಿತ್ರಗಳನ್ನು ಕಳುಹಿಸುವ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳ ಅಳವಡಿಕೆಗೂ ಚಿಂತನೆ ನಡೆದಿದ್ದು, ಐಐಎಸ್ಸಿಯೊಂದಿಗೆ ಮಾತುಕತೆ ನಡೆದಿದೆ. 20 ಬಸ್‌ಗಳು ಹಾಗೂ ಸಾಮಾನ್ಯ ರಸ್ತೆಗಳಲ್ಲಿ ಕಾರ್ಯಾಚರಣೆ ಮಾಡುವ 20 ಬಸ್‌ಗಳಲ್ಲಿ ಪ್ರಾಯೋಗಿಕವಾಗಿ ಇವುಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ “ಉದಯವಾಣಿ’ಗೆ ತಿಳಿಸಿದರು.
ಸಂಚಾರ ಪೊಲೀಸರಿಂದಲೂ ಸಿಸಿಟಿವಿ?: ಇದಕ್ಕೆ ಪೂರಕವಾಗಿ ನಗರ ಸಂಚಾರ ಪೊಲೀಸ್ ಕೂಡ ಉದ್ದೇಶಿತ ಪ್ರತ್ಯೇಕ ಪಥದಲ್ಲಿ ನುಗ್ಗುವ ಇತರೆ ವಾಹನಗಳ ಮೇಲೆ ಕಣ್ಗಾವಲು ಇಡಲಿದೆ. ಈಗಾಗಲೇ ಅಲ್ಲಲ್ಲಿ ಎದುರಾಗುವ ಸಿಗ್ನಲ್‌ಗಳಲ್ಲಿ ಸಿಸಿಟಿವಿಗಳಿದ್ದು, ಅಗತ್ಯಬಿದ್ದರೆ ಇನ್ನಷ್ಟು ಕ್ಯಾಮೆರಾಗಳನ್ನು ಈ ಮಾರ್ಗದಲ್ಲಿ ಅಳವಡಿಸಲಿದೆ. ಇದರಿಂದ ಬಿಎಂಟಿಸಿ ಬಸ್ ಹೊರತುಪಡಿಸಿ ಇತರೆ ವಾಹನಗಳ ಕಾರ್ಯಾಚರಣೆಗೆ ಕಡಿವಾಣ ಬೀಳಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಫೋಟೋ ತೆಗೆದೂ ಕಳಿಸಬಹುದು: ಪ್ರತ್ಯೇಕ ಪಥದಲ್ಲಿ ಬಿಎಂಟಿಸಿ ಬಸ್ ಹೊರತುಪಡಿಸಿ ಇತರೆ ಯಾವುದೇ ವಾಹನಗಳು ಸಂಚರಿಸಿದ್ದು ಕಂಡುಬಂದರೆ, ಸ್ವತಃ ಪ್ರಯಾಣಿಕರು ಕೂಡ ಮೊಬೈಲ್‌ಗಳಲ್ಲಿ ಫೋಟೋ ಸೆರೆಹಿಡಿದು ಸಂಚಾರ ಪೊಲೀಸ್ ವಿಭಾಗದ “ಪಬ್ಲಿಕ್-ಐ’ ಆ್ಯಪ್‌ಗೆ ಕಳುಹಿಸಬಹುದು. ಅದನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಕಾರಿಗಿಂತ ವೇಗವಾಗಿ ಓಡುವುದೇ ಬಸ್?: ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬೈಯಪ್ಪನಹಳ್ಳಿವರೆಗಿನ ಸುಮಾರು 20.5 ಕಿ.ಮೀ. ಮಾರ್ಗ ಕ್ರಮಿಸಲು ಪ್ರಸ್ತುತ ಬಸ್ ಹಾಗೂ ಇತರೆ ವಾಹನಗಳಿಗೆ “ಪೀಕ್ ಅವರ್’ನಲ್ಲಿ ಎರಡು ತಾಸು ಸಮಯ ಹಿಡಿಯುತ್ತದೆ. ಪ್ರತ್ಯೇಕ ಪಥದಿಂದ ಬಸ್‌ಗಳು ಕೇವಲ 40 ನಿಮಿಷದಲ್ಲೇ ಈ ದೂರವನ್ನು ಕ್ರಮಿಸಲಿವೆ!
ಅಂದರೆ, ನವೆಂಬರ್ 1ರ ನಂತರದಿಂದ ಖಾಸಗಿ ವಾಹನಗಳು ವಿಶೇಷವಾಗಿ ಕಾರುಗಳಿಗಿಂತ ವೇಗವಾಗಿ ಈ ಮಾರ್ಗದಲ್ಲಿ ಬಸ್‌ಗಳು ಸಂಚರಿಸಲಿವೆ. ಇಲ್ಲಿ ನಿತ್ಯ 600 ಬಸ್‌ಗಳು 1,200 ಟ್ರಿಪ್‌ಗಳಲ್ಲಿ ಕಾರ್ಯಾಚರಣೆ ಮಾಡುತ್ತವೆ. ಪ್ರತ್ಯೇಕ ಪಥದಿಂದ ಪ್ರತಿ ಕಿ.ಮೀ.ಗೆ ಆಗುವ ವೆಚ್ಚ ಉಳಿತಾಯದ ಜತೆಗೆ ಪ್ರಯಾಣಿಕರ ದಟ್ಟಣೆ ಕೂಡ ಹೆಚ್ಚಳವಾಗಲಿದೆ. ಸದ್ಯಕ್ಕೆ ಸಿಲ್ಕ್ಬೋರ್ಡ್-ಕೆ.ಆರ್. ಪುರವರೆಗೆ ಈ ವ್ಯವಸ್ಥೆ ಕಲ್ಪಿಸುವ ಉದ್ದೇಶ ಇದೆ.
ಈ ಮಾರ್ಗದಲ್ಲಿ ಪ್ರತಿ ಕಿ.ಮೀ.ಗೆ ಬರುವ ಆದಾಯ (ಇಪಿಕೆಎಂ) 30 ರೂ. ಇದ್ದು, 45 ರೂ.ಗೆ ಹೆಚ್ಚಿಸುವ ಗುರಿಯನ್ನು ಬಿಎಂಟಿಸಿ ಹೊಂದಿದೆ. ಉಳಿದ ಮಾರ್ಗಗಳಲ್ಲಿ ಈ ಪ್ರಮಾಣ 35ರಿಂದ 40 ರೂ.ವರೆಗೆ ಇದೆ. ಅದೇ ರೀತಿ, ಪ್ರತಿ ಕಿ.ಮೀ. ಬಸ್ ಸಂಚಾರಕ್ಕೆ ತಗಲುವ ಸರಾಸರಿ ವೆಚ್ಚ (ಸಿಪಿಕೆಎಂ) 52 ರೂ. ಇದ್ದು, 45 ರೂ.ಗೆ ತಗ್ಗಿಸುವ ಉದ್ದೇಶ ಇದೆ. ಡೀಸೆಲ್‌ನಲ್ಲಿ 5 ರೂ. ಹಾಗೂ ಕಾರ್ಯಕ್ಷಮತೆಯಲ್ಲಿ 2 ರೂ. ಸೇರಿ ಏಳು ರೂ.ಗಳಷ್ಟು ಖರ್ಚು ಕಡಿಮೆ ಮಾಡುವ ಗುರಿ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.