ಮನೆಗೆಲಸದ ಬಾಲಕಿ ಶಿಕ್ಷಣದ ಕನಸಿಗೆ ಹೈಕೋರ್ಟ್ ಆಸರೆ
Team Udayavani, Aug 1, 2018, 11:35 AM IST
ಬೆಂಗಳೂರು: ಬಿಹಾರದ ಗಯಾ ಜಿಲ್ಲೆಯಿಂದ ಶಿಕ್ಷಣದ ಆಸೆ ಹೊತ್ತು ಬೆಂಗಳೂರಿಗೆ ಬಂದ ಬಳಿಕ ಕಲಿಕೆಗೆ ಬದಲಾಗಿ
ಮನೆಕೆಲಸಕ್ಕೆ ಸೀಮಿತವಾಗಿದ್ದ 11 ವರ್ಷದ ಬಾಲಕಿಯ ಅಳಲು ಆಲಿಸಿದ ಹೈಕೋರ್ಟ್, ಬಾಲಕಿಯನ್ನು ಪೋಷಕರ ಮಡಿಲಿಗೆ ಒಪ್ಪಿಸಿದ್ದಲ್ಲದೆ ಆಕೆಯ ಕಲಿಕಾಸಕ್ತಿಗೆ ನೀರೆರೆದ ಪ್ರಸಂಗವಿದು.
ಕಾರ್ಮಿಕ ಇಲಾಖೆ ಅಧಿಕಾರಿಗಳು ವೈದ್ಯ ದಂಪತಿಯ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದ ಬಾಲಕಿಯನ್ನು ರಕ್ಷಿಸಿ
ಬಾಲಮಂದಿರಕ್ಕೆ ಸೇರಿಸಿದ್ದ ಮಗಳನ್ನು ಹುಡುಕಿಕೊಡುವಂತೆ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು
ಮಂಗಳವಾರ ಆಲಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಹಾಗೂ ನ್ಯಾಯಮೂರ್ತಿ ಎಚ್.ಡಿ ನರೇಂದ್ರ
ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಗೂ ಸರ್ಕಾರಿ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ಪ್ರಕರಣದ ಬಗ್ಗೆ ಬಾಲಕಿಯಿಂದಲೇ ಮಾಹಿತಿ ಪಡೆದುಕೊಂಡು ಆಕೆಯ ಇಚ್ಛೆಯಂತೆ ಪೋಷಕರ ಬಳಿ ಕಳುಹಿಸಿ
ಕೊಡುವಂತೆ ಸೂಚಿಸಿದರು. ಅಲ್ಲದೆ, ಬಾಲ ಮಂದಿರದಲ್ಲಿ ಆಶ್ರಯಪಡೆದಿರುವ ಬಾಲಕಿಯನ್ನು ಪೋಷಕರ ಮನೆಗೆ
ಕಳುಹಿಸಿಕೊಡಬೇಕು ಎಂದು ಆದೇಶಿಸಿದೆ.
ಅಲ್ಲದೆ, ಬಾಲಕಿಗೆ ಶಿಕ್ಷಣ ಕೊಡಿಸುವಂತೆ ಪೋಷಕರಿಗೆ ಸೂಚನೆ ನೀಡಿದ ನ್ಯಾಯಪೀಠ, ಗಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರಿಷ್ಠಾಧಿಕಾರಿ ತಿಂಗಳಿನ ಎರಡನೇ ಶನಿವಾರ ಆಕೆಯ ಮನೆಗೆ ತೆರಳಿ, ಆಕೆಯ ಇರುವಿಕೆ, ಶೈಕ್ಷಣಿಕ ಕಲಿಕೆ, ಸುರಕ್ಷತೆ ಸೇರಿ ಇನ್ನಿತರೆ ಮಾಹಿತಿ ಪಡೆದುಕೊಳ್ಳಬೇಕು. ಈ ಕುರಿತು ಪ್ರತಿ ತಿಂಗಳು ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಮೆಲುದನಿಯಲ್ಲಿ ಮಾಹಿತಿ: ವಿಚಾರಣೆ ವೇಳೆ ಪೊಲೀಸರು ಹಾಜರುಪಡಿಸಿದ್ದ ಬಾಲಕಿಯನ್ನು ಹತ್ತಿರ ಕರೆದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಬಾಲಕಿಗೆ ಅರ್ಥವಾಗುವ ಹಿಂದಿ ಭಾಷೆಯಲ್ಲಿಯೇ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಬೆಂಗಳೂರಿಗೆ ಯಾರು ಕರೆತಂದರು. ಏಕೆ ಬಂದೆ. ಶಾಲೆಗೆ ಸೇರಿಸಿದಾರಾ? ಏನು ಕಲಿತಿದ್ದೀಯಾ ಎಂಬ ಇನ್ನಿತರೆ ಮಾಹಿತಿಗಳೊಂದಿಗೆ ಸಾವಧಾನದಿಂದ ಸುಮಾರು ಐದು ನಿಮಿಷಗಳ ಬಾಲಕಿಯಿಂದ ಉತ್ತರ ಪಡೆದುಕೊಂಡರು. ನ್ಯಾಯಮೂರ್ತಿಗಳ ಮುಂದೆ ಶಾಲೆಗೆ ಸೇರಿಸುವುದಾಗಿ ಬಂದಿದ್ದು, ಮನೆಯಲ್ಲಿಯೇ ಇರುತ್ತೇನೆ.
ಹಿಂದಿ ಮಾತ್ರ ಹೇಳಿಕೊಡುತ್ತಾರೆ. ಎಲ್‌ಕೆಜಿ ಮಾತ್ರ ಓದಿದ್ದೇನೆ.
ಅಪ್ಪ-ಅಮ್ಮನ ಜತೆ ಕಳುಹಿಸಿಕೊಟ್ಟರೆ ಊರಿಗೆ ತೆರಳಿ ವಿಧ್ಯಾಭ್ಯಾಸ ಮಾಡುತ್ತೇನೆ ಎಂದು ಬಾಲಕಿ ನ್ಯಾಯಮೂರ್ತಿಗಳಿಗೆ ಸವಿವರವಾಗಿ ತಿಳಿಸಿದಳು. ಈ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿತು. ವಿಚಾರಣೆ ವೇಳೆ ಸರ್ಕಾರಿ ವಕೀಲ ಇ.ಎಸ್ ಇಂದಿರೇಶ್ ವಾದಿಸಿ, ಬಾಲಕಿಯನ್ನು ಕಾನೂನು ಬಾಹಿರವಾಗಿ ಬಾಲಮಂದಿರದಲ್ಲಿ ಇಟ್ಟಿಲ್ಲ. ಬಾಲಕಾರ್ಮಿಕಳಾಗಿ ಇರುವುದು ಕಂಡು ಬಂದಿದ್ದರಿಂದ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಬಾಲಕಿಯನ್ನು ರಕ್ಷಿಸಿ ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಬಾಲಕಿಯನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿಲ್ಲ. ಆಕೆ ಸ್ಥಳೀಯ ಶಾಲೆಯಲ್ಲಿ 4 ನೇ ತರಗತಿ ವ್ಯಾಸಾಂಗ ಪಡೆಯುತ್ತಿದ್ದಾಳೆ. ಈ ಕುರಿತು ದಾಖಲೆಗಳಿವೆ. ಆಕೆ ಹಿಂದಿ ಮಾಧ್ಯಮದಲ್ಲಿ ಕಲಿತದ್ದರಿಂದ ಇಲ್ಲಿಯೂ ಅದನ್ನೇ ಹೇಳಿಕೊಡಲಾಗುತ್ತಿದೆ. ಹೀಗಾಗಿ ಬಾಲಕಿಯನ್ನು ಬಾಲಮಂದಿರಕ್ಕೆ ಕರೆದೊಯ್ದಿರುವುದು ಕಾನೂನುಬಾಹಿರ ಎಂಬ ಅರ್ಜಿದಾರರ ಪರ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು.
ಬಿಹಾರದ ಬಾಲಕಿ
ಬಿಹಾರದ ಗಯಾ ಜಿಲ್ಲೆಯ 40 ಕಿ.ಮೀ ದೂರದ ಕುಗ್ರಾಮದ ಮೋಹನ್ ಚೌಧರಿ ಹಾಗೂ ಲಕ್ಷ್ಮೀಶ್ರೀ ದಂಪತಿಯ 11 ವರ್ಷದ ಬಾಲಕಿಯನ್ನು ಕಳೆದ 8 ತಿಂಗಳ ಹಿಂದೆ ಶಿಕ್ಷಣ ಕೊಡಿಸುವುದಾಗಿ ಹೇಳಿ ದೊಡ್ಡಕಮ್ಮನಹಳ್ಳಿಯಲ್ಲಿ ವಾಸವಿರುವ ಸಂಬಧಿಕರಾದ ಡಾ. ದೀಪ್ತಿ ಹಾಗೂ ಪವನ ಗೌತಮ ಎಂಬುವವರು ಕರೆತಂದಿದ್ದರು. ಬಳಿಕ ಆಕೆ ಶಾಲೆಗೆ ಕಳುಹಿಸದೇ ಮನೆಕೆಲಸಕ್ಕೆ ಇಟ್ಟುಕೊಂಡಿದ್ದ ಮಾಹಿತಿ ಆಧರಿಸಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಜುಲೈ 9ರಂದು ಪರಿಶೀಲನೆ ನಡೆಸಿ ಬಾಲಕಿಯನ್ನು ರಕ್ಷಿಸಿದ್ದರು, ಅಲ್ಲದೆ ಸರ್ಕಾರಿ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.
ಈ ಕುರಿತು ವೈದ್ಯ ದಂಪತಿ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯಿದೆ ಅಡಿಯಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬಾಲಕಿಗೆ ಶಿಕ್ಷಣ ಕೊಡಿಸುತ್ತಿದ್ದು ಮನೆಕೆಲಸಕ್ಕೆ ಇಟ್ಟುಕೊಂಡಿರಲಿಲ್ಲ. ಹೀಗಾಗಿ ಬಾಲಕಿಯನ್ನು ಮನೆಗೆ ಕಳುಹಿಸುವಂತೆ ಕೋರಿ ಡಾ. ದೀಪ್ತಿ ಹಾಗೂ ಬಾಲಕಿಯ ಪೋಷಕರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.